ADVERTISEMENT

ವಿಭೂತಿ ಕುಟುಂಬಗಳು...

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 19:30 IST
Last Updated 20 ಜನವರಿ 2020, 19:30 IST
ಬೆರಣಿ ಸುಡುತ್ತಿರುವುದು
ಬೆರಣಿ ಸುಡುತ್ತಿರುವುದು   

ಸುತ್ತೂರು ಜಾತ್ರೆ ಸಮೀಪಿಸುತ್ತಿದ್ದಂತೆ ಮೈಸೂರಿನ ಹುಲ್ಲಹಳ್ಳಿಯಲ್ಲಿರುವ ಗುರುಪಾದಯ್ಯ ಮತ್ತು ಸಹೋದರರ ಮನೆಗಳಲ್ಲಿ ವಿಭೂತಿ ಗಟ್ಟಿಗಳ ತಯಾರಿ ಶುರುವಾಗುತ್ತದೆ. ಸೆಗಣಿಯ ಬೆರಣಿಗಳನ್ನು ರಾಶಿ ಹಾಕಿ ಸುಟ್ಟು, ಅದರ ಬೂದಿಯನ್ನು ಗೋಮೂತ್ರದಿಂದ ಕಲಸಿ, ಏಳೆಂಟು ಬಾರಿ ಬಿಳಿಬಟ್ಟೆಯಲ್ಲಿ ಶೋಧಿಸಿ, ಉಳಿಯುವ ಪುಡಿಯನ್ನು ವಿಭೂತಿ ಗಟ್ಟಿಗಳನ್ನಾಗಿಸಿ, ನಾಮದ ಉಂಡೆ ಮಾಡಿ.. ಪ್ಯಾಕ್‌ ಮಾಡಿ ಮಾರಾಟಕ್ಕೆ ಕಳಿಸುತ್ತಾರೆ.

ಹೀಗೆ ಸಾಂಪ್ರದಾಯಿಕ ವಿಧಾನದಲ್ಲಿ ವಿಭೂತಿ ತಯಾರಿಸುವ ಕುಟುಂಬಗಳು ಉತ್ತರ ಕರ್ನಾಟಕದಲ್ಲಿ ಒಂದಷ್ಟಿವೆ. ಆದರೆ, ಮೈಸೂರು ಭಾಗದಲ್ಲಿರುವುದು ಗುರುಪಾದಯ್ಯ ಮತ್ತು ಅವರ ಸಹೋದರರ ಮೂರ್ನಾಲ್ಕು ಕುಟುಂಬಗಳು ಮಾತ್ರ. ಅವರೆಲ್ಲ ಹುಲ್ಲಹಳ್ಳಿ ಮತ್ತು ಗೌರಿಶಂಕರನಗರದಲ್ಲಿ ನೆಲೆಸಿದ್ದಾರೆ. ಇವರ ಮನೆಗಳಲ್ಲಿ ಬೇಡಿಕೆಗೆ ತಕ್ಕಂತೆ ಪರಿಶುದ್ಧವಾದ ವಿಭೂತಿ ತಯಾರಾಗುತ್ತದೆ.

ಸಾಂಪ್ರದಾಯಿಕ ವಿಭೂತಿ ತಯಾರಿಸುವುದನ್ನು ನೋಡಲಿಕ್ಕೆಂದೇ ಕಳೆದ ವರ್ಷ ಇದೇ ಸಮಯದಲ್ಲಿ ಗುರುಪಾದಯ್ಯ ಅವರ ಮನೆಗೆ ಹೋಗಿದ್ದೆ. ಆಗ ಅಲ್ಲಿ ವಿಭೂತಿ ತಯಾರಿಕೆ ಪ್ರಕ್ರಿಯೆಗಳು ನಡೆಯುತ್ತಿದ್ದವು. ಅದರ ನಡು ನಡುವೆಯೇ ಅವರು ಈ ವೃತ್ತಿಯ ಬಗೆಗಿನ ಕಥೆಯನ್ನು ಹೇಳುತ್ತಾ ಹೊರಟರು ಗುರುಪಾದಯ್ಯ.

ADVERTISEMENT

ಶತಮಾನದ ಹಿಂದೆ..

ಸುಮಾರು ನೂರು ವರ್ಷಗಳ ಹಿಂದೆ ದಕ್ಷಿಣ ಕರ್ನಾಟಕದಲ್ಲಿ (ಮೈಸೂರು ರಾಜ್ಯ) ವಿಭೂತಿ ತಯಾರಿಸುವವರಿರಲಿಲ್ಲ. ಆ ಸಮಯದಲ್ಲಿ ಬಾದಾಮಿ ಜಿಲ್ಲೆಯ ಹೊಸೂರಿನಿಂದ ಮೈಸೂರಿಗೆ ವಲಸೆ ಬಂದ ಸದಾಶಿವಯ್ಯ ಹಿರೇಮಠ ಅವರು ಇಲ್ಲಿ ವಿಭೂತಿ ತಯಾರಿಕೆ ಆರಂಭಿಸಿದರು. ಸದಾಶಿವಯ್ಯ, ಗುರುಪಾದಯ್ಯನವರ ತಂದೆ. ‘ಅಂದು ಆರಂಭವಾದ ವಿಭೂತಿ ತಯಾರಿಕೆ, ನನ್ನ ತಲೆಮಾರಿನವರೆಗೆ ಮುಂದುವರಿದಿದೆ. ನಮ್ಮ ತಾತ, ತಂದೆ ಕಲಿಸಿದ ಮೂಲ ಕಸುಬು ನಮ್ಮ ಜೀವನದ ಬದುಕಿಗೆ ದಾರಿಯಾಗಿದೆ’ ಎಂದು ನೆನೆಸಿಕೊಂಡರು ಗುರುಪಾದಯ್ಯ.

