ವಿಶ್ವದ ಯುದ್ಧಗಳಿಗೆ ಕಾರಣಕರ್ತನಾಗಿ, ಲಕ್ಷಾಂತರ ಯಹೂದಿಯರನ್ನು ನಿರ್ದಾಕ್ಷಿಣ್ಯವಾಗಿ ಕೊಂದ ಹಿಟ್ಲರ್ ತನ್ನ ಕ್ರೂರತೆಯ ರೂಪುರೇಷೆಗಳನ್ನು ರೂಪಿಸುತ್ತಿದ್ದ ಸ್ಥಳವಿದು. ಇಲ್ಲಿನ ಪ್ರಕೃತಿ ಸೌಂದರ್ಯದಲ್ಲಿ ಇತಿಹಾಸದ ಕರಾಳ ಮುಖವಿದೆ.
ನಾನು ಕಳೆದ ವರ್ಷ ಇದೇ ಸಮಯಕ್ಕೆ ಜರ್ಮನಿಗೆ ಭೇಟಿ ಹೋಗಿದ್ದಾಗ, ಹಿಟ್ಲರ್‌ನ ರಹಸ್ಯ ಕಾರಸ್ಥಾನವೆಂದೇ ಕರೆಯುವ ‘ಈಗಲ್ಸ್ ನೆಸ್ಟ್’ ಎಂಬ ಪ್ರದೇಶಕ್ಕೆ ಭೇಟಿ ನೀಡಿದ್ದೆ. ಅದು ಮ್ಯೂನಿಚ್ ನಗರದಿಂದ 180 ಕಿ.ಮೀ. ದೂರವಿದೆ. ಈ ತಾಣವನ್ನು ‘ಕೆಲ್ ಹಿಸ್ಟೀನ್ ಹೌಸ್’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಐತಿಹಾಸಿಕ ಪ್ರಾಮುಖ್ಯ ಪಡೆದಿರುವ ಸ್ಥಳವೂ ಹೌದು.
ವಿಶ್ವದ ಯುದ್ಧಗಳಿಗೆ ಕಾರಣಕರ್ತನಾಗಿ, ಲಕ್ಷಾಂತರ ಯಹೂದಿಯರನ್ನು ನಿರ್ದಾಕ್ಷಿಣ್ಯವಾಗಿ ಕೊಂದ ಹಿಟ್ಲರ್ ತನ್ನ ಕ್ರೂರತೆಯ ರೂಪುರೇಷೆಗಳನ್ನು ರೂಪಿಸುತ್ತಿದ್ದ ಸ್ಥಳವಿದು. ಇಲ್ಲಿನ ಪ್ರಕೃತಿ ಸೌಂದರ್ಯದಲ್ಲಿ ಇತಿಹಾಸದ ಕರಾಳ ಮುಖವಿದೆ.
ಸುಂದರವಾದ ಆಲ್ಪೈನ್ಸ್ ಪರ್ವತದ ಸಾಲುಗಳು ನೀಲಿ ಬಣ್ಣದಿಂದ ಸುಂದರ ಗಿರಿಪಂಕ್ತಿ. ಕಣ್ಣು ಹಾಯಿಸಿದಷ್ಟೂ ಹಸಿರು. ಅಲ್ಲಲ್ಲಿ ಹರಿಯುವ ನೀರಿನ ತೊರೆಗಳು. ಗಿರಿಪಂಕ್ತಿಗಳನ್ನು ಸವರಿಕೊಂಡು ಹೋಗುವ ಮೋಡಗಳು. ನೋಡಲು ಅದೆಷ್ಟು ಸುಂದರವಾಗಿದೆಯೋ ಅಷ್ಟೇ ಭಯಾನಕ ಇತಿಹಾಸವನ್ನೂ ಹೊಂದಿದೆ.
