ಜಗತಃಪಿತರೌ ವಂದೇ, ಪಾರ್ವತಿ ಪರಮೇಶ್ವರೌ.... ಅಂತ ಸ್ತೋತ್ರ ಕೇಳ್ತಾ, ಹಾಡ್ತಾ ಬೆಳೆದವರು ನಾವು. ಪಾರ್ವತಿ ಪತಿ ಈಶ್ವರ, ಅವನು ಕೈಲಾಸದಲ್ಲಿ ಇದ್ದಾನೆ. ಕೈಲಾಸದಲ್ಲಿ ಶಿವ ಗಣಗಳು, ದೇವತೆಗಳು ನೆಲೆಸಿದ್ದಾರೆ. ಕೈಲಾಸಎಂದರೆ ಹಿಮಾಲಯದ ಪರ್ವತ ಶ್ರೇಣಿ.. ಇಂಥ ಅನೇಕ ಕಥೆಗಳನ್ನು ಕೇಳಿದ್ದೆವು. ಹೀಗಾಗಿ ಕೈಲಾಸ ಎಂದ ಕೂಡಲೇ ಮನಸ್ಸು ಇಂಥ ಕಥೆಗಳನ್ನು ಹೇಳುತ್ತಿತ್ತು.
ಮನಸ್ಸಿನ ಕಥೆ ಕೇಳುತ್ತಲೇ, ಒಮ್ಮೆ ಹಿಮಾಲಯ, ಮಾನಸ ಸರೋವರ, ಕೈಲಾಸ ಯಾತ್ರೆಯ ಕನಸುಕಂಡೆ. ಕನಸು ಕಂಡಿದ್ದಷ್ಟೇ ಅಲ್ಲ, ಒಂದು ತಂಡ ಮಾಡಿಕೊಂಡು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಲಖನೌ ವಿಮಾನ ಏರಿ ಹೊರಟೇಬಿಟ್ಟೆವು. ವಿಮಾನದಲ್ಲಿ ಸೀಟಿಗೆ ಒರಗಿ ಕುಳಿತಾಗ, ಮನಸ್ಸು ಹಿಮಾಲಯದಲ್ಲಿ ಮಗ್ನವಾಗಿತ್ತು.
ಬೆಳಿಗ್ಗೆ 9 ಗಂಟೆ ಸುಮಾರಿಗೆ ಲಖನೌ ವಿಮಾನ ನಿಲ್ದಾಣದಲ್ಲಿಳಿದು, ಅಲ್ಲಿಂದ ಬಸ್‌ನಲ್ಲಿ ನೇಪಾಲಗುಂಜ್ ಕಡೆ ಪ್ರಯಾಣ. ಸುಮಾರು 195 ಕಿ.ಮೀ ದೂರ. ಆರರಿಂದ ಏಳು ಗಂಟೆಯ ದಾರಿ. ಬಸ್ಸು ಬಾರಬಂಕಿ, ರಾಮನಗರ್, ಕೈಸರಗಂಜ್, ಫಾಕಾರಪುರ್, ಮಾಹ್ಸಿ.. ದಾಟುತ್ತಿತ್ತು. ವಿಮಾನದಲ್ಲಿ ಹೋಗುವ ಸೌಲಭ್ಯವೂ ಇದ್ದರೂ, ಬಸ್‌ನಲ್ಲಿ ಹೋಗುವುದೇ ಒಂದು ವಿಶೇಷ ಅನುಭವ.
ಕಣಿವೆ ದಾರಿ ಸವೆಸಿ, ನೇಪಾಲಗುಂಜ್ ತಲುಪಿದಾಗ ರಾತ್ರಿಯಾಗಿತ್ತು. ಅಲ್ಲಿ ಉಳಿದುಕೊಳ್ಳಲು ಒಳ್ಳೆ ವ್ಯವಸ್ಥೆ ಇತ್ತು. ವ್ಯವಸ್ಥೆ ಉತ್ತಮ ಎನ್ನುವುದಕ್ಕಿಂತ ಜೇಬಿಗೆ ತಕ್ಕ ಗೂಡು. ಗೂಡಿಗೆ ತಕ್ಕ ಹಾಡು ಎನ್ನಿ.
ನೇಪಾಲ್‌ಗಂಜ್‌ನಲ್ಲಿ ಬಾಗೇಶ್ವರಿ ದೇವಾಲಯ ಪ್ರಮುಖ ಆಕರ್ಷಣೆ. ಸರೋವರದ ಮಧ್ಯೆ ಜಂಗಿ ಮಹಾದೇವ(ಮೀಸೆ ಹೊತ್ತ ಮಹಾದೇವ) ದೇವಾಲಯವಿದೆ. ಅದರೊಳಗಿನ ಲಯಬದ್ಧ ಘಂಟಾನಾದ ಕಿವಿ, ಮನಸನ್ನು ಸೆಳೆಯಿತು. ಕತ್ತು ಹೊರಳಿಸಿದ ನೋಡಿದರೆ.. ಘಂಟೆ ಬಾರಿಸಲೆಂದೇ ಪಾಳಿ ಕೆಲಸ ಮಾಡುವ ‘ಘಂಟಲ್ ಮ್ಯಾನ್’ಗಳು. ತಾಳಬದ್ಧವಾಗಿ ಘಂಟೆ ಬಾರಿಸುವ ಅವರ ಸಂಗೀತ ಜ್ಞಾನ ಮೆಚ್ಚುವಂತದ್ದು.
ಸಿಮಿಕೋಟ್ ಎಂಬ ಸಿರಿಯತ್ತ..
ನೇಪಾಲಗುಂಜ್‌ನಿಂದ ಖಾಸಗಿ ವಿಮಾನದಲ್ಲಿ ಸೀಮಿಕೋಟ್‌ನತ್ತ ಪಯಣ. ಈ ವಿಮಾನದಲ್ಲಿ 20, 22 ಮಂದಿಗಷ್ಟೇ ಅವಕಾಶ. ಹೊರಗಿನ ಪ್ರಕೃತಿ ವೀಕ್ಷಣೆಗೆಂದೇ ಇಕ್ಕೆಲಗಳಲ್ಲಿ ಒಂದೊಂದೇ ಸೀಟು. ವಿಮಾನ ಹೊರಡುವುದು ಹವಾಮಾನ ಅನುಸರಿಸಿ. ಕೆಲವೊಮ್ಮೆ ದಿನಗಟ್ಟಲೆ ನೇಪಾಲಗುಂಜ್‌ನಲ್ಲಿ ಕಾಯಬೇಕಾಗುತ್ತದೆ. ಸರದಿ ಪ್ರಕಾರ ನಮ್ಮ ವಿಮಾನ ಹೊರಟಿತು. ಅಲ್ಲಿಂದ ಅರ್ಧ ಮುಕ್ಕಾಲು ಗಂಟೆಯಲ್ಲಿ ಸೀಮಿಕೋಟ್ ಎಂಬ ಪುಟ್ಟ ಪಾತರಗಿತ್ತಿಯಂಥ ಹಳ್ಳಿ ಸೇರಿದೆವು. ಆಹಾ..ಹಸಿರೋ ಹಸಿರು.. ಬೆಟ್ಟಗುಡ್ಡಗಳು..ಅಲ್ಲಲ್ಲಿ ನೀರಿನಧಾರೆ.. ಸೀಮಿಕೋಟ್ (see me and quote) ಎನ್ನುವ ಪುಟ್ಟ ತಂಗುದಾಣದಂತಹ ಹಳ್ಳಿ.
ಸೀಮಿಕೋಟ್‌ನಿಂದ ಹಿಲ್ಸಾ ಎಂಬ ಮಾಂತ್ರಿಕ ಸ್ಥಳಕ್ಕೆ ಹೆಲಿಕಾಪ್ಟರ್‌ನಲ್ಲಿ ಹೊರಟೆವು. ಇಲ್ಲಿಗೆ ಹೋಗುವ ಮುನ್ನ ಪಾಸ್‌ಪೋರ್ಟ್, ‘ಪ್ರವಾಸಿಗ’ ಎಂಬ ಮುದ್ರೆ, ಚೀಟಿ ಅಗತ್ಯ. ಆ ಎಲ್ಲ ಪ್ರಕ್ರಿಯೆ ಮುಗಿಸಿ, ಹೆಲಿಕಾಪ್ಟರ್ ಹತ್ತಿ ಕುಳಿತಾಗ ರೋಮಾಂಚನ. ಅದರಲ್ಲಿ ಒಮ್ಮೆಗೆ 5 ಜನ ಮಾತ್ರ ಹೋಗಲು ಅವಕಾಶ. ನಾವು 35 ಮಂದಿ ಇದ್ದರೆ, 6 ಟ್ರಿಪ್ ಆಗುತ್ತದೆ. ಇರುವುದು 2 ಹೆಲಿಕಾಪ್ಟರ್ ಮಾತ್ರ.
