ADVERTISEMENT

ಕಣಿವೆಗಳಲ್ಲಿ ಅಡ್ವೆಂಚರ್ ರೈಡ್‌..

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 19:30 IST
Last Updated 11 ಡಿಸೆಂಬರ್ 2019, 19:30 IST
   

ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಸುತ್ತಾಡ ಬೇಕೆಂಬುದು ನನ್ನ ಬಹುದಿನದ ಕನಸು. ಅದು ನನಸಾಗಿದ್ದು ಬೆಂಗಳೂರಿನ ಪ್ಯಾರಾಮೌಂಟ್‌ ರೈಡರ್ಸ್‌ ಸಂಸ್ಥೆ ನೆರವಿನಿಂದ.

ಆ ಸಂಸ್ಥೆ ಹಿಮಾಲಯದ ಖಾರ್ದೊಂಗ್ಲಾವರೆಗಿನ ಬೈಕ್‌ ರೈಡ್‌ ಯಾನ ಆಯೋಜಿಸಿತ್ತು. ಆ ಪ್ರವಾಸದ ತಂಡದಲ್ಲಿ ನಾನು, ನನ್ನ ಸ್ನೇಹಿತರು ಜತೆಯಾದೆವು. ಬೈಕ್ ರೈಡ್ ತಂಡದಲ್ಲಿ 15 ಜನರಿದ್ದರು. ಎಂಟು ಬೈಕ್‌ಗಳು, ಎರಡು ಕಾರುಗಳಿದ್ದವು. ತಂಡದ ಕ್ಯಾಪ್ಟನ್‌ ಆದಿ ನಾಗರಾಜ್‌ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಬೈಕ್‌ ರೈಡ್‌ನಲ್ಲಿ ಪಾಲ್ಗೊಂಡಿದ್ದವರು.

ಪ್ರಮೋದ್, ನವೀನ್, ನಿಖಿಲ್, ಶ್ರೇಯಸ್ ಮತ್ತು ನನ್ನ ಬೈಕ್‌ಗಳನ್ನು ರೈಲಿನಲ್ಲಿ ಚಂಡೀಗಡಕ್ಕೆ ಕಳಿಸಿ, ನಾನು, ಪ್ರಮೋದ್ ಅದೇ ರೈಲಿನಲ್ಲಿ ಪ್ರಯಾಣ ಬೆಳೆಸಿದೆವು. ಸುಮಾರು 52 ಗಂಟೆಗಳ ರೈಲು ಪ್ರಯಾಣದ ನಂತರ ಚಂಡಿಗಡ ತಲುಪಿದೆವು. ರಸ್ತೆ ಮೂಲಕ ಬಂದಿದ್ದ 2 ಬೈಕುಗಳು ಮತ್ತು 2 ಕಾರುಗಳು ಮತ್ತು ವಿಮಾನದಲ್ಲಿ ಬಂದಿದ್ದ ನಮ್ಮ ತಂಡದ ಸದಸ್ಯರನ್ನು ಸೇರಿಕೊಂಡೆವು. ಬೈಕ್‌ ತಪಾಸಣೆ ಮುಗಿಸಿಕೊಂಡು, ಜೂನ್ 23ರಂದು ನನ್ನ ಕನಸಿನ ಹಿಮಾಲಯ ಪರ್ಯಟನೆ ಆರಂಭವಾಯಿತು.

ADVERTISEMENT

ಮೊದಲ ದಿನ 560 ಕಿ.ಮೀ ಬೈಕ್‌ ರೈಡ್‌ ಮಾಡಿದೆವು. ಕನ್ಯಾಕುಮಾರಿ – ಕಾಶ್ಮೀರ ಹೆದ್ದಾರಿ1 ರಲ್ಲಿ ಶ್ರೀನಗರದತ್ತ ಹೊರಟೆವು. ದಾರಿಯಲ್ಲಿ 9.ಕಿ.ಮೀ ಉದ್ದದ ‘ಡಾ.ಶ್ಯಾಮ್‌ಪ್ರಸಾದ್ ಮುಖರ್ಜಿ ಸುರಂಗ’(ಚೆನಾನಿ–ನಶ್ರೀ ಟನಲ್‌) ಮಾರ್ಗದ ದಾರಿಯಲ್ಲಿ ಬೈಕ್ ರೈಡಿಂಗ್ ರೋಚಕವಾಗಿತ್ತು. ಆ ದಿನ ದಾಲ್ ಸರೋವರದ ತೇಲುವ ಮನೆ (ಬೋಟ್ ಹೌಸ್)ಯಲ್ಲಿ ವಾಸ್ತವ್ಯ. ಇದೊಂದು ಹೊಸ ಅನುಭವ.

