ಚಲನಶೀಲತೆಯ ಪ್ರತೀಕವಾಗಿ ವಸ್ತುಸಂಗ್ರಹಾಲಯಕ್ಕೆ ‘ಪಯಣ’ ಎಂಬ ಹೆಸರಿಡಲಾಗಿದೆ. ಕಾರನ್ನು ಎತ್ತುಗಳು ಎಳೆಯುತ್ತಿರುವ ಪಯಣದ ಫಲಕ ಕೂಡ ಬದಲಾವಣೆ ಜಗದ ನಿಯಮ ಎಂಬ ಮಾತನ್ನು ಸಾರುವಂತಿದೆ.
––––
ಶ್ರೀರಂಗಪಟ್ಟಣದಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿ ಬದಿಯಲ್ಲಿ ಬೃಹತ್ ಚಕ್ರ ವಿನ್ಯಾಸದ ವಿಭಿನ್ನವಾದ ಕಟ್ಟಡ ನಮ್ಮನ್ನು ಸೆಳೆಯುತ್ತದೆ. ಅದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಆಸಕ್ತಿಯ ಫಲವಾಗಿ ಸುಮಾರು ಹತ್ತು ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿಸಿರುವ ಅಪರೂಪದ ಮ್ಯೂಸಿಯಂ. ಅಲ್ಲಿ ಎತ್ತುಗಳು ಕಾರನ್ನು ಎಳೆಯುತ್ತಿರುವ ಚಿತ್ರದೊಂದಿಗೆ ‘ಪಯಣ’ ಎನ್ನುವ ನಾಮಫಲಕ ಕುತೂಹಲ ಹೆಚ್ಚಿಸುತ್ತದೆ. ಅದರ ಪ್ರವೇಶದ್ವಾರದಲ್ಲೇ ನಿಲ್ಲಿಸಿರುವ ‘ಡಬಲ್ ಡೆಕ್ಕರ್’ ಬಸ್ಸು ಒಳಪ್ರವೇಶಕ್ಕೆ ಮುನ್ನುಡಿ ಬರೆಯುತ್ತದೆ. ಒಳಹೊಕ್ಕು ಮೂವತ್ತು ಮೀಟರ್ ಮುಂದೆ ಹೋದರೆ ಉಕ್ರೇನ್ ದೇಶದ ಯುದ್ಧದ ಟ್ಯಾಂಕರ್ ಕಾಣಿಸುತ್ತದೆ. ಅದರ ಸನಿಹದಲ್ಲೇ ಇರುವ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಿ ಮ್ಯೂಸಿಯಂನ ಒಳಗೆ ಹೋದಾಗ ಮೊದಲು ಕಾಣಿಸಿದ್ದು ಬಗೆ ಬಗೆಯ ವಿಂಟೇಜ್ ಕಾರುಗಳ ಸಾಲು.
ಇಲ್ಲಿ ಸುಮಾರು 70ಕ್ಕೂ ಹೆಚ್ಚು ಹಳೆಯ ಕಾಲದ ಕಾರುಗಳಿವೆ. ಆಕಾರ, ಬಣ್ಣದಲ್ಲಿ ಒಂದಕ್ಕಿಂತ ಒಂದು ವಿಶಿಷ್ಟ ಮತ್ತು ವಿಭಿನ್ನ. ಅವುಗಳ ಪೈಕಿ ಸಾಕಷ್ಟು ಕಾರುಗಳ ಹೆಸರು ಗೊತ್ತಿಲ್ಲದ ಕಾರಣ ಮಾಹಿತಿ ನೀಡುವಂತೆ ಮ್ಯೂಸಿಯಂನ ತಾಂತ್ರಿಕ ವಿಭಾಗದ ನಂದೀಶ್ ಅವರನ್ನು ವಿನಂತಿಸಿದೆ. ಅವರು ಅಷ್ಟೂ ಕಾರುಗಳ ಹೆಸರು, ಅವುಗಳ ದೇಶ, ಮಾಡೆಲ್, ಮೂಲ ಮಾಲೀಕರ ಹೆಸರನ್ನು ಹೇಳುತ್ತಾ ಹೋದರು...
ಮೊದಲಿಗೆ ನನ್ನ ಗಮನ ಸೆಳೆದದ್ದು ಮೈಸೂರು ರಾಜವಂಶಸ್ಥ ಜಯಚಾಮರಾಜ ಒಡೆಯರ್ ಬಳಸುತ್ತಿದ್ದ ಡೈಮ್ಲರ್ ಸ್ಟ್ರೈಟ್ –8 (ಡಾಮ್ಲರ್) ಕಾರು. ಇದರ ಮೂಲ ಯನೈಟೆಡ್ ಕಿಂಗ್‌ಡಮ್ (ಇಂಗ್ಲೆಂಡ್). ಇದು 1949ರ ಮಾಡೆಲ್ ಕಾರು. ಚಕ್ರಗಳು ಸೇರಿ ಒಟ್ಟು 3120 ಕೆ.ಜಿ ತೂಕ ಇರುವ, ಸೇಡನ್ ಮಾದರಿಯ ಕವಚ ಹೊಂದಿರುವ ಇದರಲ್ಲಿ ಏಳು ಮಂದಿ ಕುಳಿತು ಪ್ರಯಾಣಿಸಬಹುದು. ಸದ್ಯ ಈ ಮಾದರಿಯ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.
ಮತ್ತೊಂದು ಕಾರು ನೊಬೆಲ್ ಪ್ರಶಸ್ತಿ ಪುರಸ್ಕೃತ ಖಭೌತ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರು ಬಳಸುತ್ತಿದ್ದ ಸ್ಟುಡಿ ಬೇಕರ್ ಚಾಂಪಿಯನ್. ಇದರ ಮೂಲ ಯುಎಸ್‌ಎ. ಸ್ಟುಡಿ ಬೇಕರ್ ಕಾರ್ಪೊರೇಷನ್ ಈ ಮಾದರಿಯ ಕಾರನ್ನು 1939– 1958ರ ನಡುವೆ ಉತ್ಪಾದಿಸುತ್ತಿತ್ತು. ಸಿಲಿಂಡರ್ ಆಕಾರದ ಜೋಡಿ ಎಂಜಿನ್ ಹೊಂದಿರುವ, ಕಾರಿಗೆ ಎರಡು ಬಾಗಿಲುಗಳಿವೆ. ಇದೊರಳಗೆ ಐದು ಮಂದಿ ಕುಳಿತು ಪ್ರಯಾಣಿಸುವಷ್ಟು ಸ್ಥಳಾವಕಾಶವಿದೆ. ಸರ್ ಸಿ.ವಿ. ರಾಮನ್ ಈ ಕಾರನ್ನು 1947ರಲ್ಲಿ ಖರೀದಿಸಿ ಬಳಸುತ್ತಿದ್ದರು. ಅವರು ಇಲ್ಲವಾದ ನಂತರ (1970) ಈ ಕಾರು ವಸ್ತುಸಂಗ್ರಹಾಲಯ ಸೇರಿದೆ.
