ಪ್ರಕೃತಿಪ್ರಿಯರ ಮನಸೆಳೆಯುವ ಮಹಾರಾಷ್ಟ್ರದ ಗಿರಿಧಾಮಗಳಲ್ಲಿ ಪ್ರಮುಖವಾದುದು ಮಾಥೇರಾನ್. ಮಹಾರಾಷ್ಟ್ರದ ಐದು ಪ್ರಸಿದ್ಧ ಗಿರಿಧಾಮಗಳಲ್ಲಿ ಇದೂ ಒಂದು. ಲೋನಾವಾಲಾ, ಖಂಡಾಲಾ, ಮಾಥೇರಾನ್, ಪಂಚಗಣಿ ಹಾಗೂ ಮಹಾಬಲೇಶ್ವರ ಉಳಿದ ನಾಲ್ಕು ಗಿರಿಧಾಮಗಳು.
ಮಾಥೇರಾನ್ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಕರ್ಜತ್ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗಿರಿಧಾಮ. ಮುಂಬೈಯಿಂದ 100 ಕಿ.ಮೀ ಹಾಗೂ ಪುಣೆಯಿಂದ 120 ಕಿ.ಮೀ ಅಂತರದಲ್ಲಿರುವ ಇದು, ಎರಡೂ ಮಹಾನಗರಗಳಿಂದ ರಸ್ತೆ ಹಾಗೂ ರೈಲಿನ ಸಂಪರ್ಕ ಹೊಂದಿದೆ.
ಮಳೆಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲಿಯೂ ಹಚ್ಚಹಸುರಿನಿಂದ ಕಂಗೊಳಿಸುವ, ಇಬ್ಬನಿಯ ಹಾಸಿಗೆಯಿಂದ ಮನಸೆಳೆಯುವ ಈ ಗಿರಿಧಾಮ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.ಮಂಜಿನಿಂದ ಕೂಡಿರುವ ಪರ್ವತಗಳು, ಅಕ್ಷಯಪಾತ್ರೆಗಳಂತೆ ಕಾಣಿಸುವ ದಟ್ಟಕಾಡುಗಳು, ಬೃಹದಾಕಾರದ ಕೋಟೆಗಳು– ಇವುಗಳ ಜೊತೆಗೆ ಪವಿತ್ರ ಯಾತ್ರಾಕ್ಷೇತ್ರವನ್ನೂ ಮಾಥೇರಾನ್ ಹೊಂದಿದೆ. ಈ ಗಿರಿಧಾಮವನ್ನು 1850ರಲ್ಲಿ ಹಗ್ ಪಾಂಲಿಟ್ಟ್ ಮ್ಯಾಲೆಟ್ ಎಂಬ ಬ್ರಿಟಿಷ್ ಕಲೆಕ್ಟರ್ ಕಂಡುಹಿಡಿದರು. ನಂತರದ ದಿನಗಳಲ್ಲಿ ಇದೊಂದು ಬ್ರಿಟಿಷರ ರಜಾದಿನಗಳ ತಾಣವಾಯಿತು.
ಕಣಿವೆಗಳು, ಕಾಡುಗಳು, ಜಲಪಾತಗಳು, ನದಿಗಳಿಂದ ಕೂಡಿದ ಈ ಪ್ರದೇಶವು ಅಮೂಲ್ಯ ಔಷಧಿ ಮತ್ತು ಆಯುರ್ವೇದ ಸಸ್ಯಗಳನ್ನೂ ಹೇರಳವಾಗಿ ಹೊಂದಿದೆ. ನಿಸರ್ಗದ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಮತ್ತು ವಾರಾಂತ್ಯದ ದಣಿವಾರಿಸಿಕೊಂಡು ಮನಸ್ಸಿಗೆ ಶಾಂತಿ, ನೆಮ್ಮದಿ ಕಾಣಬಯಸುವವರು ಅವಶ್ಯಕವಾಗಿ ಈ ಗಿರಿಧಾಮವನ್ನು ನೋಡಲೇಬೇಕು.
ದಟ್ಟವಾದ ಕಾಡಿನ ಮಧ್ಯಭಾಗದಲ್ಲಿರುವ ಮಾಥೇರಾನ್ ತನ್ನ 38 ವೀಕ್ಷಣಾ ಸ್ಥಳಗಳಿಂದಾಗಿ ಅತ್ಯಂತ ಪ್ರಸಿದ್ಧವಾಗಿದೆ. ಈ ಕೇಂದ್ರಗಳಲ್ಲಿ ನಿಂತು ಬೆಟ್ಟ ಗುಡ್ಡಗಳ ರೋಮಾಂಚಕಾರಿ ಪ್ರಕೃತಿಯ ಜೊತೆಗೆ, ರುದ್ರ ರಮಣೀಯ ಪ್ರಪಾತ ಹಾಗೂ ಕಣಿವೆಗಳನ್ನು ಆಸ್ವಾದಿಸಬಹುದು. ‘ಪನೋರಮಾ ಪಾಯಿಂಟ್’, ‘ವನ್ ಥ್ರಿ ಹಿಲ್ ಪಾಯಿಂಟ್’, ‘ಹಾರ್ಟ್ ಪಾಯಿಂಟ್’ ಹಾಗೂ ‘ರಾಮ್‌ಬಾಗ್ ಪಾಯಿಂಟ್’ ಇಲ್ಲಿರುವ ಕೆಲವು ಪ್ರಮುಖ ವೀಕ್ಷಣಾ ಕೇಂದ್ರಗಳು.
