ADVERTISEMENT

‘ಮಿಸ್ತ್ರಾಸ್‌’ ಎಂಬ ಪಳಿಯುಳಿಕೆಗಳ ನಗರಿ

ಸುಚೇತಾ ಕೆ.ಎನ್.
Published 23 ಜೂನ್ 2018, 20:14 IST
Last Updated 23 ಜೂನ್ 2018, 20:14 IST
ಮಿಸ್ತ್ರಾಸ್ ನಗರದ ಒಂದು ಭಾಗ
ಮಿಸ್ತ್ರಾಸ್ ನಗರದ ಒಂದು ಭಾಗ   

ಸಾಕ್ರಟೀಸ್, ಪ್ಲೇಟೊ, ಅರಿಸ್ಟಾಟಲ್‌ನಂತಹ ದಾರ್ಶನಿಕರ ಜನ್ಮಭೂಮಿ ಗ್ರೀಸ್. ಐತಿಹಾಸಿಕ ಪ್ರಸಿದ್ಧಿ ಪಡೆದಅಥೆನ್ಸ್, ಸ್ಪಾರ್ಟಾದಂತಹ ನಗರಿಗಳ ತವರೂರು. ಪ್ರಪಂಚದಾದ್ಯಂತ ಕ್ರೀಡಾಪ್ರೇಮಿಗಳು ವೀಕ್ಷಿಸುವ ಒಲಿಂಪಿಕ್ ಆಟದ ಹೆಸರು ಕೇಳಿದರೂನೆನಪಾಗುವುದು ಈ ದೇಶವೇ. ವಿಜ್ಞಾನ, ಗಣಿತದಲ್ಲಿ ಬರುವ ತೀಟಾ, ಅಲ್ಫಾ, ಬೀಟಾಗಳೆಲ್ಲವೂ ಗ್ರೀಕ್ ಅಕ್ಷರಮಾಲೆಯಿಂದಎರವಲು ಪಡೆದವೇ ತಾನೇ! ಆಲಿವ್ ಬಿಟ್ಟು ಬೇರೇನೂ ಇಲ್ಲಿಬೆಳೆಯುವುದೇ ಇಲ್ಲವೇನೋಎನ್ನುವಷ್ಟರ ಮಟ್ಟಿಗೆ ಹರಡಿರುವ ಆಲಿವ್ ಗಿಡಗಳು, ಆಳಿ ಅಳಿದ ಸಾಮ್ರಾಜ್ಯಗಳ ಕುರುಹುಗಳಾಗಿ ನಿಂತಿರುವ ಕೋಟೆ, ಕೊತ್ತಲಗಳು, ಇತಿಹಾಸಕ್ಕೆ ನಮ್ಮನ್ನು ಬೆಸೆಯುವ ಕೊಂಡಿಗಳೆಂಬಂತೆಅಲ್ಲಲ್ಲೇ ಎದುರಾಗುವ ಪುರಾತನ ಅವಶೇಷಗಳು,ನೀಲಿ ನೀಲಿ ಸಾಗರಗಳ ಮಧ್ಯೆ ತೇಲುವಬಟ್ಟಲಂತೆ ಕಾಣುವ ಸ್ವರ್ಗಸದೃಶ ದ್ವೀಪಗಳು, ಪರ್ವತಶ್ರೇಣಿಗಳು, ಹಸಿರು, ಹಿಮ, ಹಕ್ಕಿ ಹೀಗೆ ಅಲ್ಲಿ ಎಲ್ಲವೂ ಇವೆ.

