ADVERTISEMENT

ದೇವರಾಯನದುರ್ಗದ ಫಿಟ್‌ನೆಸ್ ರಹಸ್ಯ!

ಸುಮಾ ಬಿ.
Published 17 ಫೆಬ್ರುವರಿ 2019, 19:45 IST
Last Updated 17 ಫೆಬ್ರುವರಿ 2019, 19:45 IST
ದೇವರಾಯನದುರ್ಗದ ಮುಂಜಾವಿನ ಹಾದಿಯಲ್ಲಿ ಸೈಕಲ್‌ ತುಳಿಯುತ್ತ
ದೇವರಾಯನದುರ್ಗದ ಮುಂಜಾವಿನ ಹಾದಿಯಲ್ಲಿ ಸೈಕಲ್‌ ತುಳಿಯುತ್ತ   

ತುಮಕೂರಿನ ದೇವರಾಯನದುರ್ಗ ಫಿಟ್‌ನೆಸ್‌ ಪ್ರಿಯರ ನೆಚ್ಚಿನ ತಾಣ. ನಗರದಿಂದ ಹದಿನೈದೇ ಕಿಲೋ ಮೀಟರ್‌ ಅಂತರದಲ್ಲಿರುವ ಇದು ಯವಕರಿಂದ ವೃದ್ಧರವರೆಗೂ ಬಂಧು – ಬಳಗ ಹೊಂದಿದೆ. ದುರ್ಗದ ದಾರಿಯಲ್ಲಿ ಬೆವರಿಳಿಸಿ, ವರ್ಕ್‌ಔಟ್‌ ಮಾಡಿ ನಿತ್ಯದ ಚಟುವಟಿಕೆಯಲ್ಲಿ ತೊಡಗಲು ಚೈತನ್ಯ ತುಂಬಿಕೊಳ್ಳವರೆಷ್ಟೊ ಲೆಕ್ಕವಿಲ್ಲ.

ಈ ದುರ್ಗದ ದಾರಿ ಹಲವು ಮನಗಳನ್ನೂ ಬೆಸೆದಿದೆ. ಫಿಟ್‌ನೆಸ್‌ಗಾಗಿ ಸೈಕಲ್‌ ಏರುವವರು ಒಂದಿಷ್ಟು ಮಂದಿಯಾದರೆ, ಕಾಲು ನಡಿಗೆ ಇನ್ನೊಂದಷ್ಟು ಜನರದ್ದು. ಇವೆರಡನ್ನೂ ಮಾಡುತ್ತ ದುರ್ಗದ ದಾರಿಯಲ್ಲೇ ಸ್ನೇಹ ಬೆಳೆಸಿಕೊಂಡು, ತಂಡ ಕಟ್ಟಿಕೊಂಡು ಕನ್ಯಾಕುಮಾರಿಯನ್ನು ಎಡತಾಕಿ ಬಂದಿದ್ದಾರೆ ‘ತುಮಕೂರು ಸೈಕ್ಲಿಸ್ಟ್‌’ ಎಂದು ಹೆಸರಿಟ್ಟುಕೊಂಡಿರುವ ವಾಯುವಿಹಾರಿಗಳು. ಅವರಿಗೆಲ್ಲ ಪ್ರೇರಣೆ ದೇವರಾಯನದುರ್ಗದ ಬೆಟ್ಟ.

