ADVERTISEMENT

ಮಂಗಲಜೋಡಿಯಲ್ಲಿ ಜುಗಲ್‌ಬಂದಿ

ಬರ್ಡ್‌ ಫೋಟೊಗ್ರಫಿ ಟೂರಿಸಂ

ಡಿ.ಜಿ.ಮಲ್ಲಿಕಾರ್ಜುನ
Published 30 ಜನವರಿ 2019, 19:46 IST
Last Updated 30 ಜನವರಿ 2019, 19:46 IST
ss
ss   

ಪುಟ್ಟ ದೋಣಿಯಲ್ಲಿ ಶಬ್ದ ಮಾಡದೇ ನಿಧಾನವಾಗಿ ಹೋಗುತ್ತಿದ್ದೆವು. ದೂರದಲ್ಲಿ ಕಪ್ಪು ಬಣ್ಣದ ಬಾಕುವಿನಂತಿರುವ ಉದ್ದನೆಯ ಕೊಕ್ಕಿನ ಐಬಿಸ್ ಹಕ್ಕಿ ಹುಲ್ಲು ಮತ್ತು ಜೊಂಡಿನ ಮೇಲೆ ಕಾಣಿಸಿತು. ಜೊಂಡಿನ ಕೆಳಗಿನ ನೀರಿನವರೆಗೂ ತನ್ನ ಕೊಕ್ಕನ್ನು ತಿವಿದು ತಿವಿದು ಅಮೂಲ್ಯ ವಸ್ತುವಿನ ಹುಡುಕಾಟವನ್ನು ನಡೆಸಿತ್ತು. ದೋಣಿಯನ್ನು ಹುಟ್ಟು ಹಾಕುತ್ತಿದ್ದ ಗಣೇಶ್ ಇದ್ದಕ್ಕಿದ್ದಂತೆ, ‘ಹಿಡೀತು’ ಎಂದ. ಐಬಿಸ್ ಹಕ್ಕಿ ಹುಲ್ಲಿನ ನಡುವಿನಿಂದ ಏನನ್ನೋ ಎಳೆಯುತ್ತಿದೆ. ನೋಡುತ್ತಿದ್ದಂತೆಯೇ ಅದು ಸ್ವಲ್ಪ ದೊಡ್ಡದಾಗಿದ್ದ ನೀರು ಹಾವನ್ನು ಹೊರಗೆ ಎಳೆಯಿತು.

‘ಅರೆ! ಇಷ್ಟು ದೊಡ್ಡ ಹಾವನ್ನು ಇದು ತಿನ್ನುತ್ತದೆಯೇ?’ ಎಂದು ಕೇಳಿದೆ. ‘ಅಲ್ನೋಡಿ ಸರ್, ಇದು ಹುಡುಕಿದ ಹಾವನ್ನು ಕಿತ್ತುಕೊಳ್ಳಲು ಗರುಡ ಬರುತ್ತಿದೆ. ಫೋಟೊ ತೆಗೆಯಿರಿ’ ಎಂದು ನಮ್ಮ ಗೈಡ್ ಸನಾತನ್ ಬೆಹ್ರಾ ಅವಸರಿಸಿದರು. ನಿಸರ್ಗದ ರಂಗಸ್ಥಳದಲ್ಲಿ ರೋಚಕ ನಾಟಕ ನಮ್ಮ ಮುಂದೆ ನಡೆದಿತ್ತು. ಸಾಕಷ್ಟು ಸಮಯ ತಾಳ್ಮೆಯಿಂದ ತನ್ನ ಆಹಾರಕ್ಕಾಗಿ ಹಾವನ್ನು ಹುಡುಕಿ ತೆಗೆದಿದ್ದ ಹಾವು ತಪ್ಪಿಸಿಕೊಳ್ಳದಂತೆ ಐಬಿಸ್ ಹಕ್ಕಿ ಹಿಡಿದು ಸಾಯಿಸಬೇಕಾದ್ದು ಒಂದೆಡೆಯಾದರೆ, ಅದನ್ನು ಕಬಳಿಸಲು ಹೊಂಚು ಹಾಕಿ ಬಂದ ಗರುಡನಿಂದ ಅದನ್ನು ಉಳಿಸಿಕೊಳ್ಳುವ ಕೆಲಸ ಮತ್ತೊಂದೆಡೆ ಅದು ನಿರ್ವಹಿಸಬೇಕಿತ್ತು. ಗರುಡ ಹತ್ತಿರ ಬರುತ್ತಿದ್ದಂತೆ ಜೊಂಡಿನಲ್ಲಿ ಬಚ್ಚಿಡುತ್ತಾ, ಅದು ದೂರ ಹೋದೊಡನೆ ಹಾವನ್ನು ಕುಕ್ಕಿ ಕೊಲ್ಲುತ್ತಿತ್ತು. ಗರುಡನ ಆಕ್ರಮಣವನ್ನು ತಡೆಯುತ್ತಾ, ಎದುರಿಸುತ್ತಾ, ಹಾವನ್ನು ಅದು ಕಿತ್ತುಕೊಳ್ಳದಂತೆ ತಡೆಯುತ್ತಾ ಐಬಿಸ್ ತಾನೇ ಕಡೆಗೂ ಹಾವನ್ನು ನುಂಗಿತು.