2004ರಲ್ಲಿ ಅಥೆನ್ಸ್‌ನಲ್ಲಿ ಒಲಿಂಪಿಕ್ ನಡೆದಾಗ ಇಂಡಿಯಾ ಅಟ್ ಅಥೆನ್ಸ್ ಎಂದು ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಸಮಾಚಾರಗಳನ್ನುತಪ್ಪದೇ ನೋಡುತ್ತಿದ್ದೆ. ಆಗ ಗ್ರೀಸ್ ಒಂದು ಮಾಯಾನಗರಿ ಎಂದೆನಿಸಿದ್ದು ಸುಳ್ಳಲ್ಲ. ರಾಜ್ಯವರ್ಧನ್ ಸಿಂಗ್ ರಾಥೋಡ್ ಬೆಳ್ಳಿ ಗೆದ್ದ ಸಮಯದಲ್ಲಿ, ಅವನಿಗಿತ್ತ ಪದಕ ನೆನಪಿರುವಷ್ಟೇ ನಿಚ್ಚಳವಾಗಿ ಆತನಮುಡಿಗೆ ತೊಡಿಸಿದ ಆಲಿವ್ ಎಲೆಗಳ ಕಿರೀಟ ಸಹ ನೆನಪಿದೆ. ಈ ದೇಶದ ಬಗ್ಗೆ ಮೊದಲೇ ಇಷ್ಟೆಲ್ಲಾ ಕೇಳಿದ್ದರಿಂದ, ಅಲ್ಲಿನ ಪ್ರವಾಸ ಬಹಳ ಆಪ್ತವೆನಿಸಿತ್ತು.

ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಿಂದ ಸುಮಾರು 200 ಕಿ.ಮೀ.ಗಳಷ್ಟು ದೂರದಲ್ಲಿ, ಪೆಲೊಪ್ಪೋನೀಸ್ ಪ್ರಾಂತ್ಯದಲ್ಲಿಸ್ಪಾರ್ಟಾ ಪಟ್ಟಣವಿದೆ. ಅಲ್ಲಿಂದ 6 ಕಿ. ಮೀ.ಗಳಷ್ಟು ಅಂತರದಲ್ಲಿದೆ ಮಿಸ್ತ್ರಾಸ್ ಎಂಬ ಉತ್ಖನನ ಪ್ರದೇಶ. ಅದನ್ನು ನೋಡಲೆಂದು ಅಥೆನ್ಸ್‌ನಿಂದ ಮೊದಲ ಬಸ್ಸಿನಲ್ಲಿ ಬೆಳಕು ಹರಿಯುವ ಮೊದಲೇ ಹೊರಟಿದ್ದೆವು. 6.30ಕ್ಕೆ ಬಸ್ ಹತ್ತಿ ನಾವು ಸ್ಪಾರ್ಟಾ ತಲುಪುವಾಗ 10 ಗಂಟೆಯಾಗಿತ್ತು. ಎತ್ತರೆತ್ತರದಟಾಯ್ಗೆಟೋಸ್ ಪರ್ವತ ಶ್ರೇಣಿಗಳ ಮಡಿಲಲ್ಲಿ ಪುರಾತನ ನಗರಿ ಸ್ಪಾರ್ಟಾದ ಅವಶೇಷಗಳ ಪಕ್ಕದಲ್ಲೇ ಬೆಳೆದು ನಿಂತ ಊರು ಈಗಿನ ಸ್ಪಾರ್ಟಾ. ರೋಮ್, ಪ್ಯಾರಿಸ್‌ನಂತೆಪ್ರವಾಸಿಗರಿಂದ ಕಿಕ್ಕಿರಿದ ಊರಲ್ಲ. ಬೀದಿ ಬೀದಿಯಲ್ಲಿ ನಿಂತು ಫೋಟೊ ತೆಗೆಸಿಕೊಳ್ಳುವ ಜನರಿಲ್ಲ. ಮುಖ್ಯವಾಗಿ ಏನನ್ನಾದರೂ ನೋಡಬೇಕೆಂದರೆ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಗೋಜಿಲ್ಲ. ಮಹಾನಗರಿಗಳ ವೇಗವೂ ಅಲ್ಲಿಲ್ಲ. ಒಟ್ಟಿನಲ್ಲಿಪ್ರಶಾಂತವಾದ ಚಿಕ್ಕ ಪಟ್ಟಣ.

