ADVERTISEMENT

ಗಿರಿಜನ ಸಂಸ್ಕೃತಿಯ ‘ಅರಕು ವ್ಯಾಲಿ’

ಜಿ.ಕೃಷ್ಣ ಪ್ರಸಾದ್
Published 28 ನವೆಂಬರ್ 2020, 19:30 IST
Last Updated 28 ನವೆಂಬರ್ 2020, 19:30 IST
ಅರಕು ವ್ಯಾಲಿಯ ವಿಹಂಗಮ ನೋಟ
ಅರಕು ವ್ಯಾಲಿಯ ವಿಹಂಗಮ ನೋಟ   
""
""
""

ಅದೊಂದು ಕಿನ್ನರ ಲೋಕ!

ಮಂಜು ತುಂಬಿದ ಗುಡ್ಡಗಳು, ಮನ ಸೆಳೆಯುವ ಕಣಿವೆಗಳು, ಸೀರೆಗಳ ಹರಡಿಬಿಟ್ಟಂತೆ ತೋರುವ ಹೊಲ ಗದ್ದೆಗಳು, ಹಸಿರು ಉಕ್ಕಿಸುವ ಕಾಡು–ಮೇಡುಗಳು, ಹತ್ತಾರು ಆಭರಣಗಳಿಂದ ಅಲಂಕೃತಗೊಂಡ ಗಿರಿಜನ ಮಹಿಳೆಯರು, ಬಿಲ್ಲು ಬಾಣ ಹಿಡಿದು ಕಾಡು ಸುತ್ತಲು ಹೊರಡುವ ಪುರುಷರು...

ಇದು ಅರಕು ವ್ಯಾಲಿ. ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 110 ಕಿಲೊ ಮೀಟರ್‌ ದೂರದಲ್ಲಿ ಕಾಡಿನ ನಡುವೆ ಇರುವ ಭೂಮಂಡಲದ ಸ್ವರ್ಗ. ಪೂರ್ವ ಘಟ್ಟಗಳ, ಒಡಿಶಾ ರಾಜ್ಯದ ಗಡಿಗೆ ಹೊಂದಿಕೊಂಡ ಪ್ರದೇಶ. ಇದು ಎಂತಹ ಕಣಿವೆ ಪ್ರದೇಶ ಅಂತೀರಿ. 264 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡ ಈ ಕಣಿವೆಯಲ್ಲಿ 163 ಗಿರಿಜನ ಹಳ್ಳಿಗಳಿವೆ. ಅರಕು ವ್ಯಾಲಿಯ ಅದೆಷ್ಟೋ ಹಳ್ಳಿಗಳಿಗೆ ಇವತ್ತಿಗೂ ರಸ್ತೆಗಳಿಲ್ಲ. ಕುಡಿಯುವ ನೀರಿಲ್ಲ. ಆಸ್ಪತ್ರೆ, ಶಾಲೆ ಸೌಕರ್ಯ ದೂರದ ಮಾತೇ ಬಿಡಿ.