ಈ ದೃಶ್ಯಾವಳಿಯನ್ನು ನೋಡುತ್ತಾ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ನನಗೆ ಮಾತು ಹೊರಡದಂತಾಗಿತ್ತು. ಆಗ ನನ್ನ ಹಿಂದೆ ಕುಳಿತಿದ್ದ ಗೈಡ್ ಸನಾತನ್ ಬೆಹ್ರಾ, ‘ಪರರಿಂದ ಕಿತ್ತು ತಿನ್ನುವ ಬುದ್ಧಿಯನ್ನು ಮನುಷ್ಯ ಇವನ್ನು ನೋಡಿಯೇ ಕಲಿತಿರಬೇಕು’ ಎಂದರು. ತಕ್ಷಣವೇ, ‘ಹೌದಲ್ವಾ!’ ಅನ್ನಿಸಿತು. ನಂತರ, ‘ಹಾಗಲ್ಲಾ ಸನಾತನ್ ಜಿ, ಇದು ನಿಸರ್ಗದ ಆಹಾರ ಸರಪಣಿ. ಮನುಷ್ಯನ ಕೆಟ್ಟ ಗುಣವನ್ನು ಇವಕ್ಕೆ ಹೋಲಿಕೆ ಮಾಡಲಾಗದು’ ಎಂದೆ.

ADVERTISEMENT

ಹಾವಿಗಾಗಿ ನಡೆದ ಈ ಜುಗಲ್ ಬಂದಿಯ ತಾಣ ಮಂಗಲಜೋಡಿ. ಒರಿಸ್ಸಾದ ಚಿಲ್ಕ ಸರೋವರದ ತೀರದಲ್ಲಿ ಭುವನೇಶ್ವರದಿಂದ ಕೇವಲ 75 ಕಿ. ಮೀ ದೂರದಲ್ಲಿದೆ. ಇಲ್ಲಿನ ದೊಡ್ಡದಾದ ಜೌಗು ಪ್ರದೇಶಗಳು, ತೆರೆದ ನೀರಿನ ಹಾಸು ಸಾವಿರಾರು ವಲಸೆ ಮತ್ತು ನಿವಾಸಿ ಪಕ್ಷಿಗಳಿಗೆ ಆಶ್ರಯತಾಣ.

‘ಮಂಗಲಜೋಡಿಯಲ್ಲಿ 200ಕ್ಕಿಂತ ಹೆಚ್ಚು ಸಂಖ್ಯೆಯ ಹಕ್ಕಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ವಲಸೆ ಹಕ್ಕಿಗಳು, ಚಳಿಗಾಲದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಕ್ಕಿಗಳು ಇಲ್ಲಿಗೆ ಬರುತ್ತವೆ. ರಾಜಸ್ಥಾನದ ಭರತ್‌ಪುರಕ್ಕಿಂತ ಹೆಚ್ಚಿನ ಸಂಖ್ಯೆಯ ಹಕ್ಕಿಗಳು ಇಲ್ಲಿಗೆ ಬರುತ್ತವೆ. ಈ ಕಾರಣದಿಂದಲೇ ಈ ಹಿಂದೆ ಪ್ರತಿ ವರ್ಷ ಭರತ್‌ಪುರದಲ್ಲಿ ನಡೆಯುತ್ತಿದ್ದ ‘ನ್ಯಾಷನಲ್‌ ಬರ್ಡ್‌ ಫೆಸ್ಟಿವಲ್‌’ ಈಗ ಮಂಗಲಜೋಡಿಯಲ್ಲಿ ನಡೆಸಲಾಗುತ್ತಿದೆ’ ಎಂದು ಈ ಪಕ್ಷಿಕಾಶಿಯ ಬಗ್ಗೆ ಹೆಮ್ಮೆಯಿಂದ ಹೇಳಿದರು ಸನಾತನ್ ಬೆಹ್ರಾ.

