ಮೊದಲ ಬಾರಿ ಮುಂಬೈಗೆ ಭೇಟಿ ನೀಡುವವರಿಗೆ ಅಲ್ಲಿಯ ಜನ ಜಂಗುಳಿ ಹಾಗೂ ಗಡಿಬಿಡಿಯಿಂದಾಗಿ ತಲೆ ಚಿಟ್ಟು ಹಿಡಿಯಬಹುದು. ಗಾಢ ಬಿಸಿಲಿನಲ್ಲಿ ಗಗನಚುಂಬಿ ಕಟ್ಟಡಗಳಷ್ಟನ್ನೇ ನೋಡುವ ಪ್ರವಾಸಿಗರಿಗೆ ಯಾವುದಾದರೂ ಪ್ರಶಾಂತ ಸ್ಥಳಕ್ಕೆ ಹೋಗೋಣ ಎನ್ನಿಸುವುದು ಸಾಮಾನ್ಯ. ಹೀಗೆ ಪ್ರಶಾಂತ ಹಾಗೂ ರಮಣೀಯ ಅಂಶಗಳೆರಡನ್ನೂ ಒಳಗೊಂಡ ಪ್ರವಾಸಿ ತಾಣವೇ ಎಲಿಫೆಂಟಾ ಗುಹಾಂತರ ದೇವಾಲಯ.
ಘರಪುರಿಯೆಂದು ಕರೆಯಲ್ಪಡುವ ಎಲಿಫೆಂಟಾ, ಅರಬ್ಬೀ ಸಮುದ್ರದಲ್ಲಿ ಗೇಟ್‌ವೇ ಆಫ್ ಇಂಡಿಯಾದಿಂದ ಈಶಾನ್ಯ ದಿಕ್ಕಿಗೆ ಹತ್ತು ಕಿ.ಮೀ ದೂರದಲ್ಲಿರುವ ದ್ವೀಪ. ಅಲ್ಲಿಗೆ ತಲಪುವುದು ಒಂದು ಸವಾಲಿನ ಕೆಲಸವೇ ಸರಿ. ಏಕೆಂದರೆ ಆ ದೂರವನ್ನು ವಿಹಾರ ದೋಣಿಯ ಮೂಲಕ ಕ್ರಮಿಸಲು ಸುಮಾರು ಎಪ್ಪತ್ತೈದು ನಿಮಿಷಗಳು ಹಿಡಿಯುತ್ತದೆ. ಅಲ್ಲಿಂದ ಮಿನಿ ರೈಲಿನಲ್ಲಿ ಪ್ರಯಾಣಿಸಿ ಬೆಟ್ಟದ ತಪ್ಪಲು ತಲುಪಲು ಇಪ್ಪತ್ತು ನಿಮಿಷಗಳು ಬೇಕು. ಅಲ್ಲಿಂದ ಸ್ವಲ್ಪ ದೂರ ನಡೆದು ಸುಮಾರು ಒಂದು ನೂರು ಮೆಟ್ಟಿಲುಗಳನ್ನು ಹತ್ತಿದರೆ ಗುಹೆ ದೇವಾಲಯವನ್ನು ತಲುಪಬಹುದು.