ಸದಾಶಿವಯ್ಯ ಅವರ ಕಾಲದಲ್ಲಿ ಮೈಸೂರಿನಲ್ಲಿ ಅರಸರ ಆಳ್ವಿಕೆಯಿತ್ತು. ಹಿರೇಮಠ ಕುಟುಂಬದವರು ತಯಾರಿಸುತ್ತಿದ್ದ ವಿಭೂತಿ ಅರಮನೆಯಲ್ಲಿ ಬಳಕೆಯಾಗುತ್ತಿತ್ತು. ಹೀಗಾಗಿ ವಿಭೂತಿ ತಯಾರಿಕೆಗೆ ಹೆಚ್ಚು ಮನ್ನಣೆಯಿತ್ತು. ತಂತ್ರಜ್ಞಾನಗಳ ಪ್ರವೇಶ, ನೆರೆ ರಾಜ್ಯಗಳ ವಿಭೂತಿ ರಾಜ್ಯ ಪ್ರವೇಶಿಸಿದ ಪರಿಣಾಮ, ಸಾಂಪ್ರದಾಯಿಕ ವಿಭೂತಿ ತಯಾರಕರು ಮಾರುಕಟ್ಟೆಯ ಸ್ಪರ್ಧೆಗೆ ಇಳಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ‘ಯಂತ್ರ’ಗಳ ಎದುರು ಕೈಚಾಲಿತ ವಿಭೂತಿ ತಯಾರಕರು ಬದುಕುವುದೇ ಕಷ್ಟ ಎನ್ನುವಂತಾಯಿತು.

ಈಗಲೂ ವಿಭೂತಿ ವೃತ್ತಿಯನ್ನೇ ನಂಬಿ ಬದುಕು ನಡೆಸುತ್ತಿರುವ ಗುರುಪಾದಯ್ಯನವರಂತಹ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ‘ಇದು ಕುಲಕಸುಬು. ಬಿಡುವಂತಿಲ್ಲ, ಬಿಟ್ಟರೆ ಬೇರೆ ಗತಿಯಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುವ ಅವರು, ‘ನಮಗೆ ಗಂಡು ಮಕ್ಕಳಿಲ್ಲ. ಒಬ್ಬನನ್ನು ದತ್ತು ಪಡೆದಿದ್ದೇವೆ. ಅವನೇ ಈ ಕಾಯಕ ಮುಂದುವರಿಸುತ್ತಿದ್ದಾನೆ’ ಎನ್ನುತ್ತಾ ಸಂಕಷ್ಟದಲ್ಲೂ ವೃತ್ತಿ ನಡೆಸುತ್ತಿರುವುದನ್ನು ವಿವರಿಸುತ್ತಾರೆ.

ಕಪ್ಪು ವಿಭೂತಿಯೇ ಶ್ರೇಷ್ಠ

ಕೆಲವು ಕಡೆ ಸಿಗುತ್ತಾವಲ್ಲಾ ಬಿಳಿಯ ಬಣ್ಣದ ವಿಭೂತಿ, ಅದನ್ನು ಮಣ್ಣಿನಿಂದ ತಯಾರಿಸಿರುತ್ತಾರೆ. ಆದರೆ, ಸೆಗಣಿ ಬೆರಣಿಯ ವಿಭೂತಿ ಸ್ವಲ್ಪ ಕಪ್ಪಗಿರುತ್ತದೆ. ಪೂಜೆಗೆ ಇದೇ ಶ್ರೇಷ್ಠ. ಇದರಲ್ಲಿ ನಾಮ, ಗಿರಿ ಉಂಡೆ, ಗಂಧದ ಉಂಡೆ ಎಂಬ ಮಾದರಿಯಲ್ಲಿ ತಯಾರಿಸಿ 100 ಗಟ್ಟಿಗಳಂತೆ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಮಾರಾಟಕ್ಕೆ ಕಳುಹಿಸುತ್ತೇವೆ’ ಎಂದು ವಿಭೂತಿಗಳ ನಡುವಿರುವ ವ್ಯತ್ಯಾಸಗಳನ್ನು ಬಿಡಿಸಿಡುತ್ತಾರೆ ಗುರುಪಾದಯ್ಯ.

