ಅಲ್ಲಿಗೆ ತಲುಪಲು ಅನಾಮತ್ತು ನಾಲ್ಕು ತಾಸು ಬೆಳ್ಳಂಬೆಳಿಗ್ಗೆ ಎದ್ದು ಮೂರು ಗಂಟೆಗೇ ಪಯಣ ಆರಂಭಿಸಬೇಕು. ಸರಾಸರಿ ನೂರು ವಾಹನಗಳಿಗೆ ಒಮ್ಮೆ ಅದೂ ನಿಗದಿತ ಸಮಯಕ್ಕೆ ಪೊಲೀಸು ಬೆಂಗಾವಲಿನಲ್ಲಿ ನಿಮ್ಮನ್ನು ಈಚೆಯಿಂದ ಆಚೆಗೆ ದಾಟಿಸುತ್ತಾರೆ. ಪೂರ್ತಿ 47 ಕಿ.ಮೀ. ಒಂದೇ ಒಂದು ನಿಲುಗಡೆ ಇಲ್ಲದ ಏಕಮುಖ ಪಯಣ ಅದು.
ಅಂಡಮಾನ್ ದ್ವೀಪದ ಪ್ರಮುಖ ನಗರಿ ಪೋರ್ಟ್ಬ್ಲೇರ್ನಿಂದ ಹೊರಡುವ ಪಯಣ ಸರಾಸರಿ ನಾಲ್ಕು ತಾಸುಗಳ ಕಾಲ ಮೊದಲು ವಾಹನ, ಆಮೇಲೆ ಬೆಂಗಾವಲಿನ ವಾಹನ, ಅದರಾಚೆಗೊಂದು ಬಾರ್ಜು, ಮತ್ತೂ ಒಂದು ಸ್ಪೀಡ್ಬೋಟು, ನಂತರ ಧುತ್ತನೆ ಎದುರಾಗುವ ಕಾಂಡ್ಲಾ ಕಾಡಿನ ಸಂದಿನಲ್ಲಿ ತಲೆ ಬಗ್ಗಿಸಿ, ಸಂದುಗೊಂದುಗಳಲ್ಲಿ ನುಸುಳಬಹುದಾ ಎನ್ನುವ ಯೋಚನೆಗೂ ಮೊದಲೆ ಥ್ರಿಲ್ಲಿಂಗ್ ಅನುಭವವನ್ನು ನೀಡಲೆಂದೇ ಓರೆ ಕೋರೆಯಾಗಿಸಿ ನುಗ್ಗುವ ಮೋಟಾರ್ ಬೋಟು, ನಂತರ ಸರಾಸರಿ ಮುಕ್ಕಾಲು ತಾಸಿನ ಕಾಲ್ದಾರಿ. ಇದೆಲ್ಲಾ ಸೇರಿ ಒಂದು ಚೆಂದದ ಹಸಿರು ಕಾಡು, ನೀಲಿ ನೀಲಿ ನೀರು, ಅರೆಗಪ್ಪು ಕೆಂಪು ಮತ್ತು ಬಿಳಿಬಿಳಿ ಸ್ಟೆಲ್ಕೈಟ್ಗಳ ಸಂಗಮವಾಗಿರುವ ಗುಹೆಯ ಪರಿಸರ ಪ್ರವೇಶಿಸಿದರೆ ಬಾರಾಟಾಂಗ್ ಪ್ರವಾಸ ಒಂದು ಹಂತಕ್ಕೆ ಬಂದಂತೆ.
