ADVERTISEMENT

ಬ್ರುಸೆಲ್ಸ್‌ ‘ಗ್ರಾಂಡ್ ಪ್ಲೇಸ್’

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 19:32 IST
Last Updated 9 ಜನವರಿ 2019, 19:32 IST
ಗ್ರಾಂಡ್ ಪ್ಲೇಸ್
ಗ್ರಾಂಡ್ ಪ್ಲೇಸ್   

ಹತ್ತು ರಾಷ್ಟ್ರಗಳ ಪ್ಯಾಕೇಜ್‌ ಟೂರ್‌ಗೆ ಹೊರಟೆವು. ಬೆಂಗಳೂರಿನಿಂದ ವಿಮಾನದಲ್ಲಿ ಲಂಡನ್‌ ತಲುಪಿದೆವು. ಲಂಡನ್‌ – ಪ್ಯಾರಿಸ್‌ ತಲುಪಿದ್ದು ಯೂರೋ ರೈಲಿನಲ್ಲಿ. ಅದು ವೇಗಧೂತ ರೈಲು.

ಯೂರೋಪ್‌ ಪ್ರವಾಸಕ್ಕೆ ಹೋದವರಿಗೆ ಈ ಅನುಭವವಾಗಿರುತ್ತದೆ; ಅದೇನೆಂದರೆ, ‘ಪ್ಯಾರಿಸ್‌ನಲ್ಲಿ ತಿಂಡಿ, ಬೆಲ್ಚಿಯಂನಲ್ಲಿ ಮಧ್ಯಾಹ್ನ ಊಟ, ನೆದರ್‌ಲ್ಯಾಂಡ್‌ನಲ್ಲಿ ರಾತ್ರಿ ಊಟ’. ನಮಗೂ ಕೂಡ ಅದೇ ಅನುಭವ. ಪ್ಯಾರಿಸ್‌ನಲ್ಲಿ ಬೆಳಿಗ್ಗೆ ತಿಂಡಿ ತಿಂದು ಬಸ್‌ ಹತ್ತಿದ ನಾವು ತಲುಪಿದ್ದು ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ಗೆ. ಮಧ್ಯಾಹ್ನದ ಊಟಕ್ಕೆ ಮುನ್ನ ನಮ್ಮ ಗೈಡ್ ‘ಬ್ರುಸೆಲ್ಸ್‌’ ಸುತ್ತಾಡಿಸುತ್ತಾ, ನಗರದ ಪ್ರಮುಖ ವೃತ್ತ ‘ಗ್ರಾಂಡ್‌ಪ್ಲೇಸ್‌’ಗೆ ಕರೆದೊಯ್ದರು.

ಯೂರೋಪ್‌ನ ಅತ್ಯಂತ ಸುಂದರ ಮಾರುಕಟ್ಟೆ ಚೌಕ ಎಂದೇ ಪ್ರಸಿದ್ಧವಾದ ಗ್ರಾಂಡ್ ಪ್ಲೇಸ್, ಪುರಾತನ ವಾಸ್ತುಶಿಲ್ಪ ಹೊಂದಿದೆ. ಭವ್ಯ ಕಟ್ಟಡಗಳ ನಡುವಿನ ಈ ಚೌಕದಲ್ಲಿ ಓಡಾಡುತ್ತಿದ್ದಾಗ, ಒಂದು ವಿಶಿಷ್ಟ ಅನುಭವ ನಮ್ಮದಾಯಿತು. ಆಯತಾಕಾರದ ಕಲ್ಲುಗಳಿಂದ ಅಲಂಕರಿಸಿರುವ ನೆಲ, ಸುತ್ತಲಿನ ಪುರಾತನ ಕಟ್ಟಡಗಳ ಮೆರುಗು, ನಡುವೆ ನಿಂತ ನಮಗೆ ಭೂತಕಾಲಕ್ಕೆ ಭೇಟಿ ನೀಡಿದ ಅನುಭವ. ಗೈಡ್, ಆ ತಾಣದ ವಿವರಣೆ ನೀಡುತ್ತಾ ಹೆಜ್ಜೆ ಹಾಕುತ್ತಿದ್ದರೆ, ನಾವು ಅವರು ಹೇಳುವ ವಿವರಣೆ ಕೇಳಿಸಿಕೊಳ್ಳುತ್ತಾ, ಕಟ್ಟಡದ ಅಂದ, ವಾಸ್ತುಶಿಲ್ಪದ ಸೌಂದರ್ಯವನ್ನು ಮನಸಾರೆ ಸವಿಯುತ್ತಿದ್ದೆವು.