ADVERTISEMENT

ಅರಕು ಪ್ರದೇಶದಲ್ಲಿ 19 ಗಿರಿಜನ ಸಮುದಾಯಗಳಿವೆ. ಕೊಂಡ ದೊರ, ಬಗತ, ಕೊಟಿಯ, ಕೋದು ಮುಖ್ಯವಾದ ಸಮುದಾಯಗಳು. ತಮ್ಮದೇ ಆಹಾರ ಪದ್ಧತಿ, ಸಂಸ್ಕೃತಿಯನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ಇಲ್ಲಿನ ಗಿರಿಜನರಿಗೆ ಅವರದೇ ಆದ ರೀತಿ ರಿವಾಜುಗಳಿವೆ. ಇಲ್ಲಿನ ಹಬ್ಬ ಹರಿದಿನ, ಆಚರಣೆಗಳು‌ ಕೂಡ ವಿಶೇಷ. ಹಬ್ಬಗಳ‌ ಸಂದರ್ಭದಲ್ಲಿ ಅಕ್ಕಿಯಿಂದ ಮಾಡಿದ ‘ಬಿಯ್ಯಂ ಸಾರ’ವನ್ನು ಚಪ್ಪರಿಸುತ್ತಾ ಇಡೀ ರಾತ್ರಿ ನೃತ್ಯ ಮಾಡುತ್ತಾರೆ. ಒಬ್ಬರ ಸೊಂಟ ಇನ್ನೊಬ್ಬರು ಹಿಡಿದು ವೃತ್ತಾಕಾರವಾಗಿ ಸುತ್ತಿ ಬರುವ ‘ದಿಂಸಾ ನೃತ್ಯ’ ಬಹು ಜನಪ್ರಿಯ. ಬಣ್ಣ ಬಣ್ಣದ ಬಟ್ಟೆ ತೊಡುವುದೆಂದರೆ ಯುವಕ, ಯುವತಿಯರಿಗೆ ಬಹು ಖುಷಿ.

ಗಿರಿಜನರಲ್ಲದವರು ಇಲ್ಲಿ ಹೊಲ ಕೊಳ್ಳುವಂತಿಲ್ಲ. ವಿಶಾಖಪಟ್ಟಣ, ವಿಜಯವಾಡದ ನಗರಗಳಿಂದ ಬಂದ ಹಣವಂತರು ಇಲ್ಲಿನ ಆದಿವಾಸಿ ಮಹಿಳೆಯರನ್ನು ಮದುವೆಯಾಗಿ (ವಾಸ್ತವದಲ್ಲಿ ಕೂಡಿಕೆ ಮಾಡಿಕೊಂಡು) ಅವರ ಹೆಸರಲ್ಲಿ ಹೊಲ ಕೊಂಡು, ಹೋಟೆಲ್, ಅಂಗಡಿ ಮುಂಗಟ್ಟು ಮಾಡುತ್ತಾರೆ. ‘ಆಕೆಯೇನಾದರೂ ಕೈಕೊಟ್ಟರೆ ಹೆಣ್ಣೂ ಹೋಯ್ತು,ಹಣವೂ ಹೋಯ್ತು’ ಅರಕು ಜನ ಜೀವನದ ವಿವರ ನೀಡುತ್ತಿದ್ದ ಸಿಂಹಾದ್ರಿ ದೊಡ್ಡದಾಗಿ ನಕ್ಕ.

ನಮ್ಮೂರು, ನಮ್ಮನೆ ಹೀಗಿವೆ ನೋಡಿ ಸ್ವಾಮಿ...

ಬ್ರಿಟಿಷರ ಕಾಲಕ್ಕೆ ಅರಕು ವ್ಯಾಲಿ ಗಿರಿಧಾಮವಾಗಿತ್ತು.‌ ಅವರು ಕಾಫಿ ಬೆಳೆಯನ್ನು ಇಲ್ಲಿಗೆ ಪರಿಚಯಿಸಿದರು. ಪ್ರತಿ ಗಿರಿಜನ ಕುಟುಂಬವೂ ಸಣ್ಣ ಪ್ರಮಾಣದಲ್ಲಿ ಕಾಫಿ ಬೆಳೆಯುವುದು ಇಲ್ಲಿನ ವಿಶೇಷ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅರಕು ವ್ಯಾಲಿ ಕಾಫಿಗೆ ಹೆಸರಿದೆ. ಕಾಫಿಯ ಜೊತೆ ಉಪಬೆಳೆಯಾಗಿ ಮೆಣಸು ಬೆಳೆಯುತ್ತಾರೆ.

