ADVERTISEMENT

ಸ್ವಿಡ್ಜರ್ಲೆಂಡ್‌ ರಾಯಭಾರಿ ಯಶ್ ಚೋಪ್ರಾ!

ವಿ.ಶ್ರೀನಿವಾಸ
Published 27 ಅಕ್ಟೋಬರ್ 2024, 1:27 IST
Last Updated 27 ಅಕ್ಟೋಬರ್ 2024, 1:27 IST
ಯುರೋಪ್‌ನ ಸ್ವಿಡ್ಜರ್ಲೆಂಡ್‌ನಲ್ಲಿರುವ ಜುಂಗ್‌ಫ್ರೂ ರೈಲು ನಿಲ್ದಾಣದಿಂದ ಬರುತ್ತಿರುವ ವಿದ್ಯುತ್‌ ಚಾಲಿತ ಪ್ರವಾಸಿ ರೈಲು
ಯುರೋಪ್‌ನ ಸ್ವಿಡ್ಜರ್ಲೆಂಡ್‌ನಲ್ಲಿರುವ ಜುಂಗ್‌ಫ್ರೂ ರೈಲು ನಿಲ್ದಾಣದಿಂದ ಬರುತ್ತಿರುವ ವಿದ್ಯುತ್‌ ಚಾಲಿತ ಪ್ರವಾಸಿ ರೈಲು   

ಸ್ವಿಡ್ಜರ್ಲೆಂಡ್‌ನ ಆಲ್ಪ್ಸ್‌ ಪರ್ವತಗಳ ಕಣಿವೆಯೊಂದರಲ್ಲಿ ಇಂಟರ್‌ಲಾಕನ್ ಎಂಬ ಪುಟ್ಟ ಪಟ್ಟಣವಿದೆ. ಸುತ್ತಲೂ ಹಚ್ಚಹಸಿರಿನ ಬೆಟ್ಟಗಳ ಸಾಲು. ಹಿನ್ನೆಲೆಯಲ್ಲಿ ಹಿಮಾಚ್ಛಾದಿತ ಪರ್ವತ ಶ್ರೇಣಿ. ಮಣ್ಣೇ ಕಾಣದ ಹಾಗೆ ನೆಲವೆಲ್ಲಾ ಹುಲ್ಲಿನ ಹಾಸು. ಆಹ್ಲಾದಕರ ವಾತಾವರಣದಲ್ಲಿ ಬೆಟ್ಟದ ಮೇಲಿನಿಂದ ತೇಲಿ ತೇಲಿ ಬರುತ್ತಿದ್ದ ಬಣ್ಣ ಬಣ್ಣದ ಪ್ಯಾರಾಗ್ಲೈಡಿಂಗ್ ಸಾಹಸಿಗಳು. ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತಿರುವಾಗ ‘ಬನ್ನಿ, ನಿಮಗೆಲ್ಲ ಅಚ್ಚರಿಯೊಂದನ್ನು ತೋರಿಸುತ್ತೇನೆ’ ಎಂದು ಗೈಡ್‌ ಮೂರ್ತಿ ನಮ್ಮನ್ನೆಲ್ಲ ಕರೆದೊಯ್ದರು. ಆಳೆತ್ತರದ ಕಂಚಿನ ಪ್ರತಿಮೆಯೊಂದನ್ನು ತೋರಿಸಿ ‘ಇವರ‍್ಯಾರು ಗೊತ್ತೇ?’ ಎಂದು ಕೇಳಿದರು. ತಲೆಗೊಂದು ಟೊಪ್ಪಿ, ಸಿನಿಮಾ ಕ್ಯಾಮೆರಾಗೆ ಆತುಕೊಂಡು ನಿಂತಿರುವ ಇವರ‍್ಯಾರು ಎಂದು ನಾವು ತಲೆ ಕೆರೆದುಕೊಂಡು ಯೋಚಿಸುತ್ತಿದೆವು. ಯಾರಿಗೂ ಹೊಳೆಯಲಿಲ್ಲ. ‘ಇದು ಬಾಲಿವುಡ್ ದಿಗ್ಗಜ ಯಶ್ ಚೋಪ್ರಾ ಅವರ ಪ್ರತಿಮೆ. ‘ಇಂಟರ್‌ಲಾಕನ್ ಪಟ್ಟಣ ಇವರನ್ನು ರಾಯಭಾರಿಯೆಂದು ಗೌರವಿಸಿದೆ’ ಎಂದು ವಿವರಣೆ ನೀಡಿದರು!. ಆನಂತರ ನಾವೆಲ್ಲ ಪಟಪಟನೆ ಆ ಪ್ರತಿಮೆ ಜೊತೆಯಲ್ಲಿ ಪಟ ತೆಗೆಸಿಕೊಂಡೆವು.