ಅಂಡಮಾನ್ ದ್ವೀಪ ಪ್ರವಾಸದಲ್ಲಿ ಅಪರೂಪದ ಅನುಭವಕ್ಕೀಡುಮಾಡುವ ಬಾರಾಟಾಂಗ್ ಸಂದರ್ಶಿಸಲೇಬೇಕಾದ ಮತ್ತು ಅದಕ್ಕಾಗಿ ಒಂದಿಡೀ ದಿನ ಪೂರ್ತಿ ಉಳಿಸಿಕೊಳ್ಳಲೇಬೇಕಾದ ತಯಾರಿ ಪ್ರವಾಸಿಗರಿಗೆ ಇರಲೇಬೇಕಾಗುತ್ತದೆ. ಕಾರಣ ದ್ವೀಪ ತಾಣದ ಈ ಸ್ಥಳದಲ್ಲಿ ಎಲ್ಲವೂ ಕರಾರುವಾಕ್ಕು ಮತ್ತು ನಿಗದಿತ ಸಮಯಕ್ಕೆ ನಡೆಯಲೇಬೇಕು. ಇಲ್ಲದಿದ್ದರೆ ಆ ದಿನ ಪೂರ್ತಿ ಕೈಬಿಟ್ಟಂತೆಯೇ. ಇಲ್ಲಿ ಪ್ರತಿಯೊಂದೂ ಆಯಾ ದಿನ ಮತ್ತು ಸಮಯಕ್ಕೆ ಅಲ್ಲಿಂದ ಹೊರಡುವ ದೋಣಿ ಮತ್ತು ಬಾರ್ಜುಗಳ ಲೆಕ್ಕಾಚಾರದ ಮೇಲೆ ನಿಗದಿತವಾಗುತ್ತದೆ. (ಪ್ರತಿ ಬಾರ್ಜು ಅಥವಾ ಪ್ರಯಾಣಿಕರ ಹಡಗಿಗೆ ಆನ್ಲೈನ್ ಬುಕಿಂಗ್ ವ್ಯವಸ್ಥೆ ಇದ್ದು, ಸ್ಥಳೀಯವಾಗಿ ಅಲ್ಲಿಯೇ ಬಸ್ ಟಿಕೆಟ್ನಂತೆ ಖರೀದಿಸಿ ಪ್ರಯಾಣಿಸುವ ಯೋಜನೆ ಸಾಧ್ಯವೇ ಇಲ್ಲ. ಪ್ರತಿ ಹಂತದಲ್ಲೂ ಸುರಕ್ಷತೆಯ ಪರೀಕ್ಷೆಗಳೂ ಕಡ್ಡಾಯ. ಹಾಗಾಗಿ ದ್ವೀಪದೂರಿನ ಪಯಣದಲ್ಲಿ ಪ್ರತಿಯೊಂದೂ ಮೊದಲೇ ನಿಯೋಜಿಸಿದ ಸಮಯಕ್ಕನುಸಾರವೇ ನಡೆಯುತ್ತದೆ.)
ಬಾರಾಟಾಂಗ್ ತಡಿಯಲ್ಲಿ ಸಾಲುಗಟ್ಟಿ ನಿಂತಿರುವ ದೋಣಿಗಳು
ಪೋರ್ಟ್ಬ್ಲೇರ್ನ ಪ್ರಮುಖ ಸ್ಥಳದಿಂದ ವಾಹನದಲ್ಲಿ ಹೊರಟು ಬೆಳಿಗ್ಗೆ ಐದು ಗಂಟೆ ಹೊತ್ತಿಗೆ ಶಿರ್ಖಾಟಾಂಗ್ ಎನ್ನುವ ಸ್ಥಳಕ್ಕೆ ತಲುಪಿ ಸಾಲುಸಾಲಾಗಿ ನಿಂತಿರುವ ವಾಹನದಲ್ಲಿ ನಮ್ಮ ವಾಹನವನ್ನು ನಿಲ್ಲಿಸಿಕೊಂಡು ಕಾಯಬೇಕಾಗುತ್ತದೆ. ಈ ಶಿರ್ಖಾಟಾಂಗ್ನಲ್ಲಿ ಪೊಲೀಸ್ ಮತ್ತು ಫಾರೆಸ್ಟ್ ಎರಡೂ ಜಂಟಿಯಾಗಿ ಚೆಕ್ಪೋಸ್ಟ್ ಮಾಡಿಕೊಂಡಿದ್ದು ಬೆಳಿಗ್ಗೆ ಆರು ಗಂಟೆಗೆ ಮೊದಲ ಕ್ಯಾನ್ವಾಯ್ ಬಿಡುತ್ತಾರೆ. ಈ ಗೇಟಿಗೆ ‘ಜಾರ್ವಾ ಪ್ರೊಟೆಕ್ಷನ್ ಗೇಟ್’ ಎಂಬ ಹೆಸರು.