‘ಈ ಸಾಲಿನಲ್ಲಿ ಇರುವುದು ಇಂಗ್ಲೆಂಡ್ ಮೂಲದ ಆಸ್ಟಿನ್ ಸೋಮರ್ಸೆಟ್, ಕ್ಯಾಡಿಲಾಕ್, ಮಾರಿಸ್–15 (6), ಹಿಲ್‌ಮನ್ ಮಿಂಗ್ಸ್, ಹಿಂದೂಸ್ತಾನ್–14, ಸಿಟ್ರಾನ್, ಬೆಲೈರ್, ಚವರೆಲೆಟ್ ಇಂಪಾಲ್, ಅಮೆರಿಕದ ಬ್ಯೂಕ್, ಆಸ್ಟ್ರಿಯಾ ಮೂಲದ ಸ್ಟೆಯರ್ ಪುಚ್ ಆಫ್‌ಲಿಂಗರ್, 1926ರ ಮಾಡೆಲ್‌ನ ಇಟಲಿ ಮೂಲದ ಫಿಯಟ್, ಬೆಂಚ್ ಮರ್ಸಿಂಟ್ ಕಾರುಗಳು. ಈ ಹಸಿರುಬಣ್ಣದ ಪುಟ್ಟ ಕಾರಿನ ಹೆಸರು ರೇವಾ. ಇದು ವಿದ್ಯುತ್ ಬ್ಯಾಟರಿ ಚಾಲಿತ ಕಾರು’– ಹೀಗೆ ಕಾರುಗಳ ಮಾಡೆಲ್, ಅವುಗಳ ಹೆಸರು ಮತ್ತು ಗುಣಲಕ್ಷಣಗಳನ್ನು ನಂದೀಶ್ ವಿವರಿಸಿದರು.
ಪಕ್ಕದಲ್ಲೇ ನಿಂತಿದ್ದ ಗಾಢ ಹಳದಿ ಬಣ್ಣದ ಪ್ರಿಯಾ ಫೆಂಟಾಬ್ಲೆಸ್, ರಾಯಲ್ ಎನ್‌ಫೀಲ್ಡ್ ಮತ್ತು ಚೇತಕ್‌ನ ಆರಂಭಿಕ ಮಾದರಿಯ ಸ್ಕೂಟರ್‌ಗಳು ಹೊಚ್ಚಹೊಸದರಂತೆ ಕಂಡು ಬಂದವು. ಆ ಕ್ಷಣದಲ್ಲಿ ಇವುಗಳ ಮೇಲೆ ಸವಾರಿ ಮಾಡಬೇಕು ಎಂಬ ಆಸೆ ಉಂಟಾಗಿದ್ದು ನಿಜ.
ಮ್ಯೂಸಿಯಂನ ಎಡಭಾಗದ ಸಂಗ್ರಹಾಗಾರಕ್ಕೆ ಹೋಗುವ ದಾರಿಯಲ್ಲಿ ನವಜೋಡಿಯೊಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿತ್ತು. ಅವರು ನಿಂತಿದ್ದ ಸ್ಥಳದ ಹಿನ್ನೆಲೆ ವಿಶೇಷವಾಗಿತ್ತು. ಹಳ್ಳಿಗಳಲ್ಲಿ ಐದಾರು ದಶಕಗಳ ಹಿಂದೆ ಕಾಣಸಿಗುತ್ತಿದ್ದ ಮನೆಗಳ ಬಾಗಿಲು ಮತ್ತು ಚೌಕಟ್ಟುಗಳನ್ನು ತಂದು ಅದೇ ಮಾದರಿಯ ಮನೆಗಳನ್ನು ಇಲ್ಲಿ ಕಟ್ಟಿದ್ದಾರೆನೋ ಎಂದು ಭಾಸವಾಯಿತು.