ಈ ಅಚ್ಚರಿ ನನ್ನನ್ನು ಅಷ್ಟಕ್ಕೆ ಬಿಡಲಿಲ್ಲ. ತನ್ನ ತಾಯ್ನಾಡು ಭಾರತದಲ್ಲಿ ಪದ್ಮಭೂಷಣ (2005) ದಾದಾ ಸಾಹೇಬ್ ಫಾಲ್ಕೆ (2001) ಮುಂತಾದ ಉನ್ನತ ಪ್ರಶಸ್ತಿಗಳಲ್ಲದೆ, ಅನೇಕ ಬಾರಿ ತಮ್ಮ ಸಿನಿಮಾಗಳಿಗೆ ‘ಉತ್ತಮ ಚಿತ್ರ’, ‘ಫಿಲಂಫೇರ್’ ಪ್ರಶಸ್ತಿಗಳನ್ನು ಪಡೆದಿರುವ ಯಶ್ ಚೋಪ್ರಾ, ದೂರದ ಸ್ವಿಡ್ಜರ್ಲೆಂಡ್‌ನಲ್ಲಿ ಈ ಪರಿಯ ಪ್ರೀತಿಯ ಗೌರವವನ್ನು ಗಳಿಸಿದ್ದಾದರೂ ಹೇಗೆ ಎಂದು ಮಾಹಿತಿ ಕಲೆ ಹಾಕಿದಾಗ ತಿಳಿದು ಬಂದಿದ್ದು ಇಷ್ಟು.

