ADVERTISEMENT

ಬೆಟ್ಟದ ಮೇಲೊಂದು ಭೈರವೇಶ್ವರ ದೇಗುಲ, ನೋಡ ಬನ್ನಿ....

ಪ್ರಜಾವಾಣಿ ವಿಶೇಷ
Published 28 ಜೂನ್ 2024, 21:04 IST
Last Updated 28 ಜೂನ್ 2024, 21:04 IST
ಕೋಲಾರ ತಾಲ್ಲೂಕಿನ ಸೀತಿ ಬೆಟ್ಟದ ಮೇಲಿರುವ ಭೈರವೇಶ್ವರ ದೇವಾಲಯದ ಮುಖ್ಯ ದ್ವಾರ
ಚಿತ್ರ: ದೀಪಕ್ ಗೌಡ
ಕೋಲಾರ ತಾಲ್ಲೂಕಿನ ಸೀತಿ ಬೆಟ್ಟದ ಮೇಲಿರುವ ಭೈರವೇಶ್ವರ ದೇವಾಲಯದ ಮುಖ್ಯ ದ್ವಾರ ಚಿತ್ರ: ದೀಪಕ್ ಗೌಡ   

ಒತ್ತಡದ ಜೀವನದಲ್ಲಿ ನೆಮ್ಮದಿ ಬಯಸುತ್ತಿರುವವರಿಗೆ ರಮಣೀಯ ‍ಪ್ರಕೃತಿಯ ಸೌಂದರ್ಯವೋ ಅಥವಾ ಧಾರ್ಮಿಕ ಕ್ಷೇತ್ರಗಳ ಭೇಟಿ ಮನಸ್ಸನ್ನು ಅರಳಿಸಬಹುದು. ನಗರಿಗರು ನೆಚ್ಚಿಕೊಂಡಿರುವ ಇಂಥದ್ದೊಂದು ಪ್ರಾಕೃತಿಕ ಹಾಗೂ ಧಾರ್ಮಿಕ ಕ್ಷೇತ್ರ ಬೆಂಗಳೂರಿನ ಸಮೀಪದಲ್ಲೇ ಇದೆ.

ಕೋಲಾರ ನಗರದಲ್ಲಿನ ಕೋಲಾರಮ್ಮ, ಸೋಮೆಶ್ವರ ದೇಗುಲ, ಅಂತರಗಂಗೆ, ಮಾಲೂರಿನ ಚಿಕ್ಕ ತಿರುಪತಿ, ಬಂಗಾರಪೇಟೆಯ ಬಂಗಾರು ತಿರುಪತಿ, ಕೋಟಿಲಿಂಗೇಶ್ವರ, ಮುಳಬಾಗಿಲಿನ ಆಂಜನೇಯಸ್ವಾಮಿ ದೇವಾಲಯ, ಆವನಿಯ ರಾಮಲಿಂಗೇಶ್ವರ, ವಿರುಪಾಕ್ಷಿ ದೇಗುಲ ಸೇರಿದಂತೆ ಜಿಲ್ಲೆಯಲ್ಲಿ ಹತ್ತು ಹಲವು ದೇಗುಲಗಳಿವೆ.

ವೇಮಗಲ್‌ನಿಂದ ಸ್ವಲ್ಪ ದೂರದಲ್ಲಿರುವ ಪುಟ್ಟದಾದ ಊರು ಸೀತಿ. ಪತೇಶ್ವರ ಹಾಗೂ ಭೈರವೇಶ್ವರ ದೇವಾಲಯಗಳಿವೆ. ದೊಡ್ಡ ಗಾತ್ರದ ಕಲ್ಲು ಬಂಡೆಗಳು ಬೆಟ್ಟವನ್ನು ಸುತ್ತುವರೆದಿದ್ದು ಮಧ್ಯದಲ್ಲಿ ದೇವಾಲಯವಿದೆ.  

