ಕಾಶ್ಮೀರ ಕಣಿವೆಯನ್ನು ಕಣ್ಣುತುಂಬಿಕೊಳ್ಳಲು ಏಪ್ರಿಲ್‌ನಿಂದ ಆಗಸ್ಟ್‌ವರೆಗೂ ಅತ್ಯುತ್ತಮ ಸಮಯ. ಹಿಮಾಚ್ಛಾದಿತ ಶಿಖರಗಳ ನಡುವಿನ ‘ಗುಲ್‌ಮಾರ್ಗ್’ಗೆ ಭೇಟಿ ನೀಡದಿದ್ದರೆ ಈ ಪ್ರವಾಸ ಅಪೂರ್ಣ. ಶ್ರೀನಗರದಿಂದ 49 ಕಿ.ಮೀ. ದೂರದಲ್ಲಿರುವ ಹೂವಿನ ಹುಲ್ಲುಗಾವಲಿನ ಕಿರುನೋಟ ಇಲ್ಲಿದೆ...
ಕಾಶ್ಮೀರ ಎಂದರೆ ನಮ್ಮ ಕಣ್ಣಮುಂದೆ ಬರುವುದು ಹಿಮಾಚ್ಛಾದಿತ ಶಿಖರಗಳು. ಚಲನಚಿತ್ರದಲ್ಲಿ ನಾವು ನೋಡಿರುವಂತಹ ಚಿತ್ರಣ, ನಾಯಕ ಮತ್ತು ನಾಯಕಿ ಹಿಮದ ಮೇಲೆ ಕುಣಿದಾಡುವುದು, ಅದಕ್ಕೊಂದು ಮಧುರವಾದ ಗೀತೆ, ಹಿನ್ನಲೆ ಸಂಗೀತ, ಅದನ್ನು ನೋಡುತ್ತಾ ನಾವೇ ಅಲ್ಲಿದ್ದ ಭಾವ, ಸುಂದರ ಸ್ವಪ್ನ ಕಣ್ಣ ಮುಂದೆ...
ಹೀಗಾಗಿ ಕಾಶ್ಮೀರ ಪ್ರವಾಸ ಎಂದಾಗ ಎಲ್ಲೋ ಸ್ವರ್ಗದಲ್ಲಿದ್ದೇವೆ ಎನ್ನುವ ಭಾವನೆ ಮೂಡುತ್ತದೆ. ನಾವು ಕಂಡ ಕನಸಿನ ಕಾಶ್ಮೀರವನ್ನು ನೋಡುವ ಅವಕಾಶ ಬಂದೇ ಬಿಟ್ಟಿತ್ತು. ಗುಲ್‌ಮಾರ್ಗ್ ಅದರ ಮುಖ್ಯ ತಾಣ. ಹಿಮದ ದರ್ಶನವಾಗಬೇಕೆಂದರೆ ನಾವು ಗುಲ್‌ಮಾರ್ಗ್‌ಗೆ ಹೋಗಬೇಕು. ಹಿಮದ ಮೇಲೆ ನಡೆಯಲು ಅಗತ್ಯವಿರುವ ಬೂಟುಗಳು, ಕೋಟುಗಳು, ಕೈಗವಸುಗಳು ಹೀಗೆ ಎಲ್ಲವನ್ನೂ ಹಿಂದಿನ ದಿನವೇ ಬಾಡಿಗೆಗೆ ತೆಗೆದುಕೊಂಡು ಸಜ್ಜಾಗಿದ್ದೆವು. ಅಂದು ಹಿಮಪಾತ ಜೋರಾಗಿತ್ತು. ದಾರಿಯ ಇಕ್ಕೆಲಗಳಲ್ಲೂ ಹಿಮ ತುಂಬಿತ್ತು. ಗುಲ್‌ಮಾರ್ಗ್ ತಲುಪಿದಾಗ ಎಲ್ಲರಿಗೂ ಹಸಿವಾಗಿತ್ತು. ಹಿಂದಿನ ದಿನ ಪೆಹೆಲ್ಗಾಮಿನಲ್ಲಿ ಕುದುರೆ ಸವಾರಿ ಮಾಡಿ ಎಲ್ಲರೂ ದಣಿದಿದ್ದರು. ಚೆನ್ನಾಗಿ ಊಟ ಮಾಡಿ ಮಲಗಿ, ಮಾರನೆಯ ದಿನ ನೋಡಲಿರುವ ಗುಲ್ಮಾರ್ಗಿನ ಹಿಮ ಶಿಖರಗಳ ಕನಸು ಕಂಡೆವು.