ಬಾನ ದಾರಿಯಲ್ಲಿ ರಮ್ಯ ನೋಟ...
ಹೆಲಿಕಾಪ್ಟರ್‌ನಲ್ಲಿ ಅರ್ಧ ಗಂಟೆಯಲ್ಲಿ ಹಿಲ್ಸಾ ತಲುಪಿದೆವು. ಆ ಬಾನ ದಾರಿಯಲ್ಲಿ ಕಂಡಿದ್ದು ಅದ್ಭುತ ರಮ್ಯ ನೋಟ. ಪುಸ್ತಕದ ಪುಟ ತಿರುವಿದ ಹಾಗೆ, ಸಿನಿಮಾದ ದೃಶ್ಯಾವಳಿ ಬದಲಾದ ಹಾಗೆ, ಕ್ಷಣ ಕ್ಷಣ ವಿವಿಧ ಭಾವ ಪ್ರಪಂಚ! ಪ್ರಕೃತಿಯ ಹಸಿರು ಪುಸ್ತಕಗಳನ್ನು ಜೋಡಿಸಿದ್ದಾರೆ ಎನ್ನಿಸುತ್ತಿತ್ತು. ನಡುವೆ ಓಡುತ್ತಿರುವ ನೀರು ಕಂಡು, ಕುವೆಂಪು ಅವರ ‘ದೇವರು ರುಜು ಮಾಡಿದನು..’ ಕವಿತೆಯ ಸಾಲುಗಳು ನೆನಪಾದವು.
ಹೆಲಿಕಾಪ್ಟರ್‌ನಿಂದ ಯಾವುದೋ ಮತ್ತಿನಲ್ಲಿ ಸಿಕ್ಕವರಂತೆ ಕೆಳಗೆ ಇಳಿದಾಗ ‘ಇದು ಚೀನಾ.. ಹುಷಾರು. ಅಲ್ಲಿ ಕಾಣುವ ಇಮಿಗ್ರೇಷನ್ ಕಟ್ಟಡದ ಫೋಟೊ ತೆಗೆಯಬೇಡಿ. ಇಲ್ಲಿ ಚೆಕ್ ಮಾಡ್ತಾರೆ’ ಎಂದು ಚೀನಿ ಭಾಷೆಯಲ್ಲಿ ಹೇಳುತ್ತಿದ್ದಾಗ, ಅರ್ಥ ಮಾಡಿಕೊಳ್ಳಲು ಹೆಣಗಾಡುವಂತಾಯಿತು.
ಅಲ್ಲಿಯವರೆಗೆ ಹಸಿರು ಕಂಡ ನಮಗೆ ಹಿಲ್ಸಾ ಎಂಬ ಅಗಾಧ ಪರ್ವತ ಕಂಡಾಗ, ಆ ಪರ್ವತದ ತುಂಬಾ ಮರಳಿನ ಕಣಗಳು ತುಂಬಿವೆ ಎನಿಸಿತು. ಸ್ವಲ್ಪ ಹಸಿರು, ಸ್ವಲ್ಪ ಮರಳು, ನೀರಿನ ಸ್ವಚ್ಛಂದ ಶುಭ್ರ ಝರಿ, ಉಲ್ಲಾಸ ತುಂಬಿತು.
ಚುಟ್ಟಾ ಸೇದುತ್ತಾ ಕಾವಿ ಧರಿಸಿ ಓಡಾಡುತ್ತಿರುವ ಜೋಗಿಗಳು, ಇರುವ ಒಂದೆರಡು ತಂಗುದಾಣಗಳ ನಿರ್ವಾಹಕರು ಕಂಡರು. ಇಲ್ಲಿನ ಝರಿ ನೀರ ಕಲರವದ ಪಿಸುಮಾತನ್ನು ಕಿವಿಗೊಟ್ಟು ಕೇಳಬಹುದು, ಮೈಮರೆತು ಕೂಗಬಹುದು.
ನೇಪಾಳದ ಗಡಿಭಾಗದಲ್ಲಿ...
ಅದು ನೇಪಾಳ, ಚೀನಾದ ಗಡಿಭಾಗ. ಕೋಶಿ ನದಿ ಎರಡು ದೇಶಗಳನ್ನು ಬೇರ್ಪಡಿಸುವಂತೆ ಹರಿಯುತ್ತಿದೆ. ಸೇತುವೆಯ ಅತ್ತ ಕಡೆ ಚೀನಾ..ಇತ್ತ ಕಡೆ ನೇಪಾಳ. ‘ಮಲ್ಲಿಗೆ ಒಂದೂರು, ಸಂಪಿಗೆ ಒಂದೂರು ನಡುವಲ್ಲೀ ಸೇತುವೆಯೂ..’ಎಂಬ ಗೀತೆ ಸಾಲಿನ ಹಾಗೆ ಇದು ನಿಜವಾಗಿ ಕಬ್ಬಿಣದ ಉಯ್ಯಾಲೆ. ಈ ಸೇತುವೆ ದಾಟಿ, ಪುನಃ ಬಸ್‌ನಲ್ಲಿ ಪ್ರಯಾಣ.
ಈ ಹಿಲ್ಸಾ ಸಮುದ್ರಮಟ್ಟಕ್ಕಿಂತ 12000 ಅಡಿ ಎತ್ತರ ಪ್ರದೇಶ. ಇಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತದೆ. ಮನಸು ಕೈಲಾಸದ ಧ್ಯಾನದಲ್ಲಿ ತೊಡಗಿದರೆ, ದೇಹ ಶ್ರುತಿ ತಪ್ಪುತ್ತದೆ. ಹೊಟ್ಟೆ ತಳಮಳ, ತಲೆನೋವು, ಕೈ ಕಾಲಿನ ಮರಗಟ್ಟುವಿಕೆ.. ಇಲ್ಲಿಂದಲೇ ದೇಹದ ಅಸಹಕಾರ ಚಳುವಳಿ ಶುರು. ಹೇಗೋ ಸಂಭಾಳಿಸಿಕೊಂಡು, ಒಂದು ದಿನ ಕಳೆದು, ಎತ್ತರಕ್ಕೆ, ಎತ್ತರ ಎತ್ತರಕ್ಕೆ ಹೋಗುವಾ ಬಾರಾ ಎಂದು ಹೊರಡಬೇಕು. ಸಾಗುತ್ತಾ ಸಾಗುತ್ತಾ, ‘ಇನ್ನೂ ಎಷ್ಟು ದೂರ ಹೋಗಬೇಕಪ್ಪಾ’ ಎಂಬ ಪ್ರಶ್ನೆಗೆ, ಗೈಡ್ ಧ್ವನಿ, ಸ್ವರ್ಗಕ್ಕೆ ಎರಡೇ ಗೇಣು ಎನ್ನುವಂತೆ ‘ಇನ್ನೆರಡೇ ಗಂಟೆ..’ ಎಂದು ಉತ್ತರಿಸಿತು.
ಬಸ್‌ನಲ್ಲಿ ಹೋಗುತ್ತಾ ಮೈ ಮರೆತು ಸೀಟಿಗೆ ಒರಗುವಷ್ಟರಲ್ಲಿ ಎದುರಿಗೆ ನೀಲಿ ಆಕಾಶ ಕೆಳಗೆ ಬಂದಿರುವಂತೆ ಕಂಡಿತು. ಹಾಗೆ ಯೋಚಿಸುತ್ತಿದ್ದಾಗ ‘ನೋಡಿ, ಅದೇ ..ಅದೇ.. ಅಲ್ಲಿ ಕಾಣೋದೆ ರಾಕ್ಷಸ ಸರೋವರ‘ ಎಂಬ ದನಿ ಕಿವಿಗೆ ಬಿತ್ತು.
ರಾಕ್ಷಸ ಸರೋವರ..
