ADVERTISEMENT

ತೇಲುವ ಊರಲಿ ದೋಣಿ ಯಾನ

ಪ್ರಹ್ಲಾದ ಪರ್ವತಿ
Published 12 ಜೂನ್ 2019, 19:30 IST
Last Updated 12 ಜೂನ್ 2019, 19:30 IST
ವೆನಿಸ್ 
ವೆನಿಸ್    

ಅಲ್ಲಿ ಎಲ್ಲೆಲ್ಲಿಯೂ ಜಲರಾಶಿ. ಅದರ ನಡುವೆಯೇ ನಗರವಿದೆ. ದೂರದಿಂದ ನೋಡಿದರೆ ಇಡೀ ನಗರವೇ ನೀರಿನಲ್ಲಿ ತೇಲುತ್ತಿರುವಂತೆ ಕಾಣುತ್ತದೆ. ಈ ನಗರ ತಲುಪಲು ಮತ್ತು ಅದರೊಳಗೆ ಅಡ್ಡಾಡಲು ಆ ಜಲರಾಶಿಯನ್ನು ಸೀಳಿಕೊಂಡೇ ಸಾಗಬೇಕು. ಹೀಗಾಗಿ ಇಲ್ಲಿ ಜಲಸಾರಿಗೆಯ ಮೂಲಕವೇ ಸಂಚರಿಸಬೇಕು. ಅದು ದಿನಸಿ ತರುವುದಿರಲಿ, ಕಚೇರಿಗಳಿಗೆ ಉದ್ಯೋಗಕ್ಕೆ ಹೋಗುವುದಕ್ಕಿರಲಿ ಅದಕ್ಕೆ ದೋಣಿಯೇ ಆಧಾರ. ಅಷ್ಟೇ ಅಲ್ಲ, ತುರ್ತು ಸೇವೆ ನೀಡುವ ಅಂಬ್ಯುಲೆನ್ಸ್, ಅಗ್ನಿಶಾಮಕ, ಪೊಲೀಸರೂ ದೋಣಿ ಮೂಲಕವೇ ಅಡ್ಡಾಡಬೇಕು !

ನೀರಿನಲ್ಲಿ ತೇಲುವಂತೆ ಕಾಣುವ ನಗರದ ಹೆಸರು ವೆನಿಸ್‌. ಇದು ಇಟಲಿ ದೇಶದ ದ್ವೀಪ ನಗರಿ. ಇಲ್ಲಿನ ಏಡ್ರಿಯಾಟಿಕ್ ಸಮುದ್ರದಲ್ಲಿರುವ ಚಿಕ್ಕ ದ್ವೀಪಗಳಲ್ಲಿ ಇದೂ ಒಂದು. ಇದನ್ನು ಭುವಿಯ ಮೇಲಿನ ಸ್ವರ್ಗ, ತೇಲಾಡುವ ಪಟ್ಟಣ, ಸಪ್ನ ನಗರಿ, ಮುಖವಾಡಗಳ ನಗರ, ವಾಟರ್ ಸಿಟಿ, ಏಡ್ರಿಯಾಟಿಕ್ ರಾಣಿ..ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ.

ನೀರೊಳಗೆ ಅಡಗಿರುವ ಈ ವಿಸ್ಮಯ ನಗರ ನೋಡಬೇಕೆನ್ನುವ ಬಹುದಿನದ ನನ್ನ ಆಸೆಯನ್ನು ಆಮ್‌ಸ್ಟರ್‌ಡಾಮ್‌ನಲ್ಲಿರುವ ಮಗ ಪ್ರದೀಪ ಸಾಕಾರಗೊಳಿಸಿದ. ಯುರೋಪ್ ಪ್ಯಾಕೇಜ್ ಪ್ರವಾಸದಲ್ಲಿ ಪತ್ನಿ ಪ್ರತಿಮಾಳೊಂದಿಗೆ ಒಂಬತ್ತು ದಿನಗಳ ಕಾಲ ಬೆಲ್ಜಿಯಂ, ಬ್ರುಸೆಲ್ಸ್‌ ಸೇರಿದಂತೆ ಯುರೋಪಿನ ಎಲ್ಲ ಪ್ರಮುಖ ಪ್ರವಾಸಿ ತಾಣಗಳನ್ನು ನೋಡಿ ಬಂದೆ.