ಆಲ್ಪೈನ್ಸ್ ಪರ್ವತದ ಬುಡದಲ್ಲಿರುವ ಒಬೆರ್‍ಸಾಲ್ಸ್‍ಬರ್ಗ್‌ನಿಂದ ಪರ್ವತವನ್ನು ಹಾವಿನಂತೆ ಸುತ್ತುತ್ತಾ ಮೇಲೇರುವುದೇ ಒಂದು ವಿಶಿಷ್ಟ ಅನುಭವ. ವಿಶಾಲವಾದ ಸುಂದರ ರಸ್ತೆಯನ್ನೇರುವ ವಿಶೇಷ ಬಸ್ ಇಲ್ಲಿ ಲಭ್ಯ. ಅದು ಕೇವಲ ಪ್ರವಾಸಿಗರಿಗೆ ಮೀಸಲು. ಆದರೆ, ಸ್ವಂತ ವಾಹನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸರ್ಕಾರ ನಿಷೇಧ ವಿಧಿಸಿದೆ. ಹೀಗಾಗಿ ಎಲ್ಲರೂ ದುಬಾರಿ ಹಣತೆತ್ತು ನಿಗದಿ ಪಡಿಸಿದ ಬಸ್‍ನಲ್ಲಿಯೇ ಪಯಣಿಸಬೇಕು. ಹೀಗೆ ನಿಧಾನವಾಗಿ ಸಾಗುವ ಬಸ್ಸು ಒಂದು ಹಂತದಲ್ಲಿ ಬೆಟ್ಟದಲ್ಲಿ ಕೊರೆದ ಗುಹೆಯಂತಹ ಸ್ಥಳದಲ್ಲಿ ಬಂದು ನಿಲ್ಲುತ್ತದೆ. ಅಲ್ಲಿಳಿದು ಸ್ವಲ್ಪ ದೂರ ಕ್ರಮಿಸಿದರೆ ಎದುರಾಗುವುದು 20 ರಿಂದ 25 ಜನ ಹಿಡಿಸಬಹುದಾದ ಒಂದು ಹೊಳೆಯುವ ಹಿತ್ತಾಳೆ ಎಲಿವೇಟರ್. ನೋಡಲು ಆಕರ್ಷಕವಾಗಿದ್ದು ಸದಾ ಸ್ವಚ್ಛ ಮತ್ತು ಕನ್ನಡಿಯ ಹಾಗಿದೆ.
ಆ ಪ್ರದೇಶದಿಂದ, 6 ಸಾವಿರ ಅಡಿಗಳಷ್ಟು ಬೆಟ್ಟದ ತುತ್ತ ತುದಿಯವರೆಗೆ ಕೊರೆದು ನಿರ್ಮಿಸಿದ ಭಾಗದಲ್ಲಿ ಈ ಎಲಿವೇಟರ್ ಅಳವಡಿಸಲಾಗಿದೆ. ಅದರಲ್ಲಿ ಹೋಗಿ ನಿಂತರೆ, ಅಲ್ಲಿಂದ ಬೆಟ್ಟದ ಮಧ್ಯೆ ಕಲ್ಲು ಕೊರೆದು ಮಾಡಿರುವ ಸುರಂಗದಲ್ಲಿ ಕೇವಲ 14 ಸೆಕೆಂಡುಗಳಲ್ಲಿ ಈ ಎಲಿವೇಟರ್ ಪರ್ವತದ ತುತ್ತ ತುದಿಯಲ್ಲಿರುತ್ತದೆ. ಎಲಿವೇಟರ್‌ನಿಂದ ಹೊರಬಂದರೆ ಕಾಣುವುದೇ ‘ಕೆಲ್‍ಹಿಸ್ಟೀನ್ ಹೌಸ್’. ಅದೊಂದು ವಿಶಾಲವಾದ ಕಲ್ಲಿನ ಕಟ್ಟಡ. ಅದನ್ನು ಹಿಟ್ಲರ್‌ಗಾಗಿಯೇ ನಿರ್ಮಿಸಿದ್ದು, ಅಲ್ಲಿ ಹಿಟ್ಲರ್ ತನ್ನ ಆಪ್ತ ಅಧಿಕಾರಿಗಳು ಮತ್ತು ಪರಮಾಪ್ತ ಗೆಳೆಯರೊಡನೆ ತಂಗಿ, ಹಲವಾರು ಮಹತ್ವದ ನಿರ್ಧಾರ ಕೈಗೊಳ್ಳುತ್ತಿದ್ದನೆಂದು ತಿಳಿದುಬರುತ್ತದೆ. ಅಲ್ಲಿಂದ ಎಲ್ಲ ಕಡೆಯಿಂದಲೂ ಆಲ್ಪ್ಸ್ ಪರ್ವತ ನೋಡಲು ಅತಿ ಆಕರ್ಷಕ. ಅಲ್ಲಿ ಹಿಟ್ಲರ್ ಕುಳಿತು ಪ್ರಕೃತಿ ಆಸ್ವಾದಿಸುತ್ತಿದ್ದ ಸ್ಥಳವಿದೆ. ಅಲ್ಲಿರುವ ಕೆಲ ಫೋಟೊಗಳು ಈ ಬೆಟ್ಟಕ್ಕೆ ಹಿಟ್ಲರ್ ಭೇಟಿ ನೀಡಿದ್ದನ್ನು ಧೃಢಪಡಿಸುತ್ತವೆ.