ಮಾನಸ ಸರೋವರದ ಒಂದು ಅಂಗವಾಗಿ ನಮಗೆ ಮೊದಲು ಕಂಡಿದ್ದು ರಾಕ್ಷಸ ಸರೋವರ ಎಂದು ಹೇಳುವ ಭಾಗ. ರಾವಣ ಶಿವನ ಆತ್ಮಲಿಂಗ ತರಲು ಇಲ್ಲೇ ತಪಸ್ಸು ಮಾಡಿದ್ದ. ಮಹಾಭಕ್ತ ರಾವಣ, ಶಿವನ ಸ್ತೋತ್ರ ಹೇಳುತ್ತಾ ತನ್ನ ಒಂದೊಂದು ತಲೆ ಕಡಿದು ಆಹುತಿ ಕೊಡುವಾಗ, ಶಿವ ಓಡಿ ಬರುತ್ತಾನೆ. ಭಕ್ತನಿಗೆ ತನ್ನನ್ನೇ ಅರ್ಪಣೆ ಮಾಡಿಕೊಳ್ಳುತ್ತಾನೆ.. ಎಂಬ ಕಥೆ ಈ ಸರೋವರದ ಬಳಿ ತೆರೆದುಕೊಳ್ಳುತ್ತದೆ.
ಇಲ್ಲಿಂದ ಅರ್ಧ ಗಂಟೆ ಪ್ರಯಾಣಿಸಿದರೆ ಸರೋವರದ ಸಮತಟ್ಟು ಪ್ರದೇಶದಲ್ಲಿ ಸಣ್ಣ ಸಣ್ಣ ಮನೆಗಳು ಕಾಣಿಸುತ್ತವೆ. ಸಮುದ್ರ ಮಟ್ಟಕ್ಕಿಂತ ಹದಿನೈದು ಸಾವಿರ ಅಡಿಗೂ ಹೆಚ್ಚು ಎತ್ತರವಿರುವ ಈ ಪ್ರದೇಶದಲ್ಲಿ ಆಮ್ಲಜನಕ ಮಟ್ಟ ಇನ್ನೂ ಕಡಿಮೆಯಾಗುತ್ತದೆ. ಉಸಿರಾಟ ಕಷ್ಟ. ನೆಲದ ಮೇಲೆ ಏನಾದರೂ ವಸ್ತುಗಳು ಬಿದ್ದರೆ, ಆ ವಸ್ತು ತೆಗೆದುಕೊಳ್ಳಲು ನೆಲಕ್ಕೆ ಬಾಗಿ ಎದ್ದರೆ ಮೂರು ಕಿ.ಮೀ ನಡೆದಷ್ಟು ಉಸಿರು ಉಕ್ಕಿ ಬರುತ್ತದೆ. ದೇಹ ಭಾರ ಎನಿಸಿ ಹೆಜ್ಜೆ ನಿಧಾನ ಆಗುತ್ತದೆ. ಹಾಗಾಗಿಯೇ ಇಲ್ಲಿ ಹೆಜ್ಜೆಗೆ ಅರ್ಥ, ಉಸಿರಿಗೆ ಸಾರ್ಥಕತೆ.
ಸರೋವರದ ಸುತ್ತ ಪ್ರದಕ್ಷಿಣೆ
ನಾವು ನಿಂತಿದ್ದ ಜಾಗ ಪಶ್ಚಿಮ ಟಿಬೆಟ್‌ಗೆ ಸೇರುತ್ತಿತ್ತು. ಸುತ್ತಲೂ ಗುರ್ಲಾ, ಮಾಂಧಾತ ಪರ್ವತಗಳು , ಕೈಲಾಸ ಪರ್ವತ ಶಿಖರಗಳು ಕಾಣುತ್ತವೆ. ಸುತ್ತಲೂ ನೀರು, ನೀಲಿ ಛಾಯೆ. ಮಾನಸ ಸರೋವರದ ಪರಿಕ್ರಮ ಅಂದರೆ ಇಡೀ ಸರೋವರದ ಪ್ರದಕ್ಷಿಣೆ. ಬಸ್ ಮೂಲಕ ಸರೋವರದ ಸುತ್ತಾ ಎರಡು ಗಂಟೆಗಳ ಕಾಲ ಸುಮಾರು 54 ಕಿ. ಮೀ.ದೂರ ಪ್ರದಕ್ಷಿಣೆ ಹಾಕಬೇಕು. ಇದೊಂದು ಅದ್ಭುತ ಭಾವ.
ಇಲ್ಲಿ ಮೈ ಕೊರೆಯುವ ಚಳಿಯಲ್ಲೂ ನೀರನ್ನು ಮುಟ್ಟಬೇಕು ಎನ್ನುವ ಆಸೆ ಮೂಡುತ್ತದೆ. ಸ್ನಾನ ಮಾಡುವುದೇ ಬೇಡವೇ ಎಂಬ ದ್ವಂದ್ವ ಕಾಡುತ್ತದೆ. ಎಲ್ಲ ಕಂಡರೂ, ಎಲ್ಲರ ನಡುವೆ ಇದ್ದರೂ ನಡುಗುತ್ತಿದ್ದರೂ, ನಗುವ ಮುಗಿಲು, ನೀರ ನೆಲ.. ಮನಸ್ಸು ನಿರ್ಮಲ.
ಇಲ್ಲಿಂದ (ಮಾನಸ ಸರೋವರ) ನಿಂತು ಉತ್ತರಕ್ಕೆ ನೋಡಿದರೆ ಕೈಲಾಸ ಪರ್ವತ ಕಾಣಿಸುತ್ತದೆ. ಮಾನಸದ ಮಡಿಲಿನಿಂದ ಕೈಲಾಸ ಕಣ್ತುಂಬಿಕೊಳ್ಳುವುದು.. ಪದಗಳಿಗೆ ತರಲಾರದ ಅನುಭೂತಿ. ಮೂಕವಿಸ್ಮಿತ ಭಾವ.
ಡಾರ್ಚೆನ್ ಎಂಬ ಪೆಟ್ಟಿಗೆಯಲ್ಲಿ. ಕೈಲಾಸದ ಕನವರಿಕೆ..
ಮಾನಸ ಸರೋವರ ಯಾತ್ರೆಯ ಮೊದಲ ಹಂತ ಮುಗಿದಿತ್ತು. ರಾಕ್ಷಸಸರೋವರ ಭಾಗಕ್ಕೆ ನಾವು ತಲುಪಿದಾಗ, ವಿಪರೀತ ಚಳಿ. ಚಳಿ ತಡೆಯಲು ಉಣ್ಣೆ ಬಟ್ಟೆ, ಥರ್ಮಲ್ಸ್, ತಲೆಗೆ ಟೋಪಿ, ಜರ್ಕಿನ್, ಕೈಗಳಿಗೆ ಗವಸು, ಕಾಲುಚೀಲ, ಶೂ ಧರಿಸಿ ಕುಳಿತಿದ್ದೆವು.
ಮಾನಸ ಸರೋವರದ ಹಲವು ಭಾಗಗಳಲ್ಲಿ ತಾತ್ಕಾಲಿಕ ಟೆಂಟ್ ಅಥವಾ ತಂಗು ಚಾವಡಿ ನಿರ್ಮಿಸಿದ್ದಾರೆ. 3 ಜನ, 4 ಜನ ಹಂಚಿಕೊಂಡು ಕೊಠಡಿ ಗಳನ್ನು ಪಡೆಯಬೇಕು. ಒಂದು ರಾತ್ರಿ ಇಲ್ಲಿ ನಿಲುಗಡೆ.
ಈ ಮಾನಸ ಸರೋವರ ದೇವತೆಗಳು ಜಳಕ ಮಾಡುವ ಪವಿತ್ರ ಸ್ಥಳ. ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ಬೆಳಗಿನ 3 ಗಂಟೆಗೆ ನಕ್ಷತ್ರ ರೂಪದಲ್ಲಿ ದೇವತೆಗಳು ಸಂಚಾರ ಬರುತ್ತಾರೆ ಎಂಬ ನಂಬಿಕೆ ಇದೆ. ಕೆಲವರಿಗೆ ಬೆಳಕು ಕಾಣಿಸುತ್ತದೆ ಅಂತೆ, ಕೆಲವರಿಗೆ ಶಬ್ದ ಕೇಳಿಸುತ್ತದೆ ಅಂತೆ,ಮತ್ತೆ ಕೆಲವರಿಗೆ ವಿಭಿನ್ನ ಅನುಭವ .. ಹೀಗೇ. ಅದು ಅವರವರ ನಂಬಿಕೆ, ಭಕ್ತಿ, ಅನುಭವ, ಅನುಭಾವ. ಯಾವುದನ್ನೂ ಅಲ್ಲಗೆಳೆಯಲು ಆಗದು.