ADVERTISEMENT

ದೋಣಿ ಸಾಗಲಿ..
ಇಟಲಿಯ ಮಿಲಾನ್‌ನಿಂದ ಹೊರಟ ನಮ್ಮ ಬಸ್ಸು ವೆನಿಸ್‌ಗೆ ಸಂಪರ್ಕ ಕಲ್ಪಿಸುವ ಭೂಭಾಗಕ್ಕೆ ಬಂದು ನಿಂತಾಗ ಬೆಳಿಗ್ಗೆ 10 ಗಂಟೆಯಾಗಿತ್ತು. ನಿಂತ ನೆಲ ಬಿಟ್ಟು ದೃಷ್ಟಿ ಹಾಯಿಸಿದಲ್ಲೆಲ್ಲಾ ನೀರೋ ನೀರು. ಅಲ್ಲಿ, ಪ್ರವಾಸಿಗರನ್ನು ಕರೆದೊಯ್ಯಲು ಸಾಲಾಗಿ ಲಾಂಚ್‍ಗಳು ನಿಂತಿದ್ದವು. 200 ಅಡಿ ಅಗಲದ ನೀರು ತುಂಬಿದ ಬೃಹತ್ತಾದ ಗ್ರಾಂಡ್ ಕೆನಾಲ್. ಈ ಜಲ ಹೆದ್ದಾರಿಯನ್ನು ಕಂಡು ಎಲ್ಲರಿಗೂ ರೋಮಾಂಚನ. ಇಲ್ಲಿ ಸರ್ಕಾರಿ ಸ್ವಾಮ್ಯದ ವಾಟರ್ ಬಸ್ ‘ವಾಪೋರೆಟೋ’ಗಳು ಸಹ ಪ್ರವಾಸಿಗರಿಗೆ ಕಾಯುತ್ತಿರುತ್ತವೆ.

ನಮ್ಮ ಲಾಂಚ್ ದೊಡ್ಡ ಕಾಲುವೆಯ ನೀರನ್ನು ಸೀಳಿಕೊಂಡು ಶರವೇಗದಿಂದ ವೆನಿಸ್‌ನತ್ತ ಸಾಗುವಾಗ ನಮಗೆ ಭಯ ಮಿಶ್ರಿತ ಕುತೂಹಲ. ನಮ್ಮ ಕರೆದೊಯ್ಯುತ್ತಿದ್ದ ಗೈಡ್‌ ಸುತ್ತಲಿನ ತಾಣಗಳ ಬಗ್ಗೆ ವಿವರಿಸುತ್ತಿದ್ದಳು. ‘ಇದು ಏಡ್ರಿಯಾಟಿಕ್ ಸಮುದ್ರದ ವಾಯವ್ಯ ತುದಿಯಲ್ಲಿರುವ ಜಲಭಾಗದ (ಲಗೂನ್) ಹಿನ್ನಿರಿನ ಮಧ್ಯದಲ್ಲಿರುವ ವೆನಿಸ್ ನಗರ. 118 ದ್ವೀಪಗಳಿಂದ ರಚಿತವಾಗಿದೆ. 177 ಕಾಲುವೆಗಳ ಜಾಲ ಇದೆ. 400ಕ್ಕೂ ಹೆಚ್ಚು ಸೇತುವೆಗಳಿಂದ ಪರಸ್ಪರ ಸಂಪರ್ಕ ಕಲ್ಪಿಸುವ ಸಂಗಮದ ಭೂಭಾಗವಾಗಿದೆ’ ಎಂದು ಆಕೆ ವಿವರಿಸುತ್ತಿರುವಾಗ ಕೆನಾಲ್‌ಗೆ ಅಡ್ಡಲಾಗಿ ಸುಂದರ ಕಮಾನು ಬಂತು. ಆ ಸೇತುವೆ ಮೇಲೆ ಅಂಗಡಿಗಳಿದ್ದವು. ಅದರತ್ತ ಕೈ ತೋರುತ್ತ ‘ಇದು ರಯಾಲ್ಟೋ ಬ್ರಿಜ್’ ಎಂದಳು.

