ಸುತ್ತಲೂ ಹಬ್ಬಿರುವ ವಿಶಾಲ ಪರ್ವತ ಶ್ರೇಣಿ. ಎರಡು ಪರ್ವತಗಳ ನಡುವೆ, 359 ಮೀಟರ್ ಆಳದ ಪ್ರಪಾತದಲ್ಲಿ ಹರಿಯುತ್ತಿರುವ ಚೆನಾಬ್ ನದಿ. ಹಠಾತ್ತನೇ ಕುಸಿಯುವ ತಾಪಮಾನ, ಕಣಿವೆಯಿಂದ ಮೈಕೊರೆಯುವಂತೆ ಬೀಸುವ ಗಾಳಿ...
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಹಳ್ಳಿ ಕೌರಿಯಲ್ಲಿ ನಿರ್ಮಾಣವಾಗುತ್ತಿರುವ ಜಗತ್ತಿನ ಅತಿ ಎತ್ತರದ ಉಕ್ಕಿನ ಕಮಾನು ರೈಲು ಸೇತುವೆ ತಾಣದಿಂದ ಕಾಣುವ ಚಿತ್ರಣ ಇದು. ಈ ದುರ್ಗಮ ಪ್ರದೇಶದಲ್ಲಿ ಪ್ರತಿಕೂಲ ಪರಿಸ್ಥಿತಿ, ಹಲವು ಸವಾಲುಗಳ ನಡುವೆಯೂ ಸೇತುವೆ ನಿರ್ಮಾಣಕ್ಕೆ ಬಳಸಿರುವ ಎಂಜಿನಿಯರಿಂಗ್ ಕೌಶಲ ಎಂಥವರಿಗೂ ಬೆರಗು ಮೂಡಿಸುತ್ತದೆ. ಮಹತ್ವಾಕಾಂಕ್ಷೆಯ ಜಮ್ಮು– ಶ್ರೀನಗರ ರೈಲು ಮಾರ್ಗದಲ್ಲಿ ಈ ಸೇತುವೆ ನಿರ್ಮಾಣ ಕಾಮಗಾರಿಯನ್ನು ಅತ್ಯಂತ ಸವಾಲಿನದ್ದು ಎಂದೇ ಪರಿಗಣಿಸಲಾಗಿತ್ತು. ಇಲ್ಲಿಗೆ ಭೇಟಿ ನೀಡಿದಾಗ ಸೇತುವೆ ನಿರ್ಮಾಣದ ಸವಾಲುಗಳನ್ನು ಹತ್ತಿರದಿಂದ ಕಾಣುವ ಅವಕಾಶ ದೊರೆಯಿತು.
ಕಮಾನು ಸೇತುವೆ ಕಾಮಗಾರಿಯು ಉಧಂಪುರ– ಶ್ರೀನಗರ– ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆಯ ಭಾಗ. ಜಮ್ಮುವಿನಿಂದ ಕಟ್ರಾವರೆಗೆ 53 ಕಿ.ಮೀ. (ವೈಷ್ಣೋದೇವಿ ಮಂದಿರ ಇರುವ ನಗರ) ರೈಲು ಸಂಪರ್ಕ ಈಗಾಗಲೇ ಇದೆ. ಬನಿಹಾಲ್– ಶ್ರೀನಗರ ನಡುವಣ (78 ಕಿ.ಮೀ.) ಮಾರ್ಗವೂ ಪೂರ್ಣಗೊಂಡಿದೆ. ಇವೆರಡರ ನಡುವೆ, ಅಂದರೆ ಕಟ್ರಾದಿಂದ ಬನಿಹಾಲ್‌ವರೆಗಿನ (111 ಕಿ.ಮೀ. ದೂರ) ರೈಲ್ವೆ ಹಳಿ ನಿರ್ಮಾಣ ಕೆಲಸ ಈಗ ಪ್ರಗತಿಯಲ್ಲಿದೆ. ಈ ಮಾರ್ಗದಲ್ಲೇ 467 ಮೀ. ಉದ್ದದ ಈ ಕಮಾನು ಸೇತುವೆ ನಿರ್ಮಾಣಗೊಂಡಿದೆ.