ADVERTISEMENT


ಹಾಗಿಯ ನಿಕೋಲಸ್ ಚರ್ಚ್‌ನಲ್ಲಿಯ ಭಿತ್ತಿಚಿತ್ರಗಳು

ಆಲಿವ್ ಮ್ಯೂಸಿಯಂ
ನಾವು ಮೊದಲಿಗೆ ನೋಡಿದ್ದು ಅಲ್ಲಿದ್ದ ಆಲಿವ್ ಮ್ಯೂಸಿಯಂ. ಈ ಸಂಗ್ರಹಾಲಯವು ಚಿಕ್ಕದಾಗಿದ್ದರೂ ಬಹಳಷ್ಟು ಮಾಹಿತಿಗಳನ್ನೊಳಗೊಂಡಿತ್ತು. ಸುಮಾರು 50,000 ವರ್ಷಗಳಿಂದಲೂ ಆಲಿವ್ಗಿಡಗಳು ಅಲ್ಲಿವೆ ಎಂಬುದಕ್ಕೆ ಪುರಾವೆಯಾಗಿ ಸಿಕ್ಕಿದ ಎಲೆಗಳಪಳೆಯುಳಿಕೆಗಳನ್ನು ಸಂರಕ್ಷಿಸಿದ್ದರು. ಕ್ರಿಸ್ತ ಪೂರ್ವ 14ನೇ ಶತಮಾನದಲ್ಲಿ ಮೈಸಿನಿಯನ್ಸ್ ಬಳಸುತ್ತಿದ್ದಲೀನಿಯರ್ ಬಿ ಲಿಪಿಯಲ್ಲಿ ಕೊರೆದಿರುವ ಒಂದು ಜೇಡಿಮಣ್ಣಿನ ಫಲಕದೊರಕಿದ್ದು, ಅದರಲ್ಲಿನ ಕೆಲಚಿಹ್ನೆಗಳು ಆಲಿವ್ ಎಣ್ಣೆ, ಎಲೆ ಹಾಗೂ ಮರವನ್ನು ಬಿಂಬಿಸುತ್ತವೆ. ಅದು ಇದುವರೆಗೆ ಸಿಕ್ಕಿರುವಹಳೆಯ ಲಿಖಿತ ಉಲ್ಲೇಖ. ಅದರ ಒಂದು ಯಥಾಕೃತಿಇಲ್ಲಿ ನೋಡಲು ಸಿಗುತ್ತದೆ.

ಹಿಂದೆ ಆಲಿವ್ ತೈಲಗಳಿಗೆ ಬಹಳ ಬೇಡಿಕೆ ಇತ್ತು. ಗ್ರೀಸ್ ದೇಶದಿಂದ ಬೇರೆ ದೇಶಗಳಿಗೆ ರಫ್ತಾಗುತ್ತಿತ್ತು ಸಹ. ಸಾಕಷ್ಟು ಬಳಕೆಯಲ್ಲಿದ್ದಈ ಎಣ್ಣೆಯನ್ನು ತೆಗೆಯಲು ಯಾವ ರೀತಿ ಯಂತ್ರಗಳನ್ನು ಉಪಯೋಗಿಸಲಾಗುತ್ತಿತ್ತು, ಕಾಲಕ್ರಮೇಣ ಆ ತಂತ್ರಜ್ಞಾನದಲ್ಲಿ ಎಂತಹ ಬದಲಾವಣೆ ಬಂದಿತು ಎಂಬುದನ್ನು ವಿಶದವಾಗಿ ವಿವರಿಸಲಾಗಿತ್ತು. ಇತಿಹಾಸದಲ್ಲಿ, ಚಿತ್ರಕಲೆಗಳಲ್ಲಿ, ಎಷ್ಟೋ ಸಾಹಿತ್ಯ ಕೃತಿಗಳಲ್ಲಿ ಆಲಿವ್‌ನ ಪ್ರಸ್ತಾಪವಿರುವುದನ್ನು ತಿಳಿಸಲಾಗಿತ್ತು. ಮ್ಯೂಸಿಯಂ ಎಂದರೆ ಸ್ವಲ್ಪ ದೂರವೇ ಉಳಿಯುವ ನಾನು ‘ಚೆನ್ನಾಗಿದೆ’ ಎಂದು ಹೇಳುವಷ್ಟರ ಮಟ್ಟಿಗೆ ವಿಭಿನ್ನವಾಗಿತ್ತು.