ಮಾರನೆಯ ದಿನ ಶ್ರೀನಗರದಿಂದ 100 ಕಿ.ಮೀ ದೂರದ ಸೋನಮಾರ್ಗ್‌ನತ್ತ ಹೊರಟೆವು. ಹಿಮಾಚ್ಛಾದಿತ ಪರ್ವತಗಳ ನಡುವೆ ರಸ್ತೆ. ಎಡಬದಿಯಲ್ಲಿ ರಭಸವಾಗಿ ಹರಿಯುವ ನದಿಗಳು, ಸುತ್ತಲೂ ಹಿಮಪರ್ವತಗಳ ಸಾಲು. ಆ ರಸ್ತೆಯಲ್ಲಿ ಸೋನಮಾರ್ಗ್‌ದವರೆಗಿನ ಪಯಣ ಅದ್ಭುತವಾಗಿತ್ತು.

ಇಲ್ಲಿಂದ ಕಾರ್ಗಿಲ್‌ನತ್ತ ಹೊರಟೆವು. ಬೆಟ್ಟ ಕಡಿದು ನಿರ್ಮಿಸಿದ, ಡಾಂಬರ್ ಕಾಣದ ಹಳ್ಳ ದಿಣ್ಣೆಗಳ ರಸ್ತೆ ಅದು. ಜೋಜಿಲ್ಲಪಾಸ್ ರಸ್ತೆಯಲ್ಲಿ ಬೈಕ್ ಓಡಿಸುವ ಸವಾರಿಗೆ ಅನುಭವವಿರಬೇಕು. ಆದರೆ, ಅನುಭವಿ ಸವಾರರಿಗೂ ಸವಾಲು ಎಸೆಯುವ ರಸ್ತೆ ಅದು. ರಸ್ತೆಯಲ್ಲಿ ಸಾಗುತ್ತಾ ಪಕ್ಕದಲ್ಲಿರುವ ಪರ್ವತದಲ್ಲಿ ಹಿಮಜಾರುಬಂಡೆ ನೋಡಿ ದಾಗ, ಬಾಲ್ಯದ ದಿನಗಳಲ್ಲಿ ಬಸವನಗುಡಿಯ ಕಹಳೆ ಬಂಡೆಯಲ್ಲಿ ಆಡಿದ ಆಟ ನೆನಪಾಯಿತು. ಎಲ್ಲವನ್ನೂ ನೋಡುತ್ತಲೇ, ಕಾರ್ಗಿಲ್ ಯುದ್ಧ ಸ್ಮಾರಕ ಸ್ಥಳಕ್ಕೆ ತಲುಪಿದೆವು. ಅಲ್ಲಿ ಬೀಸುತ್ತಿದ್ದ ಗಾಳಿಗೆ ಭಾರತದ ತ್ರಿವರ್ಣ ಧ್ವಜ ಅಷ್ಟೇ ಜೋರಾಗಿ ಹಾರಾಡುತ್ತಿತ್ತು. ಕಾರ್ಗಿಲ್‌ ವಿಜಯ್‌ ದಿವಸ್‌ಗೆ 20 ವರ್ಷ ತುಂಬಿದ ಸಂದರ್ಭವೂ ಜತೆಯಾಗಿದ್ದರಿಂದ, ಈ ಭೇಟಿ ಮತ್ತಷ್ಟು ನೆನಪಲ್ಲಿ ಉಳಿಯಿತು. ಅಲ್ಲಿಂದ ಹೊರಟು ಕಾರ್ಗಿಲ್ ಪಟ್ಟಣ ತಲುಪಿದೆವು. ಅಲ್ಲೇ ವಾಸ್ತವ್ಯ.

