‘ಇನ್ಕಿಲಾಬ್ ಜಿಂದಾಬಾದ್, ಇನ್ಕಿಲಾಬ್ ಜಿಂದಾಬಾದ್’ ಎಂಬ ಸ್ವಾತಂತ್ರ್ಯ ಸೇನಾನಿಗಳ ಘೋಷಣೆಗಳು ಸಿಡಿಲಬ್ಬರದಿ ಮೊಳಗುತ್ತಿದಂತೆ ಆಗಸದಿಂದ ಆಗ ತಾನೆ ವಿರಮಿಸಿದ ಸೂರ್ಯನ ಕಿರಣಗಳು ತುಸು ಮುಂಚೆಯೆ ನಭೋ ಮಂಡಲಕ್ಕೆ ಲಗ್ಗೆ ಇಟ್ಟಿದ್ದ ಪೂರ್ಣ ಚಂದಿರನನ್ನು ತುಸು ಕೆಂಪಾಗಿಸಿದ್ದವು !
‘ಕಾಲಾ ಪಾನಿ’ ಹೆಸರಿನ ಕುಖ್ಯಾತಿಯ ಸೆಲ್ಯುಲರ್ ಜೈಲಿನ ಪ್ರತಿಯೊಂದು ಇಟ್ಟಿಗೆಯು ಭಾರತ ಸ್ವಾತಂತ್ರ್ಯ ಹೋರಾಟದ ಗಾಥೆಯನ್ನು ಸಾರಿ ಸಾರಿ ಹೇಳುತ್ತಿತ್ತು. ಸ್ವಾತಂತ್ರ್ಯ ವೀರರ ಹೋರಾಟ, ಬಲಿದಾನ, ತ್ಯಾಗ ಹಾಗೂ ಅವರು ಪಟ್ಟ ನೋವಿನ ಕಥೆಯನ್ನು ಆಲಿಸಿ ಸೆಲ್ಯುಲರ್ ಜೈಲಿನಲ್ಲಿನ ಧ್ವನಿ ಹಾಗೂ ಬೆಳಕು ಪ್ರದರ್ಶನದ ವೀಕ್ಷಣೆಗೆ ನೆರದಿದ್ದ ಭಾರತೀಯರ ಕಣ್ಣುಗಳು ತೇವಗೊಂಡಿದ್ದವು, ಅವರ ಹೃದಯಗಳು ತುಂಬಿ ಬಂದಿದ್ದವು.
ಅಂಡಮಾನಿನ ರಾಜಧಾನಿ ಪೋರ್ಟ್ ಬ್ಲೇರ್‌ನ ಸೆಲ್ಯುಲರ್ ಜೈಲ್ ಎದುರು ನಿಂತಾಗ, ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಗಾಥೆ ಹೀಗೆ ಕಣ್ಣೆದುರಿಗೆ ಸರಿದು ಹೋಗಿ, ಕಣ್ಣಂಚಲ್ಲಿ ನೀರಾಡಿತು. ಇದು ಐದು ದಿನಗಳ ಅಂಡಮಾನ್ ಪ್ರವಾಸದ ಮೊದಲ ದಿನದ ಕಥೆ.
ಪ್ರವಾಸ ಹೋಗಬೇಕೆಂದು ನಾಲ್ಕಾರು ವರ್ಷಗಳಿಂದ ಪ್ಲಾನ್ ಮಾಡಿದ್ದರೂ, ಮಗನ ವಿದ್ಯಾಭ್ಯಾಸ ಕಾರಣಗಳಿಂದ ಎಲ್ಲೂ ಹೋಗಲಾಗದೇ, ಮೈಮನಗಳು ಜಡ್ಡುಗಟ್ಟಿದ್ದವು. ಒಂದು ಸಂಜೆ ನನ್ನ ಮಗ ಪೋನ್ ಮಾಡಿ ‘ಅಪ್ಪಾ, ಮುಂದಿನ ವಾರ ಕಾಲೇಜಿಗೆ ಒಂದು ವಾರ ರಜೆ ಇದೆ ಪ್ರವಾಸಕ್ಕೆ ಹೋಗೋಣ’ ಎಂದು ನನ್ನನ್ನು ಹುರಿದುಂಬಿಸಿದ.
