ಒಂದು ಕಡೆ ಹಸಿರು ಹೊದಿಕೆ, ಮತ್ತೊಂದು ಕಡೆ ಹಿಮದ ಹಾಸು, ಮಗದೊಂದು ಕಡೆ ಬಣ್ಣ ಬಣ್ಣದ ಹೂವುಗಳಿಗೆ ನೆಲೆ. ಅದು ಗುಲ್‌ಮಾರ್ಗ್. ಜಮ್ಮು-ಕಾಶ್ಮೀರದ ಸುಂದರ ಹಾಗೂ ಪ್ರಖ್ಯಾತ ಪ್ರವಾಸಿ ತಾಣ.
ಹಳೆಯ ಹಿಂದಿ ಸಿನಿಮಾಗಳಲ್ಲಿ ಹಿಮಾವೃತ ಬೆಟ್ಟಗಳ ನಡುವೆ ಹಸಿರು ಹಾಸಿನ ಮೇಲೆ ನಾಯಕ- ನಾಯಕಿ ಹಾಡಿ ಕುಣಿಯುವ ಹಾಡುಗಳನ್ನು ನೋಡಿರುತ್ತೀರಿ. ಅಂಥ ಹಾಡುಗಳನ್ನು ಚಿತ್ರೀಕರಿಸಲು ಹೆಸರಾಗಿದ್ದ ಊರು ಇದು. ಬಾರಾಮುಲ್ಲಾ ಜಿಲ್ಲೆಗೆ ಸೇರಿದ ಈ ಗಿರಿಧಾಮದ ಎತ್ತರ ಸಮುದ್ರ ಮಟ್ಟದಿಂದ 2690 ಮೀಟರ್.
ಭಾರತದ ಚಳಿಗಾಲದ ಪ್ರವಾಸಿ ತಾಣಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ ಗುಲ್‌ಮಾರ್ಗ್. ಹೂವುಗಳ ನೆಲೆವೀಡು ಎಂದೇ ಖ್ಯಾತಿ ಪಡೆದಿರುವ ಗುಲ್‌ಮಾರ್ಗ್‌ಗೆ ತಲುಪಲು ಶ್ರೀನಗರದಿಂದ 56 ಕಿಮೀ ಕ್ರಮಿಸಬೇಕು. ದಾರಿಯುದ್ದಕ್ಕೂ ಸೊಗಸಾದ ನೋಟವನ್ನು ಸವಿಯಬಹುದು.
ಅಗಲವಾದ ರಸ್ತೆಗಳು, ಹಿಮಾವೃತ ಬೆಟ್ಟಗಳು, ಗುತ್ತು ಗುತ್ತಾದ ಕಾಡುಗಳು ಹಾಗೂ ಸಣ್ಣ ಗ್ರಾಮಗಳ ನೋಟ ಆನಂದ ನೀಡದೇ ಇರದು. ಗಿರಿಧಾಮಕ್ಕೆ ತಲುಪಿದ ಮೇಲೆ ಹಿಮಾಮೃತ ಬೆಟ್ಟಗಳು, ತಿಳಿ ನೀರ ಸರೋವರಗಳು, ಸುಂದರ ಹೂವಿನ ಕಣಿವೆಗಳನ್ನು ಕಣ್ತುಂಬಿಕೊಳ್ಳಬಹುದು. ಶ್ರೀನಗರದಿಂದ ಸಾಕಷ್ಟು ಬಸ್‌ಗಳು ಇಲ್ಲಿಗೆ ಸಂಪರ್ಕ ಕಲ್ಪಿಸುತ್ತವೆ.
ಗುಲ್‌ಮಾರ್ಗ್‌ಗೆ ಚಳಿಗಾಲದಲ್ಲಿ ಮಾತ್ರ ಅರಳಿ ನಿಲ್ಲುವ ಡೈಸೀಸ್, ಬ್ಲೂ ಬೆಲ್, ಫರ್ಗೆಟ್ ಮಿ ನಾಟ್, ಬಟರ್‌ಕಪ್ಸ್ ಮಾತ್ರವಲ್ಲದೇ ತರಾವರಿ ಬಣ್ಣದ, ತರಾವರಿ ವಿನ್ಯಾಸದ ಕಾಡು ಹೂಗಳನ್ನು ನೋಡಲು ಬರುವ ಪ್ರವಾಸಿಗರೇ ಹೆಚ್ಚು.
