ADVERTISEMENT

ಹಕ್ಕಿ ಮಲಗಿದೆ ನೋಡಿದಿರಾ...

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 19:30 IST
Last Updated 20 ಜನವರಿ 2020, 19:30 IST
ದರ್ಜಿಹಕ್ಕಿಗಳು
ದರ್ಜಿಹಕ್ಕಿಗಳು   

ಕೆಲವು ದಿನಗಳ ಹಿಂದಿನ ಮಾತು. ರಾತ್ರಿ ಅಣ್ಣನ ಮನೆಗೆ ಹೋದವನಿಗೆ, ಸ್ಕೂಟರ್‌ ನಿಲ್ಲಿಸುತಿದ್ದಂತೆ ಪಕ್ಕದ ದಾಸವಾಳ ಗಿಡದ ಟೊಂಗೆಯ ತುದಿಯಲ್ಲಿ ಒತ್ತೊತ್ತಾಗಿ ಇದ್ದ ಎರಡು ಹತ್ತಿಯುಂಡೆಗಳು ಮಸುಕಾಗಿ ಕಂಡವು. ಎರಡೇ ಕ್ಷಣ.. ಅದೇನೆಂದು ಫಕ್ಕನೆ ಹೊಳೆಯಿತು. ಹಾಗೇ ಸ್ಕೂಟರ್‌ ತಿರುಗಿಸಿದವನೇ ಸೀದಾ ನಮ್ಮ ಮನೆಗೆ ಹೋದೆ.

ಸ್ಕೂಟರ್ ಮುಂದಕ್ಕೋಡುತ್ತಿರುವಾಗ ನನ್ನ ಮನಸ್ಸು ಸುಮಾರು ಹದಿನೈದು- ಇಪ್ಪತ್ತು ವರ್ಷಗಳ ಹಿಂದಕ್ಕೆ ಓಡಿತು, ನೆನಪುಗಳನ್ನು ಹೆಕ್ಕಿ ತಂದಿತು.

ಅದು ನೆಗೆಟಿವ್ ಫಿಲ್ಮ್ ಕ್ಯಾಮೆರಾಗಳ ಕಾಲ. ಒಂದು ಮಳೆಗಾಲದ ರಾತ್ರಿ ಟಾರ್ಚ್‌ ಹಾಕುತ್ತಾ ಪೇರಳೆ ಮರದಲ್ಲಿ ಹಣ್ಣು ತಿನ್ನುವ ಪುಟ್ಟ ಬಾವಲಿಗಳನ್ನು ಹುಡುಕುತಿದ್ದನಿಗೆ ಹತ್ತಿರದ ಪಪ್ಪಾಯಿ ಗಿಡದಲ್ಲಿ ಕಂಡದ್ದು ಇಂಥವೇ ಎರಡು ಹತ್ತಿಯುಂಡೆಗಳು. ನಂತರ ಗೊತ್ತಾದುದೇನೆಂದರೆ ಅವುಗಳು ದರ್ಜಿಹಕ್ಕಿಗಳು! ಅಂದಿನಿಂದ ಪ್ರತಿ ರಾತ್ರಿ ಅವುಗಳನ್ನು ಗಮನಿಸುತ್ತಾ, ನನ್ನ ಕೊಸಿನಾ ಫಿಲ್ಮ್‌ ಕ್ಯಾಮೆರಾದಲ್ಲಿ ಕ್ಲಿಕ್ಕಿಸುತಿದ್ದೆ.

ADVERTISEMENT

ಕತ್ತಲಾವರಿಸುತಿದ್ದಂತೆ ಈ ದರ್ಜಿ ಹಕ್ಕಿಗಳು ಜೊತೆಯಾಗಿಯೇ ಬಂದು ಪಪ್ಪಾಯಿ ಎಲೆ ಅದರ ದೇಟಿಗೆ ಸೇರುವಲ್ಲಿ ಕುಳಿತುಕೊಳ್ಳುತಿದ್ದವು. ಪಪ್ಪಾಯಿ ಎಲೆ ಈ ಪುಟ್ಟ ಹಕ್ಕಿಗಳಿಗೆ ದೊಡ್ಡ ಕೊಡೆಯಂತೆ ಆಶ್ರಯ ನೀಡುತಿತ್ತು. ರಾತ್ರಿಯಾಗುತ್ತಾ ವಾತಾವರಣ ತಂಪಾಗುತಿದ್ದಂತೆ ಇವು ತಮ್ಮ ರೆಕ್ಕೆ ಪುಕ್ಕಗಳನ್ನು ಉಬ್ಬಿಸಿಕೊಳ್ಳುತ್ತಾ, ತಲೆಗಳನ್ನು ಮೆಲ್ಲನೆ ಒಳಗೆಳೆದುಕೊಳ್ಳುತಿದ್ದವು. ರಾತ್ರಿ ಹತ್ತು- ಹನ್ನೊಂದು ಗಂಟೆಯ ಹೊತ್ತಿಗೆ ನೋಡಿದರೆ ಉರುಟಾದ ಹತ್ತಿಯುಂಡೆಗೆ ದಪ್ಪಗಿನ ದಾರವೊಂದನ್ನು ಸೇರಿಸಿದಂತಿರುತಿತ್ತು. ಇದು ಹಕ್ಕಿಯ ಬಾಲ! ಕೆಲವು ದಿನಗಳ ಬಳಿಕ ಭಾರೀ ಗಾಳಿಮಳೆಗೆ ಪಪ್ಪಾಯಿ ಗಿಡ ನೆಲಕ್ಕುರುಳುವ ಜೊತೆಗೆ ನನ್ನ ಈ ಪಕ್ಷಿವೀಕ್ಷಣೆ ಕೊನೆಗೊಂಡಿತು.