ನಾಲ್ಕು ವರ್ಷ ಹಿಂದಿನ ಒಂದು ಮುಂಜಾವು. ಮಲ್ಲಿಕಾರ್ಜುನ್‌ ಅವರು ದೇಹ ದಂಡಿಸಲು ಸೈಕಲ್‌ ಏರಿ ದುರ್ಗದ ಹಾದಿ ಹಿಡಿದು ಹೊರಟರು. ದಾರಿಯಲ್ಲಿ ಸಾಗುವಾಗ ಅವರಂತೆಯೇ ಇನ್ನೊಬ್ಬರು ಸೈಕಲ್‌ ಸವಾರಿ ಮಾಡುತ್ತಿದ್ದರು. ‘ನನ್ನದಕ್ಕಿಂತ ಅವರ ಸೈಕಲ್‌ ತುಂಬಾ ಚೆನ್ನಾಗಿದೆ’ ಎಂದು ಮನದಲ್ಲೇ ಎಣಿಸಿ ದಾರಿಯಲ್ಲೇ ಅವರನ್ನು ತಡೆದು ಸೈಕಲ್‌ ಬಗ್ಗೆ ವಿಚಾರಿಸಿದರು ಮಲ್ಲಿಕಾರ್ಜುನ್‌. ಹೀಗೆ ಪರಿಚಯವಾದ ಡಾ.ಅಶ್ವಿನ್‌ ಕುಮಾರ್‌ ಅಂದಿನಿಂದ ಸೈಕಲ್‌ ತುಳಿಯಲು ಜತೆಯಾದರು. ಹೀಗೆ ಒಬ್ಬರಿಂದೊಬ್ಬರ ಪರಿಚಯ, ಸ್ನೇಹ ಒಂದು ತಂಡವನ್ನೇ ಕಟ್ಟಿದೆ.

ADVERTISEMENT

ವಾರದಲ್ಲಿ ಮೂರು ದಿನ ಸೈಕಲ್‌ ತುಳಿದರೆ, ಇನ್ನು ಮೂರು ದಿನ ನಡಿಗೆ, ಮತ್ತೊಂದು ದಿನ ವ್ಯಾಯಾಮ, ಯೋಗ. ಹೀಗೆ ಫಿಟ್‌ನೆಸ್‌ಗಾಗಿ ವಿವಿಧ ಆಯಾಮಗಳನ್ನು ಕಂಡುಕೊಂಡಿರುವ ತಂಡದಲ್ಲಿ 22 ವಯಸ್ಸಿನಿಂದ ಹಿಡಿದು 52ರ ಹರೆಯದವರು ಇದ್ದಾರೆ. ಸದ್ಯಕ್ಕೆ ‘ಟ್ವೆಂಟಿಟೂ to ಫಿಫ್ಟಿಟೂ’ ಎನ್ನುತ್ತಾರೆ ತಂಡದ ಸದಸ್ಯರು. ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ವೈದ್ಯರು, ಎಂಜಿನಿಯರ್‌ಗಳು, ಅಕೌಂಟ್‌ ಮ್ಯಾನೇಜರ್‌ ಹೀಗೆ ವಿವಿಧ ಕ್ಷೇತ್ರದವರು ಈ ತಂಡದಲ್ಲಿದ್ದಾರೆ. ಅವರೆಲ್ಲರದೂ ಒಂದೇ ಮಂತ್ರ ‘ಫಿಟ್‌ನೆಸ್‌ಗಾಗಿ ನಡೆ ಮುಂದೆ’.

ಮುಂಜಾವಿನ 6.30ಕ್ಕೆ ರಸ್ತೆಗಿಳಿಯುವ ಅವರೆಲ್ಲರೂ ದುರ್ಗದ ದಾರಿಯಲ್ಲಿ ಒಟ್ಟಾಗುತ್ತಾರೆ. ಏರು ಹಾದಿಯಲ್ಲಿ ಸೈಕ್ಲಿಂಗ್‌ ಮಾಡುವುದು ಕಷ್ಟದ ಮಾತೇ. ಹಾಗಂತ ಅವರೆಲ್ಲರೂ ಒಮ್ಮೆಲೆ ಬೆಟ್ಟ ಏರಲಿಲ್ಲ. ನಿರಂತರ ಪೆಡಲ್‌ ತುಳಿಯುತ್ತ, ದಿನದಿಂದ ದಿನಕ್ಕೆ ಪೆಡಲ್‌ ತುಳಿಯುವುದನ್ನು ಹೆಚ್ಚು ಮಾಡುತ್ತ ಸಾಗಿದರು. ಮುಂಜಾವಿನ ಒಂದೂವರೆ ಗಂಟೆಯಲ್ಲೇ ಸತತ ಅಭ್ಯಾಸಕ್ಕೆ ಇಳಿದರು. ಬೆಳಿಗ್ಗೆಯ ಎಂಟು ಗಂಟೆಗೆ ಮನೆಗೆ ಮರಳಬೇಕು. ಈ ಅವಧಿಯಲ್ಲೇ ಏರು ಹಾದಿಯನ್ನು ಏರಿ ವಾಪಸ್‌ ಇಳಿಯಬೇಕೆಂದು ಸಂಕಲ್ಪ ಕೈಗೊಂಡರು.