ಇಂಟರ್‌ಲಾಕನ್‌ ಪಟ್ಟಣದಲ್ಲಿರುವ ಯಶ್‌ ಚೋಪ್ರಾ ಕಂಚಿನ ಪ್ರತಿಮೆ

ಯಶ್ ರಾಜ್ ಚೋಪ್ರಾ ಪಂಜಾಬ್ ಪ್ರಾಂತ್ಯದ ಲಾಹೋರ್‌ನವರು. ಹಿಂದಿ ಸಿನಿಮಾಗಳ ನಿರ್ದೇಶಕ, ನಿರ್ಮಾಪಕ, ಪ್ರಖ್ಯಾತ ‘ಯಶ್‌ ರಾಜ್ ಫಿಲಂಸ್’ ಸಂಸ್ಥೆಯ ಸ್ಥಾಪಕ. ನಾಯಕಿ ಪ್ರಧಾನ ರೋಮ್ಯಾಂಟಿಕ್‌ ಸಿನಿಮಾಗಳ ಪಿತಾಮಹ ಎಂಬ ಹೆಸರು. ಇವರು ಹನಿಮೂನಿಗೆಂದು ಸ್ವಿಡ್ಜರ್ಲೆಂಡ್‌ಗೆ ಹೋಗಿದ್ದಾಗ ಅಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮನಸೋತರು. ಆಮೇಲೆ ತಮ್ಮ ‘ಡರ್’ ಮತ್ತು ‘ಚಾಂದಿನಿ’ ಸೇರಿದಂತೆ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ಅಲ್ಲಿ ಚಿತ್ರೀಕರಿಸಿದ್ದರು. ಯಶ್‌ ರಾಜ್ ಫಿಲಂಸ್‌ ಲಾಂಛನದಡಿ ಅವರ ಮಗ ಆದಿತ್ಯ ಚೋಪ್ರಾ ಸಾರ್ವಕಾಲಿಕ ದಾಖಲೆ ಬರೆದ ಚಿತ್ರ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಸಿನಿಮಾವನ್ನು ಸ್ವಿಡ್ಜರ್ಲೆಂಡ್‌ನ ಇಂಟರ್‌ಲಾಕನ್, ಟಾಪ್ ಆಫ್ ಯೂರೋಪ್ ಎಂದು ಖ್ಯಾತಿಗಳಿಸಿರುವ ಜುಂಗ್‌ಫ್ರೂ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಿಸಿದ್ದಾರೆ. ಟಿಟ್ಲಿಸ್ ಶಿಖರಾಗ್ರದಲ್ಲಿ ಕಾಜೋಲ್-ಶಾರುಖ್‌ ಖಾನ್‌ ಅವರ ‘ದಿಲ್‌ವಾಲೆ..,’ ಚಿತ್ರದ ಕಟೌಟ್ ಈಗಲೂ ಇದೆ. ಇದರ ಜೊತೆ ವಿವಿಧ ಭಂಗಿಗಳಲ್ಲಿ ಫೋಟೊ ತೆಗೆಸಿಕೊಳ್ಳುವುದಕ್ಕೆ ಪ್ರವಾಸಿಗಳು ಮುಗಿಬೀಳುತ್ತಾರೆ. ‘ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಯಶ್ ಚೋಪ್ರಾ ತಮ್ಮ ಸಿನಿಮಾಗಳ ಮೂಲಕ ಭಾರತೀಯರು ಹಾಗೂ ಜಗತ್ತಿಗೆ ಇಂದಿನ ಹಾಗೂ
ಮುಂದಿನ ಪೀಳಿಗೆಗಳಿಗೂ ಪರಿಚಯಿಸಿದ್ದಾರೆ’ ಎಂದು ಅಲ್ಲಿನ ಸರ್ಕಾರ ಯಶ್ ಚೋಪ್ರಾ ಅವರನ್ನು  ಐದು ವಿಧದಲ್ಲಿ ಪ್ರೀತಿಯಿಂದ ಗೌರವಿಸಿದೆ.

ADVERTISEMENT

1. ‘ಇಂಟರ್‌ಲಾಕನ್ ರಾಯಭಾರಿ’ ಎಂದು ಸ್ವಿಸ್ ಸರ್ಕಾರ ಘೋಷಿಸಿದೆ. ಬೆಳ್ಳಿಫಲಕದ ಈ ಗೌರವವನ್ನು ಪಡೆದ ಮೊಟ್ಟ ಮೊದಲ ವ್ಯಕ್ತಿ ಯಶ್ ಚೋಪ್ರಾ. ಇವರನ್ನು ‘ಸ್ವಿಸ್ ರಾಯಭಾರಿ’ ಎಂದೂ ಸ್ವಿಡ್ಜರ್ಲೆಂಡ್‌ನ ಸರ್ಕಾರ ಗೌರವಿಸಿದೆ.

2.ಬರ್ನ್ ಪ್ರಾಂತ್ಯದ ಲಾನೆನ್ ಸರೋವರವು ‘ಚೋಪ್ರಾ ಸರೋವರ’ವೆಂದೇ ಅಲ್ಲಿ ಜನಪ್ರಿಯವಾಗಿದೆ. ಯಶ್ ಚೋಪ್ರಾ ಅವರು ತಮ್ಮ ನೆಚ್ಚಿನ ಈ ತಾಣದಲ್ಲಿ ಅನೇಕ ಚಿತ್ರಗಳನ್ನು ಚಿತ್ರೀಕರಿಸಿದ್ದಾರೆ.

