ADVERTISEMENT

ಆಕಾಶ ಯಾನದಲ್ಲಿ ಪರ್ವತದ ನೋಟ: ಅಮೆರಿಕ ಪ್ರವಾಸದ ಅನುಭವ

ಜಿ.ನಾಗೇಂದ್ರ ಕಾವೂರು
Published 13 ನವೆಂಬರ್ 2019, 19:30 IST
Last Updated 13 ನವೆಂಬರ್ 2019, 19:30 IST
ಗೊಂಡೊಲ ಸ್ಕೈರೈಡ್‌
ಗೊಂಡೊಲ ಸ್ಕೈರೈಡ್‌   

ಅಮೆರಿಕ ಪ್ರವಾಸ ಕೈಗೊಳ್ಳುತ್ತೇನೆಂದು ನಾನು ಕನಸು ಕಂಡಿರಲಿಲ್ಲ. ನನ್ನ ಹಿರಿಯ ಮಗ ರಾಜೇಂದ್ರ ಎನ್.ಆಚಾರ್ಯ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಬಾಸ್ಟನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಯೋಗಾಯೋಗವೆಂಬಂತೆ 45 ದಿನಗಳ ಕಾಲ ಅಮೆರಿಕ ಸುತ್ತಾಡುವ ಸೌಭಾಗ್ಯ ನನಗೆ ಒದಗಿ ಬಂದಿತು.

ಅಮೆರಿಕದ ಪ್ರವಾಸದಲ್ಲಿದ್ದ ನನಗೆ, ಕೇಬಲ್ ಕಾರ್‌ನಲ್ಲಿ ಪರ್ವತವನ್ನು ನೋಡಬೇಕು ಎಂಬ ಕನಸಿತ್ತು. ಮಗ ಮಾರನೆಯ ದಿನವೇ ಅದಕ್ಕೆ ವ್ಯವಸ್ಥೆ ಮಾಡಿದ್ದ.

ನಾವಿದ್ದಿದ್ದು ಬಾಸ್ಟ್‌ನ್‌ನ ವಾಲ್ತಾಮ್‌ನಲ್ಲಿ. ಅಲ್ಲಿಂದ 193 ಕಿ.ಮೀ ದೂರದಲ್ಲಿ ನ್ಯೂಹ್ಯಾಂಪ್‌ಶೈರ್ ರಾಜ್ಯವಿದೆ. ಅಲ್ಲಿನ ಲಿಂಕನ್‌ ಎಂಬಲ್ಲಿ ‘ಲೂನ್ ಮೌಂಟೇನ್’ ಎಂಬಲ್ಲಿಗೆ ನಾವು ಸ್ಕೈರೈಡ್‌ಗೆ ಹೊರಟಿದ್ದೆವು. ಅದಕ್ಕೆ ಗೊಂಡೊಲ ಸ್ಕೈರೈಡ್ ಎನ್ನುತ್ತಾರೆ. ಇದಕ್ಕಾಗಿ ನಾವು ಹಿಂದಿನ ದಿನವೇ ಪ್ರಯಾಣಕ್ಕೆ ಬೇಕಾಗುವಂತಹ ತಿಂಡಿ-ತಿನಿಸುಗಳನ್ನು ತಯಾರಿಸಿಕೊಂಡೆವು.

ADVERTISEMENT

ಬೆಳಿಗ್ಗೆ 7 ಗಂಟೆಗೆ, ಕಾರಿನಲ್ಲಿ ನ್ಯೂ ಹ್ಯಾಂಪ್ಶೈರ್‌ನತ್ತ ಹೊರಟೆವು. ಅಗಲವಾದ ರಸ್ತೆಗಳು, ಶಿಸ್ತುಬದ್ಧ ಚಾಲನೆ. ಹಾರನ್ ನಿಷಿದ್ಧವಾದ್ದರಿಂದ ಕೇವಲ ಕಾರುಗಳ ಸದ್ದಷ್ಟೇ ಕೇಳುತ್ತಿತ್ತು. ಸುಮಾರು ಒಂದು ಗಂಟೆ ಪಯಣದ ನಂತರ ಸಿಕ್ಕ ‘ಎಕ್ಸಿಟ್’ನಲ್ಲಿದ್ದ ಹೋಟೆಲ್‌ನಲ್ಲಿ ಕಾಫಿ ಸೇವಿಸಿ ಪ್ರಯಾಣ ಮುಂದುವರೆಸಿದೆವು. ಸುಮಾರು 9.30 ಗಂಟೆಗೆ ನ್ಯೂ ಹ್ಯಾಂಪ್‌ಶೈರ್ ತಲುಪಿದೆವು.