ಮರುದಿನದ ಪಯಣ 220 ಕಿ.ಮೀ ದೂರದ ಲೇಹ್‌ನತ್ತ. ನಮಿಕ್ಲಾ ಪಾಸ್‌ ದಾಟಿ, ಸಾಲು ಸಾಲು ಹಳ್ಳಿಗಳಲ್ಲಿ ತಿರುವು ರಸ್ತೆಗಳಲ್ಲಿ ಸಾಗುತ್ತಾ ಮ್ಯಾಗ್ನೆಟಿಕ್‌ ಹಿಲ್ ತಲುಪಿದೆವು. ಆ ಬೆಟ್ಟದ ಅಯಸ್ಕಾಂತೀಯ ಶಕ್ತಿ ನಮ್ಮ ವಾಹನಗಳ ಮೇಲೆ ಬೀರಿತು. ಆ ಪರಿಣಾಮವನ್ನು ಕಂಡಾಗ ಮೂಕವಿಸ್ಮಿತರಾದೆವು. ಸ್ವಲ್ಪ ಸಮಯ ಅಲ್ಲಿಯೇ ಕಳೆದವು. ಮುಂದೆ ಲೇಹ್ ಸೇನಾ ನೆಲೆಗಳನ್ನು ದಾಟಿ, ಮುಂಚೆಯೇ ಕಾಯ್ದಿರಿಸಿದ್ದ ಹೋಟೆಲ್ ತಲುಪುವುದರೊಳಗೆ ಸಂಜೆ 7 ಆಗಿತ್ತು. ಬೆಳಿಗ್ಗೆ ವಿಶ್ವದ ಅತಿ ಎತ್ತರದ ಮೋಟರಬಲ್‌ ರೋಡ್‌ ಖಾರ್ದೊಂಗ್ಲಾ ಪಾಸ್‌ನತ್ತ ಹೊರಟೆವು. ಯಾವುದೇ ತೊಂದರೆ ಇಲ್ಲದೆ ಆ ದುರ್ಗಮ ಪ್ರದೇಶ ತಲುಪಿದೆವು. ಅಲ್ಲಿ ನಿಲ್ಲಿಸಿದ್ದ ‘ಸಿಯಾಚಿನ್ ಬೇಸ್ ಕ್ಯಾಂಪ್ 156 ಕಿ.ಮೀ ಎಂಬ ಮೈಲಿಗಲ್ಲಿನ ಫಲಕ’ ಕಂಡಾಗ ರೋಮಾಂಚನವಾಯಿತು. ನಂತರ ಅಲ್ಲಿನ ಘನಘೋರ ಶೀತ ಮತ್ತು ನಮ್ಮ ಸೈನಿಕರು ಆ ವಾತಾವರಣದಲ್ಲಿ ಹೇಗೆ ದೇಶ ಕಾಯುತ್ತಾರೆ ಎಂದು ನೆನೆದಾಗ ಒಂದು ಕ್ಷಣ ಗಾಬರಿಯೂ ಆಯಿತು.

ನಮ್ಮ ತಂಡದ ಕ್ಯಾಪ್ಟನ್ ನಾಗರಾಜ್ ಅವರು ಕನ್ಯಾಕುಮಾರಿಯಿಂದ ಖಾರ್ದೊಂಗ್ಲಾವರೆಗಿನ ಬೈಕ್ ಸವಾರಿ ಯಶಸ್ವಿಯಾಗಿ ಪೂರೈಸಿದ್ದರು. ಅವರನ್ನು ಅಲ್ಲೇ ಅಭಿನಂದಿಸಿದೆವು. ಖಾರ್ದೊಂಗ್ಲಾದಲ್ಲಿ ಆಮ್ಲಜನಕ ಕಡಿಮೆ ಇದ್ದ ಕಾರಣ, ಆ ವಾತಾವರಣದಿಂದ ಹೊರಟು ಹಿಮಾಚ್ಛಾದಿತ ಬೆಟ್ಟಗಳ ಸರಣಿಯನ್ನು ಕಣ್ತುಂಬಿಕೊಳ್ಳುತ್ತ ಆ ದಿನವನ್ನು ಮುಕ್ತಾಯಗೊಳಿಸಿದೆವು.