ಆದರೆ, ಮಾನಸ ಸರೋವರದಲ್ಲಿ ಮುಳುಗಿ ಸ್ನಾನ ಮಾಡಲು ಈಗ ಅನುಮತಿ ಇಲ್ಲ. ಬಕೆಟ್‌ಗಳಲ್ಲಿ ನೀರು ತುಂಬಿ ಕೊಡುತ್ತಾರೆ. ಸಮೀಪದ ಟೆಂಟ್‌ನಲ್ಲಿ ಅದನ್ನು ಸುರಿದುಕೊಂಡು ನಡುಗುತ್ತ ಪಾವನರಾದೆವು ಎಂದುಕೊಳ್ಳಬೇಕು. ಇದೊಂದು ತರಹ ಆನಂದಾತಿರೇಕದ ಅಮಾಯಕ ಮಾಯೆ. ವಿಶೇಷ ಎಂದರೆ, ಮಾನಸ ಸರೋವರದಲ್ಲಿ ಎಂಥ ಪ್ರಕೃತಿ ವಿಕೋಪದಲ್ಲೂ ಇಲ್ಲಿನ ನೀರು ತಿಳಿಯಾಗೇ ಇರುತ್ತದೆ. ಈ ಸರೋವರದ ದಡದಲ್ಲಿಯೇ ಕುಬೇರನ ಅಲಕಾವತಿ ಪಟ್ಟಣ ಇತ್ತು ಎನ್ನುತ್ತಾರೆ.
ಅಂದ ಹಾಗೆ, ಮಾನಸ ಸರೋವರದ ಉತ್ತರಕ್ಕೆ ಕೈಲಾಸ ಪರ್ವತ ಕಾಣಿಸುತ್ತದೆ. ಮಾನಸದ ಮಡಿಲಿನಿಂದ ಕೈಲಾಸ ಕಣ್ತುಂಬಿಕೊಳ್ಳುವುದು. ಪದಗಳಿಗೆ ತರಲಾರದ ಅನುಭೂತಿ. ಮೂಕವಿಸ್ಮಿತ ಭಾವ. ಆ ಪರ್ವತ ನೋಡಲು ನಾವು ಡಾರ್ಚೆನ್ ಎಂಬ ಪುಟ್ಟ ಊರನ್ನು ದಾಟಬೇಕಿತ್ತು. ಹೀಗಾಗಿ ನಾವು ಮಾನಸ ಸರೋವರದಿಂದ ಹೊರಟು ನಾವು ಡಾರ್ಚೆನ್ ಎಂಬ ಪುಟ್ಟ ಪೆಟ್ಟಿಗೆ ಊರಿಗೆ ತಲುಪಿದೆವು.
ಡಾರ್ಚೆನ್ಎಂಬ ಪೆಟ್ಟಿಗೆಯಲ್ಲಿ
ಮಾನಸ ಸರೋವರ ಸಮುದ್ರಮಟ್ಟಕಕ್ಕಿಂತ 15ಸಾವಿರ ಅಡಿ ಎತ್ತರದಲ್ಲಿ ಇದ್ದರೆ, ಕೈಲಾಸ 20 ಸಾವಿರ ಅಡಿ ಎತ್ತರ ಪ್ರದೇಶದಲ್ಲಿದೆ. ಇಲ್ಲಿ ಆಮ್ಲಜನಕದ ಮಟ್ಟ ಕಡಿಮೆ ಇರುತ್ತದೆ. ಹಾಗಾಗಿ ಕೆಲವು ಮುಂಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ.
ಇಲ್ಲಿ ಯಾತ್ರೆ ಮಾಡುವವರಿಗೆ ಡಾರ್ಚೆನ್ ಎಂಬಲ್ಲಿ ಬೇಸ್ ಕ್ಯಾಂಪ್ ಇರುತ್ತದೆ. ಈ ಕ್ಯಾಂಪ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಟ್ಟು, ನಿಮ್ಮ ದೇಹ ಈ ವಾತಾವರಣದಲ್ಲಿ ಪ್ರವಾಸ ಮಾಡಲು ಸೂಕ್ತವಾಗಿದೆ ಎಂದರೆ, ಪ್ರವಾಸಕ್ಕೆ ಅನುಮತಿ ಸಿಗುತ್ತದೆ. ಹಾಗಾಗಿ, ನಾವೆಲ್ಲರೂ ಇಲ್ಲಿ ತಪಾಸಣೆಗೆ ಒಳಪಟ್ಟೆವು. ಇಲ್ಲಿ ಮಾತ್ರವಲ್ಲ, ಇದಕ್ಕೂ ಮೊದಲು ದಾಟಿ ಬಂದ ತಾಕ್ಲಾಕೋಟ್‌ನಲ್ಲೂ ಉಸಿರಾಟ, ರಕ್ತದೊತ್ತಡ, ಇವುಗಳ ಪರೀಕ್ಷೆ ನಡೆಸಿದ್ದರು. ಅಲ್ಲಿ ನಡೆಯುವುದು ಮಧ್ಯಂತರ ತಪಾಸಣೆ. ಇಲ್ಲಿ ನಡೆಸುವುದು ಅಂತಿಮ ಪರೀಕ್ಷೆ ಇದ್ದ ಹಾಗೆ. ನಾವು ಈ ಎಲ್ಲ ಪರೀಕ್ಷೆಗೆ ಒಳಪಟ್ಟು ಮುನ್ನಡೆದವು.
ಸಮುದ್ರ ಮಟ್ಟಕ್ಕಿಂತ ಅತಿ ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕದ ಕೊರತೆ ಇರುತ್ತದೆ. ಉಸಿರಾಡುವಾಗ ನಾವು ಒಳಗೆ ತೆಗೆದುಕೊಳ್ಳುವ ಗಾಳಿ ಕಡಿಮೆ ಆಗಿ, ದೇಹದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ ಎತ್ತರದಲ್ಲಿ ಒಂದೊಂದು ದಿನ ಕಳೆದು, ನಿಧಾನವಾಗಿ ವಿಶ್ರಾಂತಿ ಪಡೆಯುತ್ತಾ ಸಾಗಿದೆವು.
ಇವತ್ತು ’ರೆಸ್ಟ್’ ಎಂದು ಪ್ರವಾಸಿ ನಿರ್ವಾಹಕ (tour operator) ಹೇಳಿದಾಗ ನಮಗೆ ಟೈಮ್ ವೇಸ್ಟ್ ಆಯ್ತಲ್ಲ ಎನ್ನಿಸಿತು. ಆದರೆ, ವಿಶ್ರಾಂತಿ ಇಲ್ಲದೇ ನಡೆಯುವುದು ಕಷ್ಟ ಎಂದು ಗೊತ್ತಾದ ಮೇಲೆ ಒಪ್ಪಿಕೊಂಡವು.
ಶೌಚಾಲಯವೇ ಇಲ್ಲ...!
ಬೆಳಿಗ್ಗೆ ಎದ್ದು, ’ಮುಂಜಾನೆಯ ನಿತ್ಯ ಕರ್ಮ’ ಮುಗಿಸಲು ಬಹಳ ಫಜೀತಿಪಡುತ್ತಿದ್ದೆವು. ಏಕೆಂದರೆ, ಮಾನಸ ಸರೋವರ ಮತ್ತು ಕೈಲಾಸ ಎರಡೂ ಕಡೆ ಶೌಚಾಲಯ ವ್ಯವಸ್ಥೆಯೇ ಇಲ್ಲ. ಬಯಲೇ ಶೌಚಾಲಯ. ಈ ಕುರಿತು ನಾವು ಸ್ಥಳೀಯರನ್ನು ವಿಚಾರಿಸಿದೆವು. ಅದಕ್ಕೆ ಅವರು ಹೇಳಿದರು, ’ಇಲ್ಲಿ ಡ್ರೈನೇಜ್ ಪೈಪ್ ಹಾಕಿದರೆ ತ್ಯಾಜ್ಯ ನೀರನ್ನು ಎಲ್ಲಿಗೆ ಬಿಡುತ್ತೀರಿ ? ಹಾಗಾಗಿ ಇದು ಪ್ರಕೃತಿ ಜೊತೆ ಹೋಗಿಬಿಡಬೇಕು’ ಎಂದರು. ಹೀಗಾಗಿ ಮಾನಸ ಸರೋವರ ಯಾತ್ರೆ ಉದ್ದಕ್ಕೂ ನಾವು ಹೆಚ್ಚು ದ್ರವ ಆಹಾರ ಸೇವಿಸಿದೆವು.