ನಿಗದಿತ ಸ್ಥಳದಲ್ಲಿ ಕಾರು ಪಾರ್ಕ್‌ ಮಾಡಿದೆವು. ಅಲ್ಲಿಂದ ಗೊಂಡೊಲಾ ಸ್ಕೈ ರೈಡ್‌ನತ್ತ ನಡೆಯುತ್ತಾ ಹೊರಟೆವು. ಆಗಲೇ ಪ್ರವಾಸಿಗರು ಸಾಲುಗಟ್ಟಿ ನಿಂತಿದ್ದರು. ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದ್ದ ನಾವು, ಸರತಿ ಸಾಲಲ್ಲಿ ನಿಂತುಕೊಂಡಿದ್ದಾಯಿತು.

ಲೂನ್ ಪರ್ವತದ ಉತ್ತರ ಶಿಖರ ಸಮುದ್ರ ಮಟ್ಟದಿಂದ 3,065 ಅಡಿ ಎತ್ತರದಲ್ಲಿದ್ದರೆ, ದಕ್ಷಿಣ ಶಿಖರ 2,807 ಅಡಿ ಎತ್ತರದಲ್ಲಿದೆ. ಲೂನ್ ಪರ್ವತದ ಶಿಖರಕ್ಕೆ ಕರೆದೊಯ್ಯುವ ಸ್ಕೈ ರೈಡ್‌ನಲ್ಲಿ ಕುಳಿತುಕೊಂಡಾಗ ನನ್ನ ಹಲವು ವರ್ಷಗಳ ಕನಸು ನನಸಾಗುವ ಸಂತಸ. ಇಬ್ಬರು ಕುಳಿತುಕೊಳ್ಳುವಂತಹ ಸ್ಕೈ ರೈಡ್‌ನಲ್ಲಿ ಕುಳಿತೆವು. ನಾವು ನೋಡಿದ್ದನ್ನೆಲ್ಲವೂ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ತವಕ.

ಲೂನ್ ಶಿಖರಕ್ಕೆ ತಲುಪಲು 1.3 ಮೈಲಿ ಆರೋಹಣದ ಸವಾರಿ. ಅದಕ್ಕೆ ತಗಲುವ ಸಮಯ ಸುಮಾರು ಹತ್ತು ನಿಮಿಷಗಳು. ಕೇಬಲ್‌ ಕಾರು ಮೇಲೇರುತ್ತಿದ್ದಂತೆ ಚಿಕ್ಕದಾಗುತ್ತಾ ಹೋಗುವ ಕಟ್ಟಡಗಳು, ಇಕ್ಕೆಲ್ಲಗಳಲ್ಲಿರುವ ಮರ, ಗಿಡಗಳು ಹಿಂದೆ ಸರಿಯುತ್ತಿರುವುದನ್ನು ನೋಡುವುದೇ ಒಂದು ಆನಂದ. ಪ್ರಕೃತಿ ಸೌಂದರ್ಯ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತು. ಫೋಟೊ ತೆಗೆಯುವ ನಮ್ಮ ಆಸೆಗೆ ತುಂತುರು ಮಳೆ ಕೆಲವು ನಿಮಿಷಗಳ ಕಾಲ ಅಡಚಣೆ ಉಂಟು ಮಾಡಿತಾದರೂ ತದನಂತರ ಮಳೆ ನಿಂತು ನಮ್ಮನ್ನು ನಿರಾಳವನ್ನಾಗಿಸಿತು.

ಶಿಖರವನ್ನು ತಲುಪಿ ಕಾರಿನಿಂದ ಹೊರ ಬರುತ್ತಿದ್ದಂತೆ ಅನಿರ್ವಚನೀಯ ಆನಂದ. ತಂಪಾದ ವಾತಾವರಣ, ನಮ್ಮಂತೆಯೇ ಲೂನ್ ಪರ್ವತ ವೀಕ್ಷಣೆಗಾಗಿ ವಿವಿಧ ಪ್ರದೇಶಗಳಿಂದ ಬಂದ ಪ್ರವಾಸಿಗರೊಂದಿಗೆ ಪರಸ್ಪರ ಶುಭಾಶಯಗಳ ವಿನಿಮಯ. ನಂತರ ಸ್ವಲ್ಪ ದೂರ ಸಾಗುತ್ತಿದ್ದಂತೆ ನಮಗೆ ಕಂಡದ್ದು ‘ಹರ್ಬರ್ಟ್ ವೀಕ್ಷಣಾ ಗೋಪುರ’. ಸುಮಾರು 50 ಅಡಿ ಎತ್ತರವಿರುವ, ಸಂಪೂರ್ಣ ಮರದ ಹಲಗೆಗಳಿಂದಲೇ ನಿರ್ಮಿತವಾದ ಈ ಗೋಪುರವನ್ನು 1966 ರಲ್ಲಿ ‘ಜಾರ್ಜ್ ಹರ್ಬರ್ಟ್’ ನಿರ್ಮಿಸಿದ. 2001 ರಲ್ಲಿ ನವೀಕರಣಗೊಂಡಿದೆ ಎಂಬ ಮಾಹಿತಿ ಅಲ್ಲಿ ಅಳವಡಿಸಲಾದ ಫಲಕದಿಂದ ತಿಳಿಯಿತು.

ನಾವು ವೀಕ್ಷಣಾ ಗೋಪುರವನ್ನೇರಿದೆವು. ಅಲ್ಲಿಂದ ಕಾಣುವ ವೈಟ್ ಮೌಂಟೇನ್ ರಾಷ್ಟ್ರೀಯ ಉದ್ಯಾನದ 360 ಡಿಗ್ರಿ ಪ್ರಕೃತಿ ದೃಶ್ಯಾವಳಿಗಳ ಅಪ್ರತಿಮ ನೋಟ ನಮ್ಮನ್ನು ನಿಬ್ಬೆರಗಾಗಿಸಿತು. ಸುತ್ತಮುತ್ತಲಿನ ಊರುಗಳು ಚಿಕಣಿ ಮಾದರಿಗಳಂತೆ ಕಾಣುತ್ತಿದ್ದವು. ಎತ್ತ ನೋಡಿದರೂ ಹಚ್ಚ ಹಸಿರಿನ ಶಿಖರಗಳು, ಹಿತಕರವಾದ ತಂಗಾಳಿ. ಶುಭ್ರವಾದ ಮೋಡಗಳು ಗಿರಿಶಿಖರಗಳನ್ನು ಚುಂಬಿಸಿ ಮುಂದೆ ಹೋಗುತ್ತಿವೆ. ಸ್ವಲ್ಪ ಸಮಯ ಪ್ರಕೃತಿಯನ್ನು ವೀಕ್ಷಿಸಿ ಗೋಪುರದಿಂದ ಇಳಿದು ನಡೆಯುತ್ತಾ ಶಿಖರದ ಮೇಲೆಲ್ಲಾ ಅಡ್ಡಾಡಿದೆವು.

ಬಗೆ ಬಗೆಯ ಹೂವು, ಗಿಡ ಮರಗಳ ಅಂದ, ಫೋಟೊ ತೆಗೆಯಲೇಬೇಕೆಂದು ಹಟ ಹಿಡಿದಂತೆ ಕಂಡಿತು. ಹತ್ತಿರದಲ್ಲೇ ಇರುವ ಹೋಟೆಲ್‌ನಲ್ಲಿ ಸ್ಯಾಂಡ್‌ವಿಚ್‌ ಹೊಟ್ಟೆಗಿಳಿಸಿ ಸ್ಪೆಷಲ್ ಕಾಫಿ ಕುಡಿದೆವು. ಹೋಟೆಲ್‌ನಿಂದ ಅನತಿ ದೂರದಲ್ಲಿದ್ದ ಮತ್ತೊಂದು ವೀಕ್ಷಣಾ ಪ್ರದೇಶದಿಂದ ಕಾಣುವ ‘ಲೂನ್ ಸರೋವರ’ವನ್ನು ವೀಕ್ಷಿಸಿದೆವು. ದೂರದ ದೃಶ್ಯಗಳನ್ನು ವೀಕ್ಷಿಸಲೆಂದೇ ಅಲ್ಲಲ್ಲಿ ದೂರದರ್ಶಕ ಯಂತ್ರಗಳನ್ನು ಇರಿಸಿದ್ದರು. ಈ ಪರ್ವತದಲ್ಲಿ ಕೆಲವು ಗುಹೆಗಳು ಇರುವುದಾಗಿ ಪ್ರವಾಸಿಗರು ಹೇಳಿದರೂ, ಸಮಯದ ಅಭಾವದಿಂದಾಗಿ ನಾವು ಗುಹೆಗಳನ್ನು ವೀಕ್ಷಿಸಲು ಹೋಗಲಿಲ್ಲ.

ದಿನನಿತ್ಯದ ಒತ್ತಡವನ್ನು ನಿವಾರಿಸಿಕೊಳ್ಳಲು ಒಂದು ಗಂಟೆ ಅವಧಿಯ ಯೋಗ ಕಲಿಸುವ ನುರಿತ ಶಿಕ್ಷಕರೂ ಇಲ್ಲಿ ಲಭ್ಯವಿರುವುದು ಅಚ್ಚರಿಯನ್ನುಂಟುಮಾಡಿತು. ಲೂನ್ ಪರ್ವತದಲ್ಲಿ ಅಡ್ಡಾಡಿದ ನಂತರ ಹಿಂದಿರುಗುವ ಸರದಿ ನಮ್ಮದಾಯಿತು.

ಹಿಂದಿರುಗುವಾಗ ‘ಗೊಂಡಾಲಾ ಸ್ಕೈ ರೈಡ್’ ಸ್ಟೇಷನ್ ಬಳಿ ಇರಿಸಲಾಗಿದ್ದ ಕಪ್ಪು ಹಲಗೆಯೊಂದು ನಮ್ಮ ಗಮನಸೆಳೆಯಿತು. ಅದರಲ್ಲಿ ಹಲವು ಪ್ರವಾಸಿಗರು ತಮ್ಮ ಹಸ್ತಾಕ್ಷರ ಮೂಡಿಸಿ ದೇಶದ ಹೆಸರನ್ನು ಬರೆದಿದ್ದರು. ನಾವೂ ಅವರನ್ನು ಅನುಸರಿಸಿದೆವು. ನಮ್ಮ ಭಾರತದ ಹೆಸರನ್ನು ಬರೆಯುವಾಗ ಮೈ ಪುಳಕಗೊಂಡಿತು. ಎಲ್ಲಿಯ ಭಾರತ, ಎಲ್ಲಿಯ ಅಮೆರಿಕ. ಇಷ್ಟು ದೂರ ಬಂದು ನಮ್ಮ ದೇಶದ ಹೆಸರನ್ನು ಬರೆಯುತ್ತಿರುವುದು ಹೆಮ್ಮೆಯೆನಿಸಿತು.

ಜುಲೈ ತಿಂಗಳು ಸೂಕ್ತ

ನಾವು ಲೂನ್ ಮೌಂಟೇನ್‌ಗೆ ಭೇಟಿ ನೀಡಿದ್ದು ಜುಲೈ ತಿಂಗಳಿನಲ್ಲಿ. ಆಗ ಪರ್ವತಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಶರತ್ಕಾಲದಲ್ಲಿ(ಸೆಪ್ಟೆಂಬರ್-ಡಿಸೆಂಬರ್)ಎಲೆಗಳು ಬಂಗಾರದ ಬಣ್ಣವನ್ನು ಹೊಂದಿ ಇಡೀ ಪರ್ವತಗಳು ಬಂಗಾರದ ಪರ್ವತಗಳಂತೆ ಕಾಣುತ್ತವಂತೆ. ಚಳಿಗಾಲದಲ್ಲಿ (ಡಿಸೆಂಬರ್-ಮಾರ್ಚ್) ಮರಗಳು ಬೋಳಾಗುತ್ತವೆ ಹಾಗೂ ಪರ್ವತಗಳು ಹಿಮದಿಂದ ಕೂಡಿರುತ್ತವೆ.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.