ಈ ಬೆಟ್ಟ ಪ್ರದೇಶದಲ್ಲಿ ಇಂತಹ ಕಟ್ಟಡ ನಿರ್ಮಾಣ ಪ್ರಾರಂಭವಾದದ್ದು 1937ರಲ್ಲಿ. 406 ಅಡಿಗಳಷ್ಟು ಬೆಟ್ಟದಲ್ಲಿ ಕೊರೆದು ನಿರ್ಮಿಸಿದ ಎಲಿವೇಟರ್ ಆಗಿನ ಕಾಲದ ತಾಂತ್ರಿಕತೆಯ ಔನ್ನತ್ಯವನ್ನು ತೋರಿಸಿಕೊಡುತ್ತದೆ. ಮೂರು ಸಾವಿರ ಕಾರ್ಮಿಕರು 13 ತಿಂಗಳು ಹಗಲೂ ರಾತ್ರಿ ಕೊರೆದು, ಬೆಟ್ಟದ ಮೇಲೆ ಕಟ್ಟಡಗಳನ್ನು ನಿರ್ಮಿಸಿದ್ದಾರೆ. 1938ರ ವಸಂತಕಾಲದಲ್ಲಿ ಈ ಯೋಜನೆ ಪೂರ್ಣಗೊಂಡು ಹಿಟ್ಲರ್‌ನಿಗೆ ಆತನ 50ನೇ ವರ್ಷದ ಹುಟ್ಟು ಹಬ್ಬದ ನೆನಪಿಗೆ ಮಾರ್ಟಿನ್ ಬೋರ್‍ಮನ್‍ನಿಂದ ಕೊಡುಗೆಯಾಗಿ ನೀಡಲಾಯಿತೆಂದು ತಿಳಿದುಬರುತ್ತದೆ.
ಜರ್ಮನ್‌ರು ಇದನ್ನು ‘ಡಿ-ಹೌಸ್’ ಎಂದು ಕರೆಯುತ್ತಾರೆ. ಅಂದರೆ ಡಿಪ್ಲೊಮಾಟಿಕ್ ಹೌಸ್ ಅಥವಾ ರಾಜತಾಂತ್ರಿಕ ಭವನ ಎಂದರ್ಥ. ಇಲ್ಲಿ ಹಿಟ್ಲರ್ ಕುಳಿತು ಎರಡನೇ ಮಹಾಯುದ್ಧದ ನೀಲ ನಕ್ಷೆ ತಯಾರಿಸಿ, ಎಲ್ಲ ಅನಾಹುತಗಳಿಗೆ ಕಾರಣನಾದನಂತೆ. ಹಿಟ್ಲರ್ ಇಲ್ಲಿಗೆ 14 ಬಾರಿ ಭೇಟಿ ನೀಡಿದ ದಾಖಲೆಯಿದೆ ಮತ್ತು ತನ್ನ ಪ್ರೇಯಸಿ ಇವಾಬ್ರೌನ್ ಜೊತೆಗೆ ಇಲ್ಲಿ ತಂಗಿದ್ದನೆಂದು ತಿಳಿದುಬರುತ್ತದೆ. ಈ ಸ್ಥಳದಲ್ಲಿ ಇವಾಬ್ರೌನ್‍ಳ ಸಹೋದರಿ ಗ್ರೀಟಲ್‍ಳ ವಿವಾಹ ಸಹ ನಡೆದಿದೆ.