ADVERTISEMENT

ಅನೇಕ ಸುಪ್ರಸಿದ್ಧರ ಭಾಷಣಗಳಿಗೆ, ಸಭೆ ಹಾಗೂ ಸಂಘಟನೆಗೆ ತಾಣವಾದ ಈ ಚೌಕ ತನ್ನ ಬಜಾರುಗಳಿಗೆ ಕೂಡ ಹೆಸರಾಗಿದೆ. ಇಲ್ಲಿ 15ನೇ ಶತಮಾನದಿಂದ 17ನೇ ಶತಮಾನದವರೆಗೂ ನಿರ್ಮಿಸಿರುವ ಬೃಹತ್ ಕಟ್ಟಡಗಳಿವೆ. ಈ ಕಟ್ಟಡಗಳಿಗೆ ಮೆರುಗನ್ನು ತಂದಿರುವುದು ಇಲ್ಲಿನ ಸೌಧಗಳ ಮೇಲೆ ಅಳವಡಿಸಿರುವ ಸುತ್ತಮುತ್ತಲಿನ ಪ್ರಸಿದ್ಧ ವ್ಯಕ್ತಿಗಳ ಮೂರ್ತಿಗಳು. 1965ರಲ್ಲಿ ಫ್ರೆಂಚರ ಪಿರಂಗಿ ಗುಂಡುಗಳು ಕೆಲವಾರು ಕಟ್ಟಡಗಳನ್ನು ನಾಶಪಡಿಸಿದರೂ ಕಲೋಪಾಸಕರಾದ ಬೆಲ್ಜಿಯನ್ನರು ಕೇವಲ ನಾಲ್ಕೇ ವರ್ಷಗಳಲ್ಲಿ ಪುನನಿರ್ಮಿಸಿ ಚೌಕದ ಸೌಂದರ್ಯವನ್ನು ನವೀಕರಿಸಿದರು.

ಈ ಚೌಕದಲ್ಲಿರುವ ಟೌನ್ ಹಾಲ್ ಕಟ್ಟಡ ಕ್ರಿ.ಶ 1402ರಿಂದ 1455ರವರೆಗೆ ಇದರ ನಿರ್ಮಾಣವಾಗಿದೆ. ಗೋಥಿಕ್ ಶೈಲಿಯ ಈ ಭವ್ಯ ಸೌಧ ಹಲವಾರು ಕಿಟಕಿಗಳು ಹಾಗೂ ಅರಸರ ಚಿತ್ರಗಳನ್ನು ಹೊಂದಿದೆ. ಈ ಕಟ್ಟಡದ ನಡುವೆ 315 ಅಡಿ ಎತ್ತರದ ಗೋಪುರವಿದೆ. ಅದರ ತುತ್ತ ತುದಿಗೆ ಬ್ರುಸೆಲ್ಸ್ ಸಂರಕ್ಷಕ ಸೇಂಟ್ ಮೈಕೆಲ್ ನ ಮೂರ್ತಿಯನ್ನು ಅಳವಡಿಸಲಾಗಿದೆ. ಬ್ರುಸೆಲ್ಸ್ ನಗರಾಡಳಿತ ಕಟ್ಟಡವಾಗಿ ಈಗ ಬಳಕೆಯಲ್ಲಿರುವ ಇದು ಸೌಂದರ್ಯದ ಜೊತೆಗೆ ಇತಿಹಾಸ ಸಾರುವ ಸ್ಮಾರಕವಾಗಿದೆ.