ನಾನು ಭೂಪಟವನ್ನು ಹರಡಿ ಭಾರತದ ಮೂಲ ಭೂಮಿಯಿಂದ ದೂರವಿರುವ ಹವಳಗಳ ದ್ವೀಪಸಮೂಹ ಅಂಡಮಾನಿನ ಮೇಲೆ ಬೆರಳಿಟ್ಟೆ. ಅಲ್ಲಿಗೆ ಹೋಗಬೇಕೆಂದು ತೀರ್ಮಾನಿಸಿಯಾಯಿತು. ಐದು ದಿನಗಳ ಪ್ರವಾಸದಲ್ಲಿ ಸೆಲ್ಯುಲರ್ ಜೈಲ್, ಮ್ಯೂಸಿಯಂ, ಚಾರಣ, ಕಾಂಡ್ಲಾವನ, ಪಕ್ಷಿ ವೀಕ್ಷಣೆ, ಸ್ಕೂಬಾ ಡೈವಿಂಗ್ ಹಾಗೂ ಸುಣ್ಣದ ಗುಹೆಗಳನ್ನು ಪಟ್ಟಿಯಲ್ಲಿ ಸೇರಿಸಿಕೊಂಡೆವು.
ನಾವು ನೋಡಲೇ ಬೇಕಾದ ತಾಣಗಳ ಪಟ್ಟಿಯಲ್ಲಿ ಸೆಲ್ಯುಲರ್ ಜೈಲ್ ಅಗ್ರ ಸ್ಥಾನದಲ್ಲಿತ್ತು. ಭಾರತಾಂಬೆಯನ್ನು ಬ್ರಿಟಿಷ್‌ರಿಂದ ಬಿಡುಗಡೆಗೊಳಿಸಲು ಹೋರಾಡಿದ ರೋಚಕ ಕಥೆಯ ಅತ್ಯಂತ ಪ್ರಮುಖವಾದ ಪುಟಗಳು ಈ ಜೈಲಿನ ಕೋಣೆಗಳಲ್ಲಿವೆ. 1979 ರಲ್ಲಿ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿಯವರು ಜೈಲನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದ ನಂತರ ಸ್ಥಳವನ್ನು ಸುರಕ್ಷಿತವಾಗಿಡಲಾಗಿದೆ.
ಜೈಲಿನಲ್ಲಿದ್ದ 7 ವಿಂಗ್‌ಗಳಲ್ಲಿ ಈಗ ಕೇವಲ 3 ವಿಂಗ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇಲ್ಲಿರುವ ಸಂಗ್ರಹಾಲಯಗಳು, ಗಲ್ಲುಗಂಬ, ವೀಕ್ಷಣಾ ಗೋಪುರ, 499 ಜನ ಸ್ವಾತಂತ್ರ್ಯ ವೀರರ ಉಸಿರಿಗೆ ಉಸಿರು ಕೊಟ್ಟ ಅರಳೆ ಮರ ಹಾಗೂ ವೀರ ಸಾವರಕರವರು ಬಂಧಿಯಾಗಿದ್ದ ಕೋಣೆ ಪ್ರವಾಸಿಗರ ಮನ ಸೆಳೆಯುತ್ತವೆ.
ಅಂಡಮಾನಿನ ಮೊದಲನೆ ದಿನದ ಜೈಲ್ ಭೇಟಿ ಮನಸ್ಸನ್ನು ನೂರು ವರುಷಗಳ ಆಚೆ ಒಯ್ದಿತ್ತು. ಮಾರನೇಯ ದಿನ ದೂರದ ಬಾರಾಟಂಗಾ ದ್ವೀಪಕ್ಕೆ ಹೊರಡಲು ಬೆಳಿಗ್ಗೆ ಮೂರಕ್ಕೆ ಸಿದ್ಧಗೊಳ್ಳಬೇಕೆಂದು ನೆನಪಾಗಿ ನಿದ್ರೆಗೆ ಜಾರಿಕೊಂಡೆವು.