ಗ್ರಾಮೀಣ ಸೊಗಡು
ಹೊಸ್ತಿಲುದಾಟಿ ನಡೆದಾಗ ಗ್ರಾಮ್ಯಲೋಕವೇ ತೆರೆದುಕೊಂಡಿತು. ಕಿಲೊಗ್ರಾಮ್, ಗ್ರಾಮ್‌ಗಳ ತೂಕ ಪದ್ದತಿ ಬಳಕೆಗೆ ಬರುವ ಮುನ್ನ ಚಾಲ್ತಿಯಲ್ಲಿದ್ದ ಸೇರು, ಪಾವು, ಅಚ್ಚೇರು, ಚಟಾಕು, ಕೊಳಗ, ಬಿದಿರಿನ ಬೂಜುಂಡಿಗೆ ಬುಟ್ಟಿ, ತೊಟ್ಟಿಲು, ಪೆಟ್ಟಿಗೆ, ಮಜ್ಜಿಗೆ ಕಡೆಯುವ ಮಂಥು, ಸೌಟು, ಮರ ಮತ್ತು ಕಲ್ಲಿನ ಬೋಗುಣಿ, ಜಾನುವಾರುಗಳಿಗೆ ಔಷಧ ಕುಡಿಸಲು ಬಳಸುತ್ತಿದ್ದ ಕೊಟ್ಟ, ಶ್ಯಾವಿಗೆ ಮತ್ತು ಪಡ್ಡು ಮಣೆಗಳು ಸೇರಿದಂತೆ ನಮ್ಮ ಪೂರ್ವಜರು ಬಳಸುತ್ತಿದ್ದ ಬಗೆ ಬಗೆಯ ಗೃಹಕೃತ್ಯದ ಪರಿಕರಗಳನ್ನು ಕಣ್ತುಂಬಿಕೊಳ್ಳಬಹುದು. ಹೊಸ ತಲೆಮಾರಿನವರಿಗೆ ಹಳತನ್ನು ಪರಿಚಯಿಸಬಹುದು.
ವಸ್ತುಸಂಗ್ರಹಾಲಯದ ಮತ್ತೊಂದು ಭಾಗದಲ್ಲಿ ನೂರಿನ್ನೂರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಕಬ್ಬಿನರಸ ಹಿಂಡುವ ಯಂತ್ರ, ಟೆಲಿಸ್ಕೋಪ್, ಮೊಳೆಅಚ್ಚಿನ ಮುದ್ರಣ ಯಂತ್ರ, ಗ್ರಾಮಾಫೋನ್, ಟೈಪ್‌ರೈಟರ್, ಪ್ರೊಜೆಕ್ಟರ್, ಜಪಾನ್ ಟ್ರೇಡ್ ಮಾರ್ಕ್‌ನ ತಮಿಯಾಮ ಕ್ಯಾಮೆರಾಗಳು ಪುಳಕಗೊಳಿಸುತ್ತವೆ. ಹಿಂದೆ ಯುದ್ದದಲ್ಲಿ ಬಳಸುತ್ತಿದ್ದ ಕತ್ತಿ, ಗುರಾಣಿ, ಬಾಕು, ಕಠಾರಿ, ಫಿರಂಗಿ, ನಾಡ ಬಂದೂಕು, ಬ್ಯಾರಲ್ ಗನ್, ಕತ್ತಿ, ಕೊಡಲಿಗಳನ್ನು ಅಮೂಲ್ಯ ರತ್ನಗಳಂತೆ ಗಾಜಿನಪೆಟ್ಟಿಗೆಗಳಲ್ಲಿ ಇರಿಸಿರುವುದು ಅವುಗಳ ಮಹತ್ವ ಸಾರುತ್ತದೆ. ದೇಶ, ವಿದೇಶಗಳ ಕರೆನ್ಸಿಗಳು, ಸ್ಟಾಂಪ್‌ಗಳು, ಭಾರತದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳು, ತೂತು ಕಾಸುಗಳು, ವಿವಿಧ ಮುಖಬೆಲೆಯ ಮಾಸಿದ ಪೈಸೆಗಳನ್ನೂ ನೋಡಬಹುದು.