ಮುಂದೆ ಬಂದ ಮತ್ತೊಂದು ಕಾಲುವೆಯನ್ನು ‘ನಿಟ್ಟುಸಿರಿನ ಸೇತುವೆ’ ಎಂದು ಪರಿಚಯಿಸಿದಳು. ‘ನಿಟ್ಟುಸಿರಾ’ ಎಂದು ಉದ್ಗರಿಸಿದಾಗ, ಗೈಡ್ ಈ ಸೇತುವೆ ಕಥೆ ಹೇಳುತ್ತಾ ಹೊರಟಳು. ‘ಈ ಸೇತುವೆ ಇಲ್ಲಿದ್ದ ಡೋಗೆ ಅರಸರ ಕಾಲದ್ದು. ಆಗ ಅರಮನೆ-ಸೆರೆಮನೆಗೆ ಇದು ಕೊಂಡಿಯಾಗಿತ್ತು. ಕೋರ್ಟ್‌ ತೀರ್ಪಿನ ನಂತರ ಕೈದಿಗಳು ಸೆರೆಮನೆಗೆ ಹೋಗುವಾಗ ಈ ಸೇತುವೆ ದಾಟುತ್ತಾ, ಅದರಲ್ಲಿರುವ ಸಣ್ಣ ಕಿಟಕಿಗಳ ಮೂಲಕ ಕೊನೆಯ ಬಾರಿಗೆ ಹೊರಗಿನ ಪ್ರಪಂಚವನ್ನು ಕಂಡು ನಿಟ್ಟುಸಿರು ಹಾಕುತ್ತಿದ್ದರು. ಅದಕ್ಕೆ ಈ ಅನ್ವರ್ಥಕ ನಾಮ’ ಎಂದು ವಿವರಿಸಿದಳು.

ಬೆಸಿಲಿಕಾ ಸ್ಕ್ವೇರ್‌ನಲ್ಲಿ...
ಹೀಗೆ ಗೈಡ್‌ನ ಕಥೆ ಕೇಳುತ್ತಾ, ದೋಣಿಯಲ್ಲಿ ಸಾಗುತ್ತಾ, ವೆನಿಸ್‌ ನಗರದ ಬಹು ದೊಡ್ಡದಾದ ಭೂಭಾಗಕ್ಕೆ ತಲುಪಿದೆವು. ಅಲ್ಲಿದ್ದ ಬೃಹದಾಕಾರದ ಚೌಕವೊಂದು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿತ್ತು. ಕಲೆ ಮತ್ತು ಸೌಂದರ್ಯದ ಈ ಚೌಕದ ಪ್ರವೇಶದಲ್ಲಿಯೇ ಚಿತ್ರ ಬಿಡಿಸುವ ಕಲಾವಿದರು, ವಿವಿಧ ಕರಕುಶಲ ಸಾಮಗ್ರಿಗಳ ಮಾರಾಟಗಾರರ ಸಮೂಹವೇ ಕಾಣುತ್ತಿತ್ತು. ಅದಕ್ಕೆ ಸೇಂಟ್ ಮಾರ್ಕ್ಸ್‌ ಬೆಸಿಲಿಕಾ ಸ್ಕ್ವೇರ್ ಎಂದು ಹೆಸರು. ಅಲ್ಲಿದ್ದ ಕಾಂಪನೈಲ್ ಎಂಬ ಅತಿ ಎತ್ತರದ ಕೆಂಪು ವರ್ಣದ ಚಚ್ಚೌಕ ಗಡಿಯಾರ ಗೋಪುರ ಮನಮೋಹಕವಾಗಿದೆ. ಗಂಟೆಯ ಶಬ್ದಕ್ಕೆ ಹಾರಿ ಬರುವ ಸಾವಿರಾರು ಪಾರಿವಾಳಗಳ ದಂಡು ಪ್ರವಾಸಿಗರು ಹಾಕುವ ಕಾಳುಗಳನ್ನು ತಿನ್ನಲು ಈ ವಿಶಾಲ ಚೌಕದ ಅತಿಥಿಗಳಾಗುತ್ತವೆ. ಈ ಚೌಕವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಫೋಟೊ ಕ್ಲಿಕ್ ಮಾಡುವ ತಾಣವಂತೆ.