ಅಂಡಮಾನಿನಲ್ಲಿ ಸೂರ್ಯನು ಬೇಗನೆ ಉದಯಿಸುವುದರಿಂದ ಅಲ್ಲಿನ ಸಮಯಕ್ಕೆ ನಾವು ಹೊಂದಿಕೊಳ್ಳ ಬೇಕಾಗಿತ್ತು. ಒಟ್ಟು 5 ಗಂಟೆಗಳ ಬಾರಾಟಂಗಾ ದಾರಿಯನ್ನು ಗ್ರ್ಯಾಂಡ್ ಟ್ರ್ಂಕ್ ರಸ್ತೆಯ ಜಿರ್ಕಾಟಾಂಗ ಜಾರವಾ ಆದಿವಾಸಿಗಳ ಪ್ರಪಂಚದಿಂದ ಕ್ರಮಿಸಬೇಕಾಗುತ್ತದೆ. ಪಶ್ಚಿಮಘಟ್ಟಗಳ ಸಾಂಗತ್ಯದಲ್ಲೇ ಇರುವ ನನಗೆ ಜಿರ್ಕಾಟಾಂಗ್ ಅರಣ್ಯದ ಮರಗಳ ದಟ್ಟಣೆಯು ದಿಗಿಲು ಹುಟ್ಟಿಸಿತು. ಗಗನಚುಂಬಿ ಮರಗಳನ್ನು ಕತ್ತೆತ್ತಿ ನೋಡುತ್ತಾ, ಅವುಗಳನ್ನು ಸುತ್ತು ಬಳಸಿರುವ ಬಳ್ಳಿಗಳು, ಬಿದಿರು-ಬೆತ್ತಗಳ ಹಿಂಡಿಲುಗಳ ನಡುವಿನಿಂದ ಸಾಗಿದೆವು. ಸ್ಥಳೀಯ ಪಕ್ಷಿಗಳು ಗಮನ ಸೆಳೆದವು.
ಜಾರವಾಗಳ ಅರಣ್ಯದ ಹಾದಿಯನ್ನು ಕ್ರಮಿಸಿ ನಾವು ಬಾರ್ಜ ಮೂಲಕ ಬಾರಾಟಂಗಾ ತಲುಪಿ ಅಲ್ಲಿಂದ ಸ್ಪೀಡ್ ಬೋಟ್‌ನಲ್ಲಿ ಜಿರ್ಕಾಟಂಗ್ ಹಾಗೂ ಬಾರಾಟಂಗಾ ದ್ವೀಪಗಳ ಸಂದಿಯಲ್ಲಿ ಸಮುದ್ರಯಾನ ಕೈಗೊಂಡು ಕಾಂಡ್ಲಾವನಗಳಿಂದ ನುಸುಳಿ ಸುಣ್ಣದ ಕಲ್ಲಿನ ಗುಹೆಗೆ 2 ಕಿ.ಮೀ ಚಾರಣ ಮಾಡಬೇಕಾಗಿತ್ತು. ಬೋಟ್ ಪ್ರಯಾಣ ಮುಗಿಸಿದ ತರುವಾಯ 310 ಮೀಟರ್‌ಗಳ ಕಾಂಡ್ಲಾವನಗಳ ಕೆನೊಪಿ ವಾಕ್ ಮಾಡಿ ಭತ್ತದ ಗದ್ದೆಗಳನ್ನು, ಕೃಷಿಕರ ಬಿದಿರಿನ ಮನೆಗಳನ್ನು ನೋಡುತ್ತಾ ಗುಹೆಯನ್ನು ತಲುಪಿದೆವು. ಸುಣ್ಣದ ಕಲ್ಲಿನ ಗುಹೆಯಲ್ಲಿ ಟಾರ್ಚ್ ಬೆಳಕಿಗೆ ಬಗೆ ಬಗೆಯ ಆಕೃತಿಯ ಹೊಳೆಯುವ ಕಲ್ಲುಗಳನ್ನು ನೋಡುವ ಅನುಭವ ಪ್ರವಾಸಿಗರನ್ನು ಸ್ವಪ್ನ ಲೋಕಕ್ಕೆ ಕರೆದೊಯ್ಯುತ್ತದೆ. ಕಲ್ಲಿನ ರಚನೆಗಳು ಪ್ರವಾಸಿಗರ ಭಾವಕ್ಕೆ ತಕ್ಕಂತೆ ಭಾವನೆಗಳನ್ನು ತುಂಬುತ್ತವೆ.