ಮಿಸ್ತ್ರಾಸ್‌ನ ಇತಿಹಾಸ
ಅಲ್ಲಿಂದ ಮಿಸ್ತ್ರಾಸ್ ತಲುಪಲು ಇದ್ದ ಒಂದೇ ಒಂದುಬಸ್ಸು ಸಹ ಹೊರಟು ಹೋಗಿದ್ದುದರಿಂದ ನಾವು ಟ್ಯಾಕ್ಸಿ ತೆಗೆದುಕೊಂಡು ಹೋಗಬೇಕಾಯಿತು. ಮಿಸ್ತ್ರಾಸ್ ಎಂಬುದು ಕೆಲ ಶತಮಾನಗಳ ಹಿಂದೆ ಟಾಯ್ಗೆಟೊಸ್ ಶಿಖರ ಶ್ರೇಣಿಗಳ ಮೇಲೆ ಹರಡಿ ಬೆಳೆದಿದ್ದ ನಗರಿ.ಈ ಪಟ್ಟಣ 1249ರಲ್ಲಿ ವಿಲಿಯಂ 2 ಆಫ್ ವಿಲ್ಲೆಹಾರ್ ಡೂಯಿನ್ ಎಂಬಾತನಿಂದ ಕಟ್ಟಲ್ಪಟ್ಟಿತ್ತು. ಬೈಜ್ಯಾಂಟೀನ್ಸ್, ವೆನೆಟಿಯನ್ಸ್, ಟರ್ಕ್ಸ್ ಹೀಗೆ ಹಲವಾರು ಸಾಮ್ರಾಜ್ಯಗಳು ಇಲ್ಲಿತಮ್ಮ ಅಧಿಪತ್ಯ ಸಾಧಿಸಲು ಹೊಡೆದಾಡಿದರು. ಅದೆಷ್ಟು ಯುದ್ಧಗಳಿಗೆ ಮೂಕಸಾಕ್ಷಿಯಾಗಿ ನಿಂತಿದೆಯೋ ಈ ಜಾಗ.

ಈ ಉತ್ಖನನ ಪ್ರದೇಶದ ಒಳಹೋಗಲುಎರಡು ಪ್ರವೇಶ ದ್ವಾರಗಳಿವೆ. ಗುಡ್ಡದ ಬುಡದಿಂದ ಕೆಳಗಿನ ಪ್ರವೇಶ ದ್ವಾರವನ್ನು ಬಳಸಿಕೊಂಡುತುದಿಯವರೆಗೂ ಮೆಟ್ಟಿಲುಗಳನ್ನೇರಿ ಹೋಗಬಹುದು. ಇಲ್ಲವಾದಲ್ಲಿ ಮೇಲಿನ ಬಾಗಿಲವರೆಗೂ ವಾಹನದಲ್ಲಿ ಪಯಣಿಸಿ, ಅಲ್ಲಿಂದ ಕೆಲ ಮೆಟ್ಟಿಲುಗಳನ್ನೇರಿದರೆ ಬೆಟ್ಟದ ತುದಿ ತಲುಪಬಹುದು. ಸಮಯದ ಅಭಾವ ಇದ್ದುದರಿಂದ ನಾವು ಎರಡನೇಯದನ್ನೇ ಆಯ್ಕೆ ಮಾಡಿಕೊಂಡೆವು. ಆ ಬೆಟ್ಟದ ತುದಿಯಲ್ಲಿ ವಿಲ್ಲೆಹಾರ್ ಡೂಯಿನ್ ಎಂಬ ಕೋಟೆ ಇದೆ. ಇತ್ತೆಂಬುದಕ್ಕೆ ಕುರುಹಾಗಿ ಹೊರಾಂಗಣವನ್ನು ಸುತ್ತುವರಿದಿರುವ ಗೋಡೆಗಳು ಉಳಿದಿವೆಯಷ್ಟೇ. ಹಿಂದೆ ಅದೇ ಆ ರಾಜನ ಆಸ್ಥಾನವೂ ಆಗಿತ್ತಂತೆ. ಅಲ್ಲಿ ತುತ್ತತುದಿಯಲ್ಲಿ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಮಂಜು ಮುಸುಕಿದ ಬೆಟ್ಟಗಳ ಸಾಲು, ಕೆಳಗೆ ಹರಡಿರುವ ಮಿಸ್ತ್ರಾಸ್ ನಗರಿ, ನೀಲಾಕಾಶ, ದಿಗಂತದವರೆಗೂ ವ್ಯಾಪಿಸಿರುವ ಹಸಿರು ವನ ಹೀಗೆ ಅಲ್ಲಿನ ವಿಹಂಗಮ ನೋಟ ಲಭ್ಯವಾಗುತ್ತದೆ.

