ADVERTISEMENT

ಇರುಳಲ್ಲಿ ಕಂಡ ಬುರ್ಜ್‌ ಬೆರಗು!

ವೆಂಕಟೇಶ ಮುದಗಲ್
Published 8 ಜನವರಿ 2020, 19:30 IST
Last Updated 8 ಜನವರಿ 2020, 19:30 IST
ಬುರ್ಜ್‌-ಖಲೀಫಾ ಚಿತ್ರಗಳು: ಲೇಖಕರವು
ಬುರ್ಜ್‌-ಖಲೀಫಾ ಚಿತ್ರಗಳು: ಲೇಖಕರವು   
""

ದುಬೈನಲ್ಲಿ ನೆಲೆಯಾಗಿರುವ ತಮ್ಮ ರಮೇಶನ ಪ್ರೀತಿಯ ಆಹ್ವಾನ ಸ್ವೀಕರಿಸಿ, ದುಬೈಗೆ ಭೇಟಿ ನೀಡಿದ್ದೆ. ಅಲ್ಲಿನ ವಿಶ್ವವಿಖ್ಯಾತ ‘ಬುರ್ಜ್‌-ಖಲೀಫಾ’ಕ್ಕೆ ಭೇಟಿ ನೀಡಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಈ ಪ್ರವಾಸದಲ್ಲಿ ಅದನ್ನು ನನಸಾಗಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೆ. ಆ ಖುಷಿಗೆ ಪುಳಕಿತನಾಗಿದ್ದೆ.

ತಮ್ಮ ರಮೇಶ್, ಖಲೀಫಾ ಪ್ರವೇಶಕ್ಕೆ ಟಿಕೆಟ್ ತೆಗೆಯಲು ಪ್ರಯತ್ನಿಸಿದ. ಆದರೆ, ಬೆಳಗಿನ ವೇಳೆ ಪ್ರವೇಶಕ್ಕೆ ಅವಕಾಶ ಸಿಗಲಿಲ್ಲ. ರಾತ್ರಿ 10ರ ನಂತರ ಸಮಯದ ಟಿಕೆಟ್ ಲಭಿಸಿತ್ತು. ನನಗಂತೂ ನಿರಾಸೆಯಾಯಿತು. ಆದರೆ, ಬೆಳಗಿನಲ್ಲಿ ‘ಬುರ್ಜ್‌’ ನೋಡುವುದಕ್ಕಿಂತ ರಾತ್ರಿ ಸೌಂದರ್ಯ ಬಹಳ ಚೆನ್ನಾಗಿರುತ್ತದೆ’ ಎಂದು ತಮ್ಮ ಬೇಸರವನ್ನು ನೀಗಿಸಲು ಪ್ರಯತ್ನಿಸಿದ.

‘ಸರಿ, ರಾತ್ರಿಯೇ ನೋಡೋಣ’ ಎಂದುಕೊಂಡು ನಿಗಿದಿತ ಸಮಯಕ್ಕೆ ದುಬೈನ ಡೌನ್‌ಟೌನ್‌ಲ್ಲಿರುವ ‘ಖಲೀಫಾ ಮಾಲ್‘ ತಲುಪಿದೆವು. ಅಲ್ಲಿನ ಸಂಗೀತ ಕಾರಂಜಿಯ ಅದ್ಭುತ ನರ್ತನಕ್ಕೆ ಬೆರಗಾದೆವು. ಬುರ್ಜ್‌ ಖಲೀಫಾ, 163 ಮಹಡಿಗಳ 828 ಮೀಟರ್‌ ಎತ್ತರವಿರುವ ಕಟ್ಟಡ. ನಾವು 124ನೇ ಮಹಡಿಗೆ ಹೋಗಬೇಕಿತ್