ಆ ಗುಹೆ ವಿವಿಧ ಜಾತಿಯ ದಟ್ಟವಾದ ಮರಗಳು ಹಾಗೂ ಕಂದಾಳೆ ಪೊದೆಗಳಿಂದ ಆವೃತವಾದ ಬೆಟ್ಟದ ಮೇಲಿದೆ. ದಾಖಲೆಗಳ ಪ್ರಕಾರ, ಈ ದ್ವೀಪಕ್ಕೆ ಘರಪುರಿ ಎಂಬ ಹೆಸರಿತ್ತಂತೆ. ಘರಿಗಳೆಂದರೆ ಶೈವ ದೇವಾಲಯದ ಶೂದ್ರ ಪೂಜಾರಿಗಳು ಹಾಗೂ ಪುರಿ ಎಂದರೆ ಊರು. ಇಲ್ಲಿಗೆ ಭೇಟಿ ನೀಡುವವರಿಗೆಲ್ಲಾ ಏಕೆ ಇದನ್ನು ಎಲಿಫೆಂಟಾ ಎಂದು ಕರೆಯುತ್ತಾರೆಂದು ಆಶ್ಚರ್ಯ ಉಂಟಾಗುವುದು ಸಹಜ. ಹದಿನೈದನೇ ಶತಮಾನದಲ್ಲಿ ಇಲ್ಲಿಗೆ ಬಂದಿಳಿದ ಪೋರ್ಚುಗೀಸರು ಈ ದ್ವೀಪವನ್ನು ಎಲಿಫೆಂಟಾ ಎಂದು ಕರೆದರಂತೆ. ಕಾರಣ ಈ ಗುಹೆಗಳ ಮುಂದೆ ಆನೆಯ ಬೃಹತ್ ವಿಗ್ರಹವೊಂದು ಇತ್ತಂತೆ. ಆದರೆ ಈ ವಿಗ್ರಹವನ್ನು ಮುಂಬೈ ಬಳಿ ಬೈಕುಲ್ಲಾದ ವಿಕ್ಟೋರಿಯಾ ಉದ್ಯಾನಕ್ಕೆ (ಈಗ ಅದಕ್ಕೆ ಜೀಜಾ ಮಾತಾ ಉದ್ಯಾನವೆಂದು ಹೆಸರು) ಸ್ಥಳಾಂತರಿಸಲಾಗಿದೆ. ದೇಶದ ಸರಣಿ ಗುಹಾಂತರ ದೇವಾಲಯದಲ್ಲಿ ಬರುವ ಎಲಿಫೆಂಟಾ ಮಹಾರಾಷ್ಟ್ರದಲ್ಲೇ ಅಜಂತಾ ಮತ್ತು ಎಲ್ಲೋರದ ನಂತರ ಪಶ್ಚಿಮ ಭಾರತದಲ್ಲಿ ಗುಹೆಗಳು ಬಂಡೆ ಮೇಲಿನ ಶಿಲ್ಪಕಲೆಯ ಇತಿಹಾಸದಲ್ಲೇ ಅತ್ಯಂತ ಅಮೋಘ ಸಾಧನೆಯಂತಿದೆ. ಅದರಲ್ಲಿರುವ ತ್ರಿಮೂರ್ತಿ ಹಾಗೂ ಇತರ ಬೃಹತ್ ಕೆತ್ತನೆಗಳು ಅವುಗಳ ಸೌಂದರ್ಯಾತ್ಮಕ ನೈಪುಣ್ಯದೊಂದಿಗೆ ವಿಶಿಷ್ಟ ಕಲಾತ್ಮಕ ಸೃಷ್ಟಿಯ ನಿದರ್ಶನಗಳಾಗಿವೆ. ಎಲಿಫೆಂಟಾದ ಕೆತ್ತನೆ ಶಿಲ್ಪಗಳು ಗುಪ್ತರ ಕಾಲದಲ್ಲಿ ವೈಭವಯುತವಾಗಿದ್ದ ಮಧ್ಯ ಯುಗಕ್ಕೆ ಸೇರಿದವುಗಳಾಗಿವೆ.
ಎಲಿಫೆಂಟಾ ಗುಹೆಗಳ ಪ್ರಾಂಗಣವನ್ನು ಪ್ರಧಾನ ಗುಹೆಯ ಮೂಲಕ ಪ್ರವೇಶಿಸಿ ತ್ರಿಮೂರ್ತಿ ಶಿವನ ಮೂರ್ತಿಯ ಎದುರು ನಿಲ್ಲುತ್ತಿದ್ದಂತೆ ಭವ್ಯ ಮೂರ್ತಿಯನ್ನು ವೀಕ್ಷಿಸಿದ ಸಾರ್ಥಕ ಭಾವ ಉಂಟಾಗಿ ಅಲ್ಲಿಗೆ ಬಂದ ಆಯಾಸ ಪರಿಹಾರವಾದಂತಾಗುತ್ತದೆ. ಈ ಮೂರ್ತಿಯು ಶಿವನ ಮೂರು ಮಜಲುಗಳಾದ ಸೃಷ್ಟಿ, ಲಯ ಹಾಗೂ ವಿನಾಶ ಕರ್ತನಾಗಿ ಹಾಗೂ ಅಘೋರ ಅಥವಾ ಭೈರವ, ತತ್ಪುರುಷ ಅಥವಾ ಮಹಾದೇವಾ ಹಾಗೂ ವಾಮದೇವ ಅಥವಾ ಉಮಾ - ಶಿವನ ಅತ್ಯುನ್ನತ ಭಂಗಿಯನ್ನು ಪ್ರತಿನಿಧಿಸುತ್ತದೆ. ಬಲಭಾಗದ ಮುಖ (ಪಶ್ಚಿಮಕ್ಕೆ) ಶಿವನನ್ನು ಬ್ರಹ್ಮ ಅಥವಾ ಸೃಷ್ಟಿಕರ್ತನಿಗೆ ಹತ್ತಿರವಿರುವಂತೆ ತೋರಿಸಲಾಗಿದೆ. ಎಡ ಪಾರ್ಶ್ವ ಮುಖವು ಅಘೋರ ಅಥವಾ ವಿನಾಶಕರ್ತನಂತೆ ಭಯಾನಕವಾಗಿದೆ. ಮಧ್ಯದ ಮುಖವು ಪ್ರಶಾಂತ ಹಾಗೂ ಆಲೋಚನಾ ಮಗ್ನವಾಗಿದ್ದು ಲಯಧಾರಿ ವಿಷ್ಣುವನ್ನು ಹೋಲುತ್ತದೆ. ಇದೇ ತತ್ಪುರುಷ - ಅಸ್ತಿತ್ವದ ಧನಾತ್ಮಕ ಹಾಗೂ ಋಣಾತ್ಮಕ ತತ್ವಗಳು ಹಾಗೂ ಅವುಗಳ ಸಾಮರಸ್ಯದ ದ್ಯೋತಕವಾಗಿ ಅಥವಾ ಯೋಗೀಶ್ವರನಾದ ಶಿವ, ಮನುಕುಲದ ಒಳಿತಿಗಾಗಿ ಧ್ಯಾನಸ್ಥ ಸ್ಥಿತಿಯಲ್ಲಿರುವವನಂತೆ ಕಾಣಿಸುತ್ತಾನೆ.
ಗುಪ್ತ- ಚಾಲುಕ್ಯ ಕಲೆಯ ಅತ್ಯುನ್ನತ ಭವ್ಯ ದೃಶ್ಯ ಎಂದು ವರ್ಣಿತವಾಗಿರುವ ಈ ತ್ರಿಮೂರ್ತಿ ಶಿಲ್ಪದ ಚಿತ್ರವನ್ನು ಗೇಟ್‌ವೇ ಆಫ್ ಇಂಡಿಯಾದ ಹಿನ್ನೆಲೆಯೊಂದಿಗೆ ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ಲಾಂಛನವನ್ನಾಗಿ ಅಳವಡಿಸಿಕೊಂಡಿದ್ದಾರೆ.
ತ್ರಿಮೂರ್ತಿಯ ಬಲಭಾಗದಲ್ಲಿರುವ ಗಂಗಾಧರನ ಮೂರ್ತಿಯು, ಶಿವ– ಪಾರ್ವತಿಯರ ಕೇಂದ್ರ ಶಿಲೆಗಳ ಸುತ್ತ ಕೆತ್ತಲ್ಪಟ್ಟಿರುವ ದೇವತೆಗಳಿಂದ ಆವರಿಸಲ್ಪಟ್ಟಿದೆ. ಪಾರ್ವತಿ ಗಂಗೆಯನ್ನು ತರುವ ಭಂಗಿಯಲ್ಲಿದ್ದರೆ, ಶಿವ ಆಭರಣಗಳಿಂದ ಅಲಂಕೃತನಾಗಿದ್ದಾನೆ. ಶಿವನ ಬಲ ಭಾಗಕ್ಕೆ ಬ್ರಹ್ಮ ಮತ್ತು ಇಂದ್ರರು ಅವರ ವಾಹನಗಳೊಂದಿಗೆ ಇಲ್ಲಿ ವಿರಾಜಮಾನರಾಗಿದ್ದಾರೆ. ಗರುಡನ ಮೇಲೆ ಸವಾರಿ ಮಾಡುತ್ತಿರುವ ವಿಷ್ಣು ಪಾರ್ವತಿಯ ಪಕ್ಕದಲ್ಲಿ ಕಾಣಿಸಿಕೊಂಡಿದ್ದಾನೆ. ಇದೇ ಶಿಲ್ಪವು ಆಕಾಶದ ಕೆಳಗಡೆ ಇದ್ದು, ಮೋಡದ ದೃಶ್ಯಾವಳಿಯಲ್ಲಿ ದೇವತೆಗಳ ಮೇಲೆ ಭಕ್ತರು ಪುಷ್ಪಾರ್ಚನೆ ಮಾಡುವ ಕೆತ್ತನೆ ಇದೆ.