ಕೋಟೆಯನ್ನು ನೋಡಿ ಕಡಿದಾದ ಮೆಟ್ಟಿಲುಗಳನ್ನಿಳಿಯುತ್ತ ಕೆಳಗೆ ಬಂದರೆ ಕೆಲವೆಡೆ ಹೆಸರಿನಿಂದ ಮಾತ್ರವೇ ಗುರುತಿಸಬಹುದಾದ ನಿರ್ಮಿತಿಗಳನ್ನುಕಾಣಬಹುದು. ಅಲ್ಲಿನ ಮುಖ್ಯ ಆಕರ್ಷಣೆಗಳೆಂದರೆ ಮಧ್ಯಕಾಲೀನ ಚರ್ಚುಗಳು ಮತ್ತು ಮೊನಾಸ್ಟರಿಗಳು. ಒಟ್ಟು ಏಳು ಚರ್ಚುಗಳಿದ್ದು ಇಲ್ಲಿರುವ ಹಾಗೆ ಸೋಫಿಯಾ ಎಂಬ ಇಗರ್ಜಿಯು ರಾಜಮನೆತನದವರಿಂದ ಮುಖ್ಯವಾಗಿ ಬಳಸಲ್ಪಡುತ್ತಿತ್ತು. ತನ್ನ ಆಕರ್ಷಣೆಯನ್ನು ಇನ್ನೂ ಉಳಿಸಿಕೊಂಡಿರುವ ಇದರಲ್ಲಿ ಗೋಡೆಗಳ ಮೇಲೆ ಬಹು ಸುಂದರ ಭಿತ್ತಿಚಿತ್ರಗಳಿವೆ. ಕಾಲದ ಮಹಿಮೆಯಿಂದ ಬಣ್ಣ ಮಾಸಿ ಅಲ್ಲಲ್ಲಿ ಹಾಳಾಗಿದ್ದರೂ ಬಹಳಷ್ಟು ವರ್ಣಚಿತ್ರಗಳು ಸುಸ್ಥಿತಿಯಲ್ಲಿವೆ. ಬೈಜ್ಯಾಂಟೀನ್ ಕಾಲದ 1250 ರಿಂದ 1300ರ ಆಸುಪಾಸಿನಲ್ಲಿ ಕಟ್ಟಲ್ಪಟ್ಟ ಪೆಲಟಾಕಿ (ಚಿಕ್ಕ ಅರಮನೆ ಎಂಬರ್ಥ)ಎನ್ನುವ ಭವನದ ಭಗ್ನಾವಶೇಷಗಳಿವೆ. ರಾಜಗೃಹಪ್ಯಾಲೇಸ್ ಆಫ್ ಡೆಸ್ಪೋಟ್ಸ್ ನವೀಕರಣ ಕಾರ್ಯ ನಡೆಯುತ್ತಿದ್ದುದರಿಂದಮುಚ್ಚಲ್ಪಟ್ಟಿತ್ತಾದರೂ ಹೊರಗಿನಿಂದಸಹ ಬಹಳ ಸುಂದರವಾಗಿದ್ದು ಪ್ರಶಂಸಾರ್ಹವಾಗಿತ್ತು.

