ತೇಗ ಮರಗಳ ಇತಿಹಾಸವನ್ನು ಅರಿಯುವ ಕುತೂಹಲವಿದ್ದರೆ ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರ್‌ನಲ್ಲಿರುವ ‘ತೇಗ ಮ್ಯೂಸಿಯಂ’ಗೆ (Teak Museum) ಭೇಟಿ ನೀಡಬೇಕು. ಕೇರಳ ಅರಣ್ಯ ಮತ್ತು ಸಂಶೋಧನೆ ಕೇಂದ್ರದ ಈ ಮ್ಯೂಸಿಯಂ ಅಚ್ಚರಿಗಳ ಬೀಡು. ಇದು ಹಲವಾರು ವಿಧದ ತಳಿ, ಅವುಗಳ ಹುಟ್ಟು, ಬೆಳವಣಿಗೆ ಮತ್ತು ಉಪಯೋಗದ ಬಗ್ಗೆ ಮಾಹಿತಿಗಳ ಸಂಗ್ರಹಾಲಯವಾಗಿದೆ. 1995ರಲ್ಲಿ ಸ್ಥಾಪಿಸಲಾದ ಈ ಮ್ಯೂಸಿಯಂ ಮಲಪ್ಪುರಂ ಜಿಲ್ಲೆಯ ನಿಲಂಬೂರ್ ನಗರದಿಂದ ಊಟಿಗೆ ಹೋಗುವ ದಾರಿಯಲ್ಲಿದೆ.
160 ವರ್ಷಗಳ ಹಿಂದೆ ತೇಗದ ಮರಗಳನ್ನು ಬೆಳೆಸಲು ಪ್ರಯತ್ನಿಸಿದ್ದ ಅದೇ ಜಾಗದಲ್ಲಿ ಈ ಮ್ಯೂಸಿಯಂ ನಿರ್ಮಾಣವಾಗಿದೆ. ಮ್ಯೂಸಿಯಂನ ಪಕ್ಕದಲ್ಲೇ ‘ಕನೋಲಿ ಪ್ಲಾಟ್’ ಎಂಬಲ್ಲಿ ಪುರಾತನ ತೇಗದ ಮರವಿದೆ. 46.5 ಮೀಟರ್ ಎತ್ತರ ಮತ್ತು 420 ಸೆಂ.ಮೀ ದಪ್ಪವಿರುವ ಈ ಬೃಹತ್ ತೇಗದ ಮರವನ್ನು ಅರಣ್ಯ ಇಲಾಖೆಯವರು ಅತೀವ ಕಾಳಜಿಯಿಂದ ರಕ್ಷಿಸಿದ್ದಾರೆ.
ಕೇರಳದಲ್ಲಿ ಎರಡು ವರ್ಷಗಳಿಂದ ಸಂಭವಿಸಿದ ಭಾರಿ ಪ್ರವಾಹಕ್ಕೆ ಕನೋಲಿ ಪ್ಲಾಟ್‌ಗೆ ಹೋಗುವ ದಾರಿಯ ಸೇತುವೆ ಕೊಚ್ಚಿ ಹೋಗಿದ್ದು, ದುರಸ್ತಿ ಕಾರ್ಯಗಳು ನಡೆಯುತ್ತಿದೆ. ಹೀಗಾಗಿ ಸದ್ಯ ಅಲ್ಲಿಗೆ ಪ್ರವಾಸಿಗರಿಗೆ ಪ್ರವೇಶ ನಿರಾಕರಿಸಲಾಗಿದೆ.
ಮ್ಯೂಸಿಯಂನಲ್ಲಿ ಏನಿದೆ
ತೇಗ ಮರದ ವಿಶೇಷತೆಗಳು, ಪರಿಪಾಲನೆ, ವಿವಿಧ ತಳಿಗಳು, ತೇಗದ ಇತಿಹಾಸ ಮತ್ತು ಉಪಯೋಗಗಳ ಬಗ್ಗೆ ಇಲ್ಲಿ ಮಾಹಿತಿ ಲಭ್ಯ. ಭಾರತಕ್ಕೆ ಬಂದ ಬ್ರಿಟಿಷರು ತೇಗದ ಮರವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ಯಾವುದೆಲ್ಲ ಮಾರ್ಗಗಳನ್ನು ಬಳಸಿದರು ಎಂಬುದರ ಬಗ್ಗೆಯೂ, ಸಿಲ್ಕ್ ರೂಟ್ (ರೇಷ್ಮೆ ಮಾರ್ಗ) ನ ರೇಖಾ ಚಿತ್ರವನ್ನು ಇಲ್ಲಿ ಕಾಣಬಹುದು.
ಮೊದಲನೇ ಮಹಡಿಯಲ್ಲಿ ತೇಗ ಮರಗಳ ವೈಜ್ಞಾನಿಕ ಸ್ವಭಾವ ಬಗ್ಗೆ ವಿವರಿಸುವ ಮಾಹಿತಿ ಇದೆ. ತೇಗದ ಸಹಜ ಪರಾಗಸ್ಪರ್ಶ, ಬೀಜ, ತೇಗದ ಗಿಡದಿಂದ ಮರವಾಗುವ ರೀತಿ, ಟಿಶ್ಯೂ ಕಲ್ಚರ್, ಕ್ಲೋನಿಂಗ್ ಎಲ್ಲವನ್ನೂ ವಿವರಿಸಲಾಗಿದೆ. ತೇಗದ ಸಸಿಗಳಿಗೆ ಹಾನಿ ಮಾಡುವ ಕೀಟಗಳು, ಮರಗಳ ನಾಶಕ್ಕೆ ಕಾರಣವಾಗುವ ಅಂಶಗಳು ಮತ್ತು ಅವುಗಳ ನಿಯಂತ್ರಣ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ.
ತೇಗದ ಕಾಡುಗಳಲ್ಲಿ ಕಾಣಸಿಗುವ 300ಕ್ಕಿಂತಲೂ ಹೆಚ್ಚು ಹಾತೆ, ಚಿಟ್ಟೆ ಮತ್ತಿತರ ಕೀಟಗಳನ್ನು ವಿವಿಧ ಪಂಗಡಗಳಾಗಿ ವಿಭಜಿಸಿ ಅವುಗಳ ಬಗ್ಗೆ ಕಿರು ಮಾಹಿತಿ ನೀಡಲಾಗಿದೆ. ಅತೀ ದೊಡ್ಡ ಪತಂಗ ಅಟ್ಲಾಸ್ ಮೋತ್ , ಬೃಹತ್ ಗಾತ್ರದ ಬಣ್ಣದ ಚಿಟ್ಟೆಯಾದ ಸದರ್ನ್ ಬರ್ಡ್ ವಿಂಗ್ (Southern Birdwing or Troides minos )ನ್ನು ಇಲ್ಲಿ ಕಾಣಬಹುದು. ಇನ್ನೊಂದೆಡೆ ತೇಗದಿಂದ ಮಾಡಿದ ಗೃಹೋಪಯೋಗಿ ವಸ್ತುಗಳೂ ಇಲ್ಲಿ ಪ್ರದರ್ಶನಕ್ಕಿವೆ.
ಸ್ವಾತಂತ್ರ್ಯಪೂರ್ವದಲ್ಲಿ ಕೇರಳಕ್ಕೆ ಬಂದಿದ್ದ ವ್ಯಾಪಾರಿಗಳು ಕರಿಮೆಣಸು ವ್ಯಾಪಾರಕ್ಕಿಂತ ಮುನ್ನ ತೇಗದ ಮರಗಳ ವ್ಯಾಪಾರ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಸುಲೈಮಾನ್ ನಬಿಯ ಕಾಲದಲ್ಲಿ ನಿಲಂಬೂರ್ ಕಾಡುಗಳಿಂದ ತೇಗದ ಮರಗಳನ್ನು ವ್ಯಾಪಾರ ಮಾಡಲಾಗಿತ್ತು ಎಂಬ ಆರೋಪವೂ ಇದೆ. ಆದರೆ 1840ರಲ್ಲಿ ಬ್ರಿಟಿಷರು ಜಗತ್ತಿನಲ್ಲೇ ಮೊತ್ತ ಮೊದಲ ಬಾರಿ ಕನೋಲಿ ಪ್ಲಾಟ್ ಎಂಬ ಹೆಸರಿಟ್ಟು ತೇಗ ಕೃಷಿ ಆರಂಭಿಸಿದ್ದರು. ನಿಲಂಬೂರ್ ತೇಗಗಳ ಮಾರಾಟ ಕೇಂದ್ರವಾದ ಅರುವಕ್ಕಾಡ್, ನೆಡುಂಕಯ್ಯಂ ಪ್ರದೇಶಗಳು ಹಿಂದಿನ ಕಾಲದಲ್ಲಿ ವ್ಯಾಪಾರ ಕೇಂದ್ರಗಳಾಗಿದ್ದವು. ಕನೋಲಿ ಜಲ ಮಾರ್ಗ ಮತ್ತು ನಿಲಂಬೂರ್ ರೈಲ್ವೆ ಮಾರ್ಗ ಮೂಲಕ ತೇಗ ಮರಗಳ ಸಾಗಾಟ ನಡೆಯುತ್ತಿತ್ತು ಎನ್ನಲಾಗುತ್ತಿದೆ.
ಪಕ್ಕದಲ್ಲಿ ಅಂದದ ಉದ್ಯಾನ
ತೇಗ ಮ್ಯೂಸಿಯಂ ಸುತ್ತಾಡಿ ಹೊರಬಂದರೆ ಔಷಧೀಯ ಉದ್ಯಾನ (Herbal Garden-Bio resource Nature park) ಕಣ್ಮನ ಸೆಳೆಯುತ್ತದೆ. ವಿವಿಧ ಬಗೆಯ ಆರ್ಕಿಡ್, ಹೂವಿನ ಗಿಡಗಳು, ರಾಕ್ ಗಾರ್ಡನ್, ಔಷಧೀಯ ಸಸ್ಯಗಳು, ಬಿದಿರು ಹಿಂಡು ಹೀಗೆ ಹಲವಾರು ಬಗೆಯ ಗಿಡ, ಬಳ್ಳಿಗಳನ್ನು ಪರಿಚಯಿಸುವ ಉದ್ಯಾನವಿದು.
ಹೋಗುವುದು ಹೇಗೆ ?
ಬೆಂಗಳೂರಿನಿಂದ ನಿಲಂಬೂರ್‌ಗೆ ಬಸ್ ಸೇವೆ ಇದೆ. ಬೆಂಗಳೂರು- ಮೈಸೂರು- ಗುಡಲ್ಲೂರ್- ನಿಲಂಬೂರ್ ದಾರಿಯಾಗಿ ಬರಬಹುದು. ಗುಡಲ್ಲೂರ್‌ನಿಂದ 1 ಗಂಟೆ ಕ್ರಮಿಸಿದರೆ ನಿಲಂಬೂರ್ ತಲುಪಬಹುದು. ನಿಲಂಬೂರ್ ಬಸ್ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿ ಈ ಉದ್ಯಾನವಿದೆ.
* ರೈಲ್ವೆ ಮಾರ್ಗ: ಬೆಂಗಳೂರಿನಿಂದ ಶೊರ್ನೂರ್ ಬಂದು ಶೊರ್ನೂರ್‌ನಿಂದ ನಿಲಂಬೂರ್ ತಲುಪಬಹುದು. ನಿಲಂಬೂರ್ ರೈಲ್ವೆ ನಿಲ್ದಾಣದಿಂದ 5 ಕಿಮೀ. ಆಟೊ, ಟ್ಯಾಕ್ಸಿ ಸೌಲಭ್ಯವಿದೆ
*ವಿಮಾನ ಸೌಲಭ್ಯ : ಕ್ಯಾಲಿಕಟ್ ವಿಮಾನ ನಿಲ್ದಾಣದಿಂದ ನಿಲಂಬೂರ್‌ಗೆ 48 ಕಿ.ಮೀ.
ಇದನ್ನೂ ಓದಿ:ಕಣ್ಮನ ತಣಿಸುವ ‘ರೋಸ್‌ಗಾರ್ಡನ್’
ಮ್ಯೂಸಿಯಂ ವೀಕ್ಷಣೆಗೆ ಸಮಯ
*ಸೋಮವಾರ ರಜೆ, ಇನ್ನುಳಿದ ದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30ರ ವರೆಗೆ
*ಪ್ರವೇಶ ದರ : ₹10
ಸುತ್ತ ಏನೇನು ನೋಡಬಹುದು..
*ಅಡ್ಯನ್‌ಪಾರಾ ಜಲಪಾತ: ತೇಗ ಉದ್ಯಾನದಿಂದ 15 ಕಿಮೀ ದೂರದಲ್ಲಿದೆ. ನಿಲಂಬೂರ್ ನಗರದಿಂದ 10 ಕಿಮೀ ದೂರದಲ್ಲಿರುವ ಈ ಜಲಪಾತ ಕೋಯಿಕ್ಕೋಡ್- ಊಟಿ ಹೆದ್ದಾರಿಗೆ ಹತ್ತಿರವಾಗಿದೆ.
*ಕಕ್ಕಾಡಂ ಪೊಯಿಲ್: ನಿಲಂಬೂರ್‌ನಿಂದ 20 ಕಿ.ಮೀ. ದೂರದಲ್ಲಿ ಕಕ್ಕಾಡಂಪೊಯಿಲ್ ಎಂಬ ಸಣ್ಣ ಗ್ರಾಮವಿದೆ. ಪರ್ವತ ಶ್ರೇಣಿಗಳ ನಡುವೆ ಇರುವ ಈ ಗ್ರಾಮದ ಪಕ್ಕದಲ್ಲೇ ಕೋಳಿಪ್ಪಾರ ಜಲಪಾತವಿದೆ. ಕೋಯಿಕ್ಕೋಡ್ ನಗರದಿಂದ 50 ಕಿ.ಮೀ. ದೂರವಿರುವ ಆ ಗ್ರಾಮಕ್ಕೆ ಕೇರಳ ಸಾರಿಗೆ ಸಂಸ್ಥೆಯ ಬಸ್ ಸಂಪರ್ಕವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.