ಗುಲ್‌ಮಾರ್ಗ್‌ನ ಹಿಮಹಾಸಿನ ಮೇಲೆ ನವೆಂಬರ್‌ನಿಂದ ಫೆಬ್ರುವರಿವರೆಗೆ ಹಿಮದಲ್ಲಿ ಸ್ಕ್ರೀಯಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಯೇ ಗಾಲ್ಫ್ ಕೋರ್ಸ್‌ಗಳು ಇವೆ. ಅಷ್ಟೇ ಅಲ್ಲ- ಟ್ರೆಕ್ಕಿಂಗ್, ಕುದುರೆ ಸವಾರಿಯಲ್ಲೂ ಊರು ಸುತ್ತುವ ಅವಕಾಶ ಇದೆ.
ಇಡೀ ಗುಲ್‌ಮಾರ್ಗ್ ಅನ್ನು ಚಾರಣ ಮಾಡುತ್ತಾ ಅಲೆದರೂ ಆಯಾಸವಾಗದು. ಕಾರಣ, ಸೂರ್ಯನ ಶಾಖ ಚರ್ಮವನ್ನು ತಾಗದೇ ಇರುವುದು. ಕುಳಿರ್ಗಾಳಿಯಲ್ಲಿ ಹಿತವಾದ ಹವಾಮಾನದಲ್ಲಿ ಸಂಚರಿಸುತ್ತಾ ಗುಲ್‌ಮಾರ್ಗ್‌ನ ಮೋಹಕತೆಗೆ ಮರುಳಾಗಬಹುದು. ಅಲ್ಲಿಗೆ ಮಧುಚಂದ್ರಕ್ಕಾಗಿ ಬರುವ ನವದಂಪತಿಗಳ ಸಂಖ್ಯೆಯೇ ಜಾಸ್ತಿ.
ಅಲಪಥೇರ್ ಸರೋವರ, ಖಿಲಂಮಾರ್ಗ್, ಸ್ಕೀಯಿಂಗ್ ತಾಣ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳು. ಇಷ್ಟೇ ಅಲ್ಲ, ಗುಲ್‌ಮಾರ್ಗ್ ಗಿರಿಧಾಮದಿಂದ ನೋಡಿದರೆ ಕಾಶ್ಮೀರ ಕಣಿವೆ ಕಾಣಿಸುತ್ತದೆ. ಹಿಮಾಲಯದ ಬೆಟ್ಟಗಳ ಸಾಲುಗಳು ಇಣುಕುತ್ತವೆ.
ಗುಲ್‌ಮಾರ್ಗ್‌ಗೆ ಸಾಗುವ ಹಾದಿಯಲ್ಲಿ ಕಾಣುವ ಹಸಿರು ಪೊದೆಯಂಥ ಕಾಡನ್ನು ಗುಲ್‌ಮಾರ್ಗ್ ವನ್ಯಜೀವಿ ರಕ್ಷಣಾ ವಲಯ ಎಂದು ಹೆಸರಿಸಿ ರಕ್ಷಿಸಲಾಗುತ್ತಿದೆ. 180 ಚದರ ಕಿಮೀ ವಿಸ್ತಾರದಲ್ಲಿ ಹರಡಿರುವ ಈ ಪ್ರದೇಶದಲ್ಲಿ ವಿವಿಧ ಜಾತಿಯ ಮರಗಳು, ಪ್ರಾಣಿಗಳು, ಪಕ್ಷಿಗಳು ನೆಲೆ ಕಂಡುಕೊಂಡಿವೆ.
ಲೆಪರ್ಡ್, ಕೆಂಪು ನರಿ, ಜಿಂಕೆ, ಕಂದು ಕರಡಿ, ಕಪ್ಪು ಕರಡಿ ಜೊತೆಗೆ ಹಿಮ ಕೋಳಿ, ಕಾಡು ಕಾಗೆ, ನೀಲಿ ಬಂಡೆ ಪಾರಿವಾಳ, ಕಾಶ್ಮೀರ್ ರೋಲರ್ ಪಕ್ಷಿಗಳನ್ನು ಇಲ್ಲಿ ನೋಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.