ಮೂರ್ನಾಲ್ಕು ತಿಂಗಳಲ್ಲೇ ಅವರ ಶ್ರಮ ಫಲ ಕೊಟ್ಟಿತು. ಒಂದೂವರೆ ಗಂಟೆಯಲ್ಲಿ ಸರಾಗವಾಗಿ ಸೈಕಲ್‌ನಲ್ಲಿ ಬೆಟ್ಟ ಏರಿ ಇಳಿದರು. ಹೀಗೆ ಒಂದೊಂದೇ ಮೆಟ್ಟಿಲು ಇಡುತ್ತ ಸಾಗಿದ ಅವರು ಈಗ ದಿನಕ್ಕೆ 250 ಕಿ.ಮೀ ಸೈಕಲ್‌ ತುಳಿಯುವ ಸಾಮರ್ಥ್ಯ ಪಡೆದಿದ್ದಾರೆ. ತುಮಕೂರು, ಬೆಂಗಳೂರಿನಲ್ಲಿ ನಡೆಯುವ ಸೈಕ್ಲೋಥಾನ್‌, ಮ್ಯಾರಥಾನ್‌ಗಳಲ್ಲಿ ಭಾಗವಹಿಸಿ ತಂಡದ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ತಂಡದ ಸದಸ್ಯರೆಲ್ಲರೂ ಆಫ್‌ ಮ್ಯಾರಥಾನ್‌ ಪೂರೈಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದೆ 2016ರಲ್ಲಿ ತುಮಕೂರು– ಮಂಗಳೂರು ಸೈಕ್ಲಿಂಗ್‌ ಯಾನ ಕೈಗೊಂಡರು. ಎರಡೇ ದಿನದಲ್ಲಿ 360 ಕಿಲೋ ಮೀಟರ್‌ ಕ್ರಮಿಸಿ ಬೆನ್ನು ತಟ್ಟಿಸಿಕೊಂಡರು. ಬಳಿಕ ಮೂರು ದಿನದಲ್ಲಿ ಕನ್ಯಾಕುಮಾರಿಗೆ ಹೋಗುವ ಯೋಜನೆ ರೂಪಿಸಿಕೊಂಡು ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಅದಕ್ಕಾಗಿ ಮೂರ್ನಾಲ್ಕು ತಿಂಗಳು ಪೂರ್ವ ತಯಾರಿಯನ್ನೂ ನಡೆಸಿದರು. ಸತತ ಮೂರು ದಿನ 250 ಕಿ.ಮೀ ಕ್ರಮಿಸಿ ಬೀಗಿದರು. ‘ಅದೆಲ್ಲವೂ ಫಿಟ್‌ನೆಸ್‌ ಭಾಗವಾಗೇ ಕಲಿತದ್ದು’ ಎನ್ನುವ ಹೆಮ್ಮೆ ಅವರದ್ದು. ಲೆಹ್‌, ಲಡಾಕ್‌ಗೆ ಸೈಕ್ಲಿಂಗ್‌ ಕೈಗೊಳ್ಳುವ ಗುರಿ ತಂಡದ ಮುಂದಿದೆ. ಹೀಗೆ ಹಲವು ಸವಾಲುಗಳಿಗೆ ನಿರಂತರ ಒಡ್ಡಿಕೊಳ್ಳುತ್ತಲೇ ಜೀವನ ಚೈತನ್ಯ ತುಂಬಿಕೊಳ್ಳುತ್ತಿದ್ದಾರೆ ತಂಡದ ಸದಸ್ಯರು.

