ರಾಮನಗರ: ರಾಮ ಭಕ್ತರ ಪಾಲಿನ ಪವಿತ್ರ ಕ್ಷೇತ್ರವಾಗಿರುವ ಈ ಗಿರಿಯು ರಣಹದ್ದುಗಳ ವಾಸಸ್ಥಾನವಾಗಿಯೂ ಪ್ರಸಿದ್ಧಿ. ಪ್ರಾಕೃತಿಕ ಸೌಂದರ್ಯ ಸೌಂದರ್ಯದ ತಾಣವಾಗಿರುವ ಬೆಟ್ಟವು ನಗರಕ್ಕೆ ಸನಿಹದಲ್ಲಿದ್ದು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತಲೇ ಇದೆ.
ಶ್ರೀರಾಮ ದಂಪತಿ ಸಮೇತ ನೆಲೆಸಿದ್ದ ಎನ್ನಲಾದ ರಾಮದೇವರ ಬೆಟ್ಟವು ಜಿಲ್ಲೆಯ ಐತಿಹಾಸಿಕ ಕುರುಹುಗಳಲ್ಲಿ ಒಂದು. ಸದ್ಯ ಇದು ರಣಹದ್ದು ಸಂರಕ್ಷಣಾ ಧಾಮವಾಗಿ ಗುರುತಿಸಿಕೊಂಡಿದೆ. ಹಿಂದಿ ಭಾಷೆಯ ಪ್ರಸಿದ್ಧ ‘ಶೋಲೆ’ ಸಿನಿಮಾ ಚಿತ್ರೀಕರಣಗೊಂಡಿದ್ದು ಇಲ್ಲಿಯೇ. ಹೀಗಾಗಿ ಇದು ಶೋಲೆ ಬೆಟ್ಟ ಎಂದೇ ಹೆಸರುವಾಸಿ. ಅಂತೆಯೇ ಇಂಗ್ಲಿಷಿನ ‘ಪ್ಯಾಸೇಜ್ ಟು ಇಂಡಿಯಾ’ ಸಹಿತ ಹಲವು ಸಿನಿಮಾಗಳೂ ಇಲ್ಲಿ ಚಿತ್ರೀಕರಣಗೊಂಡಿವೆ.
850 ಎಕರೆಯಷ್ಟು ವಿಸ್ತಾರವಾದ ಅರಣ್ಯ ಹೊಂದಿರುವ ಈ ಬೆಟ್ಟವನ್ನು ರಾಜ್ಯ ಸರ್ಕಾರ ರಣಹದ್ದು ಸಂರಕ್ಷಣಾ ಧಾಮ ಎಂದು ಗುರುತಿಸಿದೆ. ಅರಣ್ಯ ಇಲಾಖೆ ಇದರ ನಿರ್ವಹಣೆ ಮಾಡುತ್ತಿದೆ. ಶ್ರಾವಣ ಮಾಸದ ಸಂದರ್ಭ ಬೆಟ್ಟದಲ್ಲಿ ಭಕ್ತರ ದಂಡೇ ನೆರೆದಿರುತ್ತದೆ.
ಏನೇನಿದೆ ಬೆಟ್ಟದಲ್ಲಿ?: ದ್ವಾರದಲ್ಲಿ ಪ್ರವೇಶ ಶುಲ್ಕ ತೆತ್ತು ಒಳಪ್ರವೇಶಿಸಿದರೆ ಅಲ್ಲಿ ಮೆಟ್ಟಿಲುಗಳ ಬಳಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇದೆ. ಮುಂದೆ ಏನಿದ್ದರೂ ಮೆಟ್ಟಿಲು ಹತ್ತಬೇಕು. 300ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಏರುತ್ತಾ ಹೋಗಬೇಕು. ಮಧ್ಯೆ ಹಕ್ಕಿಗಳ ಕಲರವ ಕಿವಿಗೆ ಕೇಳುತ್ತಲೇ ಮುಂದುವರಿಯಬಹುದು.
ಮೆಟ್ಟಿಲುಗಳು ಮುಗಿದ ಬಳಿಕ ಪಟ್ಟಾಭಿರಾಮನ ದರ್ಶನ ಪಡೆಯಬಹುದು. ನಂತರದ ಕಡಿದಾದ ಕಾಲುದಾರಿಯಲ್ಲಿ ಮುಂದುವರಿಯುತ್ತ ಬೆಟ್ಟದ ತುದಿಗೆ ಹೋದರೆ ಅಲ್ಲಿ ಬೃಹತ್ತಾದ ಬಂಡೆಗಲ್ಲಿನಲ್ಲಿ ಕೊರೆದ ಮೆಟ್ಟಿಲುಗಳನ್ನೇರಿ ಇನ್ನಷ್ಟು ಮೇಲಕ್ಕೆ ಹೋಗಬಹುದು. ಮಳೆಗಾಲದಲ್ಲಿ ಹೋದರೆ ಮೋಡಗಳು ಹತ್ತಿರದಿಂದ ಕಾಣಸಿಗುತ್ತವೆ.