ಹೂವಿನ ಹುಲ್ಲುಗಾವಲಿನ ನಾಡಿನಲ್ಲಿ...
ಗುಲ್‌ಮಾರ್ಗ್ ಎಂದರೆ ಕಾಶ್ಮೀರಿ ಭಾಷೆಯಲ್ಲಿ ಹೂವಿನ ಹುಲ್ಲುಗಾವಲು ಅಂದರೆ ಹೂವುಗಳಿಂದ ತುಂಬಿಕೊಂಡಿರುವ ತಾಣ. ಈ ಜನಪ್ರಿಯ ಪ್ರವಾಸಿ ತಾಣ, ಬಾರಮುಲ್ಲಾ ಜಿಲ್ಲೆಯಿಂದ 31 ಕಿ.ಮೀ. ಮತ್ತು ಶ್ರೀನಗರದಿಂದ 49 ಕಿ.ಮೀ. ದೂರದಲ್ಲಿದೆ. ಪೀರ್ ಪಿಂಜಾಲ್ ವ್ಯಾಪ್ತಿಯಲ್ಲಿ ಪಶ್ಚಿಮ ಹಿಮಾಲಯದ ಒಂದು ಭಾಗವೂ ಹೌದು. ಗುಲ್‌ಮಾರ್ಗ್, ವನ್ಯಮೃಗ ಅಭಯಾರಣ್ಯದ ಅಂಚಿನಲ್ಲಿಯೇ ಇದೆ. ಇಲ್ಲಿ ಡಿಸೆಂಬರ್‌ನಿಂದ ಫೆಬ್ರುವರಿಯವರೆಗೂ ಹಿಮಪಾತವಿರುತ್ತದೆ. ಗುಲ್‌ಮಾರ್ಗ್‌ನ ಹಿಮದ ದೃಶ್ಯದ ಸೊಬಗನ್ನು ಎರಡು ಹಂತದ ಗೊಂಡೋಲಾ ಸವಾರಿಯ ಮೂಲಕ ನೋಡಬಹುದು. ಒಂದು ಘಂಟೆಗೆ 600 ಜನರನ್ನು ಕೊಂಗ್ಡೂರಿ ಇಂದ ಆಫ಼ರ್‌ವಟ್ ಶಿಖರದವರೆಗೂ ಇದು ಸಾಗಿಸಬಲ್ಲದು.
ರಕ್ಷಣಾತ್ಮಕ ದೃಷ್ಟಿಯಿಂದ ಈಗ ಕಾಶ್ಮೀರ ಅರ್ಥಾತ್ ಗುಲ್‌ಮಾರ್ಗ್‌ನಲ್ಲಿ ಯಾವುದೇ ತೊಂದರೆ ಇಲ್ಲ. ಆದ್ದರಿಂದಲೇ ಬೇಸಿಗೆಯ ಬಿಸಿಲಿನಲ್ಲಿ ತಂಪು ಹವೆ ಅನುಭವಿಸಲು ಎಲ್ಲರೂ ಕಾಶ್ಮೀರದತ್ತ ದೌಡಾಯಿಸುತ್ತಿದ್ದಾರೆ. ನಾವು ಹೋದಾಗ ಕಾಶ್ಮೀರ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು.
ಬಹು ಎತ್ತರದಲ್ಲಿರುವ ಗುಲ್‌ಮಾರ್ಗ್‌ನ ಸೊಬಗು...