ADVERTISEMENT

ಭಸ್ಮಾಸುರ ಕಠೋರವಾದ ತಪಸ್ಸು ಮಾಡಿ ಶಿವನನ್ನು ಮೆಚ್ಚಿಸುತ್ತಾನೆ. ಭಸ್ಮಾಸುರ ಕೇಳಿದಂತೆ ಕೈ ಇಟ್ಟರೆ  ಸುಟ್ಟು, ಬೂದಿಯಾಗುವ ವರ ನೀಡುತ್ತಾನೆ.

ವರ ಪಡೆದ ಭಸ್ಮಾಸುರನ ಕಾಟಕ್ಕೆ ದೇವತೆಗಳು ನಲುಗುತ್ತಾರೆ. ಮಹಾವಿಷ್ಣುವಿನ ಮೊರೆಹೋಗುತ್ತಾರೆ.  ಜಗನ್ಮೋಹಿನಿ ಅವತಾರ ತಾಳುವ ವಿಷ್ಣು, ಭಸ್ಮಾಸುರನನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ತಾನು ಮಾಡಿದಂತೆ ಮಾಡುವ ಷರತ್ತು ವಿಧಿಸುವ ಮೋಹಿನಿ, ಭಸ್ಮಾಸುರ ಸ್ವಯಂ ತನ್ನ ತಲೆ ಮೇಲೆ ತಾನೇ ಕೈ ಇಟ್ಟುಕೊಂಡು ನಾಶಹೊಂದುತ್ತಾನೆ. 

ಶಿವನನ್ನು ಹುಡುಕಿಕೊಂಡು ಭಸ್ಮಾಸುರ ಸೀತಿಗೂ ಬರುತ್ತಾನೆ ಎನ್ನುವ ಮೂಲಕ ಈ ಪೌರಾಣಿಕ ಕಥೆಯಲ್ಲಿ ಈ ಊರಿನ ಹೆಸರೂ ಸೇರಿದೆ. ಶಿವನು ಗುಹೆಯಲ್ಲಿ ಅಡಗಿದ್ದಾಗ, ಭಸ್ಮಾಸುರನಿಗೆ ರೈತನೊಬ್ಬ ಹೆಬ್ಬೆರಳು ತೋರಿಸುವ ಮೂಲಕ, ಸೂಚ್ಯವಾಗಿ ಶಿವನಿರುವ ಸ್ಥಳ ತಿಳಿಸುತ್ತಾನೆ. ಇದನ್ನು ಅರಿತ ಶಿವ, ಶಾಪ ನೀಡುತ್ತಾನೆ. ಇದಕ್ಕೆ ಕಂಗಾಲಾದ ರೈತ ಹಾಗೂ ಜನರು, ಪತೇಶ್ವರನ ಬಳಿ ಬಂದು ತಮ್ಮ ನೋವು ತಿಳಿಸುತ್ತಾರೆ.

ಆದರೆ ಶಾಪದಿಂದ ಪಾರಾಗಲು, ವಿಳಾಸ ಹೇಳಿದ ವ್ಯಕ್ತಿಯ ಹೆಬ್ಬೆರಳು ನೀಡುವುದು ಅನಿವಾರ್ಯ ಎನ್ನುತ್ತಾರೆ. ಹೀಗಾಗಿ ಆ ವ್ಯಕ್ತಿ ತನ್ನ ಹೆಬ್ಬೆರಳು ಕತ್ತರಿಸಿ ನೀಡುತ್ತಾನೆ. ಈಗ ದೇವರ ಬೆರಳಿಗೆ ಹೂ ಮುಡಿಸುವ ಪದ್ಧತಿ ಬೆಳೆದುಕೊಂಡು ಬಂದಿದೆ.