ಡಾರ್ಚೆನ್ ನಿಂದ ಕೈಲಾಸದೆಡೆಗೆ...
ಡಾರ್ಚೆನ್‌ನಿಂದ ಕೈಲಾಸ ಪರ್ವತದೆಡೆಗೆ ಹೊರಟೆವು. ಬ್ಯಾಕ್‌ಪ್ಯಾಕ್ ಹೆಗಲೇರಿಸಿದೆವು. ಅದರ ತುಂಬಾಅಗತ್ಯ ಮಾತ್ರೆ, ಒಂದು ಲೀಟರ್ ನೀರು, ಗ್ಲುಕೋಸ್ , ಶಕ್ತಿವರ್ಧಕ ಪುಡಿಗಳು ಅಥವಾ ಎನರ್ಜಿ ಟಾನಿಕ್‌ಗಳು ಇಟ್ಟುಕೊಂಡಿದ್ದೆವು. ಜತೆಗೆ ಒಂದು ಜೊತೆ ಬಟ್ಟೆ, ರೈನ್ ಕೋಟ್ ತುಬಿಕೊಂಡಿದ್ದೆವು. ಇವೆಲ್ಲದ ಜತೆಗೆ ಕೈಯಲ್ಲೊಂದು ಊರುಗೋಲು.
ಇಲ್ಲಿ ನಡೆಯುವಾಗ ಎಂಥಾ ನಾಸ್ತಿಕರಾದರೂ ಹಾಯ್, ಹಲೋ ಎಂದು ಹೇಳುವಷ್ಟು ಸಹಜವಾಗಿ, ಓಂ ನಮಃ ಶಿವಾಯ ..ಹೇಳುವ ಹಾಗಾಗುತ್ತದೆ. ಎದುರಿಗೆ ಕಾಣೋ ಪ್ರತಿ ವ್ಯಕ್ತಿ ಹೇಳುವುದೇ ’ಓಂ ನಮಃ ಶಿವಾಯ‘. ಅಲ್ಲಿ ಎಲ್ಲರಿಗೂ ಅರ್ಥ ಆಗುವುದು, ಎಲ್ಲರನ್ನೂ ಬೆಸೆಯುವುದು ಇದೇ ಮಹಾಮಂತ್ರ. ವಿದೇಶಿಯರು ಸ್ಥಳೀಯ ಪುರಾಣ ಕಥೆಗಳ ಬಗ್ಗೆ, ರೀತಿ ನೀತಿಗಳ ಬಗ್ಗೆ ಅಪಾರ ಆಸಕ್ತಿ ತೋರುವುದನ್ನು ನೋಡಿದಾಗ ಸಂತಸ ಎನಿಸುತ್ತದೆ.
ಎಲ್ಲ ಸಿದ್ಧವಾದ ಮೇಲೆ ಡಾರ್ಚೆನ್ ಹೊಟೆಲ್ ಬಳಿ ಬಸ್ ಬಂದು ನಿಂತಿತು. ಅದು ನಮ್ಮನ್ನು ಆ ಹೋಟೆಲ್‌ನಿಂದ ಕೈಲಾಸ ದ ದ್ವಾರಕ್ಕೆ ಕರೆದೊಯ್ಯುಲು ಸಿದ್ಧವಾಗಿತ್ತು. ಬಸ್‌ನಲ್ಲಿ ಕುಳಿತಾಗ, ಆತಂಕ, ಸಂತೋಷ, ಸಂಭ್ರಮ, ಸಮ್ಮಿಶ್ರ ಭಾವ. ಇದು ಯುದ್ಧವೇ ಸರಿ. ನಮ್ಮ ಜೊತೆ ನಾವೇ ಮಾಡಬೇಕಾದ ಯುದ್ಧ. ದೇಹ ಮನಸುಗಳ ಯುದ್ಧ. ಪರಿಸರದ ಜೊತೆ ಬದುಕಲು ಮನಸನ್ನು ಹದಗೊಳಿಸುವ ಪ್ರಕ್ರಿಯೆ.
ಅಲ್ಲಿ ಹತ್ತಿ ಕುಳಿತು, ಇಪ್ಪತ್ತು ನಿಮಷ ಕಳೆದಿರಲಿಲ್ಲ, ಆಗಲೇ, ಬಸ್‌ನವ ‘ಬನ್ನಿ ಬನ್ನಿ ಇಳಿಯಿರಿ’ ಎಂಬ ಸೂಚಿಸಿದ. ಬಸ್ ಇಳಿದು ನಿಂತರೆ, ಸಮತಟ್ಟಾದ ವಿಶಾಲ ಪ್ರದೇಶ ಕಂಡಿತು. ಮಾರ್ಗದರ್ಶಿ, ’ಇದು ಕೈಲಾಸದ ದಿಕ್ಕು, ಯಮದ್ವಾರ ಇಲ್ಲಿಂದ ಒಳಗೆ ಹೋಗಿ’ ಎಂದು ತೋರಿಸುತ್ತಿದ್ದ. ಕಿವಿಯಲ್ಲಿ ಘಂಟೆ ಘಲ್ ಘಲ್ ನಾದ ಕೇಳಿಸುತ್ತಿತ್ತು. ಅಲ್ಲಿ ಯಾವ ದೇವಸ್ಥಾನವೂ ಕಾಣಿಸುತ್ತಿಲ್ಲ. ಆದರೆ ಈ ಘಂಟಾನಾದ ಎಲ್ಲಿಂದ ಬರುತ್ತಿದೆ ಎಂದು ಯೋಚಿಸಿದೆವು. ನೋಡಿದರೆ, ಅದು ಪ್ರವಾಸಿಗರನ್ನು ಹೊತ್ತೊಯ್ಯಲು ನಿಂತಿದ್ದ ಕುದುರೆ, ಹೇಸರಗತ್ತೆಗಳ ಕೊರಳಲ್ಲಿ ಕಟ್ಟಿದ ಗಂಟೆಗಳ ಸದ್ಧಗಾಗಿತ್ತು. ಅವರೇ ಆ ಕೈಲಾಸ ಪರ್ವತದ ಕಾಯಕ ಯೋಗಿಗಳು. ಈ ಕುದುರೆ, ಕತೆಗೆಗಳ ಬಾಗು , ಬಳುಕು, ಧಿಮಾಕು ನೋಡುವುದೇ ಚಂದ. ಕೆಲವು ಅನುಭವಸ್ಥ ಕುದುರೆಗಳು, ತಮ್ಮಷ್ಟಕ್ಕೇ ಮಾತಾಡುತ್ತಿವೆ ಎನ್ನಿಸುತ್ತದೆ. ಯುವ ಕುದುರೆಗಳು ತಂಟೆ ಮಾಡುವುದನ್ನು ತಡೆಯಲು, ಅವುಗಳ ಮಾಲೀಕರು ಹೆಣಗುತ್ತಿರುತ್ತಾರೆ.
