ಚಾಮರಾಜನಗರ ಜಿಲ್ಲೆಯು ಶಿವನ ದೇವಸ್ಥಾನಗಳಿಗೆ ಹೆಸರುವಾಸಿ. ಮಲೆ ಮಹದೇಶ್ವರ, ಚಾಮರಾಜೇಶ್ವರ ದೇವಾಲಯಗಳು ಇಂದಿಗೂ ಭಕ್ತರ ಪಾಲಿಗೆ ಅತ್ಯಂತ ಪವಿತ್ರವಾದ ಪುಣ್ಯ ಕ್ಷೇತ್ರಗಳು. ಇದೇ ಸಾಲಿಗೆ ಸೇರಬಹುದಾಗಿದ್ದ, ಒಂದು ಕಾಲದಲ್ಲಿ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದ, ಜಿಲ್ಲೆಯ ಹರದನಹಳ್ಳಿ ದಿವ್ಯಲಿಂಗೇಶ್ವರ ಸ್ವಾಮಿ ದೇವಸ್ಥಾನ ಇಂದು ಶಿಥಿಲಾವಸ್ಥೆ ತಲುಪಿದೆ. ಗತವೈಭವ ಸಾಕ್ಷಿಯಾಗಿ ಉಳಿದಿದೆ. ಇದು ಚಾಮರಾಜನಗರದಿಂದ ಸತ್ಯಮಂಗಲಕ್ಕೆ ತೆರಳುವ ಹೆದ್ದಾರಿಯಲ್ಲಿ, ಕೇವಲ 8 ಕಿ.ಮೀ. ದೂರದಲ್ಲಿದೆ.
ವಿಜಯನಗರದ ಅರಸ ಕೃಷ್ಣದೇವರಾಯ ವಿಜಯಯಾತ್ರೆಯ ಜ್ಞಾಪಕಾರ್ಥವಾಗಿ ಈ ದೇವಾಲಯವನ್ನು 1511ರಲ್ಲಿ ಕಟ್ಟಿಸಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಸುಮಾರು ಮೂರು ಎಕರೆಯಷ್ಟು ಪ್ರದೇಶದಲ್ಲಿ, ಗೋಪುರ, ಪ್ರಾಕಾರ ಮತ್ತು ಮಂಟಪಗಳನ್ನೊಳಗೊಂಡ ದ್ರಾವಿಡ ಶೈಲಿಯನ್ನು ಹೋಲುವ ದೇವಾಲಯವಿದು. ದೇಗುಲದ ಎದುರಿನ ಮೈದಾನದಲ್ಲಿ ಸುಮಾರು 40 ಅಡಿ ಎತ್ತರದ ಗರುಡಗಂಬವಿದ್ದು, ರಕ್ಷಣೆಗಾಗಿ ಕಟ್ಟೆಯನ್ನು ಕಟ್ಟಿ ಕಬ್ಬಿಣದ ಸಲಾಕೆಗಳ ಬಲದಿಂದ ಬೀಳದಂತೆ ತಡೆಯಲಾಗಿದೆ. ಸುಮಾರು 15 ವರ್ಷಗಳ ಹಿಂದೆ, ರಾಜಗೋಪುರದ ಐದು ಅಂತಸ್ತಿನ ಕಲಶವು ಕುಸಿದು ಬಿದ್ದಿದ್ದು, ಇಂದು ಬೃಹತ್ ಬಾಗಿಲುಗಳನ್ನೊಳಗೊಂಡ ಗೋಪುರ ಮಾತ್ರ ಉಳಿದಿದೆ.