ಉದ್ದಕೊಕ್ಕಿನ ರಣಹದ್ದುಗಳು ಇಲ್ಲಿನ ವಿಶೇಷ. ಅವುಗಳ ವೀಕ್ಷಣೆಗೆ ಪ್ರವೇಶ ದ್ವಾರದ ಬಳಿ ಬೈನಾಕ್ಯುಲರ್ ವ್ಯವಸ್ಥೆ ಇದೆ. ಈ ಹದ್ದುಗಳ ವಿಶೇಷತೆ ಕುರಿತು ವಿವರಣೆಯೂ ಇದೆ. ಬಗೆಬಗೆಯ ಚಿಟ್ಟೆಗಳು ಕಾಣಸಿಗುತ್ತವೆ. ಕಾಡಿನ ಒಳಗೆ ಕರಡಿ–ಚಿರತೆಗಳು ಇವೆಯಾದರೂ ಅವು ಪ್ರವಾಸಿಗರಿಗೆ ಕಾಣಸಿಗುವುದಿಲ್ಲ. ಬೆಟ್ಟದ ಮಧ್ಯಭಾಗದಲ್ಲಿರುವ ಎಂದೂ ಬತ್ತದ ಕೊಳ, ಸಪ್ತರ್ಷಿಗಳ ಕಲ್ಲು ಬಂಡೆ ಇಲ್ಲಿನ ವಿಶೇಷಗಳಲ್ಲಿ ಒಂದು.
ನೆನಪಿರಲಿ ಈ ಸಂಗತಿ: ಇಲ್ಲಿ ರಣಹದ್ದು ಮೊದಲಾದ ಸೂಕ್ಷ್ಮ ಜೀವಿಗಳು ವಾಸವಿವೆ. ಹೀಗಾಗಿ ನಿಶಬ್ದಕ್ಕೆ ಮೊದಲ ಆದ್ಯತೆ. ಜೋರಾಗಿ ಸದ್ದು ಮಾಡುವಂತಿಲ್ಲ. ವಾಹನಗಳೂ ಅಷ್ಟೇ ನಿಧಾನವಾಗಿ ಸಾಗಬೇಕು. ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ನಿಷಿದ್ಧವಾಗಿದ್ದು, ಒಳಗೆ ಪ್ಲಾಸ್ಟಿಕ್ ಸಾಮಗ್ರಿ ಕೊಂಡೊಯ್ಯುವಂತೆ ಇಲ್ಲ.
ಬೆಳಿಗ್ಗೆ 8.30ರಿಂದ ಸಂಜೆ 5ವರೆಗೆ ಮಾತ್ರ ಪ್ರವಾಸಿಗರಿಗೆ ಪ್ರವೇಶ ಇದೆ. ಬೆಟ್ಟದಲ್ಲಿ ಯಾವುದೇ ಉಪಾಹಾರ ಗೃಹ ಇಲ್ಲ. ಹೀಗಾಗಿ ಪ್ರವಾಸಿಗರು ಜೊತೆಯಲ್ಲೇ ಆಹಾರ, ಕುಡಿಯುವ ನೀರು ಕೊಂಡೊಯ್ಯಬೇಕು.
ತಲುಪುವುದು ಹೇಗೆ?
ಬೆಟ್ಟವು ರಾಮನಗರದಿಂದ 5 ಕಿ.ಮೀ ಹಾಗೂ ಬೆಂಗಳೂರಿನಿಂದ 55 ಕಿ.ಮೀದೂರದಲ್ಲಿ ಇದೆ.
ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಗೌಸಿಯಾ ಕಾಲೇಜು ಬಳಿ ರಸ್ತೆ ಬದಿಯಲ್ಲೇ ಆಂಜನೇಯದ ದೊಡ್ಡ ಮೂರ್ತಿಯುಳ್ಳ ಆರ್ಚ್ ಕಾಣಸಿಗುತ್ತದೆ. ಅಲ್ಲಿಂದ ಮೂರು ಕಿ.ಮೀ. ಸಾಗಿದರೆ ಬೆಟ್ಟಕ್ಕೆ ತಲುಪಬಹುದು. ಕಾರ್ ಸೇರಿದಂತೆ ದೊಡ್ಡ ವಾಹನಗಳು ತಲುಪಲು ದಾರಿ ಇದೆ. ಬಸ್ ಇಲ್ಲವೇ ರೈಲಿನಲ್ಲಿ ಬರುವವರು ರಾಮನಗರ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಆಟೊದಲ್ಲಿ ಬೆಟ್ಟಕ್ಕೆ ಬರಬಹುದು.
ಹತ್ತಿರದಲ್ಲಿ ಇನ್ನೇನಿದೆ?
ರಾಮದೇವರ ಬೆಟ್ಟಕ್ಕೆ ಬಂದವರು ರಾಮನಗರವನ್ನು ಒಂದು ಸುತ್ತು ಹಾಕಬಹುದು. ರೇಷ್ಮೆ ಮಾರುಕಟ್ಟೆ ಹೊಕ್ಕರೆ ಇಲ್ಲಿನ ಕೃಷಿಯ ದರ್ಶನ ಆಗುತ್ತದೆ.
ಜನಾರ್ದನ ಹೋಟೆಲ್‌ನ ಮೃದುವಾದ ಮೈಸೂರು ಪಾಕ್ ಬಾಯಲ್ಲಿ ನೀರೂರಿಸುವಂತೆ ಇದೆ. ಅಲ್ಲಿಂದ ಮೈಸೂರು ಕಡೆಗೆ ಮುಂದುವರಿದರೆ ಜಾನಪದ ಲೋಕ ಇಲ್ಲವೇ ಕನಕಪುರ ರಸ್ತೆಗೆ ಹೊರಳಿದರೆ ಮುಂದೆ ರೇವಣ ಸಿದ್ದೇಶ್ವರ ಬೆಟ್ಟ ನಿಮ್ಮನ್ನು ಸ್ವಾಗತಿಸುತ್ತದೆ.
(ಮುಂದಿನ ಸಂಚಿಕೆಯಲ್ಲಿ; ಏರೋಣ ಬನ್ನಿ ರೇವಣ ಸಿದ್ದೇಶ್ವರನ ಬೆಟ್ಟದ ಮೆಟ್ಟಿಲು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.