ಅರಸ ಕಟ್ಟಿರುವ ಅರಮನೆಗೆ ಡ್ಯೂಕ್ ಹೌಸ್ ಅಥವಾ ಕಿಂಗ್ ಪ್ಯಾಲೆಸ್ ಕೂಡ ಸುಂದರವಾದ ಕಟ್ಟಡ. ಇದನ್ನು ಈ ಸ್ಥಳದಲ್ಲಿ ಹಿಂದೆ ಇದ್ದ ಕಟ್ಟಡ ’ಬ್ರೆಡ್ ಹೌಸ್’ ನ ಹೆಸರಿನಿಂದ ಕೂಡ ಜನ ಕರೆಯುತ್ತಾರೆ. ಹಲವಾರು ಚಾರಿತ್ರಿಕ ಕಟ್ಟಡಗಳೊಂದಿಗೆ ಭವ್ಯವಾದ ಬೃಹತ್ತಾದ ಕಟ್ಟಡಗಳೂ ಈ ಚೌಕದ ಸುತ್ತ ಇವೆ. 1998 ರಲ್ಲಿ ಯುನೆಸ್ಕೊ ಗ್ರಾಂಡ್ ಪ್ಲೇಸ್ ಅನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಿತು.

ಬೆಲ್ಚಿಯಂ ಬಿಯರ್‌, ಚಾಕೊಲೇಟ್‌ಗೆ ಹೆಸರುವಾಸಿ. ಹಾಗೆ, ಬ್ರುಸೆಲ್ಸ್‌ನಲ್ಲಿ ನಾಲ್ಕು ಸಾವಿರ ವಿವಿಧ ಬ್ರಾಂಡ್ ಹಾಗೂ ಹೆಸರಿನ ಚಾಕೊಲೇಟ್ ಸಿಗುತ್ತವೆ. ಐನೂರಕ್ಕೂ ಹೆಚ್ಚು ಬಿಯರ್‌ಗಳು ಇಲ್ಲಿ ಲಭ್ಯ. ‘ಬ್ರೆವರ್ ಹೌಸ್’ ಎಂಬ ಬೀರ್ ಮ್ಯೂಸಿಯಮ್ ಸಹ ಇಲ್ಲಿದೆ. ಚೌಕದ ಸುತ್ತಲಿನ ಕಟ್ಟಡಗಳ ಕೆಳ ಹಾಗೂ ಮೊದಲ ಮಹಡಿಗಳಲ್ಲಿ ಹಲವಾರು ಅಂಗಡಿಗಳಿವೆ, ಸ್ಮರಣಿಕೆಗಳು, ಚಾಕೊಲೇಟುಗಳು, ಕಾಫಿ, ಬಟ್ಟೆ, ಅಲಂಕಾರಿಕ ವಸ್ತುಗಳು, ತಿನಿಸುಗಳು ಮುಂತಾದವುಗಳ ಮಾರಾಟ ನಡೆಯುತ್ತಿರುತ್ತದೆ. ಚಿಣ್ಣರ ಮೆಚ್ಚಿನ ‘ಟಿನ್ ಟಿನ್’ ಸೃಷ್ಟಿಸಿದ್ದು ಬೆಲ್ಜಿಯಂನ ಕಾರ್ಟೂನ್ ಚಿತ್ರಕಾರ ಜಾರ್ಜಸ್ ರೆಮಿ. ಹರ್ಗೆ ಎಂಬ ಹೆಸರಿನಲ್ಲಿ ಆತ ಚಿತ್ರ ರಚಿಸುತ್ತಿದ್ದ. ಈ ಟಿನ್ ಟಿನ್‌ಗೆ ಸಂಬಂಧಿಸಿದ ಅಂಗಡಿಯೂ ಇಲ್ಲಿದೆ.