ಗುಲ್‌ಮಾರ್ಗ್, ಬಟ್ಟಲಿನಾಕಾರದ ಕಣಿವೆಯಲ್ಲಿ 8694 ಅಡಿ ಎತ್ತರದಲ್ಲಿದೆ. ನೈಸರ್ಗಿಕವಾಗಿ ಗುಲ್‌ಮಾರ್ಗ್ ಚಳಿಗಾಲದಲ್ಲಿ ಹಿಮದಿಂದ ಆವೃತವಾಗಿದ್ದರೂ, ಬೇಸಿಗೆಯಲ್ಲಿ ಅನೇಕ ವನ್ಯ ಹೂವುಗಳಿಂದ ತುಂಬಿರುತ್ತದೆ. ಈ ಕಣಿವೆ ಉದ್ಯಾನಗಳಿಂದ ತುಂಬಿದೆ. ಚಿಕ್ಕ ಚಿಕ್ಕ ತೊರೆಗಳು, ಪೈನ್ ಮತ್ತು ಫರ್ ಮರಗಳಿಂದ ತುಂಬಿದ ಅರಣ್ಯಗಳಿದ್ದು, ಸ್ಕೀಯಿಂಗ್ ಮತ್ತು ಇತರ ಚಳಿಗಾಲದ ಕ್ರೀಡೆಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿನ ದೃಶ್ಯವೈಭವ ಕಣ್ತುಂಬಿಕೊಂಡಷ್ಟೂ ಮನಸ್ಸು ಪುಳಕಿತವಾಗುತ್ತದೆ.
ಹಿಮ ಕಣಿವೆಗಳಲ್ಲಿ ಆಗಾಗ ಹಿಮ ಕುಸಿತವಾಗುವುದು ಸಾಮಾನ್ಯ. ಆದ್ದರಿಂದ ಅದರ ಬಗ್ಗೆ ಬರುವ ಪ್ರವಾಸಿಗರಿಗೆ ಎಚ್ಚರ ನೀಡುವಂತಹ ಹಿಮ ಕುಸಿತ ಕೇಂದ್ರಗಳನ್ನು ಅಲ್ಲಲ್ಲಿ ಸ್ಥಾಪಿಸಿದ್ದಾರೆ. ಆದರೂ ಆಗಾಗ ಹಿಮ ಕುಸಿತದಲ್ಲಿ ಜನ ಸಾಯುವುದಂತೂ ಇದ್ದೇ ಇದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಚಳಿಗಾಲದ ಕ್ರೀಡಾ ಕೂಟಗಳು ಇಲ್ಲಿ ನಡೆಯುತ್ತವೆ. ಈ ಹಬ್ಬದಲ್ಲಿ ಸಂಗೀತ, ಚಲನಚಿತ್ರ ಮತ್ತು ಛಾಯಾಗ್ರಾಹಕರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ.
ಹೊಳೆಯುವ ಮಂಜಿನ ತಾಣದಲ್ಲಿ...
ಹಿಂದಿನ ರಾತ್ರಿ ಚೆನ್ನಾಗಿ ಮಳೆಯಾದ ಕಾರಣ ನಾವು ಪೆಹೆಲ್ಗಾಂನಿಂದ ಗುಲ್ಮಾರ್ಗ್‌ಗೆ ಸಾಗುವ ದಾರಿಯ ಅಕ್ಕ ಪಕ್ಕದಲ್ಲೇ ಮಂಜು ಸುರಿದಿತ್ತು. ನಾವು ಮುಂಜಾನೆ ಬೇಗ ಎದ್ದು ಗೊಂಡೋಲಾ ಸವಾರಿ ಅರ್ಥಾತ್ ಕೇಬಲ್ ಕಾರಿನಲ್ಲಿ ಹೋಗಬೇಕಿತ್ತು. ನಮ್ಮ ಗೈಡ್ ನಮಗೆ ಮೊದಲೇ ಟಿಕೆಟುಗಳನ್ನು ಕೊಂಡುಕೊಂಡಿದ್ದ ಕಾರಣ ಬೇಗನೆ ಸಾಗಿದೆವು. ಕೇಬಲ್ ಕಾರಿನಲ್ಲಿ ಕುಳಿತು ಹಿಮಚ್ಛಾದಿತ ಕಣಿವೆಗೆ ಹೋದೆವು. ಗೊಂಡೋಲಾದಲ್ಲಿ ಕುಳಿತು ಸಾಗುವಾಗ ಕಾಣುವ ದೃಶ್ಯ ಅದ್ಭುತ. ಹಿಮದ ರಾಶಿ, ಮಧ್ಯ ಮಧ್ಯ ಪೈನ್ ಮರಗಳು, ಅದರ ಎಲೆಗಳ ಮೇಲೆ ಸುರಿದಿರುವ ಹಿಮ, ಹಸಿರು ಎಲೆಗಳ ಮೇಲೆ ಬಿಳಿಯ ಬುಟ್ಟಾಗಳಂತೆ ಶೋಭಿಸುತ್ತಿದ್ದುವು. ಸೃಷ್ಟಿಕರ್ತನ ಕೈಚಳಕಕ್ಕೆ ನಿಜಕ್ಕೂ ಮಾರುಹೋದೆವು.