ಮಾರನೆಯ ದಿನ ಲೇಹ್‌ನಿಂದ 223 ಕಿಮೀ ದೂರದ ಪ್ಯಾಂಗೊಂಗ್ ಸರೋವರದತ್ತ ಪಯಣ. ವಿಶ್ವದ ಎರಡನೇ ಅತಿ ಎತ್ತರದ ವಾಹನ ಸಂಚಾರದ ರಸ್ತೆ ಚಾಂಗ್ಲ ಪಾಸ್ ಮೂಲಕ ಅತ್ಯಂತ ಒರಟಾದ ಮತ್ತು ಕಡಿದಾದ ರಸ್ತೆಗಳನ್ನು ಯಶಸ್ವಿಯಾಗಿ ದಾಟಿದೆವು. ಈ ನಡುವೆ ನಮ್ಮ ಕ್ಯಾಪ್ಟನ್ ಅವರ ಬೈಕ್ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿತು. ಅದನ್ನು ಹಗ್ಗದಿಂದ ಕಟ್ಟಿ ಬೇರೆ ಬೈಕ್‌ ಸಹಾಯದಿಂದ ಎಳೆದು ತಂದೆವು. ಸಂಜೆ ನಮ್ಮ ತಂಡದ ತಾಂತ್ರಿಕ ನಿಪುಣರಾದ ಪ್ರಶಾಂತ್, ಬೈಕ್‌ ರಿಪೇರಿ ಮಾಡಿದರು. ಅಂದು ರಾತ್ರಿ ಟೆಂಟ್‌ನಲ್ಲಿ ವಾಸ್ತವ್ಯ.

ಮರುದಿನ ಮುಂಜಾನೆ ಎಲ್ಲರೂ ಏಳುವುದರೊಳಗೆ ನಾನೊಬ್ಬನೇ ಸರೋವರ ನೋಡಲು ಹೊರಟೆ. ಅಲ್ಲಿಯ ಪ್ರಶಾಂತ ವಾತಾವರಣದ ಅನುಭವ ನನ್ನದಾಗಿಸಿಕೊಂಡು ಹಿಂತಿರುಗುವುದರೊಳಗೆ ತಂಡದ ಇತರ ಸದಸ್ಯರು ಸಿದ್ಧರಾಗಿದ್ದರು. ಉಪಹಾರ ಸೇವಿಸಿ, ಪುನಃ ಚಾಂಗ್ಲ ಪಾಸ್ ತಲುಪುವ ವೇಳೆ ಗಾಢ ಕತ್ತಲೆ ಆವರಿಸಿತ್ತು. ಪೂರ್ವ ನಿರ್ಧಾರದಂತೆ ಆ ರಾತ್ರಿ ಅಲ್ಲೇ ಟೆಂಟ್‌ ಹೌಸ್‌ನಲ್ಲಿ ಉಳಿದೆವು. ಆದರೆ ಆಮ್ಲಜನಕ ಪ್ರಮಾಣ ಕಡಿಮೆ ಇದ್ದಿದ್ದರಿಂದ ಸರಿಯಾಗಿ ನಿದ್ರೆ ಬರಲಿಲ್ಲ. ಮುಂಜಾನೆ ಬೇಗ ಎದ್ದು ತಯಾರಾಗಿ 7.30 ಕ್ಕೆ ಅಲ್ಲಿಂದ ಹೊರಟೆವು. ಸರ್ಚು ಮತ್ತು ಜಿಸ್ಪ ಮಾರ್ಗವಾಗಿ ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನಲ್ಲಿ (ವಾಟರ್ ಕ್ರಾಸಿಂಗ್) ಬೈಕುಗಳನ್ನು ಓಡಿಸಿಕೊಂಡು ರೊಹತಂಗ್ ಪಾಸ್‌ನ ಕ್ಲಿಷ್ಟಕರವಾದ ರಸ್ತೆಯಲ್ಲಿ ಸವಾರಿ ಮಾಡುತ್ತಾ ಮನಾಲಿ ತಲುಪಿದೆವು. ಅಲ್ಲಿಗೆ ನಮ್ಮ ಹಿಮಾಲಯ ಪರ್ಯಟನೆ ಸಂಪನ್ನವಾಯಿತು. ಅಲ್ಲಿಂದ ಚಂಡಿಗಡಕ್ಕೆ ಬಂದು, ನಮ್ಮ ಬೈಕುಗಳನ್ನು ಖಾಸಗಿ ವಾಹನ ಪಾರ್ಸೆಲ್ ಕಂಪನಿಗೆ ಒಪ್ಪಿಸಿ ರಸ್ತೆ ಮೂಲಕ ಕಾರುಗಳಲ್ಲಿ ಬೆಂಗಳೂರಿನತ್ತ ಹೊರಟೆವು.