ಸಿರಿಧಾನ್ಯ ಕೃಷಿಗೂ ಅರಕು ವ್ಯಾಲಿ ಹೆಸರುವಾಸಿ. ಮೊಳಕೈ ಉದ್ದದ ಸಾವೆ, ನವಣೆ ಇಲ್ಲಿವೆ. ರಾಗಿ ಕೃಷಿಯೂ‌ ಇದೆ. ಉಳಿದಂತೆ ತರಹೇವಾರಿ ಕಾಳುಗಳನ್ನು ಬೆಳೆದುಕೊಳ್ಳುತ್ತಾರೆ. ತಲೆತಲಾಂತರದಿಂದ ಬಂದ ಬೀಜಗಳನ್ನು ಬಿತ್ತುತ್ತಾರೆ. ರಾಸಾಯನಿಕಗಳ ಬಳಕೆ ಇಲ್ಲ; ಮನೆ ಗೊಬ್ಬರವೇ ಎಲ್ಲ.‌ ಹಿತ್ತಲಿನ ತೋಟ ಪ್ರತಿ ಮನೆಗಳಲ್ಲೂ ಇರುತ್ತದೆ. ‘ಅರಕುವ್ಯಾಲಿ ಕೃಷಿ ವೈವಿಧ್ಯದ ತಾಣ. ಹೊರಜಗತ್ತು ನೋಡದ ನೂರಾರು ಅಪರೂಪದ ತಳಿಗಳು ಇಲ್ಲಿವೆ. ಸಮುದಾಯ ಬೀಜ ಬ್ಯಾಂಕಿನ ಮೂಲಕ‌ ಈ ತಳಿ ಸಂರಕ್ಷಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಸಂಜೀವಿನಿ ಸಂಸ್ಥೆಯ ದೇವಲು ಹೇಳುತ್ತಾರೆ. ಗಿರಿಜನರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಜೀವಿನಿ ಸಂಸ್ಥೆ ಕಿಲ್ಲಗುಡದಲ್ಲಿ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಿದೆ. ಪ್ರತಿವರ್ಷ ‘ಪಾತಪಂಟಲ ಪಂಡಗ’ ಬೀಜಮೇಳ ಏರ್ಪಡಿಸುತ್ತದೆ.

ಕಣ್ಣು ಹಾಯಿಸುವಷ್ಟು ದೂರ ಹಳದಿ ಬಣ್ಣ ಎರಚಿದಂತೆ ಕಾಣುವ ಹುಚ್ಚೆಳ್ಳು ಹೊಲಗಳು ಸುಗ್ಗಿಕಾಲದಲ್ಲಿ ಕಾಣಸಿಗುತ್ತವೆ. ಹುಚ್ಚೆಳ್ಳು ಹೊಲದಲ್ಲಿ ಫೋಟೊ ತೆಗೆಸಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಾರೆ. ಅರಕು ಸಿನಿಮಾ ಮಂದಿಯ ನೆಚ್ಚಿನ ತಾಣ ಕೂಡ. ಸದಾ ಒಂದಿಲ್ಲೊಂದು ಸಿನಿಮಾದ ಶೂಟಿಂಗ್ ನಡೆಯುತ್ತಿರುತ್ತದೆ.

ಅರಕು ವ್ಯಾಲಿಯ ಕೃಷಿ ಚಟುವಟಿಕೆಗಳೂ ಅನನ್ಯವಾಗಿವೆ

ಹುಚ್ಚೆಳ್ಳು ಹೂವಿನ ಕಾಲಕ್ಕೆ ಜೇನು ಪೆಟ್ಟಿಗೆ ಇಡುವವರು ನಗರಗಳಿಂದ ಗುಳೆ ಬರುತ್ತಾರೆ. ನೂರಾರು ಪೆಟ್ಟಿಗೆಗಳನ್ನು ಇಟ್ಟು, ಜೇನು ತೆಗೆದುಕೊಂಡು ಸಂಕ್ರಾಂತಿ ಹೊತ್ತಿಗೆ ಜಾಗ ಖಾಲಿ ಮಾಡುತ್ತಾರೆ. ಇದರಿಂದ ನಯಾಪೈಸೆ ಲಾಭವಿಲ್ಲದ ಸ್ಥಳೀಯ ಗಿರಿಜನರು ಹೆಜ್ಜೇನು ಹುಡುಕಿ ಕಾಡಿಗೆ ಹೆಜ್ಜೆ ಹಾಕಬೇಕು.

