ಭದ್ರಾ ನದಿಗೆ ಅಡ್ಡಲಾಗಿ ಚಿಕ್ಕಮಗಳೂರು - ಶಿವಮೊಗ್ಗ ಜಿಲ್ಲೆಯ ಗಡಿ ಪ್ರದೇಶ ಲಕ್ಕವಳ್ಳಿಯಲ್ಲಿ 1965ರಲ್ಲಿ ನೀರಾವರಿ ಉದ್ದೇಶದಿಂದ 1,708 ಮೀಟರ್ ಉದ್ದ, 59.13 ಮೀಟರ್ ಎತ್ತರದ ಅಣೆಕಟ್ಟು ನಿರ್ಮಾಣವಾಗಿದೆ. ಭದ್ರಾ ಜಲಾಶಯದ ಚೆಲುವು ಅನನ್ಯ. ನೀರು ಪೂರ್ತಿಯಾಗಿ ತುಂಬಿ ನಿಂತಾಗ ಅಲ್ಲಿನ ಚೆಲುವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲವು.
ಎಡ ಮತ್ತು ಬಲದಂಡೆ ನಾಲೆಗಳನ್ನು ಹೊಂದಿರುವ ಅಣೆಕಟ್ಟಿನ ಪರಿಸರದಲ್ಲಿ ನೀರವ ಮೌನ ಭೇದಿಸುವ ಸಾವಿರಾರು ಅಲೆಗಳ ಸಪ್ಪಳ, ಬೀಸುವ ತಂಗಾಳಿ, ನಾಲ್ಕೂ ಗೇಟುಗಳಿಂದ ನೀರನ್ನು ಹೊರ ಬಿಟ್ಟಾಗ ಹಾಲ್ನೊರೆಗಳಂತೆ ಧುಮ್ಮಿಕ್ಕಿ ಹರಿಯುವ ದೃಶ್ಯ ಮನಮೋಹಕ.
ವಾರದ ರಜಾ ದಿನಗಳಲ್ಲಿ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಸಿರ ಬೆಟ್ಟಗಳ ಮಧ್ಯದಲ್ಲಿ ನಡುಗಡ್ಡೆಗಳ ಸುತ್ತ ನಿಂತ ನೀರನ್ನು ನೋಡಿ ಸಂತಸ ಪಡುತ್ತಾರೆ. ದಿನವಿಡೀ ಕಾಲ ಕಳೆಯುತ್ತಾರೆ. ಸಂಭ್ರಮಿಸುತ್ತಾರೆ.
ಭದ್ರಾ ಹಿನ್ನೀರಿನಲ್ಲಿ ದೋಣಿ ವಿಹಾರ ಸೌಲಭ್ಯವೂ ಇದೆ. ಅರಣ್ಯ ಮತ್ತು ವಸತಿಧಾಮ ನಿಗಮದ ಸಹಭಾಗಿತ್ವದಲ್ಲಿ ನಿರ್ಮಿತ ಜಂಗಲ್ ರೆಸಾರ್ಟ್ ಉಸ್ತುವಾರಿಯಲ್ಲಿ ಇದು ನಡೆಯುತ್ತದೆ. ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದವರು ಮಾತ್ರವಲ್ಲದೆ ಇತರ ಪ್ರವಾಸಿಗರೂ ಇಲ್ಲಿಗೆ ಭೇಟಿ ನೀಡಿ ದೋಣಿ ವಿಹಾರ ಕೈಗೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಪ್ರತಿ ವ್ಯಕ್ತಿಗೆ ₹ 350 ಶುಲ್ಕ ವಿಧಿಸುತ್ತಾರೆ.
ಸರಿಸುಮಾರು ಒಂದು ಗಂಟೆಯ ನೀರ ಪಯಣ. ಬೆಳಿಗ್ಗೆ ಹಾಗೂ ಸಂಜೆ ರೆಸಾರ್ಟ್‌ನವರ ಕಡೆಯಿಂದ ಪ್ರಯಾಣ ವ್ಯವಸ್ಥೆ ಇದ್ದು, ಉಳಿದ ಅವಧಿಗಳಲ್ಲಿ ಕನಿಷ್ಠ 15 ಪ್ರವಾಸಿಗರು ಇದ್ದರೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ವಿಶಾಲವಾದ ಹಿನ್ನೀರಿನಲ್ಲಿ ದೋಣಿಯಲ್ಲಿ ಹೋಗುವಾಗ ಸಿಗುವ ಅನುಭವ ಅನನ್ಯ. ಒಂದೆಡೆ ಬಾನಂಗಳದಲ್ಲಿ ಮೋಡದ ಚಿತ್ತಾರಗಳು. ಕಣ್ಣುಹಾಯಿಸಿದಷ್ಟೂ ದೂರ ಕಾಣುವ ನೀರು. ಇನ್ನೊಂದೆಡೆ ಹಸಿರು ಹೊದ್ದು ನಿಂತ ಗುಡ್ಡಗಳು. ಮಗದೊಂದೆಡೆ ನಡುಗಡ್ಡೆ ಭೇದಿಸುತ್ತಾ ಸಾಗುವ ಪರಿ ವರ್ಣನೆಗೆ ಸಿಲುಕದು.
ಭದ್ರಾ ಹಿನ್ನೀರು ಪ್ರದೇಶದಲ್ಲಿ ಕಾಣುವ ಕಾಡು, ಸೂರ್ಯಾಸ್ತದ ದೃಶ್ಯ ಹಾಗೂ ನಡುಗಡ್ಡೆ.
ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯ ಇಲ್ಲಿ ಚೆಂದಕ್ಕಿಂತ ಚೆಂದ. ಹೊಸ ಲೋಕ ಸೃಷ್ಟಿ ಆ ಹೊತ್ತಿನಲ್ಲಿ ಆಗುತ್ತದೆ. ಸೂರ್ಯ ಕೆಂಪನೆ ರಶ್ಮಿಗಳನ್ನು ಸೂಸುತ್ತಾ ಮುಳುಗುವ ಕ್ಷಣದ ದೃಶ್ಯ ಸೋಜಿಗ. ಕೆಂದೂಳಿಯ ಓಕುಳಿ, ಹಿನ್ನೀರಿನ ಮಧ್ಯೆ ಇರುವ ಒಣ ಮರಗಳಲ್ಲಿ ಕುಳಿತ ಹಕ್ಕಿಗಳ ಬೆನ್ನುಡಿಯಲ್ಲಿ ಕಾಣ ಸಿಗುವ ಈ ನೋಟ ಅದ್ಭುತ ಕಾವ್ಯ.
ರಾಶಿ, ರಾಶಿ ಅಲೆಗಳ ನಡುವೆ ದೋಣಿಯ ಪಯಣ ಇನ್ನೊಮ್ಮೆ ಇಲ್ಲಿಗೆ ಬರುವಂತೆ ಮಾಡುತ್ತದೆ. ಬಿದಿರು, ತೇಗ ಇನ್ನಿತರೆ ಹಸಿರು ಹಾಸಿನ ಗುಡ್ಡಗಳ ಮಧ್ಯೆ ಅಲ್ಲಲ್ಲಿ ನಿರ್ಮಿಸಿರುವ ವಸತಿತಾಣ, ನೀರನ್ನು ಅರಸಿ ಬರುವ ಜಿಂಕೆ ಮತ್ತಿತರೆ ಪ್ರಾಣಿ -ಪಕ್ಷಿಗಳು, ನೂರಾರು ಹಕ್ಕಿಗಳ ಕಲರವ ಮನಸ್ಸನ್ನು ಹಗುರಗೊಳಿಸುವ ಟಾನಿಕ್ ಇದ್ದಂತೆ.
ವಾಸ್ತವ್ಯ ಹೂಡಿದವರಿಗೆ ಬೆಳಗ್ಗೆ ಮತ್ತು ಸಂಜೆ ಸಫಾರಿ ವ್ಯವಸ್ಥೆಯೂ ಇದೆ. ಭದ್ರಾ ಅಭಯಾರಣ್ಯ ವ್ಯಾಪ್ತಿಯ ಲಕ್ಕವಳ್ಳಿ ಅಭಯಾರಣ್ಯದಲ್ಲಿ ಎರಡು ಗಂಟೆಗಳ ಪಯಣ. ಮಾರ್ಚ್‌ನಿಂದ ಜೂನ್ ಆರಂಭದವರೆಗೆ ಬಿಸಿಗಾಳಿ ಇದ್ದರೆ, ಉಳಿದ ದಿನಗಳಲ್ಲಿ ತಣ್ಣನೆ ಹವೆ ಇಲ್ಲಿಯದು.
ಹಚ್ಚಹಸಿರ ದಟ್ಟ ಕಾನನದ ಮಧ್ಯೆ ಸಾಗುತ್ತಿದ್ದಂತೆ ಜಿಂಕೆ, ಕಡ, ಕಾಡು ಹಂದಿ, ನವಿಲು ಕಾಣಸಿಕ್ಕರೆ ಅಪರೂಪಕ್ಕೆ ಕಾಡೆಮ್ಮೆ, ಆನೆಗಳೂ ಸಿಗುತ್ತವೆ. ಕೆಲವೊಮ್ಮೆ ಪ್ರಾಣಿಗಳು ಸಿಗದೆ ನಿರಾಶೆಯೂ ಆಗುವುದುಂಟು. ದಟ್ಟ ಕಾಡನ್ನು ಸೀಳಿ ನೆಲ ಸ್ಪರ್ಶಿಸುವ ಸೂರ್ಯ ರಶ್ಮಿಯ ಸೊಬಗು, ಆಳೆತ್ತರ ಬೆಳೆದ ಮರಗಳು, ಗಿಡಗಂಟಿ, ಹಕ್ಕಿಗಳ ಕಲರವ ಮನಸ್ಸಿಗೆ ಉಲ್ಲಾಸ ನೀಡುತ್ತವೆ.
ಜಂಗಲ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲು ತಗಲುವ ವೆಚ್ಚ ಪ್ರತಿ ವ್ಯಕ್ತಿಗೆ ₹ 4600. ಇದರಲ್ಲಿ ದೋಣಿ ವಿಹಾರ, ಅರಣ್ಯ ಸಫಾರಿ, ಊಟ ತಿಂಡಿಯೂ ಸೇರಿರುತ್ತದೆ. ಅಣೆಕಟ್ಟೆ ಹಾಗೂ ಹಿನ್ನೀರಿನ ರಮಣೀಯ ದೃಶ್ಯ ನೋಡಿ ಹೋಗುವವರು ಇಲ್ಲಿಗೆ ಬರಬೇಕಾಗಿಲ್ಲ. ನೇರವಾಗಿ ಅಣೆಕಟ್ಟೆ ಪ್ರದೇಶಕ್ಕೆ ಹೋಗಿ ವೀಕ್ಷಿಸಬಹುದು. ಮುಕ್ತ ಪ್ರವೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.