ಬೈಕ್‌ ರೈಡ್‌ಗೆ ಜತೆಯಾದವರು..

ಮನೋಹರ್ (ಪ್ಯಾರಾಮೌಂಟ್ ರೈಡರ್ಸ್ ಅಡ್ಮಿನ್) (ಪ್ಯಾರಮೌಂಟ್ ಆಟೋಮೊಬೈಲ್ಸ್ ವಿಜಯನಗರ ಬೆಂಗಳೂರು), ಆದಿ ನಾಗರಾಜ್ (ಟೀಮ್ ಕ್ಯಾಪ್ಟನ್), ಪ್ರಶಾಂತ್ ಮತ್ತು ವಿನೋದ್, ಹೇಮಂತ್, ಡೇವಿಡ್, ಶ್ರೀನಿಧಿ (ಆಪ್ತರಕ್ಷಕರು) (ಬ್ಯಾಕಪ್ ಟೀಮ್ ), ವಿಶ್ವಾಸ್, ಪಿಂಟೋ ಜಾನ್, ಶ್ರೇಯಸ್, ನವೀನ್, ನಿಖಿಲ್, ಶಶಿ, ಪ್ರಮೋದ್ ಮತ್ತು ಸುರೇಶ.
( ಪ್ಯಾರಾಮೌಂಟ್ ರೈಡರ್ಸ್).

ಸಂಪೂರ್ಣ ಹಿಮಾಲಯ ಪಯಣವನ್ನು ಕ್ಯಾಮೆರಾದಲ್ಲಿ ಹಿಡಿದಿಡುವುದು ಅಸಾಧ್ಯ. ಅದಕ್ಕೆ ಸಣ್ಣ ಪ್ರಯತ್ನವೊಂದನ್ನು ಮಾಡಿದ್ದೇನೆ. ಅದನ್ನು ಈ ಕೆಳಕಂಡ ಯೂಟ್ಯೂಬ್ ಲಿಂಕ್ ಕ್ಲಿಕ್ಕಿಸಿ ನೋಡಬಹುದು.
www.youtube.com/RiderSuri

ಬೈಕ್ ದಾರಿ ಹೀಗಿರಲಿ

ರಸ್ತೆ, ರೈಲು ಮತ್ತು ವಿಮಾನದ ಮೂಲಕ ಬೆಂಗಳೂರಿನಿಂದ ಚಂಡಿಗಡ ಅಥವಾ ಶ್ರೀನಗರಕ್ಕೆ (ಕಾಶ್ಮೀರ) ತಲುಪಬೇಕು.

ಇಲ್ಲಿಂದ ಬೈಕ್‌ನಲ್ಲಿ ಶ್ರೀನಗರ – ಸೋನಮಾರ್ಗ , ಸೋನಮಾರ್ಗ– ಕಾರ್ಗಿಲ್, ಕಾರ್ಗಿಲ್– ಲೇಹ್

ಲೇಹ್– ಖಾರ್ದೊಂಗ್ಲಾ ಪಾಸ್,‌ ಖಾರ್ದೊಂಗ್ಲಾ ಪಾಸ್‌ನಿಂದ ಲೇಹ್ ಮಾರ್ಗವಾಗಿ ಪ್ಯಾಂಗೊಂಗ್ ಸರೋವರ

ಪ್ಯಾಂಗೊಂಗ್ ನಿಂದ ಲೇಹ್ ಮಾರ್ಗವಾಗಿ ಮನಾಲಿ, ಘುಸೈನಿ, ಚಂಡಿಗಡ ತಲುಪಬಹುದು.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.