ADVERTISEMENT

ಫೋಟೊ ಫೀಚರ್ | ಲಾಕ್‌ಡೌನ್ ಅವಧಿಯಲ್ಲಿ ಪ್ರಕೃತಿಯ ಚಿತ್ತಾರಗಳು

ನಿಸರ್ಗ ಚಿತ್ರಗಳು

ಶ್ವೇತಾ ಹೊಸಬಾಳೆ
Published 18 ಫೆಬ್ರುವರಿ 2021, 10:55 IST
Last Updated 18 ಫೆಬ್ರುವರಿ 2021, 10:55 IST
   
""
""
""
""
""
""

ಕೊರೊನಾ ಸೋಂಕಿನಿಂದಾಗಿ ದೇಶವೇ ‘ದಿಗ್ಬಂಧನ’ಕ್ಕೆ ಒಳಗಾಗಿದೆ. ಆದರೆ,ಪ್ರಕೃತಿಗೆ ಮಾತ್ರ ಅಂಥ ಯಾವುದೇ ದಿಗ್ಬಂಧನವಿಲ್ಲ. ಕಾಲಕಾಲಕ್ಕೆ ತಕ್ಕಂತೆ ಋತುಮಾನದಲ್ಲಿ ಬದಲಾವಣೆಯಾಗುತ್ತದೆ. ಎಲೆಗಳು ಉದುರುತ್ತವೆ. ಮರಗಳು ಬೋಳಾಗುತ್ತವೆ; ವಸಂತ ಬಂದಾಗ ಮತ್ತೆ ಚಿಗುರುತ್ತವೆ. ಸೂರ್ಯ ಉದಯಿಸಿದಾಗಹೂವುಗಳು ಅರಳುತ್ತವೆ. ಹಕ್ಕಿಗಳು ಹಾಡುತ್ತವೆ; ಆಹಾರ ಸಂಗ್ರಹಿಸಲು ಹೊರಡುತ್ತವೆ. ತಮ್ಮ ಪಾಡಿಗೆ ತಾವು ಖುಷಿಯಾಗಿರುತ್ತವೆ.‌

ಇಂಥ ಕಾಲದಲ್ಲಿ ಒಲಿದು ಬಂದ ಭಾಗ್ಯ ಎನ್ನುವಂತೆ ಬೆಂಗಳೂರಿನಿಂದ ಹುಟ್ಟೂರು ಸೊರಬ ಸಮೀಪದ ಹೊಸಬಾಳೆಗೆ ಹೋಗುವ ಅವಕಾಶ ಒದಗಿ ಬಂತು. ಪ್ರಕೃತಿಗೆ ಮತ್ತಷ್ಟು ಹತ್ತಿರವಾಗುವ ಅವಕಾಶ ಅದು. ಈವರೆಗೂ ಒಮ್ಮೆಯೂ ಹೋಗದಿದ್ದ ತಿರುಗಾಡದಿದ್ದ ಜಾಗಗಳಿಗೆ ಹೋದ ನನಗೆ ಪ್ರತಿ ಬೆಳಗೂ ಹೊಸ ಹೊಸ ಬೆರಗು!

ನಿಸರ್ಗದಲ್ಲಿ ಎಷ್ಟೊಂದು ರೀತಿಯ ಗಿಡ ಮರಗಳು, ಎಲೆಗಳು, ಚಿಗುರು ಅವುಗಳ ವಿವಿಧ ಆಕಾರ ಬಣ್ಣಗಳನ್ನು ಹತ್ತಿರದಿಂದ ನೋಡುವ ಅಚ್ಚರಿ ಆನಂದದ ಅನುಭೂತಿ. ಸುಮ್ಮನೆ ನೋಡುವುದು ಬೇರೆ, ಸೂಕ್ಷ್ಮವಾಗಿ ಗಮನಿಸುವುದೇ ಬೇರೆ ಎಂದು ಅರಿವಿಗೆ ಬಂದಿದ್ದು ಒಂದು ರೀತಿಯಲ್ಲಿ ಈಗಲೇ!

ADVERTISEMENT

ಬೆಳ್ಳಂಬೆಳಗ್ಗೆ ಸೂರ್ಯನ ಬೆಳಕಲ್ಲಿ ಚಿಗುರು ದೀಪಗಳಂತೆ ಹೊಳೆಯುತ್ತಿದ್ದ ಗುಲಾಬಿ ಕೆಂಪು ಮಿಶ್ರಿತ ಬಣ್ಣದ ಅರಳಿ ಮರದ ಚಿಗುರೆಲೆಗಳ ಸೊಬಗನ್ನು ಪ್ರತಿ ದಿನ ಕಣ್ತುಂಬಿಕೊಂಡೆ. ನೋಡ ನೋಡುತ್ತಿದ್ದಂತೆ ಹತ್ತು ಹದಿನೈದು ದಿನಗಳಲ್ಲಿ ಅವೆಲ್ಲಾ ಹಸಿರು ಬಣ್ಣಕ್ಕೆ ತಿರುಗಿ ಜೀವಂತಿಕೆಯಿಂದ ತೊನೆಯುವುದನ್ನು ನೋಡುವುದು ಖುಷಿಕೊಟ್ಟಿತು. ಶಿಶಿರದಲ್ಲಿ ಬೋಳಾಗಿ ನಿಂತಿದ್ದ ಮರಗಳಲ್ಲಿ ಮೆಲ್ಲನೆ ಕೆಂಪು ಚಿಗುರೊಡೆಯುವ ಸಂಭ್ರಮ; ಸೂರ್ಯೋದಯದ ಹೊಂಬೆಳಕಲ್ಲಿ ಅವುಗಳ ಹೊಳಪು, ಬೇಸಿಗೆಯ ಬಿಸಿ ಮರೆಸುವ ಬೆಳಗಿನ ಹೊತ್ತು ಬೀಸುವ ತಂಪಾದ ಗಾಳಿ, ಅದರ ಜೊತೆ ಮೂಗಿಗೆ ಸೋಕುವ ಕಾಡುಮಲ್ಲಿಗೆ, ರಂಜೆಬಟ್ಟಲು, ಕಣಗಿಲೆ ಮುಂತಾದ ವನಸುಮಗಳ ಹಿತವಾದ ಪರಿಮಳವನ್ನು ಆಸ್ವಾದಿಸುತ್ತಾ ನಡೆಯುತ್ತಿದ್ದರೆ ಪ್ರಕೃತಿಯ ತಾಜಾತನ, ಚೈತನ್ಯ ನಮ್ಮೊಳಗನ್ನೂ ತುಂಬಿಕೊಳ್ಳುತ್ತಿತ್ತು.