ಕಾರಣ ಇಲ್ಲಿಂದ ಸರಾಸರಿ ನಲ್ವತ್ತೇಳು ಕಿ.ಮೀ. ವ್ಯಾಪ್ತಿ ಕಾಡು ಪ್ರದೇಶ ಅಪ್ಪಟ ಮೂಲ ನಿವಾಸಿಗಳಾದ ಜಾರ್ವಾ ಜನಾಂಗದವರಿಗಾಗಿ ಮೀಸಲಿರಿಸಲಾಗಿದ್ದು ಯಾವ ಕಾರಣಕ್ಕೂ ಅಲ್ಲಿ ನಮ್ಮ ಸಾಮಾನ್ಯ ನಾಗರಿಕರು(?) ಜಾರ್ವಾ ಜನಾಂಗದವರೊಡನೆ ಸಂಪರ್ಕಕ್ಕೆ ಬಾರದಂತೆ ಅವರನ್ನು ಸಾಕಲಾಗುತ್ತಿದೆ. ಅದರಿಂದ ಈ ಮೊದಲು ನಡೆಯುತ್ತಿದ್ದ ಪ್ರವಾಸಿಗರ ಕಿರಿಕಿರಿಯಿದ ಅವರು ಸುರಕ್ಷಿತರೂ ಅಲ್ಲದೆ ಅವರ ಜನಾಂಗ ಕೂಡಾ ಈಗ ನೆಮ್ಮದಿಯಾಗಿದೆ. ಹಾಗಾಗಿ ಪೋರ್ಟ್ಬ್ಲೇರ್ನಿಂದ ಹೊರಟು ಶಿರ್ಖಾಟಾಂಗ್ನಲ್ಲಿ ಕಾಯ್ದು, ಬೆಳಗಿನ ಚಳಿಗೆ ಅಲ್ಲಿಯ ರಸ್ತೆ ಬದಿಯ ಟೀ ಕಾಫಿ, ಇಡ್ಲಿ ತಿನ್ನುತ್ತಾ ಆರು ಗಂಟೆಗೆ ಹೊರಟರೆ ಒಂದೂವರೆ ತಾಸಿಗೆಲ್ಲಾ ಅಚೆ ಬದಿಯ ‘ನಾಯೆಂದರ್ ಜೆಟ್ಟಿ’ ತಲುಪಿರುತ್ತೇವೆ. ಈ ಗೇಟಿನ ನಿಲುಗಡೆಯ ತಾಣವೇ ಮಜ. ಎರಡೂ ಕಡೆ ಸಾಲು ಸಾಲು ಟೀ ಕಾಫಿ ಶಾಪ್ಗಳು ಬೆಳಿಗ್ಗೆ ನಾಲ್ಕಕ್ಕೆಲ್ಲಾ ಎದ್ದು ಬಿಸಿ ಬಿಸಿ ತಿಂಡಿ ತಯಾರಿಸುತ್ತಿದ್ದರೆ, ಎಂಥವರಿಗೂ ಬಿದಿರಿನ ಗಳದ ಅಂಗಡಿಗಳಲ್ಲಿ ರಸ್ತೆ ಬದಿಗೆ ಕೂತು ತಿನ್ನುವಂತೆ ಪ್ರೇರೇಪಿಸುತ್ತವೆ.
‘ನಾಯೆಂದರ್ ಜೆಟ್ಟಿ’ಯಲ್ಲಿ ಸಿದ್ಧವಾಗಿರುವ ಬಾರ್ಜಿಗೆ, ಜನ, ಬಸ್ಸು, ಕಾರು, ಬೈಕು ಎಲ್ಲಾ ಹತ್ತಿಸಿಕೊಂಡು ಅರ್ಧ ಗಂಟೆಯಲ್ಲಿ ಆಚೆ ಬದಿಗಿನ ‘ನಿಲಾಂಬುರ್ ಜೆಟ್ಟಿ’ ತಲುಪಿಸುತ್ತಾರೆ. ಈ ನಿಲಾಂಬುರ್ ಜೆಟ್ಟಿಯಿಂದ ಬಾರಾಟಾಂಗ್ ದ್ವೀಪದ ಪುಟ್ಟದಾದ ಕಾಣಿಸದ ತೀರ ತಲುಪಿಕೊಳ್ಳಲು ಹತ್ತನ್ನೆರಡು ಜನರನ್ನು ಕೂರಿಸಿಕೊಂಡು ಹೊರಡುವ ಮೋಟಾರ್ ಬೋಟುಗಳು ಬಣ್ಣ ಬಣ್ಣದಲ್ಲಿ ನೀಲರಂಗಿನ ಶರಧಿಯ ಮಧ್ಯೆ ಕಂಗೊಳಿಸುತ್ತಾ ಕಾಯುತ್ತಿರುತ್ತವೆ. ಅದರಲ್ಲಿ ಸರಿ ಸುಮಾರು ಮತ್ತೆ ಅರ್ಧ ಗಂಟೆಯ ಪಯಣದ ನಂತರ ದಟ್ಟವಾದ ಕಾಂಡ್ಲ (ಮ್ಯಾಂಗ್ರೋವ್) ಕಾಡಿನ ಮಧ್ಯದಲ್ಲಿ ನಿರ್ಮಿಸಲಾದ ನೇರ ದಾರಿಯಲ್ಲಿ ಸುಮಾರು ಅರ್ಧ ಕಿ.ಮೀ. ನುಗ್ಗಿಸುತ್ತಾನೆ. ಇದೊಂದು ಅಪ್ಪಟ ರೋಚಕ ಮತ್ತು ನೆನಪಿನಲ್ಲುಳಿವ ದಾರಿ.