ಶಿಸ್ತಿನ ಸವಾರಿ, ನಿರ್ವಹಣೆ
ಕುದರೆ ಸವಾರಿ ಮಾಡಲು ಯಾವುದೇ ಗದ್ದಲ ಗಲಾಟೆಯಾಗಬಾರದು ಎಂದು ಎಲ್ಲ ಚೀಟಿ ವ್ಯವಸ್ಥೆ ಮಾಡಿರುತ್ತಾರೆ. ಅಂದರೆ ಅಲ್ಲಿ ಇರುವ ಕುದುರೆಗಳು ಮತ್ತು ಬ್ಯಾಗ್ ಹೊರುವ ವ್ಯಕ್ತಿಗಳು, ಇಬ್ಬರಿಗೂ ಸಂಖ್ಯೆಗಳನ್ನು ಕೊಟ್ಟಿರುತ್ತಾರೆ. ಪ್ರತಿ ವ್ಯಕ್ತಿಗೆ ಒಂದು ಐಡೆಂಟಿಟಿ ನಂಬರ್ ಇರುತ್ತದೆ. ಚೀಟಿಗಳಲ್ಲಿ ಆ ಸಂಖ್ಯೆಗಳನ್ನು ಬರೆದು, ಬುಟ್ಟಿಗೆ ಹಾಕಿ ನಮ್ಮ ಮುಂದೆ ಹಿಡಿಯುತ್ತಾರೆ. ಎರಡು ಚೀಟಿ ಎತ್ತಬೇಕು. ಒಂದು ಕುದುರೆವಾಲಾ ಮತ್ತು ಕುದುರೆ. ಇನ್ನೊಂದು ನಮ್ಮ ಬ್ಯಾಗ್ ಹಿಡಿದು ನಮ್ಮೊಂದಿಗೆ ಬರುವ ಸಹಾಯಕ. ನಾವು ಎತ್ತಿದ ಚೀಟಿಯಲ್ಲಿ ಹೆಸರು ಇದ್ದವರು ನಮ್ಮ ಜೊತೆ ಆಗುತ್ತಾರೆ. ಓಂ ನಮಃ ಶಿವಾಯ.. ಎಂದು ಅವರು ದಾರಿ ತೋರಿದಂತೆ ನಡೆಯಬೇಕು. ಸುಸ್ತಾದರೆ ಕುದುರೆ ಏರಬೇಕು. ಕುದುರೆಗೆ ಸುಸ್ತಾದರೆ ಇಳಿಯಬೇಕು. ಹೀಗೆ ಆರಂಭ ಕೈಲಾಸ ಪರಿಕ್ರಮ.
ಮೊದಲ ದಿನ ಬೆಳಿಗ್ಗೆ 11.30 ಕ್ಕೆ ಯಮದ್ವಾರದಿಂದ ಕೈಲಾಸದ ಕಡೆ ಹೊರಟೆವು. ಸಂಜೆ 4 ಗಂಟೆ ಆಸುಪಾಸಿಗೆ ಕೈಲಾಸ ಪರ್ವತ ದ ಮುಂದೆ ನಿಂತೆವು. ಮಾರ್ಗ ಅಂಥಾ ಕಠಿಣ ಏನಲ್ಲ. ಆದರೆ, ಏರುತ್ತಾ ಏರುತ್ತಾ ಉಸಿರನ್ನು ಹಿಡಿಯುವ ಶಕ್ತಿ ಇರಬೇಕು. ನಮ್ಮದೇ ಲಯ ದಲ್ಲಿ ನಡೆಯಬಹುದು. ಗಡಿಯಾಚೆ. ಗುಡಿಯಾಚೆ. ಗಾಡಿ ಗೋಡೆಗಳಾಚೆ.. ನೋಡಬಹುದೇನೋ... ಆದರೆ ಇಲ್ಲಿ ಬೆಟ್ಟಗಳ ಆಚೆ ನೋಡಬಲ್ಲೆವೆ? ಸರಿದು ಸರಿದು..ನೋಡುತ್ತಾ, ನಾವು ಇಳಿಯುವುದು ನಮ್ಮೊಳಗೇ. ಪ್ರತಿ ಕಲ್ಲಿನ ಕಣವೂ ಶಿವನ ಸ್ವರೂಪ, ಗಾಳಿ ನೀರು ಬೆಳಕು ಭೂಮಿ .. ಬೆಟ್ಟ ಗುಡ್ಡ ಎಲ್ಲಾ ಆ ಪರಶಿವನೆ .. ಎಂಬ ಅರಿವಿನ ದಿವ್ಯ ಘಳಿಗೆಗಳು ಇವು. ಪ್ರಕೃತಿ ಎನ್ನಬೇಕೋ ಪರಶಿವ ಎನ್ನಬೇಕೋ ತಿಳಿಯದು. ಮೊದಲ ದಿನದ ಮಾರ್ಗ 8 ಕಿ.ಮೀ ಕ್ರಮಿಸಿದೆವು. ನಡೆಯುತ್ತ ನಡೆಯುತ್ತ ಧೀರಪುಕ್ ತಂಗುದಾಣ ಸೇರಿದೆವು. ಇಲ್ಲೇ ಕೈಲಾಸ ದರ್ಶನ ವಾಗುವುದು.
ಕೈಲಾಸ ಪರ್ವತ ಕಂಡಾಗ..
ಧೀರಪುಕ್ ನಲ್ಲಿ ಕೈಲಾಸ ದರ್ಶನವಾಯಿತು. ಬೆಟ್ಟದ ಎದುರಿನ ತಂಗುದಾಣಕ್ಕೆ ಹೆಜ್ಜೆ ಇಡುತ್ತಿದ್ದ ಹಾಗೇ ಆನಂದಭಾಷ್ಪ. ಇದೊಂದು ಭಾವೋದ್ರಿಕ್ತ ಬದ್ಧತೆ. ನನಗಂತೂ ಕೈಲಾಸ ಪರ್ವತ ನೋಡಬೇಕೋ ಅಲ್ಲಿ ತಲುಪಿದ ಧನ್ಯತೆಯ ಭಾವುಕ ಮನಗಳ ಬೆಳಗುವ ಮುಖಗಳನ್ನು ನೋಡಬೇಕೋ ತಿಳಿಯದಾಯಿತು. ನಮ್ಮ ತಂಡದಲ್ಲಿದ್ದ ಒಬ್ಬರು ನೆಲ ಮುಟ್ಟಿ ಹೋ ಎಂದು ಅಳುತ್ತಿದ್ದರೆ, ಮತ್ತೊಬ್ಬರು ಓಂ ನಮಃ ಶಿವಾಯ ಎಂದು ಹೇಳುತ್ತಾ ಕುಣಿಯುತ್ತಿದ್ದರು. ಕೆಲವರು ಬಟ್ಟೆ ಹಾಸಿ ಕುಳಿತು ಭಜನೆ ಮಾಡುತ್ತಿದ್ದರು. ಒಬ್ಬರನ್ನು ಒಬ್ಬರು ಅಪ್ಪಿಕೊಂಡು ಸಾಧನೆ ಸಂತೋಷ ಹಂಚಿಕೊಳ್ಳುತ್ತಿದ್ದರು. ಎಲ್ಲರ ಮುಖದಲ್ಲಿ ಕೈಲಾಸ ಕಾಣಿಸಿತು. ಈ ಕ್ಷಣಗಳು ನಮ್ಮನ್ನು ಇಡೀ ಜೀವನದಲ್ಲಿ ಮುಂದೆ ನಿಂತು ನಡೆಸುತ್ತದೆಯೇ.. ಎಂಬ ಪ್ರಶ್ನೆ ಮೂಡಿತು. ಮಹೋನ್ನತ ಮಾನಸಿಕತೆಯ ದಿವ್ಯ ಆನಂದಕ್ಕೆ ಸದಾ ಶರಣು.
ನಂತರ ಒಂದು ರಾತ್ರಿ ಶಿವನ ಸಾನಿಧ್ಯದಲ್ಲಿ ನೆಲೆ ನಿಂತು ಬೆಳಿಗ್ಗೆ ವಾಪಸ್ ಡಾರ್ಚೆನ್ ಕ್ಯಾಂಪ್ ಗೆ ಹೊರಟೆವು. ಆಸೆ ಇರುವವರು, ಇಡೀ ಪರ್ವತದ ಪ್ರದಕ್ಷಿಣೆ ಅಥವಾ ಪರಿಕ್ರಮ ಮಾಡಬಹುದು. ಮರುದಿನ ಮತ್ತೆ 22 ಕಿ.ಮೀ ಕ್ರಮಿಸಬೇಕು. ಪರ್ವತದ ಬೆನ್ನಿಗೆ ತಲುಪಲು. ಆದರೆ, ಬೆಟ್ಟದ ಹಿಂಭಾಗ ಗೋಚರ ಆಗುವುದಿಲ್ಲ.