ಚೆನಾಬ್ ನದಿ ಪಾತ್ರದಿಂದ 359 ಮೀ. ಎತ್ತರದಲ್ಲಿ (1,117 ಅಡಿ) ನಿರ್ಮಾಣವಾಗಿರುವ ಈ ಸೇತುವೆ ಪ್ಯಾರಿಸ್‌ನ ಹೆಗ್ಗುರುತು ಐಫೆಲ್ ಟವರ್‌ಗಿಂತಲೂ 35 ಮೀ. ಎತ್ತರದಲ್ಲಿದೆ. ಕಮಾನು ಸೇತುವೆಯ ಮೇಲ್ಭಾಗದಲ್ಲಿ ಉಕ್ಕಿನ ಜೋಡಣೆಯ ಕೊನೆಯ ಹಂತದ ಕೆಲಸ 2021ರ ಏಪ್ರಿಲ್ 5ರಂದು ಪೂರ್ಣವಾದಾಗ ಇಲ್ಲಿ ಸಂಭ್ರಮವೊ ಸಂಭ್ರಮ. ಈಗ ಇಕ್ಕೆಲಗಳಿಂದ ಕಮಾನು ಸೇತುವೆ ಮೇಲೆ ರೈಲು ಹಳಿ ಹಾದುಹೋಗುವ ಮಾರ್ಗದ ಕೆಲಸ ಭರದಿಂದ ನಡೆಯುತ್ತಿದೆ. ವಯಾಡಕ್ಟ್ ನಿರ್ಮಾಣ, ಹಳಿ ಜೋಡಣೆಗೆ ಅನುಕೂಲವಾಗುವಂತೆ ಸೇತುವೆ ಮೇಲೆ ಕಂಬಗಳ ನಿರ್ಮಾಣ, ಗರ್ಡರ್‌ಗಳ ಅಳವಡಿಕೆ, ವೆಲ್ಡಿಂಗ್ ಕೆಲಸಗಳಲ್ಲಿ ಕಾರ್ಮಿಕರು, ತಂತ್ರಜ್ಞರು ತಲ್ಲೀನರಾರುವ ದೃಶ್ಯ ಕಾಣುತ್ತದೆ.
ಉತ್ತರ ರೈಲ್ವೆ ವ್ಯಾಪ್ತಿಯ ಈ ಯೋಜನೆಯನ್ನು ಕೊಂಕಣ ರೈಲ್ವೆ ನಿಗಮ (ಕೆಆರ್‌ಸಿಎಲ್) ಕೈಗೆತ್ತಿಕೊಂಡಿದೆ. ಈ ಮಾರ್ಗದ (ಕೌರಿ– ಬಕ್ಕಲ್ ಹಳ್ಳಿಗಳನ್ನು ಸಂಪರ್ಕಿಸುವ) ಸುಮಾರು 1.31 ಕಿ.ಮೀ. ಮಾರ್ಗದ ಕಾಮಗಾರಿಯನ್ನು ಅಫ್ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ ನಿರ್ವಹಿಸುತ್ತಿದೆ. ಒಟ್ಟು ಯೋಜನಾ ವೆಚ್ಚ ₹1,400 ಕೋಟಿ.
ಎಂಜಿನಿಯರಿಂಗ್ ಕೌಶಲ: ಮೂರು ವರ್ಷಗಳಿಂದ ಸುಮಾರು 700 ಮಂದಿ ಕಾರ್ಮಿಕರು ಮತ್ತು ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿವಿಲ್ ಕಾಮಗಾರಿಗಳು, ಫ್ಯಾಬ್ರಿಕೇಷನ್ ಕೆಲಸಗಳು ನಡೆಯುವ ಸಂದರ್ಭದಲ್ಲಿ 2,000 ಮಂದಿ ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಈಗ ಮುಖ್ಯವಾಗಿ ಬಾಕಿಯಿರುವುದು ಜೋಡಣೆ ಕೆಲಸವಷ್ಟೆ.
