ADVERTISEMENT

ಹಸಿರ ಧ್ಯಾನ ತಾಣ ಭೋಸರಿ ಕೊಳ್ಳ

ಸುಭಾಸ ಯಾದವಾಡ
Published 11 ಡಿಸೆಂಬರ್ 2019, 19:30 IST
Last Updated 11 ಡಿಸೆಂಬರ್ 2019, 19:30 IST
ಭೋಸರಿ ಕೊಳ್ಳ
ಭೋಸರಿ ಕೊಳ್ಳ   

ಭೋಸರಿ ಎಂಬುದು ಮಹಾರಾಷ್ಟ್ರದ ಪುಣೆಯ ಸಮೀಪದ ಒಂದು ಉಪನಗರ. ಅದು ಪಿಂಪ್ರಿ-ಚಿಂಚವಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದೆ. ಭೋಸರಿಯನ್ನು ಹಿಂದೆ ಭೋಜಪುರ ಎಂದು ಕರೆಯುತ್ತಿ ದ್ದರಂತೆ. ಇತಿಹಾಸದ ಪುಟಗಳಲ್ಲಿ ಆ ಉಲ್ಲೇಖ ದೊರೆಯುತ್ತದೆ. ಅದು, ಆಗಲೂ ಈಗಲೂ ಸಾಂಸ್ಕೃತಿಕವಾಗಿ ಒಂದು ಸಮೃದ್ಧ ಕೇಂದ್ರ! ಕುಸ್ತಿ, ಕಬಡ್ಡಿಗಳಂಥ ದೇಸಿ ಕ್ರೀಡೆ ಗಳಿಗೂ ಅದು ಸುಪ್ರಸಿದ್ಧ.

ಪುಣೆ-ನಾಸಿಕ್ ರಾಷ್ಟ್ರೀಯ ಹೆದ್ದಾರಿಯ ಮೇಲಿರುವ ಭೋಸರಿ ಕೊಳ್ಳದ ಸೌಂದರ್ಯದ ಬಗ್ಗೆ ಕೇಳಿದ್ದೆ. ಅಲ್ಲಿಗೆ ಭೇಟಿ ನೀಡುವ ಬಹುದಿನಗಳ ಬಯಕೆ ಇತ್ತೀಚೆಗೆ ಈಡೇರಿತು.

ಭೋಸರಿ ಕೊಳ್ಳದ ಆವರಣದಲ್ಲಿ ಗಗನ ಚುಂಬಿ ಮರಗಳಿವೆ. ಚಿಕ್ಕದಾದರೂ ಸುಂದರವಾದ ಚಿಕ್ಕ ಪೊದೆ-ಕಂಟಿಗಳೂ, ಬೃಹದಾಕಾರದ ಬಿದಿರಿನ ಮೆಳೆಗಳು ಇವೆ. ಅಲ್ಲಲ್ಲಿ ಹೂ ಬಿಟ್ಟ ಕೆಲವು ಸಸ್ಯಗಳಿವೆ ಯಾದರೂ ಅವುಗಳ ಸಂಖ್ಯೆ ತೀರ ಕಡಿಮೆ. ನೆಲವೇ ಕಾಣದಷ್ಟು ಹಸಿರು ಹುಲ್ಲಿನ ಹಾಸಿಗೆ. ಮಧ್ಯದಲ್ಲಿ ಸರೋವರ ಅದರ ನಡುವೆ ಇರುವ ವರ್ಣಮಯ ಕಟ್ಟಡ. ಅದು ಧ್ಯಾನ ಮಂದಿರವಂತೆ. ಅಲ್ಲಿಗೆ ಹೋಗಲು ಒಂದು ಸೇತುವೆ ಇದೆ. ಆದರೆ, ನಾವು ಹೋದಾಗ, ಆ ದ್ವಾರ ಬಂದ್‌ ಆಗಿತ್ತು. ಹೀಗಾಗಿ ಒಳಗೆ ಹೋಗಲು ಸಾಧ್ಯವಾಗಲಿಲ್ಲ.

ADVERTISEMENT

ಯುವ ಪ್ರೇಮಿಗಳಿಗೆ ಆ ಪರಿಸರ ಸ್ವರ್ಗ ಸದೃಶ್ಯ. ಚಿಕ್ಕ ಮಕ್ಕಳಿಗೂ ಅದು ಆಟದ ಪರಿಕರಗಳುಳ್ಳ ಆಡುದಾಣ. ಜೋಕಾಲಿ, ಜಾರುಬಂಡೆ, ಧಡಂ ಧುಡಕಿ ಮುಂತಾದ ಆಟದ ಪರಿಕರಗಳೆಲ್ಲ ಅಲ್ಲಿವೆ. ಇಡೀ ಭೋಸರಿ ಕೊಳ್ಳವನ್ನು, ಮಕ್ಕಳ ರೈಲಿನಲ್ಲಿ ಸುತ್ತುವ ಅವಕಾಶ ಅಲ್ಲಿದೆ. ಅದೇನು ತೊಂದರೆಯೋ ಗೊತ್ತಿಲ್ಲ. ನಾವು ಅಲ್ಲಿಗೆ ಹೋದಾಗ ಮಕ್ಕಳ ರೈಲು ಕೋಣೆ ಯೊಂದರಲ್ಲಿ ಬಂಧಿತವಾಗಿತ್ತು. ಮಕ್ಕಳು ಅದರ ಹಳಿಗಳ ಮಧ್ಯೆ ಓಡಾಡಿ, ರೈಲಿನಲ್ಲಿ ಸವಾರಿ ಮಾಡಿದ್ದರೆ ಹೇಗಿರುತ್ತಿತ್ತು ಎಂದು ಕಲ್ಪಿಸಿಕೊಳ್ಳುತ್ತಿದ್ದರು.