ಇಲ್ಲಿಗೆ ಹೋದ ಮೇಲೆ ಗೋಧಿ ಹಿಟ್ಟಿನಿಂದ ಮಾಡುವ ಘಮಘಮ ‘ವಾಫೆಲ್’ ಎಂಬ ತಿನಿಸನ್ನು ಸವಿಯಲೇ ಬೇಕು. ಚೌಕಾಕಾರದ ಬ್ರೆಡ್ ಆಕಾರದ ಈ ತಿನಿಸಿಗೆ ಹಣ್ಣುಗಳು, ಚಾಕಲೇಟ್ ರಸ, ಕೆನೆ ಮುಂತಾದವುಗಳನ್ನು ಹಾಕಿ ಕೊಡುತ್ತಾರೆ. ಇದನ್ನು ಮಾರುವ ಹಲವು ಅಂಗಡಿಗಳು ಇಲ್ಲಿವೆ. ಎರಡು ವರ್ಷಗಳಿಗೊಮ್ಮೆ ಈ ಇಡೀ ಗ್ರಾಂಡ್ ಪ್ಲೇಸ್ ಚೌಕವನ್ನು ಹೂಗಳಿಂದ ಅಲಂಕರಿಸಿ ಹೂಗಳ ಕಾರ್ಪೆಟ್ ನಿರ್ಮಿಸುತ್ತಾರೆ. ಆಕರ್ಷಕವಾದ ಈ ದೃಶ್ಯವನ್ನು ನೋಡಲು ಆಗ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ.

ಸಿನಿಮಾ ಶೂಟಿಂಗ್ ತಾಣ

ಗ್ರಾಂಡ್ ಪ್ಲೇಸ್ ಹತ್ತಿರದಲ್ಲಿಯೇ ಭವ್ಯವಾದ ಪುರಾತನ ಸೇಂಟ್ ಮೈಕೆಲ್ ಚರ್ಚ್, ‘ಮಲಗಿದ ಸಂತೆ’ ಎಂದೇ ಹೆಸರಾದ ಕಂಚಿನ “ಸೇಂಟ್ ಪ್ಯಾಟ್ರಿಕ್” ಶಿಲ್ಪ ಇದೆ. “ಮ್ಯಾನಿಕೇನ್ ಪಿಸ್” ಎಂಬ ಮೂತ್ರ ಮಾಡುತ್ತಿರುವ ಬಾಲಕನ ಪುಟ್ಟ ಪ್ರತಿಮೆ ಕೂಡ ಹತ್ತಿರದ ಓಣಿಯಲ್ಲಿದೆ. ವಾಸ್ತವವಾಗಿ ಇದೊಂದು ಸಣ್ಣ ನೀರಿನ ಕಾರಂಜಿ. “ಮೊಗಲ್-ಎ-ಆಜಮ್” ಚಲನಚಿತ್ರದ “ಪ್ಯಾರ್ ಕಿಯಾತೋ ಡರ್ ನಾ ಕ್ಯಾ” ಹಾಡಿಗಾಗಿ ನಿರ್ದೇಶಕ ಕೆ.ಆಸಿಫ್ “ಶೀಶ್ ಮಹಲ್” ಸೆಟ್ ಹಾಕಿಸಿದ್ದರಂತೆ. ಎರಡು ವರ್ಷಗಳ ಕಾಲ ತೆಗೆದುಕೊಂಡ ಈ ಶೀಶ್ ಮಹಲ್ ನಿರ್ಮಾಣಕ್ಕೆ ಬೆಲ್ಜಿಯಂ ಗಾಜುಗಳನ್ನು ಯೂರೋಪ್‌ನಿಂದ ತರಿಸಲಾಗಿತ್ತು ಎಂಬ ಸಂಗತಿಯಿಂದಾಗಿ ಬೆಲ್ಜಿಯಂ ಭಾರತೀಯರಿಗೆ ಪರಿಚಿತ. ಫಳ ಫಳ ಹೊಳೆಯುವ ಗ್ರಾಂಡ್ ಪ್ಲೇಸ್ ಸುತ್ತಲಿನ ಕಟ್ಟಡಗಳ ಕಿಟಕಿಗಳು ಈ ಸಂಗತಿಯನ್ನು ನೆನಪಿಸಿ ಪುಳಕಿತಗೊಳಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.