ಸುಮಾರು 4 ಅಡಿ ಅಗಲದ ಹಾಗೂ 12 ಅಡಿ ಎತ್ತರದ, ಭಾರೀ ಕಲ್ಲಿನ ಪ್ರಾಕಾರದ ಗೋಡೆಗಳು ಅಂದಿನ ಕಾಲದ ಸುಭದ್ರತೆಯನ್ನು ನೆನಪಿಸುತ್ತದೆ. ಪ್ರಾಕಾರದ ಬಲಗಡೆ ಇರುವ ಎತ್ತರದ ನಂದಿ ಮೂರ್ತಿಯು ದೂರದಿಂದಲೇ ಗಮನಸೆಳೆಯುತ್ತದೆ. ಮಹಾದ್ವಾರದ ಅಕ್ಕಪಕ್ಕದ ಮುದ್ದಾದ ಆನೆಯ ವಿಗ್ರಹಗಳು ನಮ್ಮನ್ನು ಸ್ವಾಗತಿಸುತ್ತವೆ. ಒಳಪ್ರವೇಶಿಸುತ್ತಿದ್ದಂತೆ, ಧ್ವಜಸ್ತಂಭ ಹಾಗೂ ಸುಂದರವಾದ ನಂದಿ ಮಂಟಪವಿದೆ. ಇಡೀ ದೇವಾಲಯವು, ಭಾರೀ ಗಾತ್ರದ ಕಲ್ಲಿನ ಕಂಬಗಳು ಮತ್ತು ಚಪ್ಪಡಿಗಳ ಆಧಾರದಿಂದಲೇ ನಿರ್ಮಾಣಗೊಂಡಿವೆ. ಹೆಚ್ಚಿನವು ಎಂಟು ಮತ್ತು ಹದಿನಾರು ಮೂಲೆಯ ಕಂಬಗಳಾಗಿದ್ದು, ಶಿಲ್ಪಕಲಾ ಕೆತ್ತನೆಗಳು ಗಮನ ಸೆಳೆಯುತ್ತದೆ.
ಮೂಲದೇವರಾದ ಈಶ್ವರ ಗುಡಿಯ ದ್ವಾರದ ಇಕ್ಕೆಲಗಳಲ್ಲಿ ಚಂಡಪ್ರಚಂಡರ ಮೂರ್ತಿಗಳಿವೆ. ತಾರಸಿಯ ಒಳಭಾಗದಲ್ಲಿ ಅಷ್ಟದಿಕ್ಪಾಲಕರ ಅಂದವಾದ ಚಿತ್ರಗಳಿವೆ. ಒಂದೇ ಪ್ರಾಂಗಣದಲ್ಲಿ, ಒಂದಕ್ಕೊಂದು ಹೊಂದಿಕೊಂಡಂತೆ, ವಿವಿಧ ದೇವತೆಗಳಾದ ವಿಘ್ನೇಶ್ವರ, ವೀರಭದ್ರೇಶ್ವರ, ದಕ್ಷಿಣಾಮೂರ್ತಿ, ಕಾಮಾಕ್ಷಮ್ಮ, ಸರಸ್ವತಿ ಹಾಗೂ ನವಗ್ರಹಗಳ ಗುಡಿಗಳಿವೆ. ಆಗ್ನೇಯ ಮೂಲೆಯಲ್ಲಿನ ಅಡುಗೆ ಮನೆಯ ಸ್ಥಳವು, ನೈವೇದ್ಯ ಹಾಗೂ ಅನ್ನದಾಸೋಹದ ತಯಾರಿಕೆಗೆ ಮೀಸಲಾಗಿರುವುದನ್ನು ಇಂದಿಗೂ ಕಾಣಬಹುದು.
ಗರ್ಭಗುಡಿಯ ಹಿಂಭಾಗದಲ್ಲಿ, ಉದ್ದವಾದ ಪ್ರಾಂಗಣದಲ್ಲಿ, ಗಜಮುಖ ಮತ್ತು ಅಷ್ಟಲಿಂಗಗಳನ್ನು ಸಾಲಾಗಿ ಪ್ರತಿಷ್ಠಾಪಿಸಲಾಗಿದೆ. ಪ್ರತಿ ದ್ವಾರದ ಅಕ್ಕಪಕ್ಕದಲ್ಲಿ ದ್ವಾರಪಾಲಕರು ಹಾಗೂ ಶಿಲಾಬಾಲಿಕೆಯರನ್ನೊಳಗೊಂಡಂತೆ ಅನೇಕ ಚಿತ್ರಗಳು ಕಣ್ಮನ ಸೆಳೆಯುತ್ತದೆ.
