ವಿಶ್ವವಿಖ್ಯಾತ ಗೋಳಗುಮ್ಮಟವಿರುವ ವಿಜಯಪುರ ಪ್ರವಾಸಿಗರಿಗೆ ಚಿರಪರಿಚಿತ ತಾಣ. ಈಗ ಅದೇ ಊರಿನಲ್ಲಿ ಇನ್ನೊಂದು ಪ್ರವಾಸಿ ತಾಣ ರೂಪುಗೊಳ್ಳುತ್ತಿದೆ. ಅದೇ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕಲಾಗ್ರಾಮ!
ವಿಶ್ವವಿದ್ಯಾಲಯದ ಪ್ರಧಾನ ಪ್ರವೇಶದ್ವಾರ ಪ್ರವೇಶಿಸುತ್ತಿದ್ದಂತೆ, ಭವ್ಯವಾದ ಅಕ್ಕಮಹಾದೇವಿ ಮೂರ್ತಿ ಎಲ್ಲರನ್ನೂ ಸ್ವಾಗತಿಸುತ್ತದೆ. ಅದರ ಸುತ್ತಲೂ ಅನೇಕ ಸೃಜನಾತ್ಮಕ ಕಲಾಕೃತಿಗಳನ್ನು ಜೋಡಿಸಿಟ್ಟಿದ್ದಾರೆ. ಹಸಿರಿನ ನೆಲಹಾಸು ಮನಕ್ಕೆ ಮುದ ನೀಡುತ್ತದೆ. ಕಿತ್ತೂರು ಚೆನ್ನಮ್ಮ, ಮದರ್ ಥೆರೇಸಾ, ಚಾಂದಬೀಬಿಯರಂತಹ ಸಾಧಕಿಯರ ಪ್ರತಿಮೆಗಳು ಗಮನ ಸೆಳೆಯುತ್ತವೆ. ಇವೆಲ್ಲ ಕಲಾಕೃತಿಗಳ ಹಿನ್ನೆಲೆಯಲ್ಲೇ ಸುಂದರವಾದ ವಿಶ್ವವಿದ್ಯಾಲಯದ ಆಡಳಿತ ಭವನವಿದೆ. ಅದರ ಎದುರಿನಲ್ಲಿಯೇ ಕಲಾಗ್ರಾಮ ಮೈದಳೆಯುತ್ತಿದೆ.
ಆ ಕಲಾಗ್ರಾಮದಲ್ಲಿ ಹಲವು ಮನೆಗಳಿವೆ. ಅದರಲ್ಲಿ ಒಂದು ಮನೆಗೆ ಹೋದಾಗ, ಬಾಗಿಲಲ್ಲಿ ನಾಯಿ ಮಲಗಿತ್ತು. ಅದು ಎಲ್ಲಿ ನಮ್ಮನ್ನು ಕಚ್ಚಿ ಬಿಡುವುದೋ ಎಂಬ ಆತಂಕದಿಂದ ಹೆಜ್ಜೆ ಹಾಕಿದರೆ, ಅದು ಒಂದಿನಿತೂ ಅಲುಗಾಡಲಿಲ್ಲ. ಏಕೆಂದು ಆಮೇಲೆ ಗೊತ್ತಾಯಿತು ಅದು ಜೀವಂತ ನಾಯಿಯಲ್ಲ, ನಾಯಿಯ ಒಂದು ಪ್ರತಿಕೃತಿ ಎಂದು. ಇಲ್ಲಿರುವ ಪ್ರತಿ ಮನೆಯಲ್ಲೂ ವೈವಿಧ್ಯಮಯ ಶಿಲ್ಪಗಳಿವೆ. ಪ್ರತಿ ಶಿಲ್ಪದಲ್ಲೂ ಜೀವಕಳೆ ಇದೆ.
ಒಂದು ಕೊಠಡಿಗೆ ಹೋದಾಗ, ತಾಯಿ ಮಗುವಿಗೆ ಹಾಲುಣಿಸುವ ಶಿಲ್ಪವನ್ನು ನೋಡಿದೆವು. ಅದೇ ಮನೆಯಲ್ಲಿ ಕುಟ್ಟುವ, ಬೀಸುವ, ಹಾಲು ಕರೆಯುವ, ನೀರು ತರುವ, ರಂಗೋಲಿ ಹಾಕುವ ಮಹಿಳೆಯರ ಶಿಲ್ಪಗಳ ಸಮೂಹವೇ ಅಲ್ಲಿತ್ತು. ಜೊತೆಗೆ ಹಳ್ಳಿಯಲ್ಲಿರುವಂತೆ ಎಮ್ಮೆ, ಹಸು, ಕರು, ಕೋಳಿ, ಹುಂಜ, ಕುರಿ, ನಾಯಿ ಎಲ್ಲ ಪ್ರತಿಕೃತಿಗಳೂ ಅಲ್ಲಿದ್ದವು. ಎಲ್ಲವೂ ಜೀವಂತ ಇವೆ ಏನೋ ಎಂಬ ಭ್ರಮೆಯನ್ನು ಮೂಡಿಸುತ್ತಿದ್ದವು. ಅಲ್ಲಿನ ಕೆಲವು ಕಲಾಕೃತಿಗಳು ಇನ್ನೂ ಪೂರ್ಣಗೊಂಡಿಲ್ಲ. ಕಲಾವಿದರು ಅವುಗಳಿಗೆ ಇನ್ನೂ ಅಂತಿಮ ರೂಪ ನೀಡಬೇಕಿದೆ.