‘ಚೆನಾಬ್ ನದಿಯ ಮೇಲೆ ರೈಲ್ವೆ ಸೇತುವೆ ನಿರ್ಮಾಣಕ್ಕೆ ಭೌಗೋಳಿಕವಾಗಿ ಈ ಜಾಗವೇ ಪ್ರಶಸ್ತವೆಂದು ಮನವರಿಕೆಯಾಯಿತು. ಆದರೆ ಇಷ್ಟೊಂದು ಎತ್ತರದಲ್ಲಿ ಕಮಾನು ಸೇತುವೆ ನಿರ್ಮಾಣ ಆಗಬೇಕಿತ್ತು. ಇದಕ್ಕೆ ವಿಶೇಷ ವಿನ್ಯಾಸವೂ ಬೇಕಿತ್ತು. ಜೊತೆಗೆ ನುರಿತ ಕೆಲಸಗಾರರನ್ನು ಹೊಂದಿಸುವುದು ಸವಾಲಾಗಿತ್ತು. ಅವರನ್ನು ಬೇರೆ ಬೇರೆ ಕಡೆಯಿಂದ ಆಯ್ಕೆ ಮಾಡಿ ವೈದ್ಯಕೀಯ ತಪಾಸಣೆ ನಡೆಸಿದೆವು. ಸ್ಥಳೀಯರಿಗೂ ಅವಕಾಶ ನೀಡಿದೆವು. ಎತ್ತರದ ಪ್ರದೇಶದ ಕ್ಲಿಷ್ಟ ವಾತಾವರಣಕ್ಕೆ ಹೊಂದಿಕೊಂಡು ಹೇಗೆ ಕೆಲಸ ಮಾಡಬೇಕು ಎಂಬ ಬಗ್ಗೆ ತರಬೇತಿ ಶಿಬಿರ ಹಮ್ಮಿಕೊಂಡೆವು. ನಂತರವಷ್ಟೇ ಅವರನ್ನು ಕೆಲಸದಲ್ಲಿ ತೊಡಗಿಸಲಾಯಿತು. ಇಂಥ ಹವಾಮಾನದಲ್ಲಿ ಆಧುನಿಕ ತಂತ್ರಜ್ಞಾನದ ಜೊತೆ ಅವರು ಕೆಲಸ ಮಾಡುವುದಕ್ಕೆ ಇದು ಅಗತ್ಯವಾಗಿತ್ತು’ ಎನ್ನುತ್ತಾರೆ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಎಸ್.ಎಂ.ವಿಶ್ವಮೂರ್ತಿ. ಅಫ್ಕಾನ್ಸ್ ಕಂಪನಿ ಉಪಾಧ್ಯಕ್ಷರೂ ಆಗಿರುವ ಅವರು ಕರ್ನಾಟಕದ ಬಳ್ಳಾರಿಯವರು.
‘ಕಾಮಗಾರಿಗೆ ಬಳಸಲಾಗಿರುವ ಕೇಬಲ್ ಕ್ರೇನ್ ಕೂಡ ವಿಶೇಷವಾದುದು. ಇದು ವಿಶ್ವದ ಅತಿ ಎತ್ತರದ ಕೇಬಲ್ ಕ್ರೇನ್. ಇದರ ಎತ್ತರ 130 ಮೀಟರ್. 40 ಟನ್ ಭಾರ ಎತ್ತುವ ಸಾಮರ್ಥ್ಯ ಈ ಕ್ರೇನ್‌ನದ್ದು. ಇಟಲಿ ನಿರ್ಮಿತ ಈ ದೈತ್ಯ ಕ್ರೇನ್ ನಮ್ಮ ದೇಶದಲ್ಲಿ ಬಳಕೆಯಾಗುತ್ತಿರುವುದು ಇದೇ ಮೊದಲು’ ಎನ್ನುತ್ತಾರೆ ಅವರು.
ಈ ಕ್ರೇನ್‌ನಿಂದ ಸದ್ಯ 36 ಟನ್‌ನಷ್ಟು ಭಾರ ಎತ್ತಲಾಗುತ್ತಿದೆ. ಬೆಳಿಗ್ಗೆ ಕ್ರೇನ್‌ನ ಅಟ್ಟಣಿಗೆಯನ್ನು ಹತ್ತುವ ಕಾರ್ಮಿಕರು ಇಳಿಯುವುದು ಸಂಜೆಯ ನಂತರವಷ್ಟೇ. ಎಲ್ಲ ಸಾಮಗ್ರಿಗಳನ್ನು ಕೇಬಲ್ ಮೂಲಕ ಅವರಿರುವ ಕಡೆಗೇ ತಲುಪಿಸುವ ವ್ಯವಸ್ಥೆಯಿದೆ. ಇಂಥ ಭೌಗೋಳಿಕ, ಅಪಾಯಕಾರಿ ಸನ್ನಿವೇಶದಲ್ಲಿ ಅಷ್ಟೊಂದು ಎತ್ತರದ ಕ್ರೇನ್ ಹತ್ತಿಳಿಯುವುದು ಕಷ್ಟ. ಹೀಗಾಗಿ ಜಲಬಾಧೆ ತೀರಿಸಲು ಕೆಳಗೆ ಇಳಿಯುವುದು ತ್ರಾಸದಾಯಕ. ಅದಕ್ಕಾಗಿ ವಿಶೇಷ ಪೊಟ್ಟಣವನ್ನೇ ನೀಡಲಾಗುತ್ತದೆ.