ಇವರು ಸುಮ್ಮನೇ ಹೆಜ್ಜೆ ಹಾಕುವುದಿಲ್ಲ. ಅದರ ಪ್ರತಿಫಲ ಏನೆಂಬುದನ್ನೂ ಕಂಡುಕೊಳ್ಳುತ್ತಾರೆ. ಪ್ರತಿ ಹೆಜ್ಜೆಗೂ, ಸೈಕಲ್‌ ಏರಿ ತುಳಿಯುವ ಪ್ರತಿ ಪೆಡಲ್‌ಗೂ ದೇಹದಲ್ಲಿನ ಎಷ್ಟು ಕ್ಯಾಲೊರಿ ಕರಗಿತು ಎಂಬುದನ್ನೂ ಲೆಕ್ಕ ಹಾಕುತ್ತಾರೆ. ಅದಕ್ಕಾಗಿ ಆ್ಯಪ್‌ನ ಸಹಾಯ ಪಡೆದಿದ್ದಾರೆ.

‘ನನಗೆ ಉಸಿರಾಟದ ಸಮಸ್ಯೆ ಇತ್ತು. ಸೈಕ್ಲಿಂಗ್‌, ವಾಕಿಂಗ್‌, ಯೋಗ ರೂಢಿಸಿಕೊಂಡ ಬಳಿಕ ಆ ಸಮಸ್ಯೆ ದೂರವಾಗಿದೆ. ಸಣ್ಣಪುಟ್ಟ ಜ್ವರ, ನೆಗಡಿ, ಕೆಮ್ಮು ನಮ್ಮ ಹತ್ತಿರ ಸುಳಿಯುವುದೇ ಇಲ್ಲ. ದಿನದ ಈ ಚಟುವಟಿಕೆ ಬಾಡಿ ಫಿಟ್‌ ಆಗಿಡುವುದಲ್ಲದೆ, ಆರೋಗ್ಯವಾಗಿಡುತ್ತದೆ. ಒತ್ತಡ ಮುಕ್ತ ಬದುಕು ನಮ್ಮದು’ ಎನ್ನುತ್ತಾರೆ ಮಲ್ಲಿಕಾರ್ಜುನ್‌.

ಶುದ್ಧ ಗಾಳಿ ಸೂಸೂವ, ಕಣ್ಣಿಗೆ ಹಸಿರ ತಂಪೆರೆಯುವ, ದೇಹಕ್ಕೆ ನವೋಲ್ಲಾಸ ನೀಡುವ ದೇವರಾಯನದುರ್ಗದ ಬೆಟ್ಟದ ಸ್ವಚ್ಛತಾ ಕಾರ್ಯವೂ ತಂಡದಿಂದ ಆಗಾಗ ನಡೆಯುತ್ತಿರುತ್ತದೆ. ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್‌, ಕಸ ತೆಗೆದು ಪ್ರವಾಸಿಗರಲ್ಲೂ ಜಾಗೃತಿ ಮೂಡಿಸುತ್ತಿದೆ ಈ ತಂಡ.

ಚಾರಣ ಪ್ರೀತಿಯ ಹೂರಣ

ತಂಡದ ಮತ್ತೊಂದು ಇಷ್ಟದ ಚಟುವಟಿಕೆ ಚಾರಣ. ಅದಕ್ಕಾಗಿ ಹಲವು ಭಾನುವಾರಗಳನ್ನು ಮೀಸಲಿಟ್ಟಿದ್ದಾರೆ. ಕುಟುಂಬದ ಸದಸ್ಯರನ್ನು ಇದರಲ್ಲಿ ಸೇರಿಸಿಕೊಳ್ಳುತ್ತಾರೆ. ಕಡಿದಾದ ಬೆಟ್ಟಗಳಿದ್ದರೆ ತಂಡದ ಸದಸ್ಯರು ಮಾತ್ರವೇ ಚಾರಣ ಕೈಗೊಳ್ಳುತ್ತಾರೆ. ನಂದಿಬೆಟ್ಟ, ಶ್ರವಣಬೆಳಗೊಳ, ಸಾವನ್‌ದುರ್ಗ, ಕುದುರೆಮುಖ, ಕೊಡಚಾದ್ರಿ, ಸುಲ್ತಾನ್‌ ಬತೇರಿ, ಎತ್ತಿನಭುಜ, ಮಧುಗಿರಿ ಏಕಶಿಲಾ ಬೆಟ್ಟ, ಎಡಕುಮೇರಿ ಹೀಗೆ ಅವರು ಬೆಟ್ಟ ಏರಿದ ಸಾಲು ಬೆಳೆಯುತ್ತಲೇ ಹೋಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.