ಮಂಜು ಮುಸುಕಿದ ದಿನಗಳಲ್ಲಿ ಎಲೆಗಳ ಮೇಲೆ ಹೂಗಳ ಒಳಗೆ ಇಬ್ಬನಿಯ ಮುತ್ತುಗಳು; ಜೇಡರ ಬಲೆಗಳೆಲ್ಲಾ ವಿವಿಧ ವಿನ್ಯಾಸದ ಮುತ್ತಿನ ಹಾರಗಳು! ಇಬ್ಬನಿ ತಬ್ಬಿದ್ದ ಇಳೆಯ ಸೌಂದರ್ಯ ಒಂದು ರೀತಿಯದ್ದಾದರೆ ಸೂರ್ಯ ಮೇಲೇರುತ್ತಿದ್ದಂತೆ ಮಂಜಿನ ತೆರೆ ಸರಿದು ಎಳೆಬಿಸಿಲು ಆವರಿಸಿಕೊಳ್ಳುವ ಪರಿ ಕಣ್ಣಿಗೆ ಇನ್ನೊಂದು ರೀತಿಯ ಹಬ್ಬ. ಆ ರೂಪಾಂತರದಲ್ಲಿ ಇಡೀ ಪ್ರಕೃತಿಯಲ್ಲಿ ಜೀವಸಂಚಾರ, ಮತ್ತೊಂದು ಹೊಸ ದಿನದ ಆರಂಭ.

ಇಡೀ ಪ್ರಪಂಚವೇ ಕೊರೊನಾ ಹಾವಳಿಯಿಂದ ತತ್ತರಿಸುತ್ತಾ ಅನೇಕರು ಮನೆಯೊಳಗೇ ಬಂದಿಯಾಗಿ ಬೇರೆ ಬೇರೆ ರೀತಿಯಲ್ಲಿ ಅದರ ಪರಿಣಾಮಗಳನ್ನು ಎದುರಿಸುತ್ತಿದ್ದರೆ ಪ್ರಕೃತಿಯ ಮಡಿಲಲ್ಲಿದ್ದ ನನಗೆ ಅದರ ಬಿಸಿ ಅಷ್ಟಾಗಿ ತಟ್ಟಲಿಲ್ಲ. ಬದಲಿಗೆ ಪ್ರತಿ ನಿತ್ಯ ನಿಸರ್ಗದ ಸಾಂಗತ್ಯ, ಸೂಕ್ಷ್ಮವಾಗಿ ಗಮನಿಸುವಿಕೆ ಅಲ್ಲಿನ ವಿಸ್ಮಯ ಸಹಜತೆಗೆ ತೆರೆದುಕೊಳ್ಳುವಂತೆ ಮಾಡಿತು. ‘ಆನಂದಮಯ ಈ ಜಗಹೃದಯ’ ಎನ್ನುವ ಕವಿವಾಣಿಯನ್ನು ಅನುಭವಿಸುವಂತೆ ಮಾಡಿತು. ನಿಸರ್ಗದ ಲಯಬದ್ಧತೆ ಸ್ಥಿರತೆ ನನ್ನೊಳಗನ್ನು ತಾಕಿ ಕಾಡುತ್ತಿದ್ದ ಪ್ರಶ್ನೆಗಳಿಗೆ ತಕ್ಕಮಟ್ಟಿಗೆ ಉತ್ತರ ಕಂಡುಕೊಳ್ಳುವಲ್ಲಿ ನೆರವಾಯಿತು. ಪ್ರಕೃತಿಯ ಅಲೆದಾಟದಲ್ಲಿ ನನಗೆ ಖುಷಿಕೊಟ್ಟ ಚಿತ್ರಗಳು ಕೊರೊನಾ ಸೋಂಕಿನ ಭೀತಿಯಿಂದ ಗೃಹಬಂಧನಕ್ಕೊಳಗಾಗಿ ಒತ್ತಡದಲ್ಲಿರುವ ಕೆಲವರಲ್ಲಾದರೂ ಸಂತಸ ಉಲ್ಲಾಸ ತರಬಲ್ಲದೇನೋ ಎನ್ನುವ ಸದಾಶಯದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಪ್ರಕೃತಿಗೆ ಹತ್ತಿರವಾಗಿ, ಅಲ್ಲಿ ಖುಷಿಯಿದೆ. ಸಹಜತೆಗೆ ಮರಳಿ, ಅದರಲ್ಲಿ ಆನಂದವಿದೆ. ಕರೋನಾ ಮೂಲಕ ಪ್ರಕೃತಿ ಮನುಷ್ಯನಿಗೆ ಅರ್ಥಮಾಡಿಸುತ್ತಿರುವುದೂ ಇದೇ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.