ಈ ಊರನ್ನು ನೋಡಿದಾಗ ನೂರಾರು ವರ್ಷಗಳ ಪ್ರಾಚೀನ ಪ್ರದೇಶಕ್ಕೆ ಹೆಜ್ಜೆ ಇಟ್ಟ ಅನುಭವವಾಗುತ್ತದೆ. ಕೆನಾಲ್‍ಗೆ ಮುಖ ಮಾಡಿ ನಿಂತ ವೆನಿಟಿಯನ್ ಗೋಥಿಕ್ ಶೈಲಿಯ ವೆನಿಸ್ ರಾಜ ಡೋಗ್ಸ್‌ರ ಅರಮನೆ ಆಕರ್ಷಕವಾಗಿದೆ. ಅದನ್ನು ಸದ್ಯ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಅರಮನೆಯ ಆವರಣದಲ್ಲಿ ಬ್ರಿಡ್ಜ್ ಆಫ್ ಸೈಸ್ ಎಂಬ ಹಳೆಯ ಹಾಗೂ ಹೊರಗಿನ ಸೆರೆಮನೆ ಜೋಡಿಸುವ ಬಿಳಿ ಸೇತುವೆ ಇದೆ. ಚೌಕದ ಅಕ್ಕಪಕ್ಕದಲ್ಲಿ ಹೋಟೆಲ್, ಕೆಫೆಟೇರಿಯಾಗಳಿದ್ದು ಅದರ ವಾರಸುದಾರರು ಬಣ್ಣಗಳ ಕುರ್ಚಿ ಹಾಕಿ ಪ್ರವಾಸಿಗರನ್ನು ಸೆಳೆಯುತ್ತಾರೆ. ಇಲ್ಲಿರುವ ಅಂಗಡಿಗಳಲ್ಲಿ ವರ್ಣರಂಜಿತ ಮೆದು ರಬ್ಬರಿನ ಮುಖವಾಡಗಳು ಬಲು ಪ್ರಸಿದ್ಧಿ. ಲೇಸು ಹಾಗೂ ಕಸೂತಿ ಕೆಲಸದ ಸಾಮಗ್ರಿಗಳು, ಸ್ಫಟಿಕ ಮತ್ತು ಗಾಜಿನಿಂದ ತಯಾರಿಸಿದ ಸೊಗಸಾದ ಸಾಮಗ್ರಿಗಳು, ಕಲಾತ್ಮಕ ಹಾಗೂ ಸೂಕ್ಷ್ಮವಾದ ಕಣ್ಣು ಕೋರೈಸುವ ಬಂಗಾರ, ಬೆಳ್ಳಿಯ ಒಡವೆಗಳು ತಯಾರಾಗುತ್ತವೆ. ಬೆಲೆಗಳು ಅಧಿಕ. ನಾವು ಗಾಜಿನ ಸಾಮಗ್ರಿ ತಯಾರಿಸುವ ಪ್ರಾತ್ಯಕ್ಷಿಕೆಯ ಮಳಿಗೆಗೆ ಭೇಟಿ ನೀಡಿದೇವು.

