ADVERTISEMENT

ಕಿರ್ಘಿಸ್ತಾನ: ಕಾಡು–ಗುಡ್ಡಗಳಸ ಸುತ್ತಾಟ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 19:30 IST
Last Updated 6 ಮಾರ್ಚ್ 2019, 19:30 IST
 ಚಿತ್ರಗಳು: ಲೇಖಕರವು
ಚಿತ್ರಗಳು: ಲೇಖಕರವು   

ಸಮಯ ಸಿಕ್ಕಾಗ ಕಾಡು ಮೇಡು ಅಲೆಯೋದು, ಬೆಟ್ಟ ಗುಡ್ಡ ಹತ್ತೋದು, ಪಕ್ಷಿಗಳನ್ನು ನೋಡಲು ಹೋಗೋದು ಹವ್ಯಾಸ. ಈ ಬಾರಿ ಆ ಹವ್ಯಾಸ ವಿದೇಶಕ್ಕೆ ವರ್ಗವಾಗಿದ್ದು. ನಮ್ಮ ಚಾರಣ ದೂರದ ಕಿರ್ಘಿಸ್ತಾನದ ಕಡೆಗೆ ಸಾಗಿತ್ತು.

ಒಂದು ಕಾಲಕ್ಕೆ ರಷ್ಯಾ ದೇಶದ ಭಾಗವಾಗಿದ್ದ ಸ್ವತಂತ್ರ ರಾಜ್ಯ ಕಿರ್ಘಿಸ್ತಾನಕ್ಕೆ ಹೋಗಬೇಕೆಂದು ಬಹಳ ದಿನಗಳಿಂದ ಬಯಸಿದ್ದೆವು. ಅದು ಈಗ ಈಡೇರಿತು. ದೆಹಲಿಯಿಂದ ವಿಮಾನ ಏರಿ ಮೂರು ಗಂಟೆಯೊಳಗೆ ಕಿರ್ಘಿಸ್ತಾನದ ರಾಜಧಾನಿ ಬಿಷ್ಕೆಕ್‌ ತಲುಪಿದೆವು.

ಬಿಷ್ಕೆಕ್, ತುಂಬಾ ಸುಂದರ ನಗರ. ಹೆಚ್ಚು ಟ್ರಾಫಿಕ್ ಇಲ್ಲ. ವಿಸ್ತಾರವಾದ ರಸ್ತೆಗಳು. ನಾವು ಮೊದಲು ಭೇಟಿ ನೀಡಿದ್ದು ಕಾರಾಕುಲ್ ಲೇಕ್ ಎಂಬ ಸುಂದರ ಸ್ಥಳಕ್ಕೆ. ಇದೊಂದು ಸಮುದ್ರದಂತೆ ಕಾಣುವ ಬಹು ವಿಸ್ತಾರವಾದ ಸರೋವರ. ಕಣ್ಣಿಗೆ ಕಾಣುವಷ್ಟು ದೂರ ತಿಳಿಯಾದ ನೀರು. ಪೈನ್ ಮರಗಳ ಸುಂದರ ಕಾಡುಗಳುಳ್ಳ ಬೆಟ್ಟ ಗುಡ್ಡಗಳು. ಆಗಾಗ ಬದಲಾಗುವ ವಾತಾವರಣ. ಒಳ್ಳೆಯ ಊಟ. ಬೆಲೆಯೂ ಕಡಿಮೆ. ಜನ ತುಂಬಾ ಗೌರವದಿಂದ ನಡೆದುಕೊಳ್ಳುತ್ತಾರೆ.

ADVERTISEMENT


ಅಲ್ಲಿಂದ ಅಲಾಕುಲ್‌ಗೆ ಹೋದೆವು. ಅದು ಮನ ಮೋಹಕ ಪರ್ವತಗಳ ಸಾಲು. ಕಡಿದಾದ ಬೆಟ್ಟಗಳನ್ನು ಹತ್ತುವುದೇ ಒಂದು ಸಾಹಸ. ಅಲ್ಲಲ್ಲಿ ಉಳಿದುಕೊಳ್ಳಲು ಗುಡಾರಗಳು(ಯೂರ್ಟ್). ಕಾಡಿನಲ್ಲಿ ಅಡ್ಡಾಡುವಾಗ ಕಂಡಿದ್ದು ಬೋಬಕ್ ಮೊರ್ಮೋಟ್. ಪಿಕಾ, ಕಂದು ಬಣ್ಣದ ಮೊಲ, ಕೆಂಬಣ್ಣದ ಅಳಿಲು, ಪಕ್ಷಿಗಳಲ್ಲಿ ಆಲ್ಪೈನ್ ಅಕ್ಷೆಂಟರ್, ವೈಟ್ ಬ್ರೆಸ್ಟೆಡ್ ಡಿಪ್ಪರ್, ಇಸಾಬೆಲಲಿನೆ ವ್ಹೀಟರ್, ಬ್ಲಾಕ್ ರೆಡ್ ಸ್ಟಾರ್ಟ್, ಯುರೇಶಿಯನ್ ಲಿನ್ನೆಟ್, ಎವರ್ಸ್ ಮಾನ್ ರೆಡ್ಸ್ಟಾಟರ್, ಬ್ಲಾಕ್ ಹೆಡೆಡ್ ಗಲ್, ಗೋಲ್ಡ್ ಕ್ರೆಸ್ಟ್, ಸ್ಪಾಟೆಡ್ ಫ್ಲೈಕ್ಯಾಚರ್, ಟ್ವೈಟ್‌ನಂತಹ ಪಕ್ಷಿ, ಪ್ರಾಣಿಗಳು. ಎಲ್ಲಾ ಕಡೆ ಕಟ್ಟುಮಸ್ತಾದ ಕುದುರೆಗಳು, ಅಲ್ಲಲ್ಲಿ ನೂರಾರು ಕುರಿಗಳು ಕಾಣ ಕಂಡವು. ಪಶು ಸಂಗೋಪನೆಯೇ ಇಲ್ಲಿ ಇವರ ಜೀವನೋಪಾಯ.