ಹಿಂದೆ ಮಿಸ್ತ್ರಾಸ್ ವಾಸಯೋಗ್ಯವಾಗಿದ್ದ ಸಮಯದಲ್ಲಿ ರಾಜಮನೆತನ ಮತ್ತು ಶ್ರೀಮಂತ ವರ್ಗಕ್ಕೆ ಸೇರಿದ, ಮೇಲು ದರ್ಜೆಯ ನಾಗರಿಕರಿಗಾಗಿ ಪಟ್ಟಣದ ಮೇಲ್ಭಾಗವೂ ಹಾಗೂ ಸಾಮಾನ್ಯ ಜನರಿಗೆಂದು ಕೆಳಭಾಗವೂ ಮೀಸಲಾಗಿತ್ತು. ಈಗಲೂ ಗಮನಿಸಬಹುದಾದಮೊನೆಮ್ವಾಸಿಯ ಗೇಟ್, ಮೇಲಿನ ಹಾಗೂ ಕೆಳಗಿನ ಸ್ತರಗಳನ್ನು ಬೇರ್ಪಡಿಸುವ ಹೆಬ್ಬಾಗಿಲಾಗಿತ್ತು. ಅದನ್ನು ದಾಟಿ ಕೆಳಭಾಗಕ್ಕೆ ಬಂದೆವು. ಇಲ್ಲಿನ ಪ್ಯಾಂಟಾನಾಸ್ಸ ಮೊನಾಸ್ಟರಿಯಲ್ಲಿ ಮಾತ್ರವೇ ಕ್ರೈಸ್ತ ಸನ್ಯಾಸಿನಿಯರುವಾಸವಾಗಿದ್ದು ಉಳಿದಂತೆ ಎಲ್ಲವೂ ಜನವಿಹೀನವಾಗಿವೆ. ಕೆಳಗಿನ ಬಾಗಿಲ ಸಮೀಪದಲ್ಲೇ ಇರುವ ಮಿತ್ರೋಪೊಲಿ ಚರ್ಚ್ ಸಹ ಭಿತ್ತಿಚಿತ್ರಗಳಿಂದ ಕೂಡಿದ್ದು ವರ್ಣರಂಜಿತವಾಗಿತ್ತು. ನೆಲದಮೇಲೆ ಕೆತ್ತಲಾಗಿದ್ದಎರಡು ತಲೆಯ ಹದ್ದು ನಮ್ಮ ಗಂಡಭೇರುಂಡ ಹಕ್ಕಿಯನ್ನು ನೆನಪಿಗೆ ತರುವಂತಿತ್ತು. ಇದಲ್ಲದೆ ಅಲ್ಲಿ ಒಂದು ಚಿಕ್ಕ ವಸ್ತು ಸಂಗ್ರಹಾಲಯವೂ ಇದೆ. ಬೈಜ್ಯಾಂಟೀನ್ ಸಾಮ್ರಾಜ್ಯದ ಪತನಾನಂತರ ತುರ್ಕರ ವಶವಾದ ಈ ಸ್ಥಳ, ಬಹಳಷ್ಟು ಮಾರ್ಪಾಟುಗಳಿಗೆ ಒಳಗಾಯಿತು.

ಹಿಮದ ಟೋಪಿ ಧರಿಸಿರುವ ಟಾಯ್ಗೆಟೋಸ್ ಪರ್ವತಶ್ರೇಣಿ

ಗಂಟೆ ಮೂರಾಗುತ್ತಿತ್ತು. ಮಿಸ್ತ್ರಾಸ್‌ ಪ್ರದೇಶವನ್ನು ಮುಚ್ಚುವ ಸಮಯವೂ ಆಗುತ್ತಿತ್ತು. ಕೊನೆಯಲ್ಲಿ ಸಣ್ಣ ಅಂಗಡಿ ಇದ್ದು ಏನಾದರೂ ನೆನಪಿನ ಕಾಣಿಕೆಗಳಂತವುಗಳನ್ನು ಕೊಂಡುಕೊಳ್ಳಬಹುದಾಗಿತ್ತು. ಅಲ್ಲೊಮ್ಮೆ ತಿರುಗಾಡಿ ಮತ್ತೆ ಟ್ಯಾಕ್ಸಿ ಹಿಡಿದು ಸ್ಪಾರ್ಟಾಕ್ಕೆ ವಾಪಸಾದೆವು. ನಮ್ಮ ಪಟ್ಟಿಯ ಕಡೆಯಲ್ಲಿ ಇದ್ದದ್ದು ಕಿಂಗ್ ಲಿಯೋನಾಯಿಡ್ಸ್‌ನ ಪ್ರತಿಮೆ. ‘300’ ಚಲನಚಿತ್ರ ನೋಡಿದವರಿಗೆ ಆತನ ಪರಿಚಯವಿರುತ್ತದೆ. ಪರ್ಶಿಯನ್ನರ ವಿರುದ್ಧ ಹೋರಾಡಿ ಮಡಿದ ಈ ವೀರನ ಸ್ಮರಣಾರ್ಥ 1968ರಲ್ಲಿ ಆತನ ಆಳೆತ್ತರದ ಪ್ರತಿಮೆಯನ್ನು ನಿಲ್ಲಿಸಲಾಯಿತು. ಅದನ್ನು ನೋಡಿದ ಮೇಲೆ ಹೊಟ್ಟೆ ಚುರುಗುಟ್ಟುತ್ತಿದ್ದುದರಿಂದ ಸಮೀಪದಲ್ಲೇ ಇದ್ದಹೋಟೆಲ್‌ನ ಕಡೆ ಹೆಜ್ಜೆ ಹಾಕಿದೆವು.
*
ಹೋಗುವುದು ಹೇಗೆ?
ಅಥೆನ್ಸ್‌ನಿಂದ ಸ್ಪಾರ್ಟಾ ತಲುಪಲು ಬಸ್ಸಿನ ಸೌಲಭ್ಯವಿದೆ. ಸುಮಾರು ಮುರೂವರೆ ಗಂಟೆಗಳ ಕಾಲ ಪ್ರಯಾಣ. ಅಲ್ಲಿಂದ ಮಿಸ್ತ್ರಾಸ್ ಇರುವುದು ಸುಮಾರು 6 ಕಿ. ಮೀ. ದೂರದಲ್ಲಿ. ಹಾಗಾಗಿ ಸ್ಥಳೀಯ ಬಸ್ಸು ಅಥವಾ ಟ್ಯಾಕ್ಸಿ ಬಳಸಿದರೆ ಉತ್ತಮ. ಕಾರು ಚಲಾಯಿಸಿಕೊಂಡು ಹೋದರಂತೂ ಬಹಳಷ್ಟು ಸಮಯ ಉಳಿಯುತ್ತದೆ.