ಕೆಲ್‍ಹಿಸ್ಟೀನ್ ಹೌಸ್‌ನಲ್ಲಿ ಹಿಟ್ಲರ್‌ನ ಅಧ್ಯಯನದ ಕೋಣೆ, ಅಡುಗೆ ಮನೆ, ಸೈನಿಕರ ಕೋಣೆ, ಮತ್ತು ಮುಸೋಲೋನಿ ಕಟ್ಟಿಸಿಕೊಟ್ಟ ಅಮೃತಶಿಲೆಯ ಫೈರ್‌ಪ್ಲೇಸ್ ಇದೆ. ವಿಶಾಲವಾದ ಕಿಟಕಿಗಳ ಮೂಲಕ ಪ್ರಕೃತಿಯನ್ನು ಆಸ್ವಾದಿಸುತ್ತಾ ಚಹಾ ಸೇವಿಸುವುದು ಒಂದು ಅವರ್ಣನೀಯ ಅನುಭವ. ಅದನ್ನೀಗ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಆದರೆ ಈ ಸ್ಥಳ ಜರ್ಮನ್ ಇತಿಹಾಸದಲ್ಲಿ ಕುಪ್ರಸಿದ್ಧಿ ಪಡೆದ ಸ್ಥಳ. ಏಕೆಂದರೆ ಇಲ್ಲಿ ಹಿಟ್ಲರ್ ತನ್ನ ಒಡನಾಡಿಗಳೊಡನೆ ಕುಳಿತು ಸಹಸ್ರಾರು ಜನರ ನರಮೇಧಕ್ಕೆ ಯೋಜನೆ ರೂಪಿಸಿದ ರಹಸ್ಯ ಸ್ಥಳ.
ಅಲ್ಲಿದ್ದ ಕೆಲ್‍ಹಿಸ್ಟೀನ್ ಹೌಸ್ ಕಟ್ಟಡ ವಿನಃ ಎಲ್ಲ ಕಟ್ಟಡಗಳನ್ನೂ ಎರಡನೆಯ ಮಹಾಯುದ್ಧ ಮುಗಿದ ನಂತರ ಅಮೆರಿಕನ್ನರು ನಾಶ ಮಾಡಿದ್ದಾರೆ. ಇಲ್ಲಿಂದ ಉಪ್ಪಿನ ಗಣಿಗಳನ್ನೂ, ಕೆಲ ಸರೋವರಗಳನ್ನು ವೀಕ್ಷಿಸಬಹುದಾಗಿದೆ.
ಒಬೆರ್‍ಸಾಲ್ಸ್‍ಬರ್ಗ್‌ನಲ್ಲಿ ಡಾಕ್ಯುಮೆಂಟೇಷನ್ ಕಚೇರಿಯಿದ್ದು, ಅಲ್ಲಿನ ಇತಿಹಾಸದ ಪರಿಚಯ ಮಾಡಿಕೊಡುತ್ತದೆ. ಈಗಲ್ಸ್ ನೆಸ್ಟ್ ಪ್ರಕೃತಿ ಆರಾಧಕರಿಗೆ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಆದರೆ, ಅಲ್ಲಿನ ಕರಾಳ ಇತಿಹಾಸ ಮನ ಮುದುಡುವಂತೆ ಮಾಡುತ್ತದೆ. ಸದಾಕಾಲ ವಿಶ್ವದ ನಾನಾ ಕಡೆಗಳಿಂದ ಜನ ಇಲ್ಲಿಗೆ ಬಂದು ಹೋಗುವುದರಿಂದ ಇದೊಂದು ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ.
ಭೇಟಿ ಸಮಯ
ಬೆಳಿಗ್ಗೆ 7.40 ರಿಂದ ಸಂಜೆ 4 ಗಂಟೆಯವರೆಗೆ ಪ್ರವಾಸಿಗರು ಭೇಟಿ ನೀಡುವುದಕ್ಕೆ ಅವಕಾಶವಿದೆ. ಅದೂ ಕೇವಲ ಬೇಸಿಗೆಯ ದಿನಗಳಲ್ಲಿ ಮಾತ್ರ. ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಪ್ರವಾಸಿಗರಿಗೆ ತೆರೆದಿರುವ ಈ ಪ್ರದೇಶ ವೀಕ್ಷಣೆಗೆ ಅವರದೇ ಬಸ್‌ನಲ್ಲಿ ಹೋಗಿಬರಲು 16 ಯೂರೊ ಅಂದರೆ, ₹ 1280 ಶುಲ್ಕ ನಿಗದಿಪಡಿಸಲಾಗಿದೆ. ಇಲ್ಲಿ ಭೇಟಿ ನೀಡಿದವರು ನೆನಪಿಗಾಗಿ ಹಿತ್ತಾಳೆ ನಾಣ್ಯ ಕೊಳ್ಳಲು ಸಹ ಅನುಕೂಲ ಕಲ್ಪಿಸಿಕೊಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.