ಕೆಲವೆಡೆ ಕಲ್ಲು ಬಂಡೆಯ ಪರ್ವತಗಳಿದ್ದರೆ, ಕೆಲವೆಡೆ ಬಣ್ಣ ಬಣ್ಣದ ಪರ್ವತಗಳು, ಹರಿಯುವ ನದಿ, ತೊರೆಗಳು ವಿಸ್ತಾರವಾದ ಮೈಲಿಗಟ್ಟಲೆ ಮೈದಾನ ಪ್ರದೇಶ, ಮಂಜುಗಡ್ಡೆಯ ಪರ್ವತಗಳು, ಅದೊಂದು ಅದ್ಭುತ ಲೋಕ. ನಾವು ಬೆಟ್ಟವನ್ನು ಹತ್ತುತ್ತಿರುವಾಗ, ಇದ್ದಕ್ಕಿದ್ದಂತೆ ತರಗುಟ್ಟಿಸುವಂತಹ ಚಳಿಗಾಳಿ ಶುರುವಾಯಿತು. ನಂತರ ಮಂಜಿನಿಂದ ಕೂಡಿದ ಬಿರುಗಾಳಿ ರಪ ರಪ ಭಾರಿಸಿತು. ಮಂಜುಗಟ್ಟಿದ ಚಳಿಯಲ್ಲಿ ಕೆಲ ಕಾಲ ಮುಂದಕ್ಕೆ ನಡೆಯದಾದೆವು. ಮುಂದೆ ಹೋದಂತೆಲ್ಲಾ ವಾತಾವರಣ ತಿಳಿಯಾಗುತ್ತಾ ಬಂತು. ಕಡಿದಾದ ಬೆಟ್ಟ ಹತ್ತುವುದರ ಜೊತೆಗೆ ಇಳಿಯುವುದೂ ಒಂದು ಸಾಹಸವೇ.

ನಾವು ಟ್ರಕ್ಕಿಂಗ್ ಮಾಡಿದ್ದು ದುರ್ಗಮ ದಾರಿ. ಈ ಅಲಾಕುಲ್ ಸುಂದರ ತಾಣಕ್ಕೆ ವಾಹನಗಳಲ್ಲಿಯೂ ಬರಲು ಸಾಧ್ಯವಿದೆ. ಮತ್ತೊಂದು ಬಣ್ಣದ ಲೋಕ ಸಾಂಗ್ಕುಲ್ ಲೇಕ್. 29 ಕಿಲೋ ಮೀಟರ್ ಉದ್ದದ ಈ ಸರೋವರವೂ ಪಾರದರ್ಶಕ ಶುದ್ಧ ತಿಳಿ ನೀರು,ಅಲ್ಲಿನ ಉಬ್ಬು ತಗ್ಗು ಗುಡ್ಡದ ದಾರಿಗೆ ಜೈಲೂ ಹಾಪಿಂಗ್ ಟ್ರೆಕ್ ಎನ್ನುತ್ತಾರೆ.