‘ಇಲ್ಲಿ ಹಕ್ಕಿಗಳಿಗೆ ಯಾರೂ ತೊಂದರೆ ಮಾಡಲ್ವಾ?’ ಎಂದು ಅವರನ್ನು ಕೇಳಿದೆ. ‘ಈಗ ಯಾರೂ ಹಕ್ಕಿಗಳಿಗೆ ತೊಂದರೆ ಮಾಡಲ್ಲ ಸರ್. ಆದರೆ, ಸುಮಾರು 20 ವರ್ಷಗಳ ಹಿಂದೆ ಹೀಗಿರಲಿಲ್ಲ. ಇಲ್ಲಿ ಹಕ್ಕಿಗಳ ಬೇಟೆ ನಡೆಯುತ್ತಿತ್ತು. ಅವುಗಳನ್ನು ತಿಂದು ತೇಗಿ ಮಾರಿ ನಾವೆಲ್ಲಾ ಜೀವನ ನಡೆಸುತ್ತಿದ್ದೆವು. ನಂದಕಿಶೋರ್‌ ಭುಜಬಲ್ ನೇತೃತ್ವದ ವೈಲ್ಡ್ ಒರಿಸ್ಸಾ ಎಂಬ ಸ್ವಯಂಸೇವಾ ಸಂಸ್ಥೆ ಆಗ ಹಕ್ಕಿಗಳ ರಕ್ಷಣಾ ಪ್ರಯತ್ನ ಮಾಡಿತು. ಸ್ಥಳೀಯರ ಮನಗೆದ್ದು ಬೇಟೆ ಪ್ರವೃತ್ತಿಯನ್ನು ಬಿಡಿಸಿತು. ಶ್ರೀ ಶ್ರೀ ಮಹಾವೀರ್ ಪಕ್ಷಿ ಸುರಕ್ಷಾ ಸಮಿತಿಯ ಸ್ಥಾಪನೆಯಾಯಿತು. ಹಕ್ಕಿ ಬೇಟೆಗಾರರಿಗೆ ತರಬೇತಿ ನೀಡಿ ಪ್ರವಾಸಿಗರಿಗೆ, ಫೋಟೊಗ್ರಾಫರ್‌ಗಳಿಗೆ ಹಕ್ಕಿಗಳ ಮಾರ್ಗದರ್ಶಿಗಳನ್ನಾಗಿ ಮಾಡಲಾಯಿತು’ ಎಂದು ಬೆಹ್ರಾ ವಿವರಿಸಿದರು.

ನಮ್ಮ ಗೈಡ್ ಸನಾತನ್‌ ಬೆಹ್ರ ಶಾಲೆಯಲ್ಲಿ ಅಕ್ಷರ ಕಲಿತವರಲ್ಲ. ಒಡಿಶಾ ಭಾಷೆಯನ್ನು ಮತ್ತು ಇಂಗ್ಲಿಷ್‌ ಅನ್ನು ಅವರಿವರಿಂದ ಕಷ್ಟಪಟ್ಟು ಕಲಿತು, ಈಗ ನೂರಾರು ಹಕ್ಕಿಗಳ ಹೆಸರನ್ನು ಸರಾಗವಾಗಿ ಹೇಳಬಲ್ಲವರಾಗಿದ್ದಾರೆ.