ಆಕಸ್ಮಾತ್ ಆಚೀಚೆಯಾದರೆ ಕಾಂಡ್ಲ ಮರಕ್ಕೆ ಸಿಕ್ಕಾಕಿಕೊಳ್ಳುವ, ಮತ್ತದರಿಂದ ತಪ್ಪಿಸಿ ಓಡಿಸುವ ಚಾಕಚಕ್ಯತೆ ಉಸಿರು ಬಿಗಿಹಿಡಿಸಿ ಕೂರಿಸುತ್ತದೆ. ತಲೆಯೂ ಎತ್ತಲಾಗದಂತೆ ಬಾಗಿ ಕುಳಿತುಕೊಳ್ಳುವ ಅನಿವಾರ್ಯತೆಯಲ್ಲಿ ಸುತ್ತಲಿನ ಕಾಂಡ್ಲಾ ಕಾಡು ನೀರ ಮಧ್ಯದ ಗುಹೆಯಂತೆ ಭಾಸವಾಗುತ್ತಿದ್ದರೆ, ಅಂಡಮಾನಿನ ಸಮುದ್ರ ಹಿನ್ನೀರಲ್ಲಿ ತೆರೆದುಕೊಳ್ಳುವ ಅನೂಹ್ಯ ಲೋಕವೇ ಬೇರೆ. ಆಗೀಗ ಮೋಟಾರ್ ಬೋಟು ನೇತಾಡುತ್ತಾ ಕಮಾನಿನಂತೆ ಬಾಗಿಕೊಂಡಿರುವ ಕಾಂಡ್ಲದ ಹುಲುಸಾದ ಟೊಂಗೆಗಳಿಗೆ ತಾಕುತ್ತಲೆ ಚಲಿಸುತ್ತಿರುತ್ತದೆ.
ಆಚೆ ದಂಡೆಯಲ್ಲಿ ಒಂದು ಮುಕ್ಕಾಲು ತಾಸಿನ ಕಾಡು ಮತ್ತು ಗದ್ದೆಗಳ ಕಾಲು ದಾರಿಯಲ್ಲಿ ನಡೆದುಕೊಂಡು ಹೊರಟರೆ ಅಪ್ಪಟ ನಮ್ಮ ಮಲೆನಾಡ ಕಾಡು ನೆನಪಾಗದೆ ಇರದು. ಅಲ್ಲಿ ಸಹಸ್ರಾರು ವರ್ಷಗಳ ಹಿಂದೆ ಸಮುದ್ರ ನೀರಿನ ಒತ್ತಡ ಮತ್ತು ಸುಣ್ಣದ ಶಿಲಾ ಪದರುಗಳಿಗೆ ನೀರಿನ ಕೊರೆತದಲ್ಲಿ ಉಂಟಾದ ಚಿತ್ರ ವಿಚಿತ್ರಾಕಾರದ ರಚನೆಯ ಗುಹೆಯೊಂದು ನಮ್ಮೆದುರಿಗೆ ತೆರೆದುಕೊಳ್ಳುತ್ತದೆ. ಭೂಮಿಯ ಗುರುತ್ವಾಕರ್ಷಣೆಯ ನಿಯಮಕ್ಕೆ ವಿರುದ್ಧವಾಗಿ ಮೇಲ್ಭಾಗದಿಂದ ಉಲ್ಟಾ ಬೆಳೆಯುತ್ತ ಕೆಳಮುಖವಾಗಿ ಚಲಿಸುತ್ತಿರುವ ರಚನೆಯ ಅಂದವೇ ಬೇರೆ. ಸಂಪೂರ್ಣವಾಗಿ ಅದರ ಅಂದವನ್ನು ಸವಿಯಲು ಪ್ರಖರ ಬೆಳಕಿನ ವ್ಯವಸ್ಥೆಯನ್ನು ನಮ್ಮನ್ನು ಕರೆದೊಯ್ಯುವ ಗೈಡ್ ಮಾಡಿರುತ್ತಾನಾ ಇಲ್ಲವೇ ಎಂಬುವುದನ್ನು ಮೊದಲೇ ಗಮನಿಸಿಕೊಂಡಿದ್ದರೆ ಅನುಕೂಲ ಜಾಸ್ತಿ. ಇಲ್ಲದಿದ್ದರೆ ಸರಿಯಾಗಿ ಶಿಲಾರಚನೆಯ ಅಂದ ಕೈಗೆ ದಕ್ಕುವುದೇ ಇಲ್ಲ.
