ಇಸ್ತಾನ್‌ಬುಲ್ ಒಂದು ವಿಶಿಷ್ಟವಾದ ನಗರ. ಇದು ಎಷ್ಟು ಇಸ್ಲಾಮಿಕ್ ಆಗಿದೆಯೋ ಅಷ್ಟೇ ಕ್ರಿಶ್ಚಿಯನ್ ಕೂಡ. ಎಷ್ಟು ಪಾಶ್ಚಾತ್ಯವಾಗಿದೆಯೋ ಅಷ್ಟೇ ಪೌರ್ವಾತ್ಯ ಕೂಡ. ಎಷ್ಟು ಯೂರೋಪಿಯನ್ ಆಗಿದೆಯೋ ಅಷ್ಟೇ ಏಷ್ಯನ್ ಕೂಡ. ಎಷ್ಟು ಆಧುನಿಕವಾಗಿದೆಯೋ ಅಷ್ಟೇ ಪ್ರಾಚೀನ ಕೂಡ. ಈ ನಗರಕ್ಕೆ ಒಂದು ವಿಶೇಷ ವ್ಯಕ್ತಿತ್ವವಿದೆ, ಗುಣ ಲಕ್ಷಣಗಳಿವೆ. ಈ ನಗರವನ್ನು ಹೊರಗಿನಿಂದ ನೋಡೋದಕ್ಕೂ ಒಳಗಿನಿಂದ ನೋಡೋದಕ್ಕೂ ವ್ಯತ್ಯಾಸವಿದೆ. ಎರಡು ಭೂಖಂಡಗಳ ಮಧ್ಯೆ ಹಂಚಿಕೊಂಡಿರುವ ಈ ಇಸ್ತಾನ್‌ಬುಲ್, ಸೌಂದರ್ಯವನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡಿರುವ ಒಂದು ವಿಶೇಷ ನಗರ.
ಅತಾತುರ್ಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದು ನಗರವನ್ನು ತಲುಪುವಾಗ ಇಸ್ತಾನ್‌ಬುಲ್ ಬೇರೆ ಬೇರೆ ರೀತಿಯಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ರಂಜಾನ್ ತಿಂಗಳಿನಲ್ಲಿ ಸಂಜೆಯ ಹೊತ್ತು ಜನನಿಬಿಡತೆ ಇರುತ್ತೆ ಎಂದು ಕೇಳಿದ್ದರೂ ನನಗೆ ಅಂಥ ಟ್ರಾಫಿಕ್ ಜಾಮ್ ಆಗಲಿ ಜನಸಂದಣಿಯಾಗಲಿ ಕಾಣಸಿಗಲಿಲ್ಲ. ಜನ ಅವರ ಪಾಡಿಗೆ ಅವರು ಇದ್ದಂತೆ ಕಂಡುಬಂದಿತು.
ಮಿನಿಸ್ಕರ್ಟ್ ಧರಿಸಿದ ಲಲನೆಯರ ಪಕ್ಕದಲ್ಲೇ ಬುರ್ಖಾ ಹಾಕಿಕೊಂಡ ಹೆಂಗಸರು, ದಾಡಿ ಬಿಟ್ಟುಕೊಂಡು ತಲೆಗೆ ಟೋಪಿ ಹಾಕಿಕೊಂಡವರು, ಚಡ್ಡಿ ಹಾಕಿಕೊಂಡು ತೆಳುವಾದ ಸ್ಲೀವ್‌ಲೆಸ್ ಟೀಶರ್ಟ್ ತೊಟ್ಟು ಓಡಾಡುವ ಯುವಕರು, ಕೂದಲಿನ ಬಣ್ಣ ಬದಲಾಯಿಸಿಕೊಂಡು ಫ್ಯಾಷನ್ ಮಾಡೆಲ್‌ಗಳಂತೆ ಓಡಾಡುವ ಯುವತಿಯರು, ಯೂರೋಪಿಯನ್ನರಂತೆ ಠಾಕುಠೀಕಾಗಿ ಡ್ರೆಸ್ ಮಾಡಿಕೊಂಡು, ಗಂಭೀರ ವದನರಾಗಿ ನಡೆದಾಡುವ ಮಧ್ಯವಯಸ್ಕರು, ಸ್ಕಾರ್ಫ್ ಕಟ್ಟಿಕೊಂಡು ಎಳೆಯ ಮಕ್ಕಳನ್ನು ಹಿಡಿದುಕೊಂಡು ಓಡಾಡುವ ಮಹಿಳೆಯರು, ಇವೆಲ್ಲದರೊಂದಿಗೆ, ಕೆನ್ನೆಯಿಂದ ರಕ್ತ ಚಿಮ್ಮುವಂತಹ ತ್ವಚೆ ಹೊಂದಿರುವ ಮೂಲ ತುರ್ಕೀಯರ ಮಧ್ಯೆ, ಕಂದುಬಣ್ಣದ ಅರಬ್ ಮೂಲದ ಸಿರಿಯನ್ನರು ಮತ್ತು ಕುರ್ದ್‌ಗಳು, ಹಾಗೆಯೇ ಇರಾಕಿಗಳು.
ಇಸ್ತಾನ್‌ಬುಲ್‌ನಲ್ಲಿ ಸಾಗುತ್ತಿದ್ದಂತೆಯೇ, ಮೊದಲು ಗಮನಕ್ಕೆ ಬರುವುದು ಈ ನಗರದ ಆಧುನೀಕತೆ. ತುರ್ಕೀಯರ ಪಿತಾಮಹ ಎಂದು ಕರೆಯಲ್ಪಟ್ಟ ಮುಸ್ತಾಫ ಕೆಮಾಲ್ 1938ರಲ್ಲೇ ತೀರಿಕೊಂಡರೂ ಅವರ ಮೊದಲ ಆದ್ಯತೆಯಾಗಿದ್ದುದು ತುರ್ಕಿಯ ಆಧುನೀಕರಣ ಹಾಗೂ ತುರ್ಕೀಯರ ಪಾಶ್ಚಾತ್ಯೀಕರಣ.
ಶೇ 98ರಷ್ಟು ಮಂದಿ ಮುಸಲ್ಮಾನರಿರುವ ಈ ದೇಶದಲ್ಲಿ ಅದ್ಯಾಕೆ ಅಷ್ಟೊಂದು ಇಸ್ಲಾಮಿಕ್ ಸಂಸ್ಕೃತಿ ಅಥವಾ ಸಂಪ್ರದಾಯ ಕಾಣಸಿಗುವುದಿಲ್ಲ ಎಂದು ಯೋಚಿಸಿದರೆ ಲಭಿಸುವ ಉತ್ತರಗಳೇ ಆಶ್ಚರ್ಯಕರ.
ಮಹಿಳೆಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಕೆಮಾಲ್, ತುರ್ಕೀಯರ ಮೇಲೆ ಇದ್ದ ಇಸ್ಲಾಮಿಕ್ ಪ್ರಭಾವವನ್ನು ಬಹಳಷ್ಟು ನಿರ್ಬಂಧಿಸುವುದರಲ್ಲಿ ಸಫಲರಾದರು. ತುರ್ಕಿ ಭಾಷೆಯನ್ನು ಅರೇಬಿಕ್‌ನಲ್ಲಿ ಬರೆಯುವುದನ್ನು ತಪ್ಪಿಸಿ ತುರ್ಕಿಗೆ ಲ್ಯಾಟಿನ್ ಲಿಪಿ ನೀಡಿದರು. ತುರ್ಕಿಯ ಜನತೆ ಸಾಂಪ್ರದಾಯಿಕ ಉಡುಗೆ–ತೊಡುಗೆ ಧರಿಸುವುದಕ್ಕಿಂತ, ಯುರೋಪಿಯನ್ ಉಡುಗೆ–ತೊಡುಗೆ ಧರಿಸಬೇಕೆಂದು ಉತ್ತೇಜಿಸಿದರು.
ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನ ಹಕ್ಕುಗಳನ್ನು ನೀಡಲಾಯಿತು. ಷರಿಯಾಗೆ ಬದಲು ಸಾಮಾನ್ಯ ಕಾನೂನುಗಳನ್ನು ಜಾರಿಗೊಳಿಸಲಾಗಿತ್ತು. ಈ ವ್ಯವಸ್ಥಿತವಾದ ಪಾಶ್ಚಾತ್ಯೀಕರಣದ ಕಾರಣದಿಂದಾಗಿ ಇವತ್ತು ಕೇವಲ ಶೇ 20 ರಿಂದ 25ರಷ್ಟು ಮುಸಲ್ಮಾನರು ಮಾತ್ರ ಇಸ್ಲಾಂ ಧರ್ಮವನ್ನು ಪಾಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿರುವ ಎರ್ದೋಆನ್ ಈಗ ಅಧ್ಯಕ್ಷರಾಗಿದ್ದರೂ ಸಂವಿಧಾನದ ಪ್ರಕಾರ ಅವರು ಉತ್ಸವ ಮೂರ್ತಿಯಾಗಿರಬೇಕಿತ್ತಷ್ಟೆ. ತುರ್ಕಿಯ ಸಂವಿಧಾನದಲ್ಲಿ ಪ್ರಧಾನಮಂತ್ರಿಯೇ ಸರ್ಕಾರದ ನಾಯಕ. ಆದರೂ, ಹಿಂದೆ ಅನೇಕ ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿದ್ದ ಎರ್ದೋಆನ್ ಈಗ ಅಧ್ಯಕ್ಷರಾಗಿ, ಅಧ್ಯಕ್ಷ ಸ್ಥಾನದ ಸ್ವರೂಪವನ್ನೇ ಬದಲಾಯಿಸಹೊರಟಿರುವುದು ರಾಜಕೀಯ ವಲಯದಲ್ಲಿ ಇರುಸು ಮುರುಸು ಉಂಟುಮಾಡಿದೆ.
ತುರ್ಕಿಯ ಅಧ್ಯಕ್ಷ ಪದವಿ, ಕಾರ್ಯಕಾರಿ ಅಧ್ಯಕ್ಷ ಪದವಿಯಾಗಿ ಬದಲಾಗುತ್ತಿರುವುದಕ್ಕೆ ಎರ್ದೋಆನ್ ಕಾರಣ, ಮತ್ತು ಅವರು ಆ ರೀತಿ ವರ್ತಿಸುವುದಕ್ಕೆ ಅವರಿಗೆ ಸಿಕ್ಕಿರುವ ಬೆಂಬಲವೂ ಕಾರಣ. ಆ ಬೆಂಬಲಕ್ಕೆ ಅವರ ಮೃದು ಇಸ್ಲಾಮಿಕ್ ಧೋರಣೆಗಳೇ ಕಾರಣ ಮತ್ತು ಆ ಇಸ್ಲಾಮಿಕ್ ಧೋರಣೆಗಳಿಗೆ ತುರ್ಕಿಯಲ್ಲಿ ಹೆಚ್ಚುತ್ತಿರುವ ಇಸ್ಲಾಂ ಪರವಾದ ಒಲವು ಕಾರಣ ಎಂದೂ ಹೇಳಲಾಗುತ್ತಿದೆ.
ಒಂದು ಕಾಲದಲ್ಲಿ ಜಗತ್ತಿನ ಇಸ್ಲಾಂ ಸಾಮ್ರಾಜ್ಯದ ಕೇಂದ್ರವೆಂದು ಬಣ್ಣಿಸಲ್ಪಟ್ಟಿದ್ದ ಕಾನ್‌ಸ್ಟಾಂಟಿನೋಪಲ್ ನಗರ, ಇಸ್ತಾನ್‌ಬುಲ್ ಆಗಿ ಬದಲಾದರೂ, ಈಗ ಇಸ್ಲಾಮಿಕ್ ರಾಜಕಾರಣದಲ್ಲಿ ಅಪ್ರಪ್ರಸ್ತುತವಾಗಿಬಿಟ್ಟಿರುವುದು ಅನೇಕರಿಗೆ ಬೇಸರ ತಂದಿದೆ.
ಅಚ್ಚುಕಟ್ಟಾದ ರಸ್ತೆಗಳು, ಮುಕ್ತ ಹೆದ್ದಾರಿಗಳು, ಸುರಂಗ ಮಾರ್ಗಗಳು, ರಸ್ತೆ ಬದಿಯ ಗೋಡೆಗಳ ಮೇಲೆ ವಾಲ್ ಗಾರ್ಡನ್‌ಗಳು, ವಿಶಾಲವಾದ ಕಾಲು ದಾರಿಗಳು, ಮೇಲ್ಸೇತುವೆಗಳು, ಸುಂದರವಾದ ವೃತ್ತಗಳು, ಬಸ್ ನಿಲ್ದಾಣಗಳು, ಭೂಗತ ಮೆಟ್ರೋ ರೈಲು, ಅತ್ಯಂತ ವೇಗವಾಗಿ ಸಂಚರಿಸಲು ಸಾಧ್ಯವಾಗುವಂಥ ಸಿಗ್ನಲ್ ರಹಿತ ನಗರ ಬೀದಿಗಳು, ಸುಂದರ ಕಟ್ಟಡಗಳು ಇಸ್ತಾನ್‌ಬುಲ್‌ನ ಆಧುನಿಕ ಐರೋಪ್ಯ ಭಾಗದ ಹೆಗ್ಗಳಿಕೆಗಳಾಗಿ ಕಂಡುಬಂದರೆ, ಅದರೊಂದಿಗೆ ಅಯಾಸೋಫಿಯಾ, ಬ್ಲೂಮೋಸ್ಕ್, ಗಲಾಟ್ಟ ಗೋಪುರ, ಅರಮನೆಗಳು ಮತ್ತು ವಸ್ತುಸಂಗ್ರಹಾಲಯಗಳು ಪ್ರಾಚೀನತೆಯ ಕುರುಹುಗಳಾಗಿ ಆಕಾಶದೆತ್ತರಕ್ಕೆ ನಿಂತುಕೊಂಡಿವೆ.
ಇಸ್ತಾನ್‌ಬುಲ್‌ನ ಏಷ್ಯಾ ಭಾಗಕ್ಕೆ ಹೋಗಬೇಕೆಂದರೆ, ಸೇತುವೆಗಳ ಮೇಲೂ ಹೋಗಬಹುದು– ಇಲ್ಲ, ಬೇಗ ತಲುಪಬೇಕೆಂದರೆ ಸುಂದರ, ಸುಸಜ್ಜಿತ ಜಲಸಾರಿಗೆಯನ್ನೂ ಬಳಸಬಹುದು. ಇಸ್ತಾನ್‌ಬುಲ್‌ನ ಏಷ್ಯಾಭಾಗ ಹೆಚ್ಚು ಜನನಿಬಿಡ ಮತ್ತು ಹೆಚ್ಚು ಚಟುವಟಿಕೆಯಿಂದಲೂ ಕೂಡಿರುವಂಥದ್ದು ಮತ್ತು ಹೆಚ್ಚು ಇಸ್ಲಾಮಿಕ್ ಎಂದೂ ಅನ್ನಿಸುತ್ತದೆ. ಆದ್ದರಿಂದಲೋ ಏನೋ... ಏಷ್ಯನ್ ಭಾಗದಲ್ಲೇ ಹೆಚ್ಚು ಜೀವಚೈತನ್ಯವಿದೆ, ಲವಲವಿಕೆಯಿದೆ ಎಂದು ಅಲ್ಲಿನ ಜನ ಹೇಳುತ್ತಾರೆ.
ಇಸ್ತಾನ್‌ಬುಲ್‌ನಲ್ಲಿ ಎಲ್ಲವೂ ಇದೆ. ಕ್ಲಬ್‌ಗಳು, ಬಾರ್‌ಗಳು, ಡಾನ್ಸ್‌ಬಾರ್‌ಗಳು, ಸೌವ್ನಾ(ಹಮಾಮ್) ಮತ್ತು ಡಿಸ್ಕೋಗಳೂ ಇವೆ. ಒಂದು ಪಾಶ್ಚಾತ್ಯ ನಗರದಲ್ಲಿ ಕಾಣಬಹುದಾದ ಪ್ರತಿಯೊಂದೂ ಇಲ್ಲಿದೆ. ಆದರೆ, ಇದೆಲ್ಲಾ ಬದಲಾಗುತ್ತಲೂ ಇದೆ. ಇಸ್ತಾನ್‌ಬುಲ್‌ನ ಕೇಂದ್ರಭಾಗ ಟ್ಯಾಕ್ಸಿಮ್ ಸ್ಕ್ವೇರ್. ಇದೊಂದು ವಿಶಾಲವಾದ ಖಾಲಿ ಜಾಗ.
ಇದರ ಒಂದು ಮಗ್ಗುಲಲ್ಲಿ ಟ್ಯಾಕ್ಸಿ ಸ್ಟ್ಯಾಂಡ್, ಇನ್ನೊಂದು ಮಗ್ಗುಲಲ್ಲಿ ವಾಣಿಜ್ಯ ಸಂಕೀರ್ಣಗಳು, ಮತ್ತೊಂದು ಕಡೆ ಪ್ರಸಿದ್ಧ ಉದ್ಯಾನವನ. ಟ್ಯಾಕ್ಸಿಮ್ ಸ್ಕ್ವೇರ್ ಚಾಚಿಕೊಳ್ಳುವುದು ಅತ್ಯಂತ ಚಟುವಟಿಕೆಯುಕ್ತವಾಗಿರುವ ಮಾರುಕಟ್ಟೆ ಪ್ರದೇಶಕ್ಕೆ. ಜನ, ಸಂಜೆ ಹೊತ್ತು ಓಡಾಡಲಿಕ್ಕೆ, ಮಧ್ಯದಲ್ಲಿರುವ ವೃತ್ತದ ಸುತ್ತ ಕುಳಿತುಕೊಳ್ಳಲಿಕ್ಕೆ, ಜನರನ್ನು ಭೇಟಿಯಾಗಲಿಕ್ಕೆ, ಆಟವಾಡುವ ಮಕ್ಕಳನ್ನು ನೋಡಲಿಕ್ಕೆ, ಏನಾದರೂ ಕೊಂಡು ತಿನ್ನಲಿಕ್ಕೆ, ಫೋಟೊ ತೆಗೆಯಲಿಕ್ಕೆ ಅಥವಾ ಅಲ್ಲಲ್ಲಿ ನಿಂತು ಹಾಡುತ್ತಿರುವ, ವಾದ್ಯ ನುಡಿಸುತ್ತಿರುವ ಕಲಾಕಾರರನ್ನು ಆಸ್ವಾದಿಸಲಿಕ್ಕಾಗಿಯೇ ಹೇಳಿ ಮಾಡಿಸಿದ ಜಾಗ ಈ ಟ್ಯಾಕ್ಸಿಮ್ ಸ್ಕೇರ್. ಆದರೆ, ತುರ್ಕಿಯ ಅನೇಕ ಹೋರಾಟಗಳು ಆರಂಭವಾದದ್ದು ಹಾಗೂ ಅಂತ್ಯವಾದದ್ದೂ ಇಲ್ಲೇ.
ಎರ್ದೋಆನ್ ವಿರುದ್ಧ ಹಿಂದೊಮ್ಮೆ ನಡೆದ ಒಂದು ದೊಡ್ಡ ಹೋರಾಟ ಆರಂಭವಾದದ್ದೂ ಇಲ್ಲೇ. ಇತ್ತೀಚೆಗೆ ನಡೆದ ಸೈನಿಕರ ದಂಗೆ ಅಂತ್ಯವಾದದ್ದೂ ಇಲ್ಲೇ. ಆದರೆ, ಅಲ್ಲಿನ ಜನರೇ ಹೇಳುವಂತೆ, ಟ್ಯಾಕ್ಸಿಮ್ ಸ್ಕ್ವೇರ್‌ನಲ್ಲೀಗ, ತುರ್ಕೀಯರಿಗಿಂತ ಹೆಚ್ಚಾಗಿ ಬೇರೆಯವರೇ ಕಾಣಸಿಗುತ್ತಾರೆ. ವಲಸೆ ಬಂದಿರುವ ಸಿರಿಯನ್ನರು ಅರೇಬಿಕ್ ಹಾಡುಗಳನ್ನು ಹಾಡುತ್ತಾ ವಾದ್ಯ ನುಡಿಸುತ್ತಿದ್ದರೆ, ಉಳಿದ ಸಿರಿಯನ್ನರು, ಅವರೊಂದಿಗೆ ಕುರ್ದರು ಹಾಗೂ ಇರಾಕಿಗಳೂ ನಿಂತುಕೊಂಡು ಹಾಡು ಕೇಳುತ್ತಿರುತ್ತಾರೆ. ಕೆಲವೇ ಕೆಲವು ತುರ್ಕೀ ಜನರ ಪೈಕಿ, ಕೆಲವು ಮಹಿಳೆಯರು ಕುಣಿಯಲಾರಂಭಿಸಿಬಿಡುತ್ತಾರೆ.
ಆದರೆ, ಟ್ಯಾಕ್ಸಿಮ್ ಸ್ಕ್ವೇರ್‌ನ ಉದ್ದಗಲಕ್ಕೂ ಕೇಳಿಬರುವುದು ಅರೇಬಿಕ್ ಭಾಷೆ ಮಾತ್ರ. ಆ ಮಟ್ಟಕ್ಕೆ ಅಲ್ಲಿ ಅರಬ್ಬರು ತುಂಬಿ ಹೋಗಿದ್ದಾರೆ ಎಂದು ಅನೇಕ ತುರ್ಕೀಯರು ಹೇಳುತ್ತಾರೆ. ಅರಬ್ ಪ್ರಾಂತ್ಯಗಳಿಂದ ಬಂದ ವಲಸಿಗರನ್ನು ಸ್ವಾಗತಿಸಿ, ಇಲ್ಲಿ ಅವರಿಗೆ ಜೀವನೋಪಾಯ ಒದಗಿಸಿಕೊಟ್ಟಿರುವುದು ಮಾತ್ರವಲ್ಲದೆ, ಅವರಿಗೆ ಮತದಾನದ ಹಕ್ಕನ್ನೂ ನೀಡಲಾಗುತ್ತಿದೆ. ಈ ಮೂಲಕ ತಮ್ಮನ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚಾಗುವಂತೆ ಎರ್ದೋಆನ್ ನೋಡಿಕೊಳ್ಳುತ್ತಿದ್ದಾರೆಂದು ಅನೇಕ ತುರ್ಕೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ರೋಜಾದ ಸಂದರ್ಭವಾಗಿದ್ದರೂ ಕೂಡ, ನಾನು ಮಾತನಾಡಿಸಿದ ಬಹುತೇಕ ಮಂದಿ ತುರ್ಕಿಯ ಮುಸಲ್ಮಾನರು, ಉಪವಾಸ ಮಾಡುತ್ತಿರಲಿಲ್ಲ. ಬ್ಲೂಮೋಸ್ಕ್‌ನ ಪಕ್ಕದಲ್ಲಿರುವ ದೊಡ್ಡ ಆಹಾರ ಮಾರುಕಟ್ಟೆಯಲ್ಲಂತೂ ಜನಜಂಗುಳಿ. ಅನೇಕ ಮಂದಿ ತುರ್ಕೀಯರು ಮಧ್ಯಾಹ್ನದ ಹೊತ್ತು ಸಿಗರೇಟ್ ಸೇದುತ್ತಾ, ಬಿಯರ್ ಹೀರುತ್ತಾ ಹರಟೆ ಹೊಡೆಯುತ್ತಿದ್ದುದು ಸಾಮಾನ್ಯ ದೃಶ್ಯವಾಗಿ ಕಂಡುಬರುತ್ತಿತ್ತು.
ಆದರೂ ಅನೇಕರಲ್ಲಿ, ತಾವು ಮುಸಲ್ಮಾನರಾದ ಕಾರಣ, ಒಂದಷ್ಟು ಇಸ್ಲಾಮಿಕ್ ಸಂಪ್ರದಾಯ ಪಾಲಿಸಬೇಕೇನೋ ಎಂಬ ಭಾವನೆ ಕಂಡುಬರುತ್ತಿತ್ತು. ಹಾಗೆಯೇ ತಾವು ಮಾಡುತ್ತಿರುವುದು ಸರಿಯಲ್ಲವೇನೋ ಎಂಬ ಅಳುಕೂ ಕೆಲವರಲ್ಲಿ ಇಣುಕಿ, ಅವರನ್ನು ಕಾಡುತ್ತಿದ್ದುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
‘ಒಬ್ಬ ಮುಸಲ್ಮಾನನಾಗಿಯೂ ನಾನು ಉಪವಾಸ ಮಾಡುವುದಿಲ್ಲ, ನನಗೆ ಉಪವಾಸ ಮಾಡಲು ಸಾಧ್ಯವೂ ಇಲ್ಲ, ಊಟ ಮಾಡಬೇಕೆಂದೆನಿಸಿಯೂ ಉಪವಾಸ ಮಾಡುವುದು ವಂಚನೆ ಎಂದು ನನಗೆ ಅನಿಸುತ್ತದೆ, ಆದ್ದರಿಂದ, ನಾನು ಇಸ್ಲಾಂ ಹೇಳಿದಂತೆ ನನ್ನ ಆದಾಯದ ಒಂದು ಭಾಗ ದಾನ ಕೊಡುತ್ತೇನೆ. ಇಸ್ಲಾಂ ಎಂದರೆ ಬರೀ ಉಪವಾಸ ಮಾತ್ರವಲ್ಲ’ ಎಂದು ಒಬ್ಬರು ಸಮಜಾಯಿಷಿಯನ್ನೂ ನೀಡಿದರು.
ತುರ್ಕಿಯ ಜನ ಮೃದು ಸ್ವಭಾವದವರು, ಅವಶ್ಯಬಿದ್ದರೆ ಸಹಾಯ ಹಸ್ತವನ್ನೂ ಚಾಚುತ್ತಾರೆ. ನಗುಮೊಗದೊಂದಿಗೆ ಮಾತನಾಡುತ್ತಾರೆ, ಇಷ್ಟವಾದರೆ ಯಾವುದೇ ಮಟ್ಟಕ್ಕೂ ಅತಿಥಿ ಸತ್ಕಾರ ಮಾಡುತ್ತಾರೆ. ‘ಟರ್ಕಿಶ್ ಕಾಫಿ, ಟರ್ಕಿಶ್ ಟೀ ಕುಡಿಯುತ್ತೀರಾ? ಅತಿಯಾದ ಸಿಹಿ ಇರುವ ಟರ್ಕಿಶ್ ತಿನಿಸುಗಳನ್ನು ತಿನ್ನುತ್ತೀರಾ?’ ಎಂದು ಅನೇಕರು ಆಹ್ವಾನಿಸುತ್ತಾರೆ.
ಇಸ್ತಾನ್‌ಬುಲ್, ದೊಡ್ಡ ಐರೋಪ್ಯ ನಗರದ ರೀತಿಯಲ್ಲೇ ಒಂದು ಅಚ್ಚುಕಟ್ಟಾದ ನಗರ. ಇಲ್ಲಿ ಸ್ವಚ್ಛತೆಗೂ ಕೊರತೆ ಇಲ್ಲ. ಸದ್ದು ಗದ್ದಲವಿಲ್ಲದೇ ಚಟುವಟಿಕೆಯಿಂದ ಕೂಡಿರುವಂತೆ ಕಾಣುವ ಈ ನಗರ, ಎಲ್ಲವನ್ನೂ ಅಂತರ್ಗತ ಮಾಡಿಕೊಂಡುಬಿಟ್ಟಿದೆ.
ಸಂಪ್ರದಾಯವಾದಿಗಳ ಪ್ರಭಾವ, ರಾಜಕೀಯ ಅಸ್ಥಿರತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧ, ಪಾಪಪ್ರಜ್ಞೆಯ ಅಳುಕು, ಯೂರೋಪಿನ ಸೆಳೆತ, ಐತಿಹಾಸಿಕ ಒಳಸುಳಿಗಳು ಮತ್ತು ಇವೆಲ್ಲದರ ಮಧ್ಯೆ ಇಸ್ಲಾಂ ಬಗ್ಗೆ ಇರುವ ಬದ್ಧತೆ, ತುರ್ಕಿ ಸಂಸ್ಕೃತಿಯನ್ನು ಕಾಪಾಡುವ ಹಂಬಲಗಳ ನಡುವೆ ಇಸ್ತಾನ್‌ಬುಲ್‌ನ ತುರ್ಕೀಯರು, ಒಂದು ರೀತಿಯಲ್ಲಿ ಸಾಮಾಜಿಕ ಟೈಂ ಮೆಷೀನ್‌ನಲ್ಲಿ ಸಿಕ್ಕಿಹಾಕಿಕೊಂಡವರಂತೆ ಕಂಡುಬರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.