ಸ್ಕೂಟರ್‌ ಓಡಿಸುತ್ತಾ, ಈ ಘಟನೆಯನ್ನೆಲ್ಲ ಮೆಲುಕು ಹಾಕುತ್ತಾ, ಮನೆ ತಲುಪಿದವನೇ ಕ್ಯಾಮರಾ, ಫ್ಲಾಷ್, ಹಿಡಿದುಕೊಂಡು ಮತ್ತೆ ಅಣ್ಣನ ಮನೆಗೆ ವಾಪಸ್‌ ಬಂದೆ. ಈ ಪುಟ್ಟ, ಮುದ್ದಾದ ಹತ್ತಿಯುಂಡೆಗಳ ಫೋಟೊ ಕ್ಲಿಕ್ಕಿಸಿದೆ. ಕತ್ತಲಲ್ಲಿ ಆಗಾಗ ಫ್ಲಾಷ್‍ನ ಬೆಳಕು ಚಿಮ್ಮುವುದನ್ನು ಗಮನಿಸಿದ ವಠಾರದ ಮಕ್ಕಳು.. ‘ಎಂತ ಮಾಮಾ..’ ‘ತೋರ್ಸಿ ಮಾಮಾ...’ ಎನ್ನುತ್ತಾ ಕ್ಯಾಮೆರಾಕ್ಕೆ ಮುತ್ತಿಗೆ ಹಾಕಿದರು. ಕ್ಯಾಮೆರಾದ ಮಾನಿಟರ್‌ನಲ್ಲಿ ಒಂದೊಂದೇ ಚಿತ್ರಗಳನ್ನು ಝೂಮ್‌ ಮಾಡುತ್ತಾ ತೋರಿಸಲಾರಂಭಿಸಿದೆ. ಚಿತ್ರಗಳನ್ನು ನೋಡುತಿದ್ದ ಮಕ್ಕಳು ಒಮ್ಮೆಗೇ ‘ಹೋ..’ ಎಂದು ಜೋರಾಗಿ ನಕ್ಕರು. ಮಾನಿಟರ್ ನೋಡಿದರೆ ಹಕ್ಕಿಯ ಮುಖದ ಮೇಲೊಂದು ಸೊಳ್ಳೆ ಕುಳಿತಿತ್ತು!. ‘ನಾಳೆಯಿಂದ ಅಲ್ಲೊಂದು ಸೊಳ್ಳೆಬತ್ತಿ ಇಡಿ ಮಾಮಾ’ ಎನ್ನುತ್ತಾ ನನಗೇ ಬತ್ತಿ ಇಟ್ಟು ಓಡಿದರು.

ಇನ್ನು ಇವುಗಳನ್ನು ಪ್ರತಿ ದಿನ ಗಮನಿಸಬೇಕು ಅಂದುಕೊಂಡಿದ್ದೆ. ಆದರೆ ಮರುದಿನ ರಾತ್ರಿ ಅಕಾಲಿಕವಾಗಿ ಡಿಸೆಂಬರ್‌ನ ಚಳಿಗಾಲದಲ್ಲೂ ಮಳೆ ಬರಬೇಕೇ? ಅಂದು ಹೋದ ಹಕ್ಕಿಗಳು ಮರಳಿ ದಾಸವಾಳ ಗಿಡಕ್ಕೆ ಬರಲಿಲ್ಲ. ಬಹುಶಃ ದೊಡ್ಡ ಎಲೆಯ ಗಿಡಗಳನ್ನು ಹುಡುಕಿಕೊಂಡಿರಬೇಕು. ಅಂತೂ ಅಚಾನಕ್ಕಾಗಿ ಈ ದರ್ಜಿಹಕ್ಕಿಗಳು ನಿದ್ರಿಸುವ ರೀತಿಯನ್ನು ಚಿತ್ರೀಕರಿಸುವ ಅವಕಾಶ ಸಿಕ್ಕಿತು.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.