ADVERTISEMENT

ಅಪರೂಪದ ಹಕ್ಕಿ ಗೂಡಿನ ಅಣಬೆ

ಶಶಿಧರಸ್ವಾಮಿ ಆರ್.ಹಿರೇಮಠ
Published 14 ಅಕ್ಟೋಬರ್ 2019, 19:30 IST
Last Updated 14 ಅಕ್ಟೋಬರ್ 2019, 19:30 IST
ಹಕ್ಕಿಗೂಡಿನ ಅಣಬೆ
ಹಕ್ಕಿಗೂಡಿನ ಅಣಬೆ   

ಮ್ಯಾಕ್ರೊ ಫೋಟೊಗ್ರಫಿಗಾಗಿ ಹೊರಟೆ. ಶಿವಣ್ಣ ಕಲ್ಲಜ್ಜನವರ ಹೊಲದ ಎತ್ತರದ ಬದುವನ್ನು ಪ್ರಯಾಸದಿಂದ ಹತ್ತಿ ಇನ್ನೇನು ಆ ಕಡೆ ಇರುವ ನಮ್ಮ ಹೊಲಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿ, ಮಣ್ಣಿನ ಹೆಂಟೆಯ ಮೇಲೆ ಇದ್ದ ಪುಟ್ಟ ಹಕ್ಕಿಗೂಡು ಗಮನ ಸೆಳೆಯಿತು. ಹತ್ತಿರ ಹೋಗಿ ನೋಡಿದೆ. ಅದು ಗೂಡಲ್ಲ, ಅಣಬೆ ಎಂದು ಗೊತ್ತಾಯಿತು.

ನಾನು ಕಷ್ಟಪಟ್ಟು ಗಮನಿಸುತ್ತಾ, ಫೋಟೊಗ್ರಫಿ ಮಾಡುತ್ತಿದ್ದನ್ನು ನೋಡಿದ ಕಲ್ಲಾಪುರ ಹನುಮಂತಣ್ಣ ಅಲ್ಲಿಗೆ ಬಂದು, ‘ಏನ್ರಿ ಸ್ವಾಮ್ಯಾರ ಅದು’ ಎಂದು ಕೇಳಿದ. ಅವನಿಗೆ ಅಲ್ಲಿರುವ ಹಕ್ಕಿಗೂಡು ತೋರಿಸಿದೆ. ಅದಕ್ಕೆ ಹನುಮಂತಣ್ಣ, ‘ಇಂತಾ ಸಣ್‌ ಕಳೇ ನೋಡೇ ಇಲ್ಲ. ಈ ವರ್ಷ ಮಳಿ ಭಾಳ ಸುರಿದು ಪೀಕು ಹಾಳಾಗಿ ಹೋಗ್ಯಾವ. ಮಳಿ ಭಾಳ ಆಯ್ತಲ್ಲಾ ಅದ್ಕ ಇಂಥ ಕಳೆಗಿಡ ಹುಟ್ಯಾವ ನೋಡ್ರಿ’ ಎಂದು ವಿವರಿಸಿದ.

