ADVERTISEMENT

ನಗರ ಕೋಟೆಯಿಂದ ನೇಸರನ ನೋಟ..! ಬಿದನೂರು ಕೋಟೆಯ ಸೂರ್ಯೋದಯದ ಸೊಬಗು

ಸ್ವರೂಪಾನಂದ ಎಂ.ಕೊಟ್ಟೂರು
Published 23 ಅಕ್ಟೋಬರ್ 2021, 19:45 IST
Last Updated 23 ಅಕ್ಟೋಬರ್ 2021, 19:45 IST
ನಗರ ಕೋಟೆಯ ಮುಖ್ಯದ್ವಾರ
ನಗರ ಕೋಟೆಯ ಮುಖ್ಯದ್ವಾರ   

ಚು ಮು ಚುಮು ಬೆಳಕು ಮೂಡುವ ಮುನ್ನ ನೀವು ಈ ಕೋಟೆಯ ಹೆಬ್ಬಾಗಿಲು ಪ್ರವೇಶಿಸಿರಬೇಕು. ಇತ್ತ ನೀವು ಕೋಟೆ ಒಳಗೆ ಹೆಜ್ಜೆ ಹಾಕುತ್ತಾ ಹೋದಂತೆ ಅತ್ತ ಪೂರ್ವ ದಿಕ್ಕಿನಲ್ಲಿ ರವಿಯು ಬೆಟ್ಟ, ಮೋಡಗಳ ದಾಟಿ ನಿಧಾನವಾಗಿ ಮೇಲೇಳುತ್ತಾನೆ. ಸೂರ್ಯನ ಹೊಂಗಿರಣಗಳು ಧರೆಗೆ ಮುತ್ತಿಕ್ಕುವ ಮುನ್ನ ಕೋಟೆಯ ಒಳಾಂಗಣ, ಕೋಟೆಯ ಮೇಲೆಲ್ಲ ಬೆಳೆದ ಹುಲ್ಲಿನ ಗರಿಗಳಿಗೆ ತಬ್ಬಿದ ಇಬ್ಬನಿಯು ಇಡೀ ಕೋಟೆಗೆ ಅಕ್ಷರಶಃ ಮುತ್ತು ಪೋಣಿಸಿ, ಅಲಂಕರಿಸದಂತೆ ಕಂಗೊಳಿಸುತ್ತದೆ. ಅದನ್ನೆಲ್ಲ ಹಾಗೇ ಕಣ್ಣು ತುಂಬಿಕೊಳ್ಳುತ್ತಾ ಹಚ್ಚಹಸಿರ ಹುಲ್ಲು ಹೊದಿಕೆಯ ಹಾದಿ ಸವೆಸಿ, ಕೋಟೆಯ ವೀಕ್ಷಣಾ ಗೋಪುರ ತಲುಪಿ ಪೂರ್ವ ದಿಕ್ಕಿಗೆ ಮುಖ ಮಾಡುವಷ್ಟರಲ್ಲಿ ಸೊಗಸಾದ ಸೂರ್ಯೋದಯ ಸವಿಯುವ ಸುವರ್ಣಾವಕಾಶ ಸಿಗುತ್ತದೆ!

ರವಿಯ ಹೊಂಬಣ್ಣದ ಬೆಡಗಿಗೆ, ಹೊಂಗಿರಣಕ್ಕೆ ನಿರ್ಲಕ್ಷಿತ ಕೋಟೆ ಮಿರ ಮಿರ ಮಿಂಚಿ, ಜೀವ ಕಳೆ ಕಟ್ಟಿಕೊಂಡು ನಮ್ಮ ಅಷ್ಟೂ ಲಕ್ಷ್ಯ ಗಳಿಸಿಬಿಡುತ್ತದೆ! ರವಿಯ ಆ ಪ್ರಥಮ ಕಿರಣಗಳಂತೂ ಮೈಮನ ಪುಳಕಿತಗೊಳಿಸಿ ಕೋಟೆಯೊಳಗೆ ನಮ್ಮನ್ನು ಬಂಧಿ ಆಗಿಸಿ ಬಿಡುತ್ತವೆ. ಬೆಳಕು ಸಂಪೂರ್ಣವಾಗಿ ಹರಿಯುವಷ್ಟರಲ್ಲಿ ಅಂತಿಮವಾಗಿ ಸೂರ್ಯೋದಯವನ್ನು ಕಣ್ಣು ತುಂಬಿಕೊಳ್ಳಲು ಇದಕ್ಕಿಂತ ಸುಲಭ ಮತ್ತು ಪ್ರಶಸ್ತ ತಾಣ ಮತ್ತೊಂದಿಲ್ಲವೆಂದು ಅರಿವಿಗೆ ಬರುತ್ತದೆ. ಹೌದು, ಕೋಟೆ ಪ್ರವೇಶಿಸಿ ಕೆಲವೇ ನಿಮಿಷಗಳಲ್ಲಿ ಅದು ನಿರಾಯಸವಾಗಿ ಸೂರ್ಯೋದವನ್ನು ಕಣ್ಣು ತುಂಬಿಕೊಳ್ಳುವ ವಿಶೇಷ ಅವಕಾಶ ಇರುವುದು ಈ ಕೋಟೆಯ ಗರಿಮೆಯೇ ಸರಿ!