ಕಲಾಗ್ರಾಮದಲ್ಲಿ ಒಂದು ಲಂಬಾಣಿ ತಾಂಡ, ಪುಟ್ಟ ಹಳ್ಳಿಯಂತಹ ಮಾದರಿಗಳೂ ಇವೆ. ಇವುಗಳೊಳಗೆ ಒಡಾಡುತ್ತಿದ್ದರೆ, ಹಳ್ಳಿಯೊಂದರ ಬೀದಿಯಲ್ಲಿ ಹೆಜ್ಜೆ ಹಾಕಿದ ಭಾವ ಉಂಟಾಗುತ್ತದೆ. ಇದನ್ನೆಲ್ಲ ದಾಟಿ ವಿಶ್ವವಿದ್ಯಾಲಯದ ಒಳ ಹೊಕ್ಕರೆ, ಅಪರೂಪದ ವಾಸ್ತುವಿನ್ಯಾಸವುಳ್ಳ ನವ್ಯ ಕಟ್ಟಡಗಳ ದರ್ಶನವಾಗುತ್ತದೆ. ಇಡೀ ಆವರಣದ ಒಳಗಡೆಯೂ ಅಲ್ಲಲ್ಲಿ ಕೆಲವು ಸುಂದರ ಮೂರ್ತಿಗಳು ನಮಗೆ ಎದುರಾಗುತ್ತವೆ.
ಒಟ್ಟಿನಲ್ಲಿ, ವಿಜಯಪುರದ ಪ್ರಮುಖ ಪ್ರವಾಸಿತಾಣಗಳ ಪಟ್ಟಿಗೆ ಈಗ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕಲಾಗ್ರಾಮವೂ ಸೇರಿಕೊಳ್ಳುತ್ತಿದೆ.
ಹೋಗುವುದು ಹೇಗೆ ?
ವಿಶ್ವವಿದ್ಯಾಲಯದ ಆವರಣ ವಿಜಯಪುರದಿಂದ ಸ್ವಲ್ಪ ದೂರದಲ್ಲಿದೆ. ನಗರ ಸಂಚಾರಿ ಬಸ್ಸುಗಳಿವೆಯಾದರೂ ಅವುಗಳ ಸಂಖ್ಯೆ ತೀರ ಕಡಿಮೆ. ಆಟೊ ಸೇವೆಗಳು ಲಭ್ಯವಾದರೂ ಸ್ವಲ್ಪ ದುಬಾರಿ. ಆದರೆ, ಒಮ್ಮೆ ಆ ಆವರಣ ತಲುಪಿ, ಅಲ್ಲಿ ಕೆಲವು ಗಂಟೆಗಳನ್ನು ಕಳೆದ ಮೇಲೆ, ಪ್ರವಾಸಿಗರಿಗೆ ದೂರ ಹಾಗೂ ದುಬಾರಿ ಎಂಬ ಭಾವ ಅಳಿಸಿ ಹೋಗಿರುತ್ತದೆ.
ಊಟ–ಉಪಹಾರಕ್ಕೆ
ಊಟ–ಉಪಹಾರಕ್ಕಾಗಿ ಇಲ್ಲಿ ಎಲ್ಲ ರೀತಿಯ ಹೋಟೆಲ್ – ಕ್ಯಾಂಟೀನ್‌ಗಳಿವೆ. ಅವುಗಳ ಗುಣಮಟ್ಟ ಸುಧಾರಿಸಬೇಕಿದೆ, ಅಷ್ಟೇ. ಹಾಗೆಯೇ, ಅವುಗಳ ಸಂಖ್ಯೆಯೂ ಹೆಚ್ಚಿಸುವ ಅಗತ್ಯ ಇದೆ.
ತೊರವಿ ನೋಡಿ ಬನ್ನಿ
ಈ ಕಲಾಗ್ರಾಮ ನೋಡಿದ ನಂತರ, ಸಮೀಪದಲ್ಲೇ ಇರುವ ತೊರವಿ ಗ್ರಾಮಕ್ಕೆ ಭೇಟಿ ನೀಡಬಹುದು. ಅಲ್ಲಿರುವ ಲಕ್ಷ್ಮಿ ಹಾಗೂ ನರಸಿಂಹದೇವರ ಗುಡಿಗಳಿಗೆ ಹೋಗಿಬರಬಹುದು. ಇಲ್ಲಿನ ನರಹರಿ ಎಂಬ ಕವಿ ತೊರವಿಯ ನರಸಿಂಹ ದೇವಾಲಯದಲ್ಲಿಯೇ ತೊರವಿ ರಾಮಾಯಣವನ್ನು ರಚಿಸಿದನಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.