ಮೂರನೇಯ ದಿನದ ಪ್ರವಾಸವು ‘ಸಮುದ್ರಿಕಾ’ ಮ್ಯೂಸಿಯಂನಿಂದ ಪ್ರಾರಂಭವಾಯಿತು. ಅಲ್ಲಿ ಅಂಡಮಾನ ಹಾಗೂ ನಿಕೋಬಾರ್ ದ್ವೀಪಗಳ ಆದಿವಾಸಿಗಳ ಜೀವನ ಚರಿತ್ರೆ, ಚಿತ್ತಾಕರ್ಷಕ ಮೀನುಗಳು, ಬಗೆ ಬಗೆಯ ಹವಳ, ಶಂಖ ಹಾಗೂ ಚಿಪ್ಪುಗಳು ಮನಸ್ಸಿಗೆ ಮುದ ನೀಡಿದವು. ಪೋರ್ಟ ಬ್ಲೇರ್‌ನ ಮತ್ತೊಂದು ಆಕರ್ಷಣೆ ಹಾಗೂ ಏಷ್ಯಾದಲ್ಲೆ ಹಿರಿದೆನ್ನುವ ಹೆಗ್ಗಳಿಕೆಯ ‘ಚಾಥಮ್ ಕಟ್ಟಿಗೆ ಮಿಲ್’ ನೋಡಿ ‘ಹ್ಯಾವ್ ಲಾಕ್’ ಎಂಬ ಚಿಕ್ಕ ದ್ವೀಪಕ್ಕೆ ವಿಹಾರನೌಕೆಯ ಮೂಲಕ ಪಯಣಿಸಿದೆವು. 12 ಸಾವಿರ ಜನಸಂಖ್ಯೆಯಿರುವ ಹ್ಯಾವ್ ಲಾಕ್‌ನಲ್ಲಿ ಹತ್ತಾರು ಬೀಚ್‌ಗಳಿವೆ. ಇಲ್ಲಿ ಒಂದು ದಿನ ವಾಸ್ತವ್ಯ ಹೂಡಿ ಏಷ್ಯಾಯಾದ ಅತ್ಯುತ್ತಮ ಬೀಚ್‌ಗಳಲ್ಲಿ ಮನಸಾರೆ ಸುತ್ತಾಡಿದೆವು.
ಸ್ಕೂಬಾ ಡೈವಿಂಗ್, ಸ್ನೊರ್ಕ್ಲಿಂಗ್ ಹಾಗೂ ಸೀ ವಾಕ್‌ಗಳೆಂಬ ಜಲಕ್ರೀಡೆಗಳನ್ನು ಮಾಡಿ ಹವಳ ದಿಬ್ಬಗಳ ಆಳದಲ್ಲಿ ಈಜಾಡಿ ಆನಂದ ಪಟ್ಟೆವು. ಕೊನೆಯ ದಿನ ಪ್ಲೋರ್ಟ್‌ಬ್ಲೇರ್‌ಗೆ ವಾಪಸಾಗಿ ‘ಚಿಡಿಯಾಟಾಪು’ ಗುಡ್ಡಕ್ಕೆ ಚಾರಣಕ್ಕೆ ಹೋದೆವು. ಚಿಡಿಯಾಟಾಪು ಸಾಮಾನ್ಯರೂ ಮುಗಿಸಿಬಹುದಾಗ 90 ನಿಮಿಷಗಳ ಚಾರಣ.
