ತಿಳವಳ್ಳಿ: ಹತ್ತು ಸಾವಿರ ಜನಸಂಖ್ಯೆಯುಳ್ಳ ತಾಲ್ಲೂಕಿನ ಎರಡನೇ ಅತಿ ದೊಡ್ಡ ಗ್ರಾಮವಾಗಿದ್ದು, ಹಲವಾರು ಐತಿಹಾಸಿಕ ರಚನೆಗಳನ್ನು ಹೊಂದಿರುತ್ತದೆ. ವಿಜಯ ನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ಪ್ರಮುಖಗ್ರಾಮವಾದ ಇದು ಕೇವಲ ಅಗ್ರಹಾರ ಮಾತ್ರವಲ್ಲದೇ ಅನೇಕ ವೀರರ ನೆಲೆ ಆಗಿತ್ತು ಎಂಬುದು ಲಭ್ಯ ಶಾಸನಗಳಿಂದ ತಿಳಿದು ಬರುತ್ತದೆ.
ಕಲ್ಯಾಣ ಚಾಲುಕ್ಯ-ಹೊಯ್ಸಳ ಕಾಲದಲ್ಲಿ 12ನೇ ಶತಮಾನದಲ್ಲಿ ನಿರ್ಮಿಸಲಾದ ಸಾವಂತೇಶ್ವರನ ಗುಡಿಯು ಈಗಿನ ಶಾಂತೇಶ್ವರ ದೇವಾಲಯವಾಗಿ ಊರಿನ ಐತಿಹಾಸಿಕ ಕಥೆಯನ್ನು ಸಾರುತ್ತದೆ.
ಎರಡನೇ ಹರಿಹರನ ಕಾಲದಲ್ಲಿ ನಿರ್ಮಿತವಾಗಿದೆ ಎನ್ನಲಾದ ಶಾಸನೋಕ್ತ ‘ಪಿರಿಯ ಕೆರೆಯು’ ಇಂದಿನ ತಿಳವಳ್ಳಿಯ ದೊಡ್ಡ ಕೆರೆಯಾಗಿದೆ. ಇದಕ್ಕೆ ಹನ್ನೊಂದು ತುಂಬುಗಳು ಇದ್ದು, ವೈಶಿಷ್ಟ ಪೂರ್ಣವಾಗಿದೆ. ಹಿರೇಕೆರೂರು ಹಿರೇಕೆರೆಯು ತುಂಬಿ ಚಿಕ್ಕೇರೂರಿನ ಚಿಕ್ಕ ಕೆರೆಗೆ ಬಂದು ಅಲ್ಲಿಂದ ತಿಳಿಯಾದ ನೀರು ಬಂದು ಸೇರುವ ಹಳ್ಳಿಯೇ ತಿಳಿಹಳ್ಳಿ. ಕ್ರಮೇಣ ತಿಳಿಹಳ್ಳಿಯು ಹದಿನೇಳನೇ ಶತಮಾನದಲ್ಲಿ ತಿಳವಳ್ಳಿಯಾಗಿ ಕರೆಯಲ್ಪಟ್ಟಿತ್ತು.
ಅಗ್ರಹಾರದ ಸೆಲೆ:ತಿಳವಳ್ಳಿಯು ಒಂದು ಅಗ್ರಹಾರವಾಗಿತ್ತು. ಅಗ್ರಹಾರವೆಂದರೆ ವಿದ್ಯಾಕೇಂದ್ರ. ನಾಗರ ಖಂಡದಲ್ಲಿ ತಿಳವಳ್ಳಿ ಅಗ್ರಹಾರ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿ ಅನೇಕ ವಿದ್ವಾಂಸರು ವಾಸವಾಗಿದ್ದರು ಎಂದು ನರಸಿಂಹ ದೇವಾಲಯದಲ್ಲಿರುವ ಶಾಸನವು ತಿಳಿಸುತ್ತದೆ. ಇದರ ಆಧಾರದ ಮೇಲೆ ತಿಳವಳಿಕೆ ಉಳ್ಳ ಜನರ ಹಳ್ಳಿ ತಿಳವಳ್ಳಿ ಎಂದು ನಾಮ ಸೂಚಕವಾಗಿದೆ.