ಮತ್ತೂ ಏನೇನಿದೆ?
ಮೈಸಿನೀ:
ಮೌಂಟ್ ಆಗಿಯೋಸ್ ಹಾಗೂ ಮೌಂಟ್ ಝರಾ ಬೆಟ್ಟಗಳ ತಪ್ಪಲಿನಲ್ಲಿಕ್ರಿಸ್ತ ಪೂರ್ವ 1600–1200ರ ಸಮಯದಲ್ಲಿ ಪ್ರಬಲವಾಗಿದ್ದ ಮೈಸಿನಿಯನ್ ಸಾಮ್ರಾಜ್ಯದ ಅವಶೇಷಗಳನ್ನು ಇಂದಿಗೂಕಾಣಬಹುದು.

ಒಲಂಪಿಯಾ: ಒಲಿಂಪಿಕ್ ಕ್ರೀಡೆಗಳ ಉಗಮ ಸ್ಥಾನ ಈ ಊರು. ಇಲ್ಲಿ ಈಗಿನಂತೆಯೇ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಒಲಿಂಪಿಕ್ ಕ್ರೀಡೆಗಳು ನಡೆಯುತ್ತಿದ್ದವು. ಇಂದಿಗೂ ಒಲಿಂಪಿಕ್ ಜ್ಯೋತಿ ಮೊದಲಿಗೆ ಇಲ್ಲೇ ಹೊತ್ತಿಸಲ್ಪಡುತ್ತದೆ.

ಎಪಿಡಾರಸ್: ಸುಮಾರು 14,000 ಜನ ಒಟ್ಟಿಗೆ ಕುಳಿತುಕೊಳ್ಳಬಹುದಾದ ಕ್ರಿ.ಪೂ 4ನೇ ಶತಮಾನದಲ್ಲಿ ಕಟ್ಟಲ್ಪಟ್ಟ ಆಂಫಿ ಥಿಯೇಟರ್ ಇಲ್ಲಿನ ಮುಖ್ಯ ಆಕರ್ಷಣೆ.

ನೆಫ್ಲಿಯೋ: ಸಮುದ್ರದ ದಡದಲ್ಲೇ ಬೆಳೆದು ನಿಂತ ಆಧುನಿಕ ಬಂದರು ನಗರಿ. ಸುಂದರ ಸಮುದ್ರ ತೀರಗಳಿಂದ ಇದು ಪ್ರವಾಸಿಗರಿಗೆ ನೆಚ್ಚಿನ ವಿಹಾರ ತಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.