‘ಕಮಾನು ಸೇತುವೆಗೆ ಶ್ರೇಷ್ಠ ಗುಣಮಟ್ಟದ ಇ 410 ಮತ್ತು ಇ 250 ಸಿ ಗ್ರೇಡ್ ದರ್ಜೆಯ ಉಕ್ಕನ್ನು ಬಳಸಲಾಗಿದೆ. ಸೇತುವೆಗೆ ಬಳಸಿದ ಉಕ್ಕಿನ ಪ್ರಮಾಣ 10,600 ಟನ್. ಉಕ್ಕಿನ ಫ್ಯಾಬ್ರಿಕೇಷನ್ ಕೆಲಸವೂ ಶ್ರೇಷ್ಠ ಮಟ್ಟದಲ್ಲಿರುವುದನ್ನು ಖಾತರಿಪಡಿಸಿಕೊಳ್ಳಲಾಗಿದೆ. ಪ್ರತಿಯೊಂದು ಕೆಲಸದ ಪರೀಕ್ಷೆಗೂ ಪ್ರಮಾಣೀಕರಣಕ್ಕೆ ಪ್ರಯೋಗಾಲಯವಿದೆ’ ಎಂದು ವಿವರಿಸುತ್ತಾರೆ ವಿಶ್ವಮೂರ್ತಿ.
‘ಗುಡ್ಡಗಾಡು ಪ್ರದೇಶವಾಗಿರುವ ಕಾರಣ ಇಲ್ಲಿನ ಸಂಪರ್ಕ ರಸ್ತೆಯೂ ಬಹಳ ಇಕ್ಕಟ್ಟಿನದ್ದು. ಕೆಲವು ಕಡೆ ವಾಹನ ಸಂಚಾರ ದುಸ್ತರವೆನಿಸುವಷ್ಟು ಕಿರಿದಾಗಿದೆ. ಇಂಥ ರಸ್ತೆಯಲ್ಲಿ ಕಾಮಗಾರಿಗೆ ಬೇಕಾಗಿದ್ದ ಸರಕು– ಸಾಮಗ್ರಿಗಳನ್ನು ಒಯ್ಯುವುದೇ ದೊಡ್ಡ ಸವಾಲಾಗಿತ್ತು. ಮಳೆಗಾಲದಲ್ಲಂತೂ ಮಣ್ಣಿನ ಗುಡ್ಡಗಳು ಜರಿದು ಸಂಚಾರ ಸ್ಥಗಿತಗೊಳ್ಳುವುದು ಇಲ್ಲಿ ಸಾಮಾನ್ಯ’ ಎಂದು ವಿವರಿಸುತ್ತಾರೆ.
ಈ ಯೋಜನೆ ಆರಂಭಿಸುವಾಗ, ಕಾಮಗಾರಿ ಸ್ಥಳಕ್ಕೆ ಸರಿಯಾದ ರಸ್ತೆ ಸಂಪರ್ಕವೂ ಇರಲಿಲ್ಲ. 15 ಕಿ.ಮೀ. ರಸ್ತೆಯನ್ನು ಗುತ್ತಿಗೆ ಪಡೆದುಕೊಂಡ ಸಂಸ್ಥೆಯೇ ನಿರ್ಮಿಸಬೇಕಾಯಿತು.
ಒಂದೂ ಅವಘಡವಿಲ್ಲ: ‘ಕಣಿವೆಯಿಂದ ಬೀಸುವ ಜೋರಾದ ಗಾಳಿಯ ಒತ್ತಡ ತಡೆದುಕೊಳ್ಳಲು ಸೇತುವೆಯ ಎರಡೂ ಕಡೆ ವಿಂಡ್ ಪಾನೆಲ್‌ಗಳನ್ನು ಜೋಡಿಸಲಾಗಿದೆ. ಇವು ಗಾಳಿಯ ಒತ್ತಡದ ದಿಕ್ಕು ಬದಲಾಗುವಂತೆ ಮಾಡುತ್ತವೆ’ ಎಂದು ಕೆಲಸದ ನಡುವೆಯೇ ಮಾತಿಗೆ ಸಿಕ್ಕಿದ ಸೇಲಂ ಜಿಲ್ಲೆಯ ಹಿರಿಯ ಎಂಜಿನಿಯರ್ ಗೋವಿಂದರಾಜು ಹೇಳಿದರು.