ಆತ ಹೇಳಿದಾಗ, ನಿಜ ಇರಬೇಕು ಅಂತ ನನಗೂ ಅನ್ನಿಸಿತು. ಕೊಳೆಯುತ್ತಿರುವ ಜಾಗದ ಮೇಲೆ ಅಣಬೆಗಳು ಬೆಳೆಯುವ ಗುಣಧರ್ಮ ರೂಢಿಸಿಕೊಂಡಿವೆ. ಅದರ ಫೋಟೊಗಳನ್ನು ವಿವಿಧ ಕೋನಗಳಲ್ಲಿ ಕ್ಲಿಕ್ಕಿಸುತ್ತಾ, ಕ್ಯಾಮೆರಾದಲ್ಲಿ ದಾಖಲಿಸಿಕೊಂಡೆ. ಇಳಿಜಾರಿನ ಬದು ಇಳಿದು ಫೋಟೊಗ್ರಫಿಗಾಗಿ ನಡೆದೆ. ತಲೆಯಲ್ಲಿ ಆ ಅಣಬೆಯ ಹುಳ ಬಿಟ್ಕೊಂಡಿದ್ದೆ. ಮನೆಗೆ ಮರಳಿದರೂ, ಆ ದೃಶ್ಯವೇ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಕೊನೆಗೆ ಕ್ಯಾಮೆರಾದಿಂದ ಫೋಟೊಗಳನ್ನು ಡೌನ್‌ಲೋಡ್‌ ಮಾಡಿ, ನನಗೆ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪಾಠ ಮಾಡುತ್ತಿದ್ದ ಚೂಡಾಮಣಿ ಮೇಡಂಗೆ ನಾಲ್ಕು ಫೋಟೊಗಳನ್ನು ವಾಟ್ಸ್‌ಆ್ಯಪ್ ಮಾಡಿದೆ. ‘ದಯವಿಟ್ಟು ಇದರ ಹೆಸರು ಹೇಳಿ’ ಎಂದು ಮನವಿ ಮಾಡಿದೆ. ಅದನ್ನು ಗುರುತಿಸಿದ ಅವರು ‘ಇದು Bird's nest fungi, ಅಂದರೆ ಹಕ್ಕಿ ಗೂಡಿನ ಅಣಬೆ’ ಎಂದರು. ಜತೆಗೆ, ಪಕ್ಷಿಗೂಡಿನ ಅಣಬೆಯ ವೈಜ್ಞಾನಿಕ ಮಾಹಿತಿಗಳನ್ನು ನೀಡಿದರು.

ADVERTISEMENT

ಪಕ್ಷಿಗೂಡಿನ ಅಣಬೆ

ಮೊಟ್ಟೆಗಳಿಂದ ತುಂಬಿದ ಸಣ್ಣ ಪಕ್ಷಿಗಳ ಗೂಡನ್ನು ಹೋಲುವುದರಿಂದ ಇವಕ್ಕೆ ಪಕ್ಷಿ ಗೂಡಿನ ಅಣಬೆ ಎಂದು ಕರೆಯಲಾಗುತ್ತದೆ. ನಮ್ಮೂರಲ್ಲಿ ಇವುಗಳಿಗೆ ಚಿಕ್ಕಣಬೆ, ಹಕ್ಕಿ, ನಾಯಿಕೊಡೆ ಎಂದೆಲ್ಲಾ ಕರೆಯುತ್ತಾರೆ. ಮೊಟ್ಟೆಗಳನ್ನು ಪೆರಿಡಿಯೋಲ್ಸ್‌ಗಳೆನ್ನುತ್ತಾರೆ. ಈ ಮೊಟ್ಟೆಗಳು ಬೀಜಕಗಳನ್ನು ಹೊಂದಿರುವ ಸಂತಾನೋತ್ಪತ್ತಿ ರಚನೆಗಳಾಗಿವೆ. 4 ರಿಂದ 8 ಮಿ ಮೀ ಅಗಲ ಮತ್ತು 7 ರಿಂದ 18 ಮಿ ಮೀ ಎತ್ತರದಷ್ಟು ಅತೀ ಚಿಕ್ಕ ಗಾತ್ರಗಳಲ್ಲಿವೆ. ಕಂದು ಬಣ್ಣದಿಂದ ಬೂದು-ಕಂದು ಬಣ್ಣದಲ್ಲಿರುತ್ತವೆ.