ಅಂಡಮಾನಿನ ಸಮುದ್ರ ಹಿನ್ನೀರಿನ ಕಾಂಡ್ಲಾ ಕಾಡಿನ ದಾರಿ
ಅಪ್ಪಟ ಶ್ವೇತ ವರ್ಣದಿಂದ ಹಲವು ಹಸಿರಿನ, ಹಳದಿಯ ಅಲ್ಲಲ್ಲಿ ಕೆಂಪು ವರ್ಣದ ನಿಧಾನ ಪ್ರಕ್ರಿಯೆಯ ರಚನೆಯ ಅದ್ಭುತ ಕೇವಲ ಕಣ್ಣಿಗೆ ಮಾತ್ರ ದಕ್ಕುವ ಆಕರ್ಷಕ ವಿನ್ಯಾಸ. ಕ್ಯಾಮೆರಾದ ಕಣ್ಣಿಗೆ ಅದು ಅಷ್ಟಕ್ಕಷ್ಟೆ. ಹಿಂದಿರುಗುವಾಗಲೂ ಈ ಬೋಟನ್ನು ಹಿಡಿಯಲು ಪುನಃ ಅದೇ ದಾರಿಯಲ್ಲಿ ಸುಮಾರು ಅರ್ಧ ಕೀ.ಮೀ. ದೂರದವರೆಗೆ ಕಾಂಡ್ಲ ಕಾಡಿನ ಆಧಾರದ ಮೇಲೆ ಕಾಲು ಸೇತುವೆಯನ್ನು ನಿರ್ಮಿಸಿದ್ದು ನೀರ ಮೇಲಿನ ಕಾಡಿನಲ್ಲಿ ಅದರ ಮೇಲೆ ನಡೆದು ಬರುವ ಅನುಭೂತಿಯೇ ಬೇರೆ.
ಅದೇ ದಾರಿಯಲ್ಲಿ ನಿಲಾಂಬುರ್ ಜೆಟ್ಟಿಯ ಮೂಲಕ ಹಿಂದಿರುಗಿ, ಮತ್ತೆ ಬಾರ್ಜು ಹಿಡಿದು, ಮತ್ತದೆ ಕ್ಯಾನ್ವಾಯ್ಗಾಗಿ ಕಾಯ್ದು, ಎಲ್ಲೂ ನಿಲ್ಲದ ಮರುಪಯಣ ಮಾಡುವ ಹೊತ್ತಿಗೆ ಅಪ್ಪಟ ಸಂಜೆಯ ಕತ್ತಲು ಐದು ಗಂಟೆಗೂ ಮೊದಲೇ ಅಡರುತ್ತಿರುತ್ತದೆ. ಇಲ್ಲಿ ಸಂಜೆ ಬಹು ಬೇಗ. ಎಂದರೆ ಕೆಲವೊಮ್ಮೆ ನಾಲ್ಕೂವರೆಗೆಲ್ಲಾ ಪ್ರಖರ ಬೀದಿ ದೀಪ ಬೆಳಗಲು ಆರಂಭಿಸುತ್ತದೆ. ಉಳಿದಂತೆ ಸಂಜೆಯ ಎಂಟಕ್ಕೆಲ್ಲಾ ದ್ವೀಪ ಸ್ತಬ್ಧಗೊಳ್ಳುತ್ತದೆ. ಅಂಡಮಾನ್ ಸಂದರ್ಶಿಸುವವರಿಗೆ ಉಳಿದೆಲ್ಲಾ ಒಂದು ಅನುಭವವಾದರೆ ಬಾರಾಟಾಂಗು ನೀಡುವ ಅನುಭವವೇ ಬೇರೆ ಮತ್ತು ವಿಭಿನ್ನ.