ದೊಡ್ಡಕೆರೆ:ಈ ಕೆರೆಯು 1600 ಎಕರೆ ಪ್ರದೇಶವನ್ನು ಹೊಂದಿದೆ. ಕೆರೆಯ ಮಣ್ಣು ಕೆಂಪು ಮಿಶ್ರಿತ ಕಪ್ಪು ಮಣ್ಣು ಆಗಿದ್ದು, ನೀರನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿದೆ. ಆದ್ದರಿಂದ ಒಮ್ಮೆ ಕೆರೆ ತುಂಬಿದರೆ ಮೂರು ವರ್ಷದ ಕೃಷಿಗೆ ಬೇಕಾಗುವಷ್ಟು ನೀರು ಸಂಗ್ರಹವಾಗುತ್ತದೆ. ಕೆರೆಗೆ ಹನ್ನೊಂದು ತುಂಬುಗಳಿದ್ದು, ಅವುಗಳನ್ನು ನೋಡಿಕೊಳ್ಳಲು ‘ನೀರಿಂಗ’ ಎಂಬ ಅಧಿಕಾರಿಯನ್ನು ನೇಮಿಸಲಾಗಿತ್ತು ಎಂದು ದೊಡ್ಡಕೆರೆಯ ಅಂಗಳದ ಕೊಣನತೆಲೆ ಶಾಸನವು ತಿಳಿಸುತ್ತದೆ.
ಇಲ್ಲಿ ಸುಮಾರು ಒಂಬತ್ತು ಶಾಸನೋಕ್ತ ದೇವಾಲಯಗಳಿವೆ. ಅವುಗಳಲ್ಲಿ ಶಾಂತೇಶ್ವರ ದೇವಾಲಯ ಪ್ರಮುಖವಾಗಿದೆ. ಶಾಂತೇಶ್ವರ ದೇವಾಲಯವನ್ನು ‘ಠಕ್ಕರ ಸಾವಂತ’ ನೆಂಬುವನು ಕ್ರಿ.ಶ 1239ರಲ್ಲಿ ನಿರ್ಮಿಸಿದನು.
ಪೂರ್ವಕ್ಕೆ ಮುಖ ಮಾಡಿರುವ ಈ ದೇವಾಲಯಕ್ಕೆ ಮೂರು ಪ್ರವೇಶ ದ್ವಾರಗಳಿವೆ. ಇದೊಂದು ಏಕಕೂಟ ದೇವಾಲಯವಾಗಿದ್ದು, ನವರಂಗ, ಸುಕನಾಸಿ, ಗರ್ಭಗೃಹ, ತೆರೆದ ಮುಖ ಮಂಟಪ ಹೊಂದಿದೆ. ದೇವಾಲಯದ ನವರಂಗದಲ್ಲಿ 48 ಕಂಬಗಳಿದ್ದು, ಪ್ರವೇಶ ದ್ವಾರದ ಕಡೆಗಳಲ್ಲಿ 12 ಕಂಬಗಳು ಮನ ಮೋಹಕವಾಗಿವೆ. ನವರಂಗಕ್ಕೆ ಕೆಳ ಭಾಗದಲ್ಲಿ ಸುಮಾರು ಆರು ಅಡಿ ಗೋಡೆ ಇದ್ದು, ಸುಂದರ ಕಿರು ವಿಗ್ರಹಗಳನ್ನು ಕೆತ್ತಲಾಗಿದೆ. ನರಸಿಂಹ ದೇವಾಲಯ, ವಿರೂಪಾಕ್ಷೇಶ್ವರ ದೇವಾಲಯ, ಬಸವಣ್ಣ ದೇವಾಲಯಗಳು ತಿಳವಳ್ಳಿ ಇತಿಹಾಸವನ್ನು ಸಾರಿ ಹೇಳುತ್ತವೆ.
ಜಾತ್ರೆಗಳ ಸೊಬಗು:ಪ್ರತಿ ಐದು ವರ್ಷಗಳಿಗೆ ಒಮ್ಮೆ ನಡೆಯುವ ಗ್ರಾಮದ ಆರಾಧ್ಯ ದೇವತೆಯಾದ ದ್ಯಾಮವ್ವ ದೇವಿ ಜಾತ್ರೆ, ಪ್ರತಿ ವರ್ಷ ನಡೆಯುವ ಚೌಡೇಶ್ವರಿ ದೇವಿ ಜಾತ್ರೆ, ರಾಜ್ಯದ ನಾನಾ ಕಡೆಗಳಿಂದ ಭಕ್ತರು ಭಾಗವಹಿಸುವ ಹಜರತ್ ರಾಜೇಬಾಗ್ ಶಾವರ ದರ್ಗಾ ಉರುಸ್ ಪ್ರಮುಖವಾಗಿವೆ.
ಅರೆ ಮಲೆನಾಡು ವ್ಯಾಪ್ತಿಗೆ ಸೇರುವ ತಿಳವಳ್ಳಿಯ ಪ್ರಮುಖ ಬೆಳೆ ಭತ್ತ. ಎರಡನೇ ಪ್ರಮುಖ ಬೆಳೆಯಾಗಿ ಗೋವಿನ ಜೋಳವನ್ನು ಬೆಳೆಯಲಾಗುತ್ತಿದೆ. ಇಂದಿನ ದಿನಗಳಲ್ಲಿ ಅಡಿಕೆ ತೋಟಗಳು ಹೆಚ್ಚಾಗುತ್ತಿರುವುದರಿಂದ ಭತ್ತ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.