3. ವಿಕ್ಟೋರಿಯಾ–ಜುಂಗ್‌ಫ್ರೂ ಗ್ರ್ಯಾಂಡ್ ಹೋಟೆಲ್‌ನಲ್ಲಿ ಯಶ್ ಚೋಪ್ರಾ ಹೆಸರಿನ ಐಷಾರಾಮಿ ಕೊಠಡಿಯೊಂದು ಇದೆ. ಅವರ ಜನಪ್ರಿಯ ಸಿನಿಮಾಗಳ ಪೋಸ್ಟರ್‌ಗಳಿಂದ ಈ ಕೊಠಡಿಯನ್ನು ಅಲಂಕರಿಸಲಾಗಿದೆ. ಈ ದುಬಾರಿ ಕೋಣೆಯಲ್ಲಿ ಉಳಿಯುವುದು ಹೆಮ್ಮೆ ಎನ್ನುವ ಕಾರಣಕ್ಕೆ ಬಾಲಿವುಡ್ ಮಂದಿ ಹಾತೊರೆಯುತ್ತಾರೆ.

4. ಯಶ್ ರಾಜ್ ಫಿಲಂಸ್ ಸಂಸ್ಥೆಯ ಸಿನಿಮಾಗಳಲ್ಲಿ ಸ್ವಿಸ್ ಟ್ರೈನ್‌ ಅನ್ನು ಅನೇಕ ಬಾರಿ ಚಿತ್ರೀಕರಿಸಲಾಗಿದೆ. ಹಾಗಾಗಿ ಸ್ವಿಡ್ಜರ್ಲೆಂಡ್‌ನ ಜುಂಗ್‌ಫ್ರೂ ರೈಲ್ವೆಯು ಒಂದು ರೈಲಿಗೆ ‘ಯಶ್‌ ರಾಜ್’ ಹೆಸರನ್ನೆ ಇಟ್ಟಿದೆ. ಇವರ ಸಹಿ ಹಾಗೂ ಹೆಸರಿರುವ ಫಲಕವನ್ನು ಆ ರೈಲಿನಲ್ಲಿ ಹಾಕಲಾಗಿದೆ. ಅಲ್ಲಿಯ ರೈಲ್ವೆಯ ಸಂಸ್ಥಾಪಕರಾದ ಅಡಾಲ್ಫ್ ಗಯರ್ ಅವರ ಹೊರತಾಗಿ ಮತ್ಯಾವ ವ್ಯಕ್ತಿಯೂ ಈ ಗೌರವಕ್ಕೆ ಪಾತ್ರರಾಗಿಲ್ಲ!

5. ಸ್ವಿಡ್ಜರ್ಲೆಂಡ್‌ನ ಸರ್ಕಾರವು 2016ರ ಮೇ ತಿಂಗಳಲ್ಲಿ ಯಶ್ ಚೋಪ್ರಾ ಅವರ ಗೌರವಾರ್ಥ ಸುಮಾರು 250 ಕೆ.ಜಿ. ತೂಕದ ಆಳೆತ್ತರದ ಕಂಚಿನ ಪ್ರತಿಮೆಯನ್ನು ಇಂಟರ್‌ಲಾಕನ್ ಪಟ್ಟಣದ ಕೇಂದ್ರ ಸ್ಥಳದಲ್ಲಿ ಸ್ಥಾಪಿಸಿತು. ಅವರ ಪತ್ನಿ ಪಮೇಲಾ ಚೋಪ್ರಾ ಹಾಗೂ ಸೊಸೆ ರಾಣಿ ಮುಖರ್ಜಿ ಇದನ್ನು ಅನಾವರಣಗೊಳಿಸಿದರು.

ಕಣ್ಣುಗಳಿಗೆ ತಂಪನ್ನೀಯುವಂತೆ ಹಚ್ಚಹಸಿರನ್ನು ಹಾಸು ಹೊದ್ದ ಬೆಟ್ಟಗಳ ಸಾಲು, ಅವುಗಳ ಹಿನ್ನೆಲೆಯಲ್ಲಿ ಹಿಮಾಚ್ಛಾದಿತ ಪರ್ವತ ಶ್ರೇಣಿ, ನೆಲವೆಲ್ಲಾ ಸಮತಟ್ಟಾದ ಹುಲ್ಲಿನ ಹಾಸು, ಬಣ್ಣ ಬಣ್ಣದ ಹೂವಿನ ಗಿಡಗಳಿಂದೊಡಗೂಡಿ ಮನಸೂರೆಗೊಳ್ಳುವ ಪ್ರಕೃತಿಯ ಸೌಂದರ್ಯರಾಶಿ, ಅಲ್ಲಿಯ ಬೇಸಿಗೆ ದಿನಗಳಾದ್ದರಿಂದ ಆಹ್ಲಾದಕರ ವಾತಾವರಣ. ಆ ಕಾಲದಲ್ಲಿಯೇ ಪರ್ವತದ ತುದಿಗೆ ಕೇಬಲ್ ಕಾರುಗಳನ್ನು ಅಳವಡಿಸಿರುವುದು, ಪರ್ವತಾಗ್ರದಲ್ಲಿ ಎರಡು ಹಳಿಗಳಲ್ಲದೇ ಮಧ್ಯದಲ್ಲಿ ಇನ್ನೊಂದು ಹಲ್ಲಿನ ರೀತಿ ಹಳಿಯೂ ಇರುವ ಸುರಂಗದಲ್ಲಿ ಪರ್ವತದ ಮೇಲೇರುವ ರೈಲು.. ಇವುಗಳನ್ನು ಕಂಡು ನಿಬ್ಬೆರಗಾಗಿದ್ದ ನಾವು, ಭಾರತೀಯರೊಬ್ಬರು ಸ್ವಿಡ್ಜರ್ಲೆಂಡ್‌ನ ಪ್ರೀತಿ ಗೌರವವನ್ನು ಗಳಿಸಿರುವ ಪರಿ ಕಂಡು ನಮಗೂ ಆ ಸಾಧಕರ ಬಗ್ಗೆ ಅಭಿಮಾನ, ನಮ್ಮ ದೇಶದ ಬಗ್ಗೆ ಗೌರವ ಮೂಡಿತು.

‘ನಮ್ಮ ದೇಶದಿಂದ ಹೊರಗೆ ಬಂದಾಗ ನಾವು ನಮ್ಮ ದೇಶದ ರಾಯಭಾರಿಗಳು. ಅಲ್ಲಿಯ ಜನ ನಮ್ಮ ದೇಶವನ್ನು ಕಂಡಿರುವುದಿಲ್ಲ. ನಮ್ಮನ್ನು ನೋಡಿ ನಮ್ಮ ದೇಶದ ಬಗ್ಗೆ ಅಭಿಪ್ರಾಯ ಹೊಂದುತ್ತಾರೆ. ಹಾಗಾಗಿ ನಾವು ವಿದೇಶ ಪ್ರವಾಸದಲ್ಲಿ ದೇಶದ ಘನತೆ ಕಾಪಾಡುವ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದು ನಮ್ಮ ಪ್ರವಾಸಿ ಗೈಡ್‌ ತುಮಕೂರಿನ ಟಿ.ವಿ.ಎನ್.ಮೂರ್ತಿ ಹೇಳಿದ ಮಾತಿಗೆ ನಾವೆಲ್ಲ ಒಂದೇ ದನಿಯಲ್ಲಿ ಸಮ್ಮತಿ ಸೂಚಿಸಿದೆವು. ಏಕೆಂದರೆ, ನಮ್ಮ ಮುಂದೆ ಯಶ್‌ ಚೋಪ್ರಾ ಅವರು ಕಂಚಿನ ಪ್ರತಿಮೆ ಮಾದರಿಯಂತೆ ನಿಂತಿತ್ತು, ಭಾರತದ ಹೆಮ್ಮೆಯ ಸಂಕೇತವಾಗಿ!

ಟಿಟ್ಲಿಸ್ ಶಿಖರಾಗ್ರದಲ್ಲಿ ನಟಿ ಕಾಜೋಲ್‌– ನಟ ಶಾರುಖ್‌ ಖಾನ್‌ ಅವರ ‘ದಿಲ್‌ವಾಲೆ..’ ಚಿತ್ರದ ಕಟೌಟ್ ಮುಂದೆ ಪ್ರವಾಸಿಗರ ಪೋಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.