ಪ್ರಾಚೀನ ಸಾಹಿತ್ಯ
ಕವಿ ಲಕ್ಷ್ಮೀಶನ ಕಾಲದ, ಕನ್ನಡ ಲಿಪಿಯಲ್ಲಿರುವ 17ನೇ ಶತಮಾನದ ಜೈಮಿನಿ ಭಾರತ ಕೃತಿಯನ್ನೂ ಇಲ್ಲಿ ಸಂರಕ್ಷಿಸಲಾಗಿದೆ. ಸಂಸ್ಕೃತ ಸಾಹಿತ್ಯದ ಹಲವು ತಾಳೆಗರಿಯ ಕೃತಿಗಳು, ಕೈಬರಹದ ಪಂಚಾಂಗ, ಶ್ರೀಶೈಲ ಮಲ್ಲಿಕಾರ್ಜುನನ್ನು ಉಲ್ಲೇಖಿಸುವ ಹಳಗನ್ನಡದ ತಾಮ್ರಪತ್ರ, 1929ರಲ್ಲಿ ಅ.ನ.ಕೃ ಕನ್ನಡಕ್ಕೆ ಭಾಷಾಂತರಿಸಿರುವ ಕವಿ ರವೀಂದ್ರ ವಿರಚಿತ ‘ಚಿತ್ರ’ ನಾಟಕದ ಹಸ್ತಪ್ರತಿ, 1910ರಲ್ಲಿ ಮುದ್ರಣಗೊಂಡಿರುವ ‘ಮೈಸೂರು ಸ್ಟಾರ್’ ಕನ್ನಡ ವಾರಪತ್ರಿಕೆಯ ಪ್ರತಿ, ತೊಗಲುಗೊಂಬೆ, ಗಂಜೀಫಾ ಕಲೆ ಮತ್ತು ಮೈಸೂರು ರಾಜ ವಂಶಸ್ಥರ ಚಿತ್ರಗಳನ್ನೂ ಇತಿಹಾಸ ದರ್ಶನ ಮಾಡಿಸುತ್ತವೆ.
ಪಾರಂಪರಿಕ ಪ್ರಪಂಚದಂತಿರುವ ‘ಪಯಣ’ದೊಳಗೆ ಒಂದೂವರೆ ತಾಸು ಸುತ್ತಾಡಿ ಹೊರ ಬಂದಾಗ ಹೊಸದೊಂದು ಅನುಭವಕ್ಕೆ ತೆರೆದುಕೊಂಡ ಭಾವ ಮೂಡಿತು. ಮೈಸೂರಿನ ಕಿರಣ್‌ಕುಮಾರ್– ಅನುಪಮಾ ದಂಪತಿ ‘ಮೊಬೈಲ್‌ಗೆ ಅಂಟಿಕೊಳ್ಳುವ ಮಕ್ಕಳನ್ನು ಇಲ್ಲಿಗೆ ಕರೆತಂದು ತೋರಿಸಬೇಕು’ ಎಂದು ಹೇಳಿದರು. ನನಗೂ ಹಾಗೇ ಅನಿಸಿತು.
ಹೀಗೆ ಬನ್ನಿ...
‘ಪಯಣ’ ವಸ್ತುಸಂಗ್ರಹಾಲಯವು ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆವರೆಗೂ ತೆರೆದಿರುತ್ತದೆ. 12 ವರ್ಷ ಮೇಲ್ಪಟ್ಟವರಿಗೆ ₹ 50 ಪ್ರವೇಶ ಶುಲ್ಕವಿದೆ. ಮಕ್ಕಳು ಸೈನಿಕರು ಮತ್ತು ಮಾಜಿ ಸೈನಿಕರಿಗೆ ಪ್ರವೇಶ ಉಚಿತ. ಇದು ಮೈಸೂರಿನಿಂದ 8 ಕಿ.ಮೀ ಶ್ರೀರಂಗಪಟ್ಟಣದಿಂದ 8 ಮತ್ತು ಮಂಡ್ಯದಿಂದ 33 ಕಿ.ಮೀ. ದೂರದಲ್ಲಿದೆ. ಎಲ್ಲ ದಿನವೂ ವಸ್ತುಸಂಗ್ರಹಾಲಯ ತೆರೆದಿರುತ್ತದೆ.
****
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.