ADVERTISEMENT

ಕಾಡಿನ ನಡುವೆ ಕಲಾವಿಲಾಸ

ಗೀರ್ವಾಣಿ
Published 10 ಡಿಸೆಂಬರ್ 2016, 19:30 IST
Last Updated 10 ಡಿಸೆಂಬರ್ 2016, 19:30 IST
ಕಾಡಿನ ನಡುವೆ ಕಲಾವಿಲಾಸ
ಕಾಡಿನ ನಡುವೆ ಕಲಾವಿಲಾಸ   
ಐತಿಹಾಸಿಕ ಹಿಂದೂ ದೇವಾಲಯಗಳೆಂದರೆ ತಕ್ಷಣಕ್ಕೆ ನೆನಪಿಗೆ ಬರುವುದು ಭಗ್ನಗೊಂಡ ಮೂರ್ತಿಗಳು, ಮುಖ–ಮೂಗು ಕೆತ್ತಿಸಿಕೊಂಡ ಶಿಲ್ಪಗಳು ಹಾಗೂ ಧರಾಶಾಯಿ ದೇವಸ್ಥಾನಗಳು. ಹಂಪಿಯಿಂದ ಕಾಂಬೋಡಿಯಾದ ‘ಆಂಗ್ ಕೋರ್ ವಾಟ್’ ತನಕವೂ ಇದೇ ನೋಟಗಳಿವೆ. ಆದರೆ ರಾಜಸ್ತಾನದ ರಣಕ್‌ಪುರ್‌ನ ಜೈನ್ ದೇವಾಲಯ ಮಾತ್ರ ಇದಕ್ಕೆ ಅಪವಾದ.
 
ಸುತ್ತ ಬೆಟ್ಟಗಳ ಸಾಲು, ಅದನ್ನು ತಬ್ಬಿಕೊಂಡ ದಟ್ಟವಾದ ಕಾಡು, ಹಸಿರಿನ ತವರು ಮನೆಯೇನೊ ಎನ್ನಿಸುವ ಪರಿಸರ, ಗುಡ್ಡ ಬಳಸುತ್ತ ಹೋದರೆ ಕಾನನದ ನಡುವೆ ಈ ರಣಕ್‌ಪುರ್ ಜೈನ್ ಮಂದಿರ ಇದೆ. ಇದು ಭಗವಾನ್ ವೃಷಭದೇವನ ಮಂದಿರ. 
 
ಉದಯಪುರದಿಂದ ಗುಡ್ಡದ ಹಾದಿ ಬಳಸಿ ಹೊರಟಾಗ ಈ ಕಾಡಿನಲ್ಲಿ ದೇವಾಲಯವಿರಲು ಸಾಧ್ಯವೇ ಅನ್ನಿಸದೇ ಇರದು. ನಾವು ಕರ್ನಾಟಕದಲ್ಲಿ ನೋಡಿದ ಇತಿಹಾಸದ ದೇವಾಲಯಗಳು ಇರುವುದು ಸಾಮಾನ್ಯವಾಗಿ ಬಯಲುನಾಡಿನಲ್ಲಿ. ಐಹೊಳೆ, ಪಟ್ಟದಕಲ್ಲು, ಬೇಲೂರು–ಹಳೆಬೀಡು, ಹಂಪಿ, ಚಿತ್ರದುರ್ಗ, ಸೋಮನಾಥಪುರ – ಹೀಗೆ ಎಲ್ಲೇ ಹೋದರೂ ಬಯಲು ಜಾಗಗಳೇ. ಈ ಬಯಲಿನ ಬೆರಗಿನ ಹಿನ್ನೆಲೆಯಿಂದ ಇಲ್ಲಿಗೆ ಬಂದವರಿಗೆ ಆಶ್ಚರ್ಯವಾಗುತ್ತದೆ.
 