ಇವು ಸಾಮಾನ್ಯವಾಗಿ ಕೊಳೆಯುತ್ತಿರುವ ಮರ ಅಥವಾ ಮರದ ಅವಶೇಷಗಳ ಮೇಲೆ, ಹಸುಗಳ ಸಗಣಿ ಮತ್ತು ಕುದುರೆಗಳ ಲದ್ದಿಯ ಮೇಲೆ ಅಥವಾ ತೇವವಿರುವ ಮಣ್ಣಿನಲ್ಲಿ ಬೆಳೆಯುತ್ತವೆ. ಇವುಗಳು ಲೈಂಗಿಕ ಅರೆವಿದಳನ (ಮಿಯೋಸಿಸ್) ರೀತಿಯಿಂದ ಹಾಗೂ ಸ್ಪೋರ್ ಎಂಬ ಬೀಜಕಗಳ ಮೂಲಕ ವಂಶಾಭಿವೃದ್ಧಿ ಮಾಡುತ್ತವೆ. ಕೊಳೆಯುತ್ತಿರುವ ಪದಾರ್ಥಗಳಿಂದ ಸಾವಯವ ಪೋಷಕಾಂಶಗಳನ್ನು ಪಡೆದು ಬೆಳೆಯುತ್ತವೆ. ಇವು ವಿಷಯುಕ್ತವಾಗಿದ್ದು ತಿನ್ನಲು ಯೋಗ್ಯವಲ್ಲ.

ಹಲವಾರು ಸೈಥಸ್ ಪ್ರಭೇದಗಳು ಜೈವಿಕ ಸಕ್ರಿಯ ಸಂಯುಕ್ತಗಳನ್ನು ಉತ್ಪಾದಿಸುವುದರಿಂದ ಔಷಧೀಯ ಗುಣಗಳನ್ನು ಹೊಂದಿವೆ. ಕೆಲ ಪ್ರಭೇದಗಳಿಂದ ಕೋಶಭಿತ್ತಿಗೆ ನಾರು ಸ್ವರೂಪ ಕೊಡಲು ಕಾರಣವಾದ ಸೆಲ್ಯುಲೋಸ್‍ನಂತಹ ಪಾಲಿಮರ್ ಸಂಯುಕ್ತ ಲಿಗ್ನಿನ್ ಕಿಣ್ವಗಳಿಂದ ಜೈವಿಕ ಪರಿಹಾರ(ಬಯೋರೆಮಿಡಿಯೇಶನ್)ವಾಗಿ ಕೃಷಿಯಲ್ಲಿ ಉಪಯೋಗಿಸಬಹುದಾಗಿದೆ.

ಸೈಥಸ್ ಪ್ರಭೇದಗಳನ್ನು ‘ನಿಡುಲಾರೇಶಿಯ’ ಕುಟುಂಬಕ್ಕೆ ಸೇರಿಸಲಾಗಿದೆ. ವಿಶ್ವದಾದ್ಯಂತ 45 ಪ್ರಭೇದದ ಹಕ್ಕಿಗೂಡಿನ ಅಣಬೆಗಳಿವೆ. ಅಣಬೆಗಳನ್ನು ಫ್ಲೆಮಿಶ್ ಸಸ್ಯವಿಜ್ಞಾನಿ ಕರೋಲಸ್ ಕ್ಲೂಸಿಯಸ್ ಅವರು 1601ರಲ್ಲಿ ರರಿಯೊರಮ್ ಪ್ಲಾಂಟಾರಮ್ ಹಿಸ್ಟೋರಿಯಾದಲ್ಲಿ ಪ್ರಥಮವಾಗಿ ಗುರುತಿಸಿದ್ದರು. ಯೂರೋಪ್‌ನಲ್ಲಿ ಸೈಥಸ್ ಸ್ಟೆರ್ಕೊರಿಯಸ್ ಪ್ರಭೇದದ ಹಕ್ಕಿಗೂಡಿನ ಅಣಬೆ ಅಳಿವಿನಂಚಿನಲ್ಲಿದೆ.

ಇದನ್ನೂ ಓದಿ:ಅಣಬೆ ಕೃಷಿಯ ‘ರಾಜ

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.