ತ್ರಿಮೂರ್ತಿ ವಿಗ್ರಹ
ತ್ರಿಮೂರ್ತಿಯ ಪೂರ್ವಕ್ಕಿರುವ ಕೊಠಡಿಯಲ್ಲಿ ಚತುರ್ಭುಜವುಳ್ಳ ಅರ್ಧನಾರೀಶ್ವರನಿದ್ದಾನೆ. ಶಿವನ ಈ ಭಂಗಿ ಶಿವ- ಶಕ್ತಿಯೆಂದು ಕರೆಯಲ್ಪಡುತ್ತದೆ. ಅರ್ಧ ಭಾಗ ಹೆಣ್ಣು, ಇನ್ನರ್ಧ ಗಂಡು. ಹೆಣ್ಣು ಮೂರ್ತಿಗೆ ಒಡವೆಗಳ ಅಲಂಕಾರವಿದ್ದರೆ, ಬಲಭಾಗದ ಗಂಡು ಮೂರ್ತಿಗೆ ಜಟೆಯಿದೆ. ಆತನ ಒಂದು ಕೈ ಶಿವನ ವಾಹನ ನಂದಿಯ ಎಡ ಕೊಂಬಿನ ಮೇಲಿದೆ. ವಿಶ್ವದ ಎರಡು ಸೃಷ್ಟ್ಯಾತ್ಮಕ ಶಕ್ತಿಗಳಾದ ಗಂಡು ಹೆಣ್ಣುಗಳ ಸಂಸರ್ಗವನ್ನು ಇಲ್ಲಿನ ಶಿಲೆಯಲ್ಲಿ ಕಾಣಬಹುದು.
ಉತ್ತರದ ಪ್ರಾಂಗಣದ ಶಿಲ್ಪಗುಚ್ಛದಲ್ಲಿ ಯೋಗಿಯ ರೂಪದಲ್ಲಿರುವ ಶಿವ ಯೋಗೀಶ್ವರನಾಗಿದ್ದಾನೆ. ಬುದ್ಧನನ್ನು ಹೋಲುವ ಈ ಶಿವನ ವಿಗ್ರಹದ ಎರಡೂ ಕೈಗಳು ಹಾನಿಗೊಂಡು ಭಗ್ನವಾಗಿವೆ. ಎರಡೂ ಕಾಲುಗಳನ್ನು ಮಡಿಸಿಕೊಂಡು ಪದ್ಮಾಸನದಲ್ಲಿ ಕುಳಿತಿರುವ ಶಿವನನ್ನು ಇಬ್ಬರು ನಾಗಗಳು ತಾವರೆಯ ಮೇಲೆ ಹೊತ್ತುಕೊಂಡು ಬರುವಂತೆ ರಚಿತವಾಗಿದೆ. ಅವನ ಮುಖಾರವಿಂದ, ಅರ್ಧ ಕಣ್ಣು ಮುಚ್ಚಿಕೊಂಡ ಧ್ಯಾನಸ್ಥ ಸ್ಥಿತಿಯ ಪ್ರಶಾಂತ ಭಾವದಲ್ಲಿದೆ. ಇದು ಹಿಮಾಲಯ ಪರ್ವತದಲ್ಲಿ ಶಿವ ತಪಸ್ಸು ಮಾಡುತ್ತಿರುವ ಭಂಗಿಯಲ್ಲಿದೆ.
ಪಶ್ಚಿಮಕ್ಕಿರುವ ಕೆತ್ತನೆಯ ಗುಚ್ಛದಲ್ಲಿ ಯೋಗೀಶ್ವರನ ಎದುರಿಗಿರುವುದೇ ಶಿವ, ನಟರಾಜನಾಗಿ ತಾಂಡವ ನೃತ್ಯ ಮಾಡುತ್ತಾ, ತಾನೇ ನಿರ್ಲಿಪ್ತನಾಗಿದ್ದು, ಇಡೀ ವಿಶ್ವವನ್ನೇ ಚಲಿಸುವಂತೆ ಮಾಡಿರುವ ಭಂಗಿಯ ಅದ್ಭುತ ಶಿಲ್ಪ. 4 ಮೀಟರ್ ಅಗಲ ಹಾಗೂ 3.4 ಮೀಟರ್ ಎತ್ತರವಿದ್ದು, ಗೋಡೆಯ ಮೇಲೆ ಆಸೀನವಾಗಿದೆ. ಈ ಗುಚ್ಛದಲ್ಲಿ, ಗರುಡನ ಸವಾರಿಯಲ್ಲಿ ವಿಷ್ಣು, ಆನೆಯ ಮೇಲಿರುವ ಇಂದ್ರ ಹಾಗೂ ಗಣೇಶ, ಕಾರ್ತಿಕೇಯ, ಋಷಿಗಳು ಮತ್ತು ಸೇವಕರು ಚಿತ್ರಿತರಾಗಿದ್ದಾರೆ.