ಎರಡನೇ ದಿನ, ನಿಸರ್ಗದ ಸೌಂದರ್ಯ ಸವಿಯುತ್ತಾ.. ನೀರ ನಿನಾದ ಕೇಳುತ್ತಾ .. ಕಲ್ಲು ಮಣ್ಣು ಮಂಜು ಗಡ್ಡೆಗಳ ಏರು ತಗ್ಗುಗಳ ಜೊತೆ ಮೌನದ ಮಾತಾಡುತ್ತಾ ಸಾಗುವಾಗ, ಆ ಪರಶಿವನನ್ನು ಅಂತರಂಗದಲ್ಲಿ ಪ್ರತಿಷ್ಠಾಪಿಸುತ್ತಾ ನಾಗಬೇಕು. ಮೊದಲ ದಿನ ಅನುಭವಿಸಿದ ಉತ್ಕಟತೆಯೊಂದಿಗೆ ಎರಡನೇ ದಿನ ಗೌರೀಕುಂಡ, ಮತ್ತು ದೊಲ್ ಮಾಲಾ ಪಾಸ್ ನೋಡಿ ವಾಪಸಾದೆವು. ಗೌರೀಕುಂಡ ಪುಟ್ಟ ಕೊಳ. ಕನ್ನಡಿಯಂತೆ ಕಂಗೊಳಿಸುತ್ತದೆ. ಇಲ್ಲಿ ಪಾರ್ವತಿ ದೇವಿ ಮೀಯುತ್ತಿದ್ದಳು ಎಂಬುದು ಪುರಾಣ. ಇನ್ನು ದೊಲ್ಮಾಲಾಪಾಸ್.. ಇದು ಕೈಲಾಸ ಪರಿಕ್ರಮದ ಅತ್ಯುನ್ನತ ಸ್ಥಳ. ಪೀಕ್ ಪಾಯಿಂಟ್.
ನಡಿಗೆಯಲ್ಲೇ ಇಳಿಯಬೇಕು..
ಇಲ್ಲಿಂದ ನಾವು ಇಳಿಯುತ್ತೇವೆ. ಅಲ್ಲಿಯವರೆಗೆ ಹತ್ತುತ್ತೇವೆ. ಹತ್ತುವಾಗ, ಕುದುರೆಯ ಮೇಲೆ ಕುಳಿತು ದಾರಿ ಕ್ರಮಿಸಬಹುದು. ಆದರೆ, ಇಳಿಯುವಿಕೆ ಕಾಲ್ನಡಿಗೆಯಲ್ಲೇ ಆಗಬೇಕು. ಕುದುರೆಗಳಿಗೂ ಅಸಾಧ್ಯ ದಾರಿ ಇದು. ಅವುಗಳಿಗೂ ದಣಿವಾಗಿರುತ್ತದೆ ಎಂಬುದೂ ಹೌದು. ಎರಡನೇ ದಿನದ ತಂಗುದಾಣ ಝಲ್ಟುಲ್ಪುಕ್ (zultulpuk). ಮತ್ತೊಂದು ರಾತ್ರಿ ಇಲ್ಲಿ ಕಳೆದು ಮರುದಿನ ನಸುಕಿನಲ್ಲಿ ಮತ್ತೆ ಪ್ರಯಾಣ ಆರಂಭಿಸಿದೆವು.
ಮೂರನೇ ದಿನ 6 ಕಿ.ಮೀ ದೂರದ ಅನಾಯಸ ನಡಿಗೆ. ನಾವು ಪುನಃ ಯಮದ್ವಾರದ ಕಡೆ ಬಂದೆವು. ಮೊದಲ ದಿನ ಆತಂಕ, ತಳಮಳ, ಅಪೇಕ್ಷೆ,ಎರಡನೇ ದಿನ ಕೈಲಾಸ ದರ್ಶನದ ಸಾಫಲ್ಯದ ಸಂತಸ, ಮೂರನೇ ದಿನ ತನ್ಮಯತೆ, ಸಮರ್ಪಣೆ, ತೃಪ್ತಿ. ಇದು ಕೈಲಾಸ ಪರಿಕ್ರಮದ ’ಕೊನೆ ತುದಿ’ ಎಂದು ಗೈಡ್ ಹೇಳಿದಾಗ, ’ಹೌದಾ.. ಮುಗಿಯಿತೇ’ ಎಂಬ ಪ್ರಶ್ನೆ ಜೊತೆಗೆ, ಇದು ಸಾಧ್ಯ ಆಯಿತೇ ಎಂಬ ಆಶ್ಚರ್ಯ, ಆನಂದ ನಮ್ಮದಾಗಿತ್ತು. ಮತ್ತೆ ಬೇಸ್ ಕ್ಯಾಂಪ್ ಇದ್ದ ಡಾರ್ಚೆನ್ ಕಡೆ ಹೊರಟೆವು. ಡಾರ್ಚೆನ್‌ನಿಂದ ಬಂದದಾರಿಯಲ್ಲಿ ಅಂದರೆ ತಾಕ್ಲಾಕೋಟ್, ಹಿಲ್ಸ, ನೇಪಾಲಗುಂಜ್, ಲಖನೌ ಮೂಲಕ ಬೆಂಗಳೂರು ತಲುಪಿದೆವು. ಹಿಂದಿರುಗುವ ಪಯಣದಲ್ಲೂ ಪರಿಕ್ರಮದ ನೆನಪೇ ನನ್ನನ್ನು ಆವರಿಸಿತ್ತು. ಒಂದು ಕೈಲಾಸ ಮಾನಸ ಸರೋವರ ಯಾತ್ರೆ ಅನುಭವ ಅನನ್ಯ ಅನೂಹ್ಯ. ಇದು ಯಾತ್ರೆಯಲ್ಲ, ಒಂದು ತರಹ ಅಂತರಂಗದ ಶೋಧನೆ.
ಕವನ ಬರೆದವರು..
ಕೈಲಾಸ ಮಾನಸ ಸರೋವರ .. ಏನು ನಿಮ್ಮ ಅನುಭವ ಅಂದಾಗ .. software ಉದ್ಯಮದಲ್ಲಿ ತೊಡಗಿರುವ ಪ್ರೀತಿ, ಸೋನು ಹೇಳಿದ್ದು.. ‘fantabulous. ಇದು ನಮ್ಮ ಮನಸಿಗೆ ಶಕ್ತಿ , ಸ್ಥೈರ್ಯ, ಆತ್ಮವಿಶ್ವಾಸ contentment ಕೊಟ್ಟಿದೆ’ ಎಂದು.
ಹೇಮಾ, ಕವಿತೆಯನ್ನೇ ಬರೆದರು.
A moment of ecstasy
To witness the bright celestial mountain;
A moment of prayer
To feel the protective embrace of heaven;
A moment of faith and hope
For a more peaceful world!!
ಒಂದೊಂದು ನಂಬಿಕೆ, ಅನುಭವ...
ಕೈಲಾಸ ಪರ್ವತ ನೋಡಲು ಸಿಗುವುದೇ ಪುಣ್ಯ ಎನ್ನುತ್ತಾರೆ ಹಲವರು. ಸಂಪೂರ್ಣ ಮಂಜು ಆವರಿಸಿದರೆ ದರ್ಶನ ಆಗುವುದಿಲ್ಲ. ಹವಾಮಾನ ವೈಪರೀತ್ಯ ಆದರೆ ವಾಪಸ್ ಬಂದಿರುವ ಗುಂಪುಗಳು ಉಂಟು. ಕೆಲವರಿಗೆ ಬೆಳ್ಳಿ ಬೆಟ್ಟದ ಹಾಗೆ ಬೆಳ್ಳಗೆ ಕಾಣಿಸುತ್ತದೆ. ಬಿಸಿಲು ಇಲ್ಲದಾಗ ಕಪ್ಪಾಗಿ ಶಿವಲಿಂಗದಂತೆ ಕಾಣುತ್ತದೆ. ಬೆಳಗಿನ ಸೂರ್ಯನ ಕಿರಣ ಬಿದ್ದಾಗ ಬಂಗಾರವರ್ಣ ತಾಳುತ್ತದೆ. ಶಿವ, ಪಾರ್ವತಿ, ನಂದಿ ಕಾಣಿಸಿತು ಎನ್ನುತ್ತಾರೆ ಕೆಲವರು. ಪರ್ವತ ಲಿಂಗದ ಹಾಗೆ ಕಾಣಿಸಿತು ಎಂಬ ಮಾತುಗಳು.. ಹೀಗೇ.. ಚಂದ್ರನಲ್ಲಿ ಮೊಲ ಎನ್ನುತ್ತೀವಲ್ಲ ಹಾಗೆ .ಅವರವರ ಕಲ್ಪನೆ ಯಂತೆ. ನಂಬಿಕೆಯಂತೆ.
ಕೈಲಾಸ ಯಾತ್ರೆ ಕುರಿತು...
ಅಮರನಾಥ ಯಾತ್ರೆ, ಕೇದಾರ ಬದರಿನಾಥ ಯಾತ್ರೆ ಮತ್ತು ಕೈಲಾಸ ಮಾನಸ ಸರೋವರ ಯಾತ್ರೆ, ಇವೆಲ್ಲ ಹಿಮಾಲಯದ ಅಗಾಧ ಆಸೆ ಪೂರೈಸುವ ಕೆಲವು ಪ್ರಸಿದ್ಧ ಪ್ರಯಾಣಗಳು. ಇವಲ್ಲದೆ ’ಹೂ ಕಣಿವೆ’ valley of flowers, ಚಾರಧಾಮ, ಮುಕ್ತಿನಾಥ.. ಹೀಗೆ ವಿವಿಧ ಪ್ರಯಾಣಗಳು ಉಂಟು. ಪ್ರತಿಯೊಂದೂ ಬೇರೆ.. ಬೇರೆ. ಭಿನ್ನ ಅನುಭವ ನೀಡುವ ಸ್ವರ್ಗ ತಾಣಗಳು. ನಾವು ಹೋಗಿದ್ದು ಕೈಲಾಸ– ಮಾನಸ ಸರೋವರ ಯಾತ್ರೆ.
ಮಾನಸ ಸರೋವರ – ಕೈಲಾಸ ಯಾತ್ರೆಗೆ ಹೋಗುತ್ತೇನೆಂದರೆ, ನಿಮಗೆ ಹೋಗುವ ದಾರಿ, ದೂರ, ಟಿಕೆಟ್, ಪ್ರಯಾಣ ಎಲ್ಲ ಮಾಹಿತಿ ಸುಲಭವಾಗಿಯೇ ಸಿಗುತ್ತದೆ. ಪತ್ರಿಕೆಗಳ ಜಾಹಿರಾತಿನಿಂದ ಹಿಡಿದು, ಟಿವಿ ವಾಹಿನಿಗಳಲ್ಲಿ ಹರಿದು ಹೋಗುವ ಸಾಲು ಸ್ಕ್ರಾಲ್‌ವರೆಗೆ, ಮನೆಗೆ ಬಂದು ಬೀಳುವ ಕರಪತ್ರದವರೆಗೂ ಸಿಗುತ್ತದೆ.
ಆದರೆ, ನೀವು ಒಮ್ಮೆ ಹೋಗಲು ಮನಸ್ಸು ಮಾಡಿ. ಹೋಗಿ ಬಂದ ಮೇಲೆ, ಚಾರಣ, ಪಾಪ ಪರಿಹಾರ, ಪುಣ್ಯ ಸಂಚಯ, ಯಾತ್ರೆ, ಪ್ರವಾಸ, ಎಲ್ಲಾ ಪದಗಳೂ ಅರ್ಥಹೀನ ಎನಿಸುತ್ತವೆ.
ಹಿಮಾಲಯ! ಅದು ಒಂದು ಅಲೌಕಿಕ ಅನುಭವ. ಅನುಭಾವ. ಈ ’ಎಲ್ಲವನ್ನೂ’ ಫೋಟೊದಲ್ಲಿ, ವಿಡಿಯೋದಲ್ಲಿ ಸೆರೆ ಹಿಡಿಯಲಾಗದು. ಹಿಮಾಲಯ ಯಾತ್ರೆಯನ್ನು ವಿವರಿಸಲು ಹೊರಟರೆ, ’ಕಣ್ಣು ಕಾಣಿಸದವ ಆನೆಯನ್ನು ವರ್ಣಿಸಿದ ಹಾಗೆ ಎನ್ನುತ್ತೀವಲ್ಲ’ ಹಾಗೇ, ಆಗುತ್ತದೆ. ಹೀಗಾಗಿ ನೋಡಿ ಬಂದವರು ಹೇಳದೆ ಇರುವುದೇ ಚೆಂದ. ನೊಡಿಬಂದವರು, ಮೌನವಾಗಿ ತುಂಬಿಕೊಳ್ಳುವುದೇ ಆನಂದ. ಜೀವ, ಪ್ರಕೃತಿ, ದೈವಗಳ ಸಮಾಗಮ, ಸಾಕ್ಷಾತ್ಕಾರ ಸಾಕಾರ.ಭಾವನೆಗಳು ಸಾವಿರ, ಅನುಭೂತಿ ಅಮರ.
ಖರ್ಚು–ವಿವರ– ಅನುಭವ
ಖರ್ಚು ಪ್ರತಿ ವ್ಯಕ್ತಿಗೆ ₹1.80 ಲಕ್ಷ. ನಿತ್ಯ ಆರರಿಂದ ಎಂಟು ಕಿ.ಮೀ ನಡಿಗೆ. ಅಲ್ಲಿಗೆ ಹೋಗುವ ಮುನ್ನ, ಯೋಗ, ಧ್ಯಾನ, ಉಸಿರಾಟದ ವಿಚಾರ ಕಲಿಯಬೇಕು. ಪ್ರಯಾಣಕ್ಕೆ ಧೀರ್ಘ ರಜೆ ಬೇಕು. ತಂಡದಲ್ಲಿ ಪ್ರವಾಸ ಮಾಡಿದರೆ, ತುಂಬಾ ಸುಂದರವಾಗಿರ್ತ್ತದೆ.
ಜತೆಗಿರಬೇಕಾದ ದಾಖಲೆಗಳು:
ಪಾಸ್‌ಪೋರ್ಟ್, ಓಟರ್ ಐಡಿ, ಆಧಾರ್‌ಕರ್ಡ್.. ಭಾವಚಿತ್ರ ಸಹಿತ ನಿಮ್ಮ ಯಾವುದಾದರೂ ಗುರುತಿನ ಚೀಟಿ.
ಕೊಂಡೊಯ್ಯುವ ಪರಿಕರಗಳು :
ನಿತ್ಯ ತೆಗೆದುಕೊಳ್ಳುವ ಔಷಧ ಮಾತ್ರೆ ಜೊತೆ ಇರಲಿ. ಅದರೊಂದಿಗೆ ಕೆಲವು ಸಾಮಾನ್ಯ ಔಷಧಿ ಇದ್ದರೆ ಒಳಿತು. ಬೆಚ್ಚನೆಯ ಉಡುಪುಗಳು ಕಡ್ಡಾಯ.
ಹೋಗುವುದು ಹೇಗೆ?
ಒಂದು ತಂಡವಾಗಿ ‘ಮಾನಸ ಸರೋವರ ಯಾತ್ರೆ‘ ಕೈಗೊಂಡರೆ, ಒಳ್ಳೆಯದು. ಏಕೆಂದರೆ ಗ್ರೂಪ್ ವೀಸಾ ಸುಲಭವಾಗಿ ಸಿಗುತ್ತದೆ. ಜುಲೈನಿಂದ ಅಕ್ಟೋಬರ್ ಈ ಯಾತ್ರೆಗೆ ಸೂಕ್ತ ಸಮಯ. ಆಗ ಯಾತ್ರಿಕರಿಗಾಗಿ ಈ ಮಾರ್ಗ ತೆರೆದಿರುತ್ತದೆ. ಸರ್ಕಾರವೇ ಯಾತ್ರೆಗಾಗಿ ಪ್ರಕಟಣೆ ಹೊರಡಿಸುತ್ತದೆ. ಆಗ ಅರ್ಜಿ ಸಲ್ಲಿಸಿಯೂ ಯಾತ್ರೆ ಮಾಡಬಹುದು. ಆದರೆ, ನಾವೇ ಗುಂಪುಗಳಲ್ಲಿ ಹೋಗಿಬರುವುದು ಅತ್ಯಂತ ಸೂಕ್ತ. ಇದರಿಂದ ಊಟ–ವಸತಿ ವ್ಯವಸ್ಥೆಗೆ ಅನುಕೂಲವಾಗುತ್ತದೆ. ‘ಮಾನಸಸರೋವರ’ ಎನ್ನುವುದು ಪುರಾಣ ಕಾಲದ ಹೆಸರು. ಮಾನಸಸರೋವರ, ಕೈಲಾಸ ಪರ್ವತ, ಹಿಮಾಲಯ – ಇವೆಲ್ಲ ಪ್ರಾದೇಶಿಕ ಹೆಸರುಗಳಷ್ಟೇ.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.