‘ಈ ಪ್ರದೇಶ ಭೌಗೋಳಿಕವಾಗಿ ಆಯಕಟ್ಟಿನಿಂದ ಕೂಡಿದ್ದರೂ, ಇದುವರೆಗೆ ಕಾಮಗಾರಿಯಲ್ಲಿ ಒಂದೂ ಅವಘಡ ನಡೆದಿಲ್ಲ. ಕಾರ್ಮಿಕರು ಒಂದೇ ಕುಟುಂಬದವರಂತೆ ಕೆಲಸ ಮಾಡುತ್ತಿದ್ದಾರೆ’ ಎನ್ನುತ್ತಾರೆ 12 ವರ್ಷಗಳಿಂದ ಉಗ್ರಾಣ ಮತ್ತು ಖರೀದಿ ವಿಭಾಗದ ಮುಖ್ಯಸ್ಥರಾಗಿರುವ ಮಂಗಳೂರಿನ ಕೆ.ಶಿವಾನಂದ ಭಟ್.
2004ರಲ್ಲಿ ಕೆಲಸ ಆರಂಭವಾದರೂ 2014ರಿಂದ ವೇಗ ಪಡೆಯಿತು. ನಿರ್ಮಾಣ ಸ್ಥಳದಲ್ಲಿ ವಿವಿಧ ಕಡೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇದೆ. ಕಾಮಗಾರಿ ಪ್ರಗತಿಯ ಬಗ್ಗೆ ದೆಹಲಿಯಿಂದಲೇ ನಿಗಾ ವಹಿಸಲಾಗುತ್ತಿದೆ. ಗಣ್ಯರ ಭೇಟಿಗೆ ಅನುಕೂಲ ಕಲ್ಪಿಸಲು ಹೆಲಿಪ್ಯಾಡ್ ಕೂಡ ನಿರ್ಮಾಣವಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಕೌರಿ ಮತ್ತು ಬಕ್ಕಲ್ ಕಡೆಯಿಂದ ಕಮಾನು ಸೇತುವೆಯ ಮೇಲೆ ರೈಲು ಹಳಿ ಜೋಡಿಸುವ ಕೆಲಸ ಈ ವರ್ಷದ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಬೇಕಿದೆ. 2023ರ ಮಾರ್ಚ್ ವೇಳೆಗೆ ರೈಲು ಹಳಿಯು ಸಂಚಾರಕ್ಕೆ ಸಜ್ಜುಗೊಳ್ಳುತ್ತದೆ ಎಂಬ ಆಶಾವಾದ ರೈಲ್ವೆ ಅಧಿಕಾರಿಗಳದ್ದು.
ಈ ಯೋಜನೆ ಪೂರ್ಣಗೊಂಡಲ್ಲಿ ದೇಶದ ಯಾವುದೇ ಭಾಗದಿಂದ ಜಮ್ಮು–ಕಾಶ್ಮೀರದ ರಾಜಧಾನಿ ಶ್ರೀನಗರಕ್ಕೆ ರೈಲು ಸಂಪರ್ಕ ಸಾಧ್ಯವಾಗಲಿದೆ.
ಇಲ್ಲಿನ ಜನರ ಜೊತೆ, ಪ್ರವಾಸಿಗರಿಗೂ ಈ ರೈಲು ಮಾರ್ಗದಿಂದ ಅನುಕೂಲವಾಗಲಿದೆ. ಜಮ್ಮು ಭಾಗದಲ್ಲಿ ಜರಿಯುವ ಗುಡ್ಡ, ಕಾಶ್ಮೀರ ಕಣಿವೆಯಲ್ಲಿ ಸುರಿಯುವ ಹಿಮದಿಂದ ರಸ್ತೆ ಮೂಲಕ ಸಂಚಾರ ವ್ಯತ್ಯಯಗೊಳ್ಳುವುದು ಸಾಮಾನ್ಯ. ಜಮ್ಮುವಿನಿಂದ ಶ್ರೀನಗರಕ್ಕೆ ರಸ್ತೆ ಮಾರ್ಗದ ದೂರ 268 ಕಿಲೋ ಮೀಟರ್. ಆದರೆ ಈ ದೂರ ಕ್ರಮಿಸಲು ಕೆಲವೊಮ್ಮೆ ಹವಾಮಾನ ವೈಪರೀತ್ಯದಿಂದಾಗಿ ಎರಡು–ಮೂರು ದಿನಗಳು ಹಿಡಿಯುವುದೂ ಇದೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ಕ್ಷಣ ಭಾರತೀಯ ರೈಲ್ವೆ ಇತಿಹಾಸದಲ್ಲಿ ಸುವರ್ಣಗಳಿಗೆ ಆಗುವುದರಲ್ಲಿ ಅನುಮಾನವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.