‘ಪನೋರಮಾ ಪಾಯಿಂಟ್’ ಸೂರ್ಯೋದಯ ದೃಶ್ಯಗಳನ್ನು ನೋಡಲು ಪ್ರಸಿದ್ಧಿ. ಈ ಪ್ರದೇಶವು ಅತ್ಯಂತ ಎತ್ತರದ ಕೇಂದ್ರವಾಗಿದೆ. ಇಲ್ಲಿ ನಿಂತು ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆ ಮಾಡಬಹುದು.
ವಾಹನಗಳ ಚಲನವಲನಕ್ಕೆ ಮಾಥೇರಾನ್‌ನಲ್ಲಿ ನಿರ್ಬಂಧ ಹೇರಲಾಗಿದೆ. ಈ ಗಿರಿಧಾಮವು ಇಲ್ಲಿಂದ 8 ಕಿ.ಮೀ ಅಂತರದಲ್ಲಿರುವ ನೇರನ್ ಎಂಬ ಪುಟ್ಟ ಪಟ್ಟಣದೊಂದಿಗೆ ಸಂಪರ್ಕ ಹೊಂದಿದೆ. ಈ ಪಟ್ಟಣದವರೆಗೆ ಡಾಂಬರೀಕರಣಗೊಂಡ ರಸ್ತೆಯಿದೆ. ಇಲ್ಲಿಯವರೆಗೆ ಮಾತ್ರ ವಾಹನ ಸಂಚಾರವಿರುತ್ತದೆ.
ಇಲ್ಲಿಂದ ಮುಂದೆ ಚಲಿಸಲು ವಾಹನಗಳಿಗೆ ಅನುಮತಿ ಇಲ್ಲ, ಬದಲಾಗಿ ಈ ಪಟ್ಟಣದಿಂದ ಒಂದು ಪುಟಾಣಿ ರೈಲು ಮಾಥೇರಾನ್‌ಗೆ ಸಂಪರ್ಕ ಸಾಧಿಸುತ್ತದೆ. ನ್ಯಾರೋಗೇಜ್ ಹಳಿಗಳ ಮೇಲೆ ಓಡುವ ರೈಲು ನೇರಲ್ ಪಟ್ಟಣದಿಂದ ಸುಮಾರು 12 ಮೈಲಿಯ ಅಂತರದಲ್ಲಿರುವ ಮಾಥೇರಾನ್ ತಲುಪಲು ಸುಮಾರು 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ರೈಲಿನಲ್ಲಿ ಕುಳಿತು ಸುತ್ತಮುತ್ತಲಿನ ಸುಂದರ ಪರಿಸರ ವೀಕ್ಷಿಸುವುದು ಕೂಡ ಒಂದು ಅಪೂರ್ವ ಅನುಭವ.
ಮಾಥೇರಾನ್‌ನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಕುದುರೆ ಇಲ್ಲವೇ ಕೈರಿಕ್ಷಾಗಳನ್ನೇ ಅವಲಂಬಿಸಬೇಕು. ಇಲ್ಲದಿದ್ದರೆ ನಡೆದುಕೊಂಡು ಹೋಗಬೇಕು. ಚಾರ್ಲೊಟ್‌ಕೆರೆ ಅಥವಾ ಶಾರ್ಲೆಟ್ ಕೆರೆ ಇಲ್ಲಿನ ಮತ್ತೊಂದು ಆಕರ್ಷಣೆ. ಈ ಕೆರೆಯು ಪಿಸಾರ್ನಾಥ್ ದೇವಸ್ಥಾನದ ಬಲಭಾಗಕ್ಕೆ ಇದೆ. ವರ್ಷಪೂರ್ತಿ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಕೆರೆಯ ಪಕ್ಕದಲ್ಲಿ ವಿಭಿನ್ನ ಜಾತಿಯ ಪಕ್ಷಿಗಳು ನೋಡಲು ಸಿಗುತ್ತವೆ.
ಇರುಳಿನಲ್ಲಿ ಮಾಥೇರಾನ್‌ನಲ್ಲಿ ನಿಂತು ಮುಂಬೈನ ಕೃತಕ ಸಾಲುದೀಪಗಳನ್ನು ನೋಡಬಹುದು. ಮರಾಠರು ಮತ್ತು ಮೊಘಲರ ಆಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶದಲ್ಲಿ ಒಂದು ಅದ್ಭುತವಾದ – ಸುಂದರವಾದ ಕೋಟೆ ಇದೆ.
ಪ್ರಬಲ್‌ಕೋಟೆ ಹೆಸರಿನ ಇದನ್ನು ಶಿವಾಜಿ ತಮ್ಮ ಆಡಳಿತದಲ್ಲಿ ಶಸ್ತ್ರಾಗಾರವಾಗಿ ಬಳಸುತ್ತಿದ್ದರಂತೆ. ಕೋಟೆಯಲ್ಲಿ ಇರುವವರಿಗೆ ನೀರಿನ ಕೊರತೆಯಾಗದಂತೆ, ಕೋಟೆಯ ಮೇಲೆ ನಿರ್ಮಿಸಲಾಗಿರುವ ನೀರಿನ ಕೊಳ ನೋಡುಗರ ಗಮನಸೆಳೆಯುವಂತಿದೆ. ಈಗಲೂ ಸುಸ್ಥಿತಿಯಲ್ಲಿರುವ ಪ್ರಬಲ್‌ಕೋಟೆ ಮೂರು ಗೋಪುರಗಳನ್ನು ಹೊಂದಿದೆ.
ಪ್ರಕೃತಿಪ್ರಿಯರು, ಇತಿಹಾಸದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ–ವಯೋಮಾನದ ಪ್ರವಾಸಿಗರ ಪಾಲಿಗೆ ಮಾಥೇರಾನ್ ಬೇರೆ ಬೇರೆ ಕಾರಣಗಳಿಂದಾಗಿ ಆಪ್ಯಾಯಮಾನ ಎನ್ನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.