ರಾಜಸ್ತಾನ ಎಂದಕೂಡಲೇ ಜನರು ಕೇಳುವ ಮೊದಲ ಪ್ರಶ್ನೆ – ಅದು ಮರಳುಗಾಡಾ? ರಾಜಸ್ತಾನದ ಅರಾವಳಿ ಬೆಟ್ಟಸಾಲುಗಳಲ್ಲಿ ಸುಂದರ ಹಸಿರಿನ ಪರಿಸರವಿದೆ. ಉದಯಪುರದಿಂದ ಜೋದ್‌ಪುರ್ ಮಾರ್ಗವಾಗಿ 90 ಕಿಲೋಮೀಟರ್ ಹೋದರೆ ಈ ರಣಕ್‌ಪುರ್ ಜೈನ್ ದೇವಾಲಯವಿದೆ. ಇನ್ನೂ ವಿವರವಾಗಿ ಹೇಳಬೇಕೆಂದರೆ ಪಾಲಿ ಜಿಲ್ಲೆಯ ಸದ್ರಿ ಪಟ್ಟಣದ ಹೊರ ವಲಯದಲ್ಲಿ ರಣಕ್‌ಪುರ್ ಎಂಬ ಹಳ್ಳಿಯಲ್ಲಿ ಈ ದೇವಾಲಯವಿದೆ. ಮೂರು ಅಂತಸ್ತಿನ ಈ ದೇವಾಲಯವನ್ನು 1444 ಮಾರ್ಬಲ್ ಕಂಬಗಳಿಂದ ಕಟ್ಟಲಾಗಿದ್ದು, ಯಾವ ಎರಡು ಕಂಬಗಳೂ ಒಂದರಂತೆ ಇನ್ನೊಂದಿಲ್ಲ. ಕಂಬಗಳ ಎತ್ತರ ಹಾಗೂ ಅದರ ಮೇಲಿನ ಕುಸುರಿ ಕೆಲಸವಂತೂ ಪದಗಳಿಗೆ ನಿಲುಕದ್ದು. ದಟ್ಟ ಕಾನನವನ್ನು ಹಾದು ಇಲ್ಲಿ ಬಂದು ನಿಂತವರಿಗೆ ಮೊದಲು ಹುಟ್ಟಿಕೊಳ್ಳುವುದೇ ಅಚ್ಚರಿಯ ಭಾವ. 
 
ಇಲ್ಲಿಗೆ ತಲುಪುವುದೇ ಒಂದು ಸುಂದರ ಅನುಭವ. ಸುತ್ತ ಮಾದ್ರಿ ಪರ್ವತಗಳ ಸಾಲು ಹಾಗೂ ಆಗಾಗ ಸಿಗುವ ಪುಟ್ಟ ಹಳ್ಳಗಳು ಮಲೆನಾಡನ್ನು ನೆನಪಿಸುತ್ತವೆ. ಅಕ್ಕಪಕ್ಕದ ಗುಡ್ಡಗಳು ಮಲೆಮಹದೇಶ್ವರ ಬೆಟ್ಟಸಾಲನ್ನು ನೆನಪಿಸುತ್ತವೆ. ಇಲ್ಲಿ ನಮ್ಮದರಂತಿಲ್ಲ ಎನಿಸುವುದು ದೇವಾಲಯ ಮಾತ್ರ. ಏಕೆಂದರೆ ಇದೊಂದು ಐತಿಹಾಸಿಕ ಕಟ್ಟಡವಾದರೂ ಅತ್ಯಂತ ಸುಸ್ಥಿತಿಯಲ್ಲಿದೆ!
 
ರಣಕ್‌ಪುರ್ ಜೈನ್ ಮಂದಿರ 15ನೇ ಶತಮಾನಕ್ಕೆ ಸೇರಿದ್ದು. ಸರಿ ಸುಮಾರು ನಮ್ಮ ವಿಜಯನಗರ ಕಾಲದ್ದು. ಇದನ್ನು ಕವಿ ಭಾಷೆಯಲ್ಲಿ ಹೇಳುವುದಾದರೆ ‘ಸ್ವರ್ಗದ ಸ್ವಪ್ನಗಳು’ ಎನ್ನಬಹುದು. ಇಲ್ಲವೇ ‘ಕಲ್ಲಿನಲ್ಲಿ ಬರೆದ ಕವಿತೆ’ ಎನ್ನಬಹುದು. ‘ದೇವದೂತನ ವರ’ ಎನ್ನಲೂಬಹುದು. ಇದೂ ಸಾಕಾಗಲಾರದು ಎಸಿದರೆ ‘ಧರೆಗಿಳಿದ ಕನಸು’ ಎನ್ನಬಹುದೇನೋ. 
 