ಅಂಡಮಾನ್ ಎಂಬ ಅಗಾಧ ಸೈಜಿನ ದ್ವೀಪಕಲ್ಪದಲ್ಲಿ ಅನಾಮತ್ತಾಗಿ ಐನೂರ ಇಪ್ಪತ್ತೇಳು ದೊಡ್ಡ, ಸಣ್ಣ ಮಧ್ಯಮ ಎಂಬೆಲ್ಲಾ ಅಳತೆಯ ಹಲವು ದ್ವೀಪಗಳಿದ್ದು ಎಲ್ಲೆಲ್ಲೂ ಬೋಟು, ಬಾರ್ಜುಗಳದ್ದೆ ಕಾರುಬಾರು. ಚೆನ್ನೈನಿಂದ ಐವತ್ತಕ್ಕೂ ಹೆಚ್ಚು ಗಂಟೆ ಬೇಡುವ ಹಡಗಿನ ಪಯಣ ಮೊದಲು ಬೆರಗೆನ್ನಿಸಿದರೂ ಬೋರು ಹೊಡೆಸುವುದು ಗ್ಯಾರಂಟಿ. ವಿಮಾನಯಾನ ತುಟ್ಟಿ ಎನ್ನಿಸಿದರೂ ಸಮಯದ ದೃಷ್ಟಿಯಿಂದ ವಾಸಿ. ಎಲ್ಲವೂ ಕೊಂಚ ದುಬಾರಿ ಇಲ್ಲಿ. ಕಾರಣ ಎಲ್ಲ ಈಚೆ ದಂಡೆಯಿಂದಲೇ ಹೊರಡಬೇಕು. ಹಾಗಾಗಿ ಅಂಡಮಾನ್ ಅದರಲ್ಲೂ ಕೇವಲ ದಕ್ಷಿಣ ಅಂಡಮಾನ್ ಮಾತ್ರ ಸುಲಭಕ್ಕೆ ನಮ್ಮ ಕೈಗೆಟುಕುತ್ತದೆ. ಆದರೆ ಉತ್ತರ ದ್ವೀಪ ಭಾಗ ಇನ್ನೂ ಸರಿಯಾಗಿ ಮೊಬೈಲು ಸಿಗ್ನಲ್ಲುಗಳಿಗೆ ತೆರೆದುಕೊಂಡಿಲ್ಲ. ಹಾಗಾಗಿ ಬಾಯೆಂದರ್ನಾಚೆಗಿನ ರಂಗತ್, ದಿಗ್ಲಿಪುರ್, ನಿಕೋಬಾರ್ ಇತ್ಯಾದಿಗಳ ಪಯಣ ಕಷ್ಟಕಷ್ಟ. ಉಳಿದಂತೆ ಪ್ರವಾಸೋದ್ಯಮ ಮತ್ತು ಮತ್ಸ್ಯೋದ್ಯಮವೇ ಮೂಲ ಆದಾಯ. ಕೊಂಚ ದುಬಾರಿ ಎನ್ನಬಹುದಾದ ಪ್ರವಾಸ ಇದಾಗುತ್ತದೆಯಾದರೂ ಈಗೀಗ ಹಲವು ಸಂಸ್ಥೆಗಳು ಏರ್ಪಡಿಸುತ್ತಿರುವ ಯೋಜಿತ ಪ್ರವಾಸ ಸಾಕಷ್ಟು ಕೈಗೆಟುಕುವಂತಹದ್ದು. ಇದರೊಂದಿಗೆ ಹಲವು ಪ್ರದೇಶಗಳು ಚಾರಿತ್ರಿಕ ಸೆಲ್ಯೂಲರ್ ಜೈಲನ್ನು ನೋಡಲಾದರೂ ಒಮ್ಮೆ ದ್ವೀಪಕಲ್ಪಕ್ಕೆ ಕಾಲಿಡಲೇಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.