ಶಿವಮೊಗ್ಗ ಜಿಲ್ಲೆಯ ನಗರ ಕೋಟೆಯನ್ನು (ಬಿದನೂರು)ಅದರ ಇತಿಹಾಸ ಮತ್ತು ಕೋಟೆಯ ರಚನೆಯಿಂದ ಪ್ರವಾಸಿಗರು ನೋಡುವುದು, ಅಭ್ಯಾಸಿಸುವುದೇ ಹೆಚ್ಚು. ಆದರೆ ಇದು ಸೂರ್ಯೋದಯ ವೀಕ್ಷಣೆಗೆ ಹೇಳಿ ಮಾಡಿಸಿದಂತಹ ತಾಣವೂ ಹೌದು ಎನ್ನುವುದು ಹಲವರಿಗೆ ಗೊತ್ತಿಲ್ಲ! ನೀವು ಕೋಟೆಯ ತುತ್ತ ತುದಿಯಲ್ಲಿ ಮಾತ್ರವಲ್ಲ ಕೋಟೆಯ ಯಾವುದೇ ಭಾಗದ ದಿನ್ನೆಯಿಂದ ಸೂರ್ಯೋದಯ ಮತ್ತು ಅದು ಕೋಟೆಯ ಆವರಣದಲ್ಲಿ ಸೃಷ್ಟಿಸುವ ಸೊಬಗಿನ ರಮಣೀಯ ದೃಶ್ಯವನ್ನು ಕಾಣಬಹುದು. ಇದು ಕೋಟೆ ವೀಕ್ಷಕರಿಗೆ ಬೋನಸ್! ಹೌದು, ಕೋಟೆಯ ಯಾವುದೇ ಕಡೆಯಿಂದ ಸುರ್ಯೋದಯವನ್ನು ನೋಡಿದರೂ ಪ್ರತಿ ನೋಟ ವಿಶೇಷ ಮತ್ತು ವಿಶಿಷ್ಟವಾಗಿಯೇ ಇರುತ್ತದೆ. ಆ ಮೂಲಕ ಇಲ್ಲಿ ಸೂರ್ಯನ ಹುಟ್ಟು, ಅದು ಕೋಟೆಯ ಮೇಲೆ ಮೂಡಿಸುವ ಛಾಪು ಮಾತ್ರ ಅನನ್ಯ ಮತ್ತು ಅಗಾಧವೇ ಆಗಿರುವುದು ವಿಶೇಷ.

ADVERTISEMENT

ಬೆಳಕು ಮೂಡುವವರೆಗೆ ಇಡೀ ಕೋಟೆ ಪ್ರದೇಶವನ್ನು ಆಕ್ರಮಿಸಿದ್ದ ದಟ್ಟವಾದ ಮಂಜನ್ನು ರವಿಯು ತನ್ನ ಹುಟ್ಟಿನಿಂದ ಓಡಿಸುತ್ತಿರುವಂತೆ ಭಾಸವಾಗುತ್ತದೆ. ಅಲ್ಲಿಯವರೆಗೆ ಅಸ್ಪಷ್ಟವಾಗಿ ಕಾಣುತ್ತಿದ್ದ ಕೋಟೆ, ಅದರ ಸೌಂದರ್ಯ, ಸುತ್ತಲಿನ ಪರಿಸರ ಸ್ಪಷ್ಟವಾಗಿ ಗೋಚರಿಸಲು ಶುರುವಾಗುತ್ತದೆ. ಹೀಗೆ ಮಂಜಿನ ಪ್ರಭಾವ ತಗ್ಗಿ ನೇಸರನ ಆಧಿಪತ್ಯ ಹೆಚ್ಚುತ್ತಾ ಹೋದಂತೆ ಕೋಟೆ ಪ್ರದೇಶದಲ್ಲಿ ಆಗುವ ಸೂಕ್ಷ್ಮ ಬದಲಾವಣೆ, ಆಗುವ ಅದ್ವಿತಿಯ ಸೌಂದರ್ಯವನ್ನು ನೋಡಿಯೇ ಅನುಭವಿಸಬೇಕು. ರವಿ ಸೃಷ್ಟಿಸುವ ರಮ್ಯತೆ ಪಾಚಿ ಗಟ್ಟಿದ ಇಡೀ ಕೋಟೆಗೆ ಹೊಸ ಹೊಳಪು, ವಿಶೇಷ ಮೆರುಗು ನೀಡುತ್ತವೆ. ಸೂರ್ಯೋದಯದಿಂದ ಪರಿಸರದಲ್ಲಿ ಆಗುವ ಚಮತ್ಕಾರಗಳನ್ನು ಕಣ್ಣು ತುಂಬಿಕೊಳ್ಳುತ್ತಲೇ ಕೋಟೆ ಸುತ್ತಲೂ ಕಣ್ಣಾಯಿಸಿದರೆ ತುಂಬಿ ತುಳುಕುವ ಹತ್ತಾರು ನೀರಿನ ಮೂಲಗಳು, ಹಚ್ಚಹಸಿರು, ಹೊಲ-ಗದ್ದೆಗಳು, ಮಂಜು ಮತ್ತು ಮೋಡಗಳ ಮೇಲಾಟ ಮೂಕವಿಸ್ಮಿತಗೊಳಿಸುತ್ತದೆ. ಸೂರ್ಯನ ಈ ಅಸಾಧಾರಣ ಕೈಚಳಕಕ್ಕೆ ನಮ್ಮಿಂದ ‘ವಾಹ್ಹ್’ ಎನ್ನುವ ಉದ್ಗಾರ ಅಪ್ರಯತ್ನಪೂರ್ವವಾಗಿ ಹೊರ ಹೊಮ್ಮದೇ ಇರದು!.