ವೆನಿಸ್ ನಗರ ಚಿತ್ರ ನಿರ್ಮಾಪಕರು, ನಿರ್ದೇಶಕರನ್ನು ಆಕರ್ಷಿಸುವ ಯಕ್ಷಣಿ ನಗರ. ಭಾರತ ಸೇರಿದಂತೆ ಅನೇಕ ದೇಶಗಳ ಚಿತ್ರಗಳು ಇಲ್ಲಿ ಚಿತ್ರೀಕರಣವಾಗಿವೆ. ಲಿಡೊ ದ್ವೀಪದಲ್ಲಿ ನಡೆಯುವ ‘ವೆನಿಸ್ ಫಿಲ್ಮ್ ಫೇಸ್ಟಿವೆಲ್’ ಗೆ ವಿದೇಶಗಳಿಂದ ಪ್ರವಾಸಿಗರ ದಂಡೆ ಬರುತ್ತದೆ ಎಂಬ ವಿಷಯವನ್ನು ಗೈಡ್ ತಿಳಿಸಿದಳು.

ಷೇಕ್ಸ್‌ಪಿಯರ್‌ನ ‘ಮರ್ಚೆಂಟ್‌ ಆಫ್ ವೆನಿಸ್‌’ ಓದಿದ್ದ ನನಗೆ, ಈ ನಗರ ನೋಡುವ ತವಕವಿತ್ತು. ವೆನಿಸ್‌ ನೋಡಿದ್ದಾಯಿತು. ಮುಂದೆ ಜಿನೀವಾದತ್ತ ನಮ್ಮ ಪ್ರವಾಸವಿತ್ತು. ಹೀಗಾಗಿ ಗೈಡ್ ಒತ್ತಾಯಕ್ಕೆ ಮಣಿದು ಅಲ್ಲಿಂದ ಹೊರಟೆವು.

ಗೊಂಡೋಲಾ ವಿಹಾರ
ವೆನಿಸ್‌ ನಗರದಲ್ಲಿ ನೀರಿನ ಮೇಲೆ ಮನೆಗಳು ನಿರ್ಮಾಣವಾಗಿವೆ. ಸಾವಿರಾರು ಮರದ ದಿಮ್ಮಿಗಳ ತಳಹದಿ ಮೇಲೆ ಮನೆಗಳನ್ನು ಕಟ್ಟಿದ್ದಾರೆ. ಕಿರಿದಾದ ಫುಟ್‍ಪಾಥ್‍ಗಳಲ್ಲಿ ಪಾದಚಾರಿಗಳು ಅಡ್ಡಾಡಬಹುದು. ಆದರೂ ಊರ ಸುತ್ತಲು ಜಲಮಾರ್ಗಗಳೇ ರಸ್ತೆಗಳು. ಪ್ರಕೃತಿ ಸೌಂದರ್ಯ ಹೊದ್ದುಕೊಂಡ ನಗರದ ಕಿರಿದಾದ ಕಾಲುವೆಗಳಲ್ಲಿ ಸಂಚರಿಸಲು ಆರು ಜನರು ಕುಳಿತುಕೊಳ್ಳುವ ಉದ್ದನೆಯ ಕಿರಿದಾದ ಹುಟ್ಟು ಹಾಕುವ ದೋಣಿಗಳು(ಗೊಂಡೋಲಾ) ಇರುತ್ತವೆ. ನಮಗೆಲ್ಲರಿಗೂ ಈ ಪ್ರಯಾಣ ಮರೆಯಲಾರದ ಅನುಭವ ನೀಡಿತು. ಚಕ್ರವ್ಯೂಹದಂತಿರುವ ನೀರಿನ ಗಲ್ಲಿಗಳಲ್ಲಿ ದೇಶ ವಿದೇಶಗಳಿಂದ ಪ್ರವಾಸಿಗರನ್ನು ನೋಡುತ್ತ ಸಂಚರಿಸುವುದು ಅಪ್ಯಾಯಮಾನವಾದದು. ಪ್ರಣಯಿಗಳಿಗಾಗಿ, ಹನಿಮೂನ್ ದಂಪತಿಗಾಗಿ ಚಿಕ್ಕದಾದ ಸುಂದರವಾದ ಗೂಂಡೋಲಗಳಿರುತ್ತವೆ. ಅದರಲ್ಲಿರುವವರನ್ನು ರಂಜಿಸಲು ಸಂಗಿತ ವಾದಕ ಇರುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.