ಮಹಾವೀರ್ ಪಕ್ಷಿ ಸುರಕ್ಷಾ ಸಮಿತಿ ಪ್ರಾರಂಭಗೊಂಡಾಗ ಆರೇಳು ಮಂದಿ ಸದಸ್ಯರಿದ್ದವರು ಈಗ 38 ಮಂದಿಯಾಗಿದ್ದಾರೆ. ಇವರದ್ದೇ ಸಮವಸ್ತ್ರವಿದೆ, ಸರ್ಕಾರ ಮತ್ತು ಸೇವಾ ಸಂಸ್ಥೆಗಳು ನೀಡಿರುವ ಬೈನಾಕುಲರ್‌, ಪಕ್ಷಿವೀಕ್ಷಣಾ ಪುಸ್ತಕಗಳು, ಲೈಫ್‌ ಜಾಕೆಟ್ಸ್‌ ಜೊತೆಯಲ್ಲಿ ಸಾಂಘಿಕ ಶಿಸ್ತು ಇವರಲ್ಲಿದೆ. ನಾಲ್ಕು ತಿಂಗಳು ಮಾತ್ರ ಇವರು ಮಾರ್ಗದರ್ಶಿಗಳಾಗಿರುತ್ತಾರೆ. ಉಳಿದಂತೆ ಇವರು ತಮ್ಮ ಮೂಲ ವೃತ್ತಿಯಾದ ಮೀನು ಹಿಡಿಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಕ್ಕಿಗಳ ತಂಟೆಗೆ ಇವರೂ ಹೋಗುವುದಿಲ್ಲ ಇತರರಿಗೂ ಹೋಗಲು ಬಿಡುವುದಿಲ್ಲ.

ವಲಸೆ ಹಕ್ಕಿಗಳು ನವೆಂಬರ್‌ ತಿಂಗಳಿನಿಂದ ಮಾರ್ಚ್‌ ವರೆಗೆ ಮಾತ್ರ ಇರುವ ಕಾರಣ ಈ ನಾಲ್ಕೈದು ತಿಂಗಳಿನಲ್ಲಿ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ಸ್ಥಳೀಯ ಜನಸಮುದಾಯದ ಸಹಭಾಗಿತ್ವದಲ್ಲಿ ಪರಿಸರ ಸಂರಕ್ಷಣೆ, ಪರಿಸರ ಪಾಠ, ಪ್ರವಾಸೋದ್ಯಮ, ಸ್ಥಳೀಯರಿಗೆ ಉದ್ಯೋಗ, ಎಲ್ಲಕ್ಕಿಂತ ಹೆಚ್ಚಾಗಿ ಹಕ್ಕಿಗಳ ಸಂರಕ್ಷಣೆ ನಡೆಯುತ್ತಿರುವುದು ಮಂಗಲಜೋಡಿಯ ಹೆಗ್ಗಳಿಕೆ. ಲಕ್ಷಾಂತರ ಹಕ್ಕಿಗಳು ಯಾವ ಅಡ್ಡಿ ಆತಂಕವಿಲ್ಲದೆ ಇಲ್ಲಿಗೆ ಬಂದು ಹೋಗುತ್ತವೆ.

ಹೋಗುವುದು ಹೇಗೆ?

* ಭುವನೇಶ್ವರಕ್ಕೆ ರೈಲು ಅಥವಾ ವಿಮಾನದಲ್ಲಿ ಹೋಗಬಹುದು. ಅಲ್ಲಿಂದ ಟ್ಯಾಕ್ಸಿ ಮಾಡಿಕೊಂಡು ಮಂಗಲಜೋಡಿಗೆ ಹೋಗಬೇಕು.

* ಒಡಿಶಾ ಪ್ರವಾಸೋದ್ಯಮದಿಂದ ನೋಂದಾಯಿಸಲ್ಪಟ್ಟ ಗಾಡ್ವಿಟ್ ಇಕೋ ಕಾಟೇಜ್‌ನಂತಹ ಊಟ ವಸತಿ ಇರುವ ಕಾಟೇಜ್‌ಗಳಿರುತ್ತವೆ. ಅಲ್ಲಿ ವಸತಿ ಮಾಡಬಹುದು.

* ಬೆಳಿಗ್ಗೆ ಮತ್ತು ಮಧ್ಯಾಹ್ನ ಬೋಟ್ ಹೊರಡುವ ಸ್ಥಳಕ್ಕೆ ಆಟೋದಲ್ಲಿ ಹೋಗಿ ಬೋಟಿನ ಟಿಕೆಟ್ ಪಡೆದು ಹಕ್ಕಿ ವೀಕ್ಷಣೆ ಮತ್ತು ಫೋಟೋಗ್ರಫಿ ಮಾಡಬಹುದು. ಎರಡು ಗಂಟೆಯ ಬೋಟ್ ಪ್ರಯಾಣಕ್ಕೆ ₹1200 ದರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.