ಅಲ್ಲೊಂದು ಸೆಲ್ಫಿ ಫೋಟೊ ಸ್ಪಾಟ್ ಇದೆ. ಸೆಲ್ಫಿ ಪ್ರಿಯರು ಅಲ್ಲಿನ ಹುಲಿ-ಆನೆಗಳ ಚಿತ್ರದೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಅಲ್ಲಿಯೇ ಬೃಹತ್ ಗಾತ್ರದ ರೆಕ್ಕೆ ಬಿಚ್ಚಿ ಹಾರುವ ಪಕ್ಷಿಗಳ ಮೂರ್ತಿಗಳಿವೆ. ಅಲ್ಲಿ ಜೀವಂತ ಪಕ್ಷಿಗಳು ಇವೆಯಾದರೂ, ಅವುಗಳಲ್ಲಿ ಕಾಗೆಗಳ ಸಂಖ್ಯೆಯೇ ದೊಡ್ಡದು. ಕಾಗೆಗಳ ಕಾಕಾರವೇ ಹೆಚ್ಚಾಗಿ ಕೇಳಿಸುತ್ತಿರುತ್ತವೆ. ಅಲ್ಲಿನ ಕಾಗೆಗಳು ಮನುಷ್ಯರನ್ನು ಕಂಡು ಹೆದರುವುದಿಲ್ಲ. ಹೆದರಿ ಹಾರುವುದಿಲ್ಲ. ಹೀಗಾಗಿ ಕಾಗೆಗಳ ಜೊತೆಗೂ ಸೆಲ್ಫಿ ತೆಗೆದುಕೊಳ್ಳಬಹುದು.

ಭೋಸರಿ ಸರೋವರದ ಪರಿಸರ ಬಹಳ ಮುಕ್ತವಾದದ್ದು. ಅಲ್ಲಿ ಹೋಗಬೇಡಿ.. ಫೋಟೊ ತೆಗೆಯಬೇಡಿ.. ವಿಡಿಯೊ ತೆಗೆಯುವಂತಿಲ್ಲ ಎಂಬ ಯಾವುದೇ ಬಗೆಯ ನಿರ್ಬಂಧಗಳಿಲ್ಲ. ಅಂಥ ಫಲಕಗಳೂ ಇಲ್ಲ. ಇಂಥ ಚಟುವಟಿಕೆಗಳಿಗೆ ಕಾವಲುಗಾರರೂ ಅಡ್ಡಿ ಮಾಡುವುದಿಲ್ಲ. ಯಾವುದೇ ಶುಲ್ಕ ವಿಲ್ಲದೇ ಎಷ್ಟು ಬೇಕಾದರೂ ಫೋಟೊ ಕ್ಲಿಕ್ಕಿಸಬಹುದು. ವಿಡಿಯೊ ತೆಗೆಯಬಹುದು.

ಭೋಸರಿ ನಾಲೆಯ ಪರಿಸರವನ್ನು ಪ್ರವೇಶಿಸಲು ಹತ್ತು ರೂಪಾಯಿಗಳ ಪ್ರವೇಶ ಶುಲ್ಕವನ್ನು ಮಾತ್ರ ಭರಿಸಬೇಕಾಗುತ್ತದೆ. ಮಕ್ಕಳಿಗೆ ಪ್ರವೇಶ ಶುಲ್ಕ ₹ 5 ಮಾತ್ರ. ಪ್ರವೇಶ ಶುಲ್ಕ ಪಾವತಿಸಿದ ಮೇಲೆ ಮನತಣಿಯುವವರೆಗೆ ವಿಹರಿಸಬಹುದು. ದಣಿದರೆ ವಿಶ್ರಮಿಸಲು ಅಲ್ಲಲ್ಲಿ ಆಸನಗಳಿವೆ.

ಭೋಸರಿ ಸರೋವರಕ್ಕೆ ಹೋಗುವ ಮುನ್ನ ಒಂದಿಷ್ಟು ಧಾನ್ಯಗಳನ್ನು ತೆಗೆದು ಕೊಂಡು ಹೋದರೆ, ಅವುಗಳನ್ನು ಅಲ್ಲಿರುವ ಮೀನುಗಳಿಗೆ ಹಾಕಬಹುದು. ಧಾನ್ಯ ಹಾಕಿದಾಗ ಮೀನುಗಳು ಎಗರಿ ಧಾನ್ಯಗಳನ್ನು ಕಬಳಿಸುವ ಪರಿ ಅನನ್ಯವಾಗಿರುತ್ತದೆ. ಕೊಟ್ಟು ಖುಷಿ ಪಡುವ ಕ್ಷಣಗಳು ನಮ್ಮವಾದರೆ; ಪಡೆದು ಓಲಾಡುವ ಸಂತೋಷ ಮೀನುಗಳದ್ದು!

ಸರೋವರದ ಪಕ್ಕದಲ್ಲಿಯೇ ಒಂದು ಈಜು ಕೊಳವಿದೆ. ಈಜುವ ಉಡುಪು ತೊಟ್ಟವರಿಗೆ ಮಾತ್ರ ಅಲ್ಲಿ ಪ್ರವೇಶ ಲಭ್ಯ.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.