ಗೊಂಡೋಲಾದ ಪ್ರಯಾಣ ಒಂಭತ್ತು ನಿಮಿಷ ಅಷ್ಟೇ. ಆದರೆ ಅದು ನಿಜಕ್ಕೂ ಅವಿಸ್ಮರಣೀಯ. ಗೊಂಡೋಲಾದ ಸವಾರಿ ಮುಗಿಸಿ ಹೊರಬಂದೆವು. ಅಗಾಧವಾದ ಮಂಜಿನ ರಾಶಿ, ಬೆಳ್ಳಗೆ ಕಣ್ಣು ಕುಕ್ಕುವಂತೆ ಹರಡಿಕೊಂಡಿತ್ತು. ಮೈ ತುಂಬಾ ಬೆಣ್ಣೆ ಹಚ್ಚಿಕೊಂಡಂತೆ ಕಾಣುವ ಆ ತಾಣವನ್ನು ನೋಡಲು ಕಣ್ಣುಗಳೆರಡು ಸಾಲದು. ಅಲ್ಲಿ ಆಗಲೇ ಜನ ಸಾಗರ ತುಂಬಿತ್ತು. ಸಾಕಷ್ಟು ಜನ ಹಿಮದಲ್ಲಿ ನಡೆಯುವಾಗ ಬಿದ್ದರು, ಇನ್ನಷ್ಟು ಜನ ಹಿಮದುಂಡೆಗಳನ್ನು ಮಾಡಿ ಲಗೋರಿ ಆಟವಾಡುತ್ತಿದ್ದರು.
ಅನುಕೂಲಗಳ ಕೊರತೆ..
ಗುಲ್‌ಮಾರ್ಗ್ ಅದ್ಭುತ ತಾಣ. ಇಷ್ಟೊಂದು ಪ್ರವಾಸಿಗರು ಭೇಟಿ ನೀಡುವ ಈ ತಾಣದಲ್ಲಿ ಸರಿಯಾದ ಯಾವುದೇ ಮೂಲ ಸೌಲಭ್ಯಗಳಿಲ್ಲ. ದಣಿದವರಿಗೆ ಕೂರಲು ತಂಗುದಾಣಗಳಿಲ್ಲ. ಗೊಂಡೋಲಾ ಸವಾರಿಗೆ ಬರುವ ಹಾದಿಯೂ ಕ್ಲಿಷ್ಟಕರವಾಗಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಏನೊಂದು ಕ್ರಮವನ್ನು ತೆಗೆದುಕೊಂಡಂತೆ ಕಾಣಲಿಲ್ಲ.
ಒಂದು ಸಣ್ಣ ಸ್ಥಳವನ್ನೂ ವೈಭವೀಕರಿಸುವ ಜಾಣ್ಮೆ ...
ನಾವು ಸ್ವಿಟ್ಜರ್‌ಲೆಂಡ್‌ಗೆ ಹೋದಾಗ ಅಲ್ಲಿ ಒಂದು ಬಾಗಿಲು ತೆರೆದರೆ ಮೃದುವಾದ ಹಿಮ ಸಿಗುತ್ತದೆ. ಹೊಸಿಲು ದಾಟಿದರೆ ಸ್ವರ್ಗ ಎನಿಸುತ್ತದೆ. ನಾವು ಎಲ್ಲವನ್ನೂ ವಿದೇಶಕ್ಕೆ ಹೋಲಿಸುವುದು ಸರಿಯಲ್ಲವಾದರೂ, ಇಲ್ಲಿನ ಸ್ಥಿತಿ ನೋಡಿದಾಗ ಅಲ್ಲಿಯದು ಗಮನಕ್ಕೆ ಬಂದೇ ಬರುತ್ತದೆ. ಅವರ ಜಾಣ್ಮೆಯನ್ನು ನಾವು ಅನುಸರಿಸುವುದರಲ್ಲಿ ತಪ್ಪೇನಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.