ಅರಕುವಿನ ತರಕಾರಿಗಳಿಗೆ ವಿಶಾಖಪಟ್ಟಣದ ರೈತ ಬಜಾರಲ್ಲಿ ವಿಶೇಷ ಬೇಡಿಕೆ. ‘ನಾವು ತರಕಾರಿ ತರುವುದನ್ನೇ ಗ್ರಾಹಕರು ಕಾಯುತ್ತಿರುತ್ತಾರೆ. ವಿಷ ಉಣಿಸದ ನಮ್ಮ ಪದಾರ್ಥಗಳಿಗೆ ವಿಶೇಷ ಬೇಡಿಕೆ ಇದೆ’ ಪ್ರತಿನಿತ್ಯ ರೈತ ಬಜಾರಿಗೆ ಬರುವ ಕಾಸಲಮ್ಮ ಹೆಮ್ಮೆಯಿಂದ ಹೇಳಿದರು. ಮಾರುಕಟ್ಟೆಯಲ್ಲಿ ಸಿಗದ ಕಾಡು ಹಣ್ಣು, ಗೆಡ್ಡೆ ಗೆಣಸು, ಬೆರಕೆ ಸೊಪ್ಪುಗಳನ್ನು ಇವರು ಮಾರಾಟಕ್ಕೆ ತರುತ್ತಾರೆ. ಇದಕ್ಕಾಗಿ ಅರಕು ತರಕಾರಿ ಬೆಳೆಗಾರರ ಸಂಘ ಕೂಡ ಇದೆ.

ಶುಕ್ರವಾರದ ವಾರದ ಸಂತೆಗೆ ಅರಕು ಹೆಸರುವಾಸಿ. ಸುತ್ತಲಿನ ಗ್ರಾಮಗಳ ಜನರಿಗೆ ಇದೇ ದೊಡ್ಡ ಮಾರುಕಟ್ಟೆ. ನೂರಾರು ವ್ಯಾನು, ಬೈಕ್, ಟೆಂಪೊಗಳಲ್ಲಿ ಜನ ಬರುತ್ತಾರೆ. ಧಾನ್ಯ, ಗೆಡ್ಡೆ ಗೆಣಸು, ಬಾಳೆ, ತರಕಾರಿ, ಹಣ್ಣು ಹಂಪಲು, ಕೋಳಿಗಳನ್ನು ಸಂತೆಗೆ ತರುತ್ತಾರೆ. ನಮ್ಮ‌ ಜಾತ್ರೆಗಳಿಗಿಂತ ದೊಡ್ಡದಿದು.

ವಿಶಾಖಪಟ್ಟಣದಿಂದ ಅರಕು ಪಟ್ಟಣಕ್ಕೆ ಹೋಗುವ ಅಂಕುಡೊಂಕಿನ ರಸ್ತೆ ಕಾಡಿನ ನಡುವೆ ಸಾಗುತ್ತದೆ. ಪ್ರತಿದಿನ ಬೆಳಿಗ್ಗೆ ವಿಶಾಖಪಟ್ಟಣದಿಂದ ಅರಕುವ್ಯಾಲಿ ಮೂಲಕ ಕಿರಂದೂಲ್‌ಗೆ ಹೋಗುವ ರೈಲು ಪ್ರಯಾಣ ಜೀವಮಾನದಲ್ಲಿ ಮರೆಯಲಾಗದ್ದು. ಆಂಧ್ರ ಪ್ರದೇಶ, ಒಡಿಶಾ ಮತ್ತು ಛತ್ತೀಸ್‌ಗಡ ರಾಜ್ಯಗಳನ್ನು ಹಾದುಹೋಗುವ 472 ಕಿಮೀಗಳ ಈ ರೈಲು ಪ್ರಯಾಣದಲ್ಲಿ ಪೂರ್ವ ಘಟ್ಟಗಳ ಚೆಲುವು, ಗಿರಿಜನರ ದೈನಂದಿನ ಬದುಕು ನೋಡಬಹುದು. ವಿಶಾಖಪಟ್ಟಣದಿಂದ ಅರಕು ಪ್ರಯಾಣದ ನಡುವೆ, ರೈಲು 58 ಸುರಂಗಗಳನ್ನು ದಾಟುತ್ತದೆ. ಪ್ರಯಾಣಿಕರ ಕೇಕೆ ಮುಗಿಲು ಮುಟ್ಟುತ್ತದೆ!

ಅರಕು ಗಿರಿಜನರು ಬಳಸುವ ಸೋರೆ ಬಾಟಲಿ

ಕೆಲವೇ ವರ್ಷಗಳ ಹಿಂದೆ ನಕ್ಸಲರ ಚಟುವಟಿಕೆ ತೀವ್ರವಾಗಿತ್ತು. ಎರಡು ವರ್ಷಗಳ ಹಿಂದೆ, ಗಣಿಗಾರಿಕೆಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಆಪಾದಿಸಿ ನಕ್ಸಲರ ಗುಂಪೊಂದು ಅರಕು ವಿಧಾನಸಭಾ ಸದಸ್ಯನನ್ನು ಹಾಡುಹಗಲೇ ಗುಂಡಿಟ್ಟು ಕೊಂದಿತ್ತು. ಅರಕುವಿನಿಂದ ಮುಂದೆ ರೈಲು ಸಂಚಾರ ಅನಿಶ್ಚಿತವಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಭಯವಿಲ್ಲದೆ ಸುತ್ತಾಡಬಹುದು.

ಪ್ರವಾಸಿಗರಿಗೆ ಅರಕು ವ್ಯಾಲಿಯ ಗಿರಿಜನರ ಬದುಕನ್ನು ಪರಿಚಯಿಸಲು ಸರ್ಕಾರ ಅರಕುವಿನಲ್ಲಿ ‘ಟ್ರೈಬಲ್ ಮ್ಯೂಸಿಯಂ’ ಆರಂಭಿಸಿದೆ. ಗಿರಿಜನರೇ ಇಲ್ಲಿ ಮಳಿಗೆಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಬಿದಿರು, ಮಣ್ಣು ಮತ್ತು ಲೋಹದ ಕಲಾಕೃತಿಗಳು ಇಲ್ಲಿ ಲಭ್ಯ. ದಿಂಸಾ ನೃತ್ಯ ಮಾಡುತ್ತಿರುವ ಗಿರಿಜನ ಚೆಲುವೆಯರ ಸೊಂಟ ಹಿಡಿದು, ಹೆಜ್ಜೆ ಹಾಕಿ ಫೋಟೊಗೆ ಪೋಸ್ ಕೊಡಬಹುದು! ಸಿಮೆಂಟಿನ ಈ ಬೊಂಬೆಗಳು ನಿಜವಾದ ಚೆಲುವೆಯರೇ ನೃತ್ಯ ಮಾಡುತ್ತಿದ್ದಾರೇನೋ ಎನಿಸುವಷ್ಟು ನೈಜವಾಗಿವೆ.

ಅರಕುವಿನಿಂದ ವಿಶಾಖಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿ ‘ಬೊರ್ರಾ ಕೇವ್ಸ್‌’ ಸುಣ್ಣದ ಗುಹೆಗಳಿವೆ. ಗೋಸ್ಥಾನಿ ನದಿಯು ಸುಣ್ಣದ ಕಲ್ಲಿನ ಬೆಟ್ಟಗಳ ನಡುವೆ ಹರಿದು ರೂಪುಗೊಂಡ ನಿಸರ್ಗದ ಕಲಾಕೃತಿ ಇವು. ಗುಹೆಯ ಗೋಡೆಯಿಂದ ಜಿನುಗಿದ ನೀರು ಶಿವ -ಪಾರ್ವತಿ, ಋಷಿಯ ಗಡ್ಡ, ತಾಯಿ-ಮಗು, ಮೊಸಳೆ, ಮನುಷ್ಯನ ಮೆದುಳು, ಹುಲಿ, ಹಸುವಿನ ಕೆಚ್ಚಲು ರೀತಿ ಕಾಣುವ ರಚನೆಗಳನ್ನು ಸೃಷ್ಟಿಸಿದೆ. ಬೊರ‍್ರಾ ಕೇವ್ಸ್‌ನ ಬಂಬೂ ಬಿರಿಯಾನಿಗೆ ಬಹು ಬೇಡಿಕೆ.

ದಂಡುಗಟ್ಟಿ ಬರುವ ಪ್ರವಾಸಿಗರಿಂದ ಅರಕು ವ್ಯಾಲಿ ನರಳುತ್ತಿದೆ. ‘ಆಂಧ್ರದ ಊಟಿ’ ಎಂದು ಹೆಸರಾದ, ಸದಾ ತಂಪು ವಾತಾವರಣವಿರುವ ಅರಕು ಪಟ್ಟಣ ಪ್ರವಾಸಿಗರಿಂದ ಗಿಜಿಗುಡುತ್ತದೆ. ಸಾಕಷ್ಟು ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತಿವೆ. ತಿಂದು, ತೇಗಿ, ಕುಣಿದು ಕುಪ್ಪಳಿಸಿ ಹೋಗುವ ಪ್ರವಾಸಿಗರು, ಗಿರಿಜನರ ಸಂಸ್ಕೃತಿಯನ್ನು ಮನರಂಜನೆಯ ಸರಕಾಗಿ ನೋಡುತ್ತಿರುವುದು ದುರಂತ. ಅರಕುವಿನ ಚೆಲುವು ಮಾಸಲು ಗಣಿಗಾರಿಕೆ ಮತ್ತು ಪ್ರವಾಸಿಗರ ಹಾವಳಿ ಕಾರಣ.

ನಿಸರ್ಗದ ಮಡಿಲಿನಲ್ಲಿ ಸದಾ ಕಾಲ ಕಳೆಯುವ, ಗಿರಿಜನ ಸಂಸ್ಕೃತಿಯನ್ನು ಇಂದಿಗೂ ಜೀವಂತವಾಗಿಟ್ಟಿರುವ ಹಳ್ಳಿಗರು ಅರಕು ಪಟ್ಟಣದಿಂದ ಏನೆಲ್ಲಾ ಕೊಂಡೊಯ್ಯಬಹುದು‌ ಎಂಬ ಕುತೂಹಲ ನನಗಿತ್ತು. ಸಂತೆಯಿಂದ ಊರಿನ ಕಡೆಗೆ ಹೊರಟ ಗುಂಪೊಂದನ್ನು ನಿಲ್ಲಿಸಿ, ಅವರ ಬ್ಯಾಗಿನಲ್ಲಿ ಇಣುಕಿದೆ. ಪೇಯದ ಬಾಟಲ್, ಸೋಪು, ಕ್ರೀಂ, ಚಿಪ್ಸ್ ಪ್ಯಾಕೆಟ್, ಆ್ಯಪಲ್, ಎಣ್ಣೆ, ಪ್ಲಾಸ್ಟಿಕ್ ಪೊಟ್ಟಣಗಳು ಕಣ್ಣಿಗೆ ಬಿದ್ದವು. ನಾಗರಿಕ ಬದುಕಿನ ಅನಿಷ್ಟಗಳೆಲ್ಲಾ ಸ್ವರ್ಗದಂತಹ ಹಳ್ಳಿಗಳಿಗೆ ಹೋಗುವುದು ಕಂಡು ಪಿಚ್ಚೆನ್ನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.