ಮರುದಿನ ಬೆಳಿಗ್ಗೆ ಅರೆಮನಸ್ಸಿನಿಂದ ಅಂಡಮಾನ್‌ನಿಂದ ಕಾಲ್ಕೀಳಲು ವೀರ ಸಾವರ್ಕರ ವಿಮಾನ ನಿಲ್ದಾಣಕ್ಕೆ ಬಂದೆವು.ವಿಮಾನ ನಬೋ ಮಂಡಲಕ್ಕೆ ನಿಧಾನವಾಗಿ ಆರೋಹಣ ಮಾಡುತ್ತಿದ್ದಂತೆಯೆ ಅಂಡಮಾನ್ ದ್ವೀಪ ಸಮೂಹವು ಹಸುರಿನ ಮಾಲೆಯಂತೆ ಗೋಚರಿಸುತ್ತಿತ್ತು. ವೀಕ್ಷಿಸುತ್ತಿದ್ದ ಮಡದಿಯ ಮೊಗದಲ್ಲಿ ಉಲ್ಲಾಸ ತುಂಬಿತ್ತು.
**
ಅಂಡಮಾನಿಗೆ ಹೋಗುವವರಿಗೆ..
ಹಡಗು ಹಾಗೂ ವಿಮಾನಗಳ ಮೂಲಕ ಚೆನೈ, ಕೊಲ್ಕತ್ತಾ ಹಾಗೂ ವಿಶಾಖಪಟ್ಟಣದಿಂದ ತಲುಪಬಹುದು. ಅಕ್ಟೋಬರ್ 15 ರಿಂದ ಏಪ್ರಿಲ್ 30 ಸೂಕ್ತ ಸಮಯ. ಅಲ್ಲಿ ದಕ್ಷಿಣ ಭಾರತೀಯ ಖಾದ್ಯಗಳು ಸಾಕಷ್ಟು ದೊರೆಯುತ್ತವೆ. ಎಳನೀರು ಅತ್ಯಂತ ಕಡಿಮೆ ದರದಲ್ಲಿ ದೊರೆಯುತ್ತದೆ. ಅಂಡಮಾನ್‌ನಲ್ಲಿ ಸುತ್ತಾಡಲು ಸೈಕಲ್, ದ್ವಿಚಕ್ರ ವಾಹನ ಬಾಡಿಗೆಗೆ ಲಭ್ಯ. ಆಟೊ, ಸರ್ಕಾರಿ ಬಸ್, ಬಾರ್ಜ್, ಸ್ವೀಡ್ ಬೋಟ್, ಕ್ರೂಸ್, ಟ್ಯಾಕ್ಸಿ ಸಿಗುತ್ತವೆ.
ನೋಡಬೇಕಾದ ತಾಣಗಳು
ಅಂಥ್ರಪಾಲಜಿ ಮ್ಯೂಸಿಯಂ, ವೈಪರ್, ರಾಸ್, ಜಾಲಿ ಬೊಯ್, ನೀಲ್, ಲಿಟ್ಲ ಅಂಡಮಾನ್, ರಾಸ್-ಸ್ಮಿತ್ ಟ್ವಿನ್ ಐಲ್ಯಾಂಡ್ ದ್ವೀಪಗಳು, ಮಡ್ ಹಾಗೂ ಬ್ಯಾರೆನ್ ಜ್ವಾಲಾಮುಖಿಗಳು ನೋಡಬಹುದು. ಕೊರ್ಬಿನ್ಸ್ ಕೊವ್, ಮರೀನ್ ಪಾರ್ಕ್, ಮೌಂಟ್ ಹಾರಿಟ್, ಡಿಗ್ಲಿಪುರ್ ಸ್ಯಾಡಲ್ ಪೀಕ್, ರಂಗತ್ ಕಾಂಡ್ಲಾ ಚಾರಣ, ಮಾಯಾಬಂದರ್ ಜಂಗಲ್ ಟ್ರೇಕ್ ಮತ್ತಷ್ಟು ನೋಡುವ ತಾಣಗಳು. (ಲೇಖನದಲ್ಲಿನ ತಾಣಗಳನ್ನು ಹೊರತು ಪಡಿಸಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.