ಸಾಂಪ್ರದಾಯಿಕವಾಗಿ ತಯಾರಿಸುವ ವಿಭೂತಿಗೆ ಬೇಡಿಕೆ ಕಡಿಮೆಯಾಗಿಲ್ಲ. ಆದರೆ, ಅದರ ತಯಾರಿಕೆಗೆ ಬೇಕಾದ ಬೆರಣಿ ಸಿಗುತ್ತಿಲ್ಲ. ಏಕೆಂದರೆ, ಹಸು ಸಾಕುವವರೂ ಕಡಿಮೆ ಯಾಗುತ್ತಿದ್ದಾರೆ. ಇಷ್ಟಿದ್ದರೂ, ಹೊರಗಿನಿಂದ ಸೆಗಣಿ ಖರೀದಿಸಿಯಾದರೂ ಈ ಸಾಂಪ್ರದಾಯಿಕ ವೃತ್ತಿಯನ್ನು ಮುಂದು ವರಿಸುತ್ತಿದ್ದಾರೆ ಗುರುಪಾದಯ್ಯ ಮತ್ತು ಅವರ ಸೋದರ ಕುಟುಂಬದವರು.

ಬೇಡಿಕೆಯೊಂದಿಗೆ ಪೂರೈಕೆ

ಕ್ರಿಯಾ ಸಮಾಧಿಗೆ ಸಾಂಪ್ರದಾಯಿಕವಾಗಿ ತಯಾರಿಸಿರುವ ವಿಭೂತಿಯ ಬೇಕೆಂದು ಕೇಳುತ್ತಾರೆ. ಕೆಲವರು ಬೇಡಿಕೆ ಇಟ್ಟು, ಸಾವಿರಗಟ್ಟಲೆ ವಿಭೂತಿ ಗಟ್ಟಿಗಳನ್ನು ಮಾಡಿಸಿಕೊಂಡು ಹೋಗುತ್ತಾರೆ. ಕೆಲವರು ಇಂತಿಷ್ಟು ಗಟ್ಟಿಗಳು ಬೇಕೆಂದು ಮೊದಲೇ ಆರ್ಡರ್‌ ಕೊಟ್ಟು ಹೋಗುತ್ತಾರೆ. ‘ಕೆಲವು ಸಾರಿ, ಒಂದೆರಡು ದಿನಗಳಲ್ಲೇ 30 ಸಾವಿರ ವಿಭೂತಿ ಗಟ್ಟಿ ಮಾಡಿಕೊಡಿ ಎಂದು ಕೇಳಿರುವಂತಹ ಉದಾಹರಣೆಗಳಿವೆ. ‘ಅಂಥ ವೇಳೆ ಬೇರೆ ಕಡೆಯಿಂದ ಬೆರಣಿಗಳನ್ನು ಖರೀದಿಸಿ ತಂದು, ಬೇಡಿಕೆ ಪೂರೈಸುತ್ತೇವೆ’ ಎನ್ನುತ್ತಾರೆ ಗುರುಪಾದಯ್ಯ.

‘ವಿಭೂತಿ ತಯಾರಿಕೆಗೆ ಕಾರ್ಮಿಕರು ಬೇಕು. ದುಬಾರಿ ಕೂಲಿ ಕೊಡಬೇಕು. ಒಮ್ಮೊಮ್ಮೆ ವಿಭೂತಿ ತಯಾರಿಕೆಯಲ್ಲಿ ಅಲ್ಲಿಗಲ್ಲಿಗೆ ಸರಿ ಹೋಗುತ್ತದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ದಿಂಗಾಲಯ ಮಾದಾಪುರ. ಹುಲ್ಲಹಳ್ಳಿಯ ಗದಗಪ್ಪ ಮಾದಪುರ ಹಿರೇಮಠ ಅವರ ಪ್ರಕಾರ ಆಷಾಢದಲ್ಲಿ ಮತ್ತು ಜಾತ್ರೆ ಸೀಸನ್‌ನಲ್ಲಿ ‌ಬೆರಣಿ ವಿಭೂತಿಗೆ ಹೆಚ್ಚು ಬೇಡಿಕೆ ಇರುತ್ತದೆ.

ಇಷ್ಟೆಲ್ಲ ಏರುಪೇರಿನ ನಡುವೆಯೂ ಈ ಕುಟುಂಬಗಳಲ್ಲಿ ವಿಭೂತಿ ತಯಾರಿಸುವ ಉಮೇದು ಕಡಿಮೆಯಾಗಿಲ್ಲ. ಈಗಲೂ ಜಾತ್ರೆಗಳು ಬಂತೆಂದರೆ, ಅಷ್ಟೇ ಪ್ರೀತಿಯಿಂದ ವಿಭೂತಿ ಗಟ್ಟಿಗಳನ್ನು ತಯಾರಿಸಿ, ಜಾತ್ರೆಗೆ ಕೊಂಡೊಯ್ದು ಮಾರುತ್ತಾರೆ. ಈ ವರ್ಷ ಸುತ್ತೂರು ಜಾತ್ರೆಯಲ್ಲಿ ವಿಭೂತಿ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.