ಪ್ರಧಾನ ಗುಹೆಯಲ್ಲಿ ಶಿವನ ದ್ಯೋತಕವಾದ ಲಿಂಗವು ಪಾರ್ವತಿಯ ದ್ಯೋತಕವಾದ ಯೋನಿಯಲ್ಲಿ ಸಮಾಗಮವಾಗಿದ್ದು ಸರ್ವೋಚ್ಚ ಐಕ್ಯತೆಯನ್ನು
ಪ್ರತಿಬಿಂಬಿಸುತ್ತದೆ.
ಗುಹೆಯ ದೇವಾಲಯದ ಪಾರ್ಶ್ವಗಳ ಮೆಟ್ಟಿಲುಗಳ ಮೇಲೆ ಪೂರ್ವದಲ್ಲಿ, ರೆಕ್ಕೆಗಳುಳ್ಳ ಬಲಗಾಲನ್ನು ಎತ್ತಿರುವ ಸಿಂಹದ ವಿಗ್ರಹವಿದೆ. ಪ್ರಾಂಗಣದ ಹಿಂದೆ ಇಬ್ಬರು ದೈತ್ಯಾಕಾರದ ದ್ವಾರಪಾಲಕರ ಬೃಹತ್ ವಿಗ್ರಹಗಳಿವೆ. ಪಶ್ಚಿಮಕ್ಕಿರುವ ಗೋಡೆಯ ಮೇಲೆ ಅಷ್ಟ ಮಾತೃಕೆಯರ ವಿಗ್ರಹಗಳಿದ್ದು, ಅಕ್ಕಪಕ್ಕದಲ್ಲಿ, ಕಾರ್ತಿಕೇಯ ಹಾಗೂ ಗಣೇಶನಿದ್ದಾನೆ. ಬ್ರಹ್ಮ, ಮಹೇಶ್ವರಿ, ವೈಷ್ಣವಿ, ಕೌಮಾರಿ, ಐಂದ್ರಿ, ವರಾಹಿ, ನರಸಿಂಹಿ, ಚಾಮುಂಡಿ ಹೀಗೆ ಎಲ್ಲರೂ ತಂತಮ್ಮ ವಾಹನ ಸಮೇತ ಇರುವಂತೆ ಕೆತ್ತನೆಗಳಿವೆ.
ಇತರ ಗುಹೆಗಳಲ್ಲಿ ಹೇಳಿಕೊಳ್ಳುವಂತಹ ಯಾವುದೇ ಶಿಲ್ಪಗಳಿಲ್ಲ. ಆ ಕಾರಣದಿಂದಲೇ ಈ ಪ್ರಧಾನ ಗುಹೆಯ ಶಿಲೆಯಲ್ಲಿ ಭಾರತೀಯ ಶಿಲ್ಪಕಲೆ ತನ್ನ ಅತ್ಯಂತ ಪರಿಪೂರ್ಣ ಅಭಿವ್ಯಕ್ತಿಯನ್ನು ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಒಂದೊಂದು ಶಿಲ್ಪವೂ ಜೀವ ತಳೆದು ನಿಂತಂತೆ ಭಾಸವಾಗುತ್ತವೆ. ಗುಹೆಯ ಒಳಗಿನ ಬಾವಿಯ ನೀರು ತಂಪಾಗಿದ್ದು ಹೊರಗೆ ಉರಿಯುವ ಬಿಸಿಲಿನಿಂದ ಬಂದವರ ಆಯಾಸ ಪರಿಹರಿಸುವಂತಿದೆ. ಗುಹೆಯ ಹೊರ ಆವರಣದಲ್ಲಿ ತುಸು ವಿರಮಿಸಿ ಮತ್ತೆ ಗೇಟ್ ವೇ ಆಫ್ ಇಂಡಿಯಾಗೆ ಮರಳುವಾಗ ದೂರದ ಸುಂದರ ತಂಪುತಾಣಕ್ಕೆ ಭೇಟಿನೀಡಿ ಬಂದ ತೃಪ್ತಿ ದೊರೆತರೆ ಆಶ್ಚರ್ಯವೇನಿದೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.