‘ಖುದಾಗವಾ’ ಹಿಂದಿ ಸಿನಿಮಾದಂತೆ ಕುದುರೆ ಮೇಲೆ ಕುಳಿತು ಮಾಡುವ ಸಾಹಸ ಉಲಕ್ ಟಾರ್ಟಿಶ್ ಕೂಡ ಅಲ್ಲಿದೆ. ಭಾರೀ ಗಾತ್ರದ ಗಿಡುಗವನ್ನು ಆಕಾಶಕ್ಕೆ ಹಾರಿಸಿ ವಾಪಾಸು ಕರೆಯುವ ಒಂದು ಪ್ರದರ್ಶನವೂ ಇದೆ. ಹತ್ತು ದಿನಗಳಲ್ಲಿ ಮಂಜು ಪರ್ವತ, ಶುದ್ಧನೀರಿನ ಸಮುದ್ರದಂತಹ ಸರೋವರ, ಹತ್ತಾರು ಮೈಲಿಯ ಬಯಲು ಪ್ರದೇಶ, ಕಡಿದಾದ ಕಲ್ಲು ಬೆಟ್ಟ, ಕಾಡು, ಮರುಭೂಮಿ, ಆಗಾಗ ಬದಲಾಗುವ ಹವಾಮಾನ, ಅಪರೂಪದ ಪ್ರಾಣಿ–ಪಕ್ಷಿಗಳು, ಉದ್ಯಾನ, ಮಜಭೂತಾದ ರಸಗವಳ.. ಎಲ್ಲವೂ ಅದ್ಭುತ.

ಯಾವ ಕಾಲ ಸೂಕ್ತ
ವರ್ಷದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಕಿರ್ಘಿಸ್ತಾನದಲ್ಲಿ ಚಾರಣ ಮಾಡಲು ಸೂಕ್ತ ಸಮಯ. ಬಾಕಿ ದಿನಗಳಲ್ಲಿ ಭಯಂಕರ ಚಳಿಗಾಲ.

ಸಂಚಾರ– ಊಟೋಪಚಾರ
ಸ್ಥಳೀಯ ಓಡಾಟಕ್ಕೆ ಕಾರುಗಳು ಬಾಡಿಗೆಗೆ ಸಿಗುತ್ತವೆ. ಏಳರಿಂದ ಎಂಟು ಗಂಟೆ ಪ್ರಯಾಣಕ್ಕೆ ₹3 ಸಾವಿರದಿಂದ ₹4ಸಾವಿರ ಬೆಲೆ ಇದೆ. ₹200 ಖರ್ಚಿನಲ್ಲಿ ಟೆಂಪೊದಲ್ಲೂ ಓಡಾಡಬಹುದು.

ಈ ನಗರದಲ್ಲಿ ಮಾಂಸಾಹಾರಿಗಳೇ ಸಂಖ್ಯೆ ಹೆಚ್ಚು. ಕೋಳಿ ಮಾಂಸದ ಬಳಕೆ ಕಡಿಮೆ. ಬ್ರೆಡ್‌ನೊಂದಿಗೆ ಕುರಿ ಮಾಂಸ ಸೇರಿಸಿ ತಿನಿಸುಗಳನ್ನು ತಯಾರಿಸುತ್ತಾರೆ. ಶಾಶ್ಲಿಕ್, ಲಾಗ್ಮನ್, ಶಂಸಿ ಎಂಬ ಖಾದ್ಯಗಳು ರುಚಿಗಟ್ಟಾಗಿರುತ್ತವೆ. ₹200 ರಿಂದ ₹300 ಒಳಗೆ ಉತ್ತಮವಾದ ಊಟವೂ ಲಭ್ಯ. ಹೀಗಾಗಿ ಬೇರೆ ಕಡೆಗೆ ಹೋಲಿಸಿದರೆ ಹೋಟೆಲ್‌ ತಿನಿಸು, ಲಾಡ್ಜ್‌, ಕಾರುಗಳ ಬಾಡಿಗೆ ತುಸು ಅಗ್ಗ ಎನ್ನಿಸುತ್ತದೆ.

ಹೋಗುವುದು ಹೇಗೆ?
ದೆಹಲಿಯಿಂದ ಕಿರ್ಘಿಸ್ತಾನಕ್ಕೆ ನೇರ ವಿಮಾನಗಳಿವೆ. ಬೆಂಗಳೂರಿನಿಂದ ದೆಹಲಿಗೆ ಮತ್ತು ದೆಹಲಿಯಿಂದ ಕಿರ್ಘಿಸ್ತಾನಕ್ಕೆ ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಇದೆ.

ಇದಕ್ಕಾಗಿ ಪ್ಯಾಕೇಜ್‌ ಟೂರ್‌ಗಳನ್ನು ಕರೆದೊಯ್ಯುವ ಸಂಸ್ಥೆಗಳಿವೆ. ನಾವು ವೈಯಕ್ತಿಕವಾಗಿ ಈ ಪ್ರವಾಸ ಆಯೋಜಿಸಿದ್ದೆವು. ವಿಮಾನ ಪ್ರಯಾಣ, ಊಟ–ಉಪಹಾರ, ವಸತಿ, ಗೈಡ್ ಎಲ್ಲಾ ಸೇರಿ 14 ದಿನಗಳ ಪ್ರವಾಸ. ಒಬ್ಬೊಬ್ಬರಿಗೆ ₹70 ಸಾವಿರ ರೂಪಾಯಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.