ಕಾಮಾಕ್ಷಮ್ಮ ಗುಡಿಯ ಒಳಭಾಗದ ಕೋಣೆಯನ್ನು ಒಳಹೊಕ್ಕರೆ ಸುರಂಗವೊಂದು ಗೋಚರಿಸುತ್ತದೆ. ಅಂದಿನ ಮಹಾರಾಜರು ರಕ್ಷಣೆಗಾಗಿ ತೋಡಿಸಿದ ಸುರಂಗ ಮಾರ್ಗವು, ಜಿಲ್ಲೆಯ ರಾಮಸಮುದ್ರ ಗ್ರಾಮದ ಆಂಜನೇಯ ಗುಡಿಯನ್ನು ತಲುಪಲು ಗುಪ್ತಮಾರ್ಗವಾಗಿತ್ತೆಂದು ಹಿರಿಯರು ಹೇಳುತ್ತಾರೆ. ದೇವಾಲಯದ ಎದುರು ಇದ್ದ ಪುಟ್ಟ ಕೆರೆಯೊಂದು ಈಗ ಇಲ್ಲವಾಗಿದೆ.
ಈ ಪ್ರದೇಶವು ಎಡೆಯೂರು ಸಿದ್ಧಲಿಂಗೇಶ್ವರರ ಜನ್ಮಸ್ಥಳವೆಂದೂ ಪ್ರತೀತಿ. ಸನಿಹದಲ್ಲೇ ವೇಣುಗೋಪಾಲ ದೇವಾಲಯವಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ದೇವಾಲಯಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲದೇ, ನೆರೆಯ ತಮಿಳುನಾಡಿನಿಂದಲೂ ಭಕ್ತರು ಬರುತ್ತಾರೆ. ಶಿವರಾತ್ರಿ, ನವರಾತ್ರಿ ಹಾಗೂ ಹಬ್ಬದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ದಾನಿಗಳು ಹಾಗೂ ಭಕ್ತರ ನೆರವಿನಿಂದ ಭವ್ಯವಾದ ರಥ ನಿರ್ಮಾಣವಾಗಿದೆ. ಐದು ವರ್ಷಗಳಿಂದ ಪ್ರತಿ ವರ್ಷ ಫಾಲ್ಗುಣ ಬಹುಳ ಜೇಷ್ಠ ನಕ್ಷತ್ರದಲ್ಲಿ ಮಹಾಪೂಜೆಯೊಂದಿಗೆ ರಥೋತ್ಸವವೂ ನಡೆಯುತ್ತದೆ.
ದೇವಾಲಯದ ಪ್ರಾಕಾರಕ್ಕೆ ಸುಣ್ಣ ಬಳಿದು, ಗುಡಿ ಗೋಪುರಗಳಿಗೆ ವರ್ಣಾಲಂಕಾರ ಮಾಡಲಾಗಿದೆ. ಈ ಮೂಲಕ ದೇವಾಲಯದ ಸಂರಕ್ಷಣೆಗೆ ಪ್ರಯತ್ನಗಳು ಸಾಗಿವೆ. ಪುರಾತನವಾದ ಈ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ, ಗತಕಾಲದ ಭವ್ಯ ಪರಂಪರೆಯನ್ನು ಮುಂದುವರೆಸುವ ಬಯಕೆಯನ್ನು ಸ್ಥಳೀಯರು ಹಾಗೂ ಭಕ್ತಾದಿಗಳು ವ್ಯಕ್ತಪಡಿಸುತ್ತಾರೆ.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.