ಇಲ್ಲಿ ಪತೇಶ್ವರ, ಭೈರವೇಶ್ವರ ದೇವಾಲಯಗಳ ಜೊತೆಗೆ ಪಾರ್ವತಿ, ಗಣೇಶ, ಸುಬ್ರಮಣ್ಯ ಮತ್ತಿತರ ದೇವಸ್ಥಾನಗಳನ್ನು ಕಾಣಬಹುದು. ಶಿವನ ವಿಗ್ರಹ ಗುಹೆ ಒಳೆಗೆ ಪ್ರತಿಷ್ಠಾಪಿತವಾಗಿರುವುದು ವಿಶೇಷ. ದೇವಾಲಯಕ್ಕೆ ಹೋಗಲು ಮೆಟ್ಟಿಲು ನಿರ್ಮಿಸಲಾಗಿದೆ. ಈಗ ಪ್ರತಿದಿನವೂ ಅನ್ನ ದಾಸೋಹ ನಡೆಯುತ್ತಿದ್ದು, ಹಸಿದು ಬಂದ ಭಕ್ತರ ಹೊಟ್ಟೆ ತುಂಬುತ್ತಿದೆ.

ಸೀತಿಯಲ್ಲಿ ಯುಗಾದಿ ಹಬ್ಬ ಮುಗಿದ ನಂತರ ದೇವರ ರಥೋತ್ಸವ ನಡೆಯುತ್ತದೆ. ಜಾತ್ರೆಯನ್ನು ನೋಡಲು ಸುತ್ತಮುತ್ತಲಿನ ಜನರು ಬರುತ್ತಾರೆ. ಈ ದೇಗುಲದ ಅಂದ ಕಣ್ತುಂಬಿಕೊಳ್ಳಲು ಬೆಂಗಳೂರಿನಿಂದ ಹೊಸಕೋಟೆ ಮಾರ್ಗವಾಗಿ ಚಿಂತಾಮಣಿ ರಸ್ತೆಯಲ್ಲಿ ಸಾಗಿದರೆ ಎಚ್.ಕ್ರಾಸ್ ಸಿಗಲಿದೆ. ಅಲ್ಲಿಂದ ಬಲ ತಿರುವು ಪಡೆದರೆ ವೇಮಗಲ್ ಸಿಗಲಿದೆ. ಅಲ್ಲಿಂದ ಎಡ ತಿರುವು ಪಡೆದು ಮುಂದೆ ಹೋದರೆ ಸೀತಿ ತಲುಪಬಹುದು ಅಥವಾ ಬೆಂಗಳೂರಿನಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕೋಲಾರ ತಲುಪಿ ಅಲ್ಲಿಂದ ವೇಮಗಲ್ ಹೋಗಿ ಸೀತಿಗೆ ಹೋಗಬಹುದು.

ಸಮಯವಿದ್ದರೆ ಸೀತಿಯಿಂದ ಕೈವಾರ ಹಾಗೂ ಬೃಹತ್ ಗುಹೆಯಲ್ಲಿ ನಿರ್ಮಾಣವಾಗಿರುವ ಶಿವಲಿಂಗಗಳನ್ನು ಹೊಂದಿರುವ ಕೈಲಾಸಗಿರಿಯನ್ನು ನೋಡಬಹುದು.

ಕೋಲಾರ ತಾಲ್ಲೂಕಿನ ಸೀತಿಯಲ್ಲಿರುವ ಭೈರವೇಶ್ವರ ದೇವಾಲಯದ ಸುತ್ತಲಿನ ನಿಸರ್ಗ ರಮಣೀಯ ದೃಶ್ಯ ಚಿತ್ರ: ದೀಪಕ್ ಗೌಡ
ಕೋಲಾರ ತಾಲ್ಲೂಕಿನ ಸೀತಿ ಬೆಟ್ಟದ ಮೇಲಿರುವ ಭೈರವೇಶ್ವರ ದೇವಾಲಯ ಚಿತ್ರ: ದೀಪಕ್ ಗೌಡ
ಕೋಲಾರ ತಾಲ್ಲೂಕಿನ ಸೀತಿಯಲ್ಲಿರುವ ಭೈರವೇಶ್ವರ ದೇವಾಲಯಕ್ಕೆ ತೆರಳಲು ಬೆಟ್ಟದಲ್ಲಿ ನಿರ್ಮಿಸಿರುವ ಮೆಟ್ಟಿಲುಗಳು ಚಿತ್ರ: ದೀಪಕ್ ಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.