ನಿಚ್ಚಂ ಪೊಸತು!
ಈ ಮಂದಿರದ ಇತಿಹಾಸ ತಿಳಿಯದೇ ಇಲ್ಲಿಗೆ ಬಂದವರಿಗೆ ಇದು ತೀರ ಇತ್ತೀಚಿನ ದೇವಾಲಯ ಎನ್ನಿಸಬಹುದು. ಹೀಗನ್ನಿಸಲು ಕಾರಣ ಅದರ ತಾಜಾತನ. ಸಾಮಾನ್ಯವಾಗಿ ಐತಿಹಾಸಿಕ  ಕಟ್ಟಡಗಳನ್ನು ಪ್ರವೇಶಿಸುತ್ತಿದ್ದಂತೆ ಅದರ ಪ್ರಾಚೀನತೆ ಅರಿವಿಗೆ ಬರುತ್ತದೆ. ಕಾರಣ ಅದರ ಮಾಸಿದ ಬಣ್ಣ, ಉರುಳಿಬಿದ್ದ ಮೂರ್ತಿಗಳು, ಶಿಥಿಲವಾದ ನೋಟಗಳು. ಆದರೆ ಅಂಥ ಯಾವ ಚಹರೆಗಳೂ ಇಲ್ಲಿಲ್ಲ. ಥಟ್ಟನೆ ನೋಡಿದರೆ ಇದೊಂದು ಮೆಶಿನ್‌ವರ್ಕ್‌ನಂತೆಯೂ ಇಡೀ ದೇವಾಲಯವನ್ನು ಕ್ರೇನಿನ ಸಹಾಯದಿಂದ ಕಟ್ಟಿದಂತೆಯೂ ಭಾಸವಾಗುತ್ತದೆ. ತಂತ್ರಜ್ಞಾನದ ಸಹಾಯವಿಲ್ಲದೆ ಇಂಥ ಅದ್ಭುತವಾದ ದೇವಾಲಯವನ್ನು ನಿರ್ಮಿಸಲು ಸಾಧ್ಯವೇ ಇಲ್ಲ ಎನಿಸಿಬಿಡುತ್ತದೆ. ಹೀಗನ್ನಿಸುವುದೇ ರಣಕ್‌ಪುರ್ ಜೈನ್ ದೇವಾಲಯದ ಗೆಲುವು! 
 
ಈ ಮಂದಿರದ ಪ್ರತಿ ಕಂಬವೂ ಅದ್ಭುತವಾದ ಕೆತ್ತನೆಗಳಿಂದ ಕೂಡಿದೆ. ಕೆತ್ತನೆಗಳಿಗೆ ಜೀವ ಇರುವಂತೆ ಭಾಸವಾಗುತ್ತವೆ.  ದೇವಾಲಯದ ಕಂಬಗಳ ಮೇಲೆ ಹಲವಾರು ಪುರಾಣದ ಜನಪ್ರಿಯ ಘಟನೆಗಳಿಗೆ ಅಲ್ಲಿ ಜಾಗವಿದೆ. ಪ್ರಾಂಗಣದ ಕಂಬಗಳ ಎತ್ತರವನ್ನು ನೋಡಿದಾಗ– ಆಗಿನ ಕಾಲದಲ್ಲಿ ಈ ಕಂಬಗಳನ್ನು ಇಷ್ಟು ಎತ್ತರಕ್ಕೆ ಇಲ್ಲಿ ಹೇಗೆ ನಿಲ್ಲಿಸಿದರು? ಎಂಬ ಪ್ರಶ್ನೆ ಏಳದಿದ್ದರೆ ಕೇಳಿ.
 