ಸೂರ್ಯನ ಹೂ ಬಿಸಿಲಿಗೆ ಮೈಮನ ತೆರೆದುಕೊಂಡು ಉದಯಿಸುವ ಸೂರ್ಯ, ಹೊಂಗಿರಣಗಳ ಹೊಳಪು ಝಳಪಿನೊಂದಿಗೆ ಕಂಗೊಳಿಸುವ ಕೋಟೆಯ ಚೆಲುವು, ಮಂಜು ಹೊದ್ದು ಮಲಗಿದ ಊರು, ಹೊಲ ಗದ್ದೆಗಳು ಆಗಷ್ಟೆ ಮೈಮುರಿದು ಎದ್ದೇಳುವ ಪರಿ, ಹಕ್ಕಿಗಳ ಚಿಲಿಪಿಲಿ ಕಲರವ.. ಎಲ್ಲವೂ ಸೂರ್ಯೋದಯ ಹೊತ್ತಲ್ಲಿ ಇಲ್ಲಿಂದ ಆಸ್ವಾದಿಸುವುದೇ ಒಂದು ಅವಿಸ್ಮರಣೀಯ ಅನುಭವ. ಒಟ್ಟಾರೆ ಇಲ್ಲಿಂದ ಸೂರ್ಯನ ಬಿಂಬವು ಕ್ಷಿತಿಜವನ್ನು ದಾಟುವ ರೀತಿಯೇ ಒಂದು ರೋಮಾಂಚನಕಾರಿ ದೃಶ್ಯ. ‘ಇಲ್ಲಿ ಸೂರ್ಯ ಹುಟ್ಟುವ ಪ್ರತಿ ಕ್ಷಣ ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದ ನೀಡುತ್ತದೆ. ಈ ಮಾರ್ಗದಲ್ಲಿ ನಾವು ಹೋದಾಗಲೆಲ್ಲ ಈ ಕೋಟೆಗೆ ಅದರಲ್ಲೂ ಮುಂಜಾನೆ ಮತ್ತು ಸಂಜೆಯ ವೇಳೆಯೇ ಸಮಯ ಹೊಂದಿಸಿಕೊಂಡು ಭೇಟಿ ಕೊಡುತ್ತೇವೆ. ಬೆಳಗಿನಷ್ಟೇ ಸೂರ್ಯಾಸ್ತದ ವೀಕ್ಷಣೆಯೂ ಅದ್ಭುತವಾಗಿ ಇರುತ್ತದೆ. ಅದರಲ್ಲೂ ವಿಶೇಷವಾಗಿ ಮಳೆಗಾಲದ ಈ ದಿನಗಳಲ್ಲಿ ಸೂರ್ಯೋದಯದ ವೀಕ್ಷಣೆ ಹೆಚ್ಚು ಅಹ್ಲಾದಕರ, ಅತೀವ ಸಂತೋಷ, ಸಂತೃಪ್ತಿ ನೀಡುತ್ತದೆ..’ ಎನ್ನುತ್ತಾರೆ ಪ್ರವಾಸಿಗರಾದ ಚಿತ್ರದುರ್ಗದ ಅನುಷಾ, ಚಂದ್ರು ದಂಪತಿ.

-ಸ್ವರೂಪಾನಂದ ಎಂ. ಕೊಟ್ಟೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.