ಬಣ್ಣ ಬದಲಿಸುವ ಮಂದಿರ
ನಾಲ್ಕು ದ್ವಾರಗಳ ಈ ದೇವಾಲಯದ ನಾಲ್ಕು ದ್ವಾರಗಳಲ್ಲೂ ಭಗವಾನ್ ಆದಿನಾಥರ ಮೂರ್ತಿಯಿದೆ. ಸಂಪೂರ್ಣ ಗುಲಾಬಿ ಬಣ್ಣದ ಮಾರ್ಬಲ್‌ನಿಂದ ಕಂಗೊಳಿಸುವ ಈ ಮಂದಿರವು ಸಮಯ ಸರಿದಂತೆ ಬಣ್ಣ ಬದಲಾಯಿಸುತ್ತದೆ. ಸೂರ್ಯನ ಕಿರಣಗಳಿಗೆ ಸ್ಪಂದಿಸುತ್ತ ಗುಲಾಬಿ, ನೇರಳೆ ಹಾಗೂ ಬಂಗಾರದ ಬಣ್ಣಕ್ಕೆ ತಿರುಗುವ ಪರಿ ನೋಡಿದರೆ ನಿಜಕ್ಕೂ ನಮ್ಮ ಪೂರ್ವಜರಿಗೆ ಪರಿಸರದ ಬಗ್ಗೆ ಇದ್ದ ತಿಳಿವಳಿಕೆ ಅಚ್ಚರಿ ಮೂಡಿಸುತ್ತದೆ. 
 
ಇಲ್ಲಿನ ಕೆತ್ತನೆಗಳ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ – ‘ಭಾರತೀಯ ಶಿಲ್ಪಕಲೆಗಳ ಮಹಾಸಂಗಮ’ ಎನ್ನಬಹುದು. ಈ ದೇವಾಲಯದ ಇಂಚಿಂಚೂ ಕೆತ್ತನೆಗಳಿಂದ ಕೂಡಿದ್ದು ದಕ್ಷಿಣಭಾರತದ ಶಿಲ್ಪಕಲೆ ಹಾಗೂ ಉತ್ತರದ ಶಿಲ್ಪಕಲೆ ಎರಡನ್ನೂ ಕಾಣಬಹುದಾಗಿದೆ. ನಮ್ಮ ಬೇಲೂರಿನ ಶಿಲಾಬಾಲಿಕೆಯರಿಗೂ ಇಲ್ಲಿ ಸ್ಥಾನ ನೀಡಲಾಗಿದೆ. ‘ಸಹಸ್ರಪನಾ’ ಎಂದು ಕರೆಯಲಾಗುವ ಸಾವಿರ ಹೆಡೆಯ ಸರ್ಪವಂತೂ ಶಿಲ್ಪಕಲೆಯ ಸೋಜಿಗದಂತಿದೆ. ಅದನ್ನು ಕೆತ್ತಿದ ಪರಿ ಹಾಗೂ ಅದರ ಸಂಕೀರ್ಣತೆ ಎಂಥವರನ್ನೂ ಸೆಳೆದುಬಿಡುತ್ತದೆ. ಇದರ ಬಾಲದ ತುದಿಯನ್ನು ಹುಡುಕಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಇತಿಹಾಸ ತಜ್ಞರು. 
 
ದೇವಾಲಯದ ಪ್ರಾಂಗಣ, ಒಳಾವರಣದ ಚಿತ್ತಾರಗಳು, ತೀರ್ಥಂಕರರ ಮೂರ್ತಿಗಳು, ಹೂಬಳ್ಳಿಗಳು, ಮಾಲೆಯಂಥ ಕೆತ್ತನೆಗಳು ಒಂದನ್ನೊಂದು ಮೀರಿಸುವಂತಿವೆ. ಸುತ್ತ ಎತ್ತ ನೋಡಿದರೂ ಕಂಬಗಳ ಸಾಲು, ಅದರ ಮೇಲೆ ಇಂಚಿಂಚೂ ಬಿಡದೆ ಕೆತ್ತನೆ. ಮೇಲೆ, ಕೆಳಗೆ ಅಕ್ಕ ಪಕ್ಕ ಹೀಗೆ ಎಲ್ಲಿ ನೋಡಿದರೂ ಕಲೆಯೇ ಮೇಳೈಸಿದೆ ಇಲ್ಲಿ. ಹಾಗಾದರೆ ಇಂಥ ಅನನ್ಯವಾದ ದೇವಾಲಯ ರೂಪ ತಳೆದಿದ್ದು ಹೇಗೆ? ಇದರ ಹಿಂದೆ ಯಾರಿದ್ದಾರೆ? ಇದು ಯಾರ ಕನಸು? ಇದಕ್ಕೊಂದು ರೋಚಕ ಇತಿಹಾಸವಿದೆ.  
 
ಅಪೂರ್ವ ಕನಸು
ರಾಜಸ್ತಾನದ ಪ್ರಸಿದ್ಧ ರಾಜ, ಮಹಾರಾಣಾ ಪ್ರತಾಪಸಿಂಹನ ಮೂಲ ವಂಶಸ್ಥರ ಕಾಲದಲ್ಲಿ ಈ ಅದ್ಭುತ ದೇವಾಲಯದ ನಿರ್ಮಾಣವಾಯಿತು. ಅಂದರೆ ಮಹಾರಾಣಾ ಕುಂಭನ ಕಾಲದ್ದು ಈ ಮಂದಿರ ಎನ್ನುತ್ತದೆ ಚರಿತ್ರೆ. ಧರಣ್ ಶಾ ಎನ್ನುವ ಜೈನ ವ್ಯಾಪಾರಿಯು ರಾಣಾ ಕುಂಭನ ಮಂತ್ರಿಯಾಗಿದ್ದ. ಆತನ ಕನಸೇ ಈ ಮನಮೋಹಕ ದೇವಾಲಯ. ತಾನು ಕಟ್ಟುವ ಮಂದಿರ ಸ್ವರ್ಗದ ವಿಮಾನದಂತೆ ಇರಬೇಕು ಎಂದು ಧರಣ್ ಶಾ ಕನಸು ಕಂಡಿದ್ದ. ಆದರೆ ಆ ಕನಸನ್ನು ನನಸಾಗಿಸುವವರು ಯಾರು? ನೂರಾರು ಶಿಲ್ಪಿಗಳು ತಮ್ಮ ಯೋಜನೆಗಳೊಂದಿಗೆ ಬರುತ್ತಾರೆ. ದೀಪಾ ಎನ್ನುವ ಶಿಲ್ಪಿಯ ಯೋಜನೆ ಧರಣ್ ಶಾಗೆ ಇಷ್ಟವಾ, 1446ರಲ್ಲಿ ದೇವಾಲಯ ಕಟ್ಟುವ ಕೆಲಸ ಆರಂಭವಾಗುತ್ತದೆ. ಸುಲಭಕ್ಕೆ ಶತ್ರುಗಳ ದಾಳಿಗೆ ಸಿಗಬಾರದು, ಸಹಸ್ರಾರು ವರ್ಷಗಳ ಕಾಲ ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ದಟ್ಟ ಕಾನನದಲ್ಲಿ ಕೆಲಸ ಆರಂಭಗೊಳ್ಳುತ್ತದೆ. ಹೀಗೆ ಶುರುವಾದ ಕಟ್ಟಡದ ಕೆಲಸ 60 ವರ್ಷಗಳ ಕಾಲ ನಿರಂತರವಾಗಿ ಸಾಗುತ್ತದೆ. ಅಷ್ಟೊಂದು ದೀರ್ಘ ಕಾಲ ಅದೇ ಶ್ರದ್ಧೆಯಿಂದ, ನಿರಂತರವಾಗಿ ಕೆಲಸ ಮಾಡಿದ್ದರ ಫಲವೇ ಇಂದಿನ ಜಿನ ಮಂದಿರ. 
 
ಕುತೂಹಲವೆಂದರೆ ಈ ದೇವಾಲಯದಲ್ಲಿ ರಾಜ ಅಕ್ಬರನ ಮೂರ್ತಿಯನ್ನೂ ಕೆತ್ತಲಾಗಿದೆ. ಈ ದೇವಾಲಯ ಕಟ್ಟುವಾಗ ಅಕ್ಬರ್ ಇಲ್ಲಿಗೆ ಭೇಟಿ ನೀಡಿದ್ದನಂತೆ. ಆತನ ಬಳಿ ‘ಇಲ್ಲಿಗೆ ಮುಸ್ಲಿಮರ ದಾಳಿ ನಡೆಯಕೂಡದು’ ಎಂದು ಅರಿಕೆ ಮಾಡಿಕೊಂಡು ಕಂಬವೊಂದರ ಮೇಲೆ ಅಕ್ಬರನ ಮೂರ್ತಿಯನ್ನು ಕೆತ್ತಲಾಗಿದೆ. ಇಷ್ಟಾಗಿಯೂ ಈ ಮಂದಿರ ದಾಳಿಕೋರರನ್ನು ಎದುರಿಸದೇ ಇಲ್ಲ. ಆದರೂ, ಹಾನಿಗೊಳಗಾಗದೆ ಮಂದಿರ ಉಳಿದಿರುವುದು ಒಂದು ಪವಾಡವೇ ಸರಿ.
 
ಮೂರಂತಸ್ತಿನ ಈ ದೇವಾಲಯದಲ್ಲಿ ದೊಡ್ಡದಾದ ನೆಲ ಮಹಡಿಯಿದೆ. ಈ ನೆಲಮಹಡಿಯಲ್ಲಿ 84 ಕೋಣೆಗಳಿದ್ದು, ಶತ್ರು ದಾಳಿಯ ಸಂದರ್ಭದಲ್ಲಿ 48 ತೀರ್ಥಂಕರರ ಮೂರ್ತಿಗಳನ್ನು ಇಲ್ಲಿ ಇರಿಸಲಾಗುತ್ತಿತ್ತಂತೆ. ಆ ನೆಲಮಹಡಿಯ ದ್ವಾರವನ್ನು ಈಗ ಮುಚ್ಚಲಾಗಿದೆ. ಅಲ್ಲಿ ನೆಲಮಹಡಿಯಿದೆ ಎಂಬ ಸುಳಿವೇ ಸಿಗದಂತೆ ನಿರ್ಮಿಸಿರುವುದು ಅದರ ವಿಶೇಷ.
 
ಜಿನ ಮಂದಿರ ಇವತ್ತಿಗೂ ಸುಸ್ಥಿತಿಯಲ್ಲಿರಲು ಕಾರಣ ಅದರ ಹಿಂದಿರುವ ಅಪಾರವಾದ ಪರಿಶ್ರಮ. ದಟ್ಟ ಕಾಡಿನ ನಡುವೆ ಇರುವುದರಿಂದ ಕಾಲ ಕಳೆದಂತೆ ಜನರು ಇಲ್ಲಿಗೆ ಬರುವುದನ್ನೇ ನಿಲ್ಲಿಸಿಬಿಟ್ಟಿದ್ದರು. 18ನೇ ಶತಮಾನದ ಹೊತ್ತಿಗೆ ಇದು ಪಾಳುಬಿದ್ದಿತ್ತು. 19ನೇ ಶತಮಾನದ ಹೊತ್ತಿಗೆ ಜಿನ ಮಂದಿರದ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಲಾಯಿತು. 1990ರಿಂದ ಜೀರ್ಣೋದ್ಧಾರದ ಕೆಲಸ ಆರಂಭಿಸಲಾಯಿತು. 11 ವರ್ಷಗಳ ಕಾಲ ನಿರಂತರವಾಗಿ ಕೆಲಸ ನಡೆದು ಇಂದು ಮಂದಿರ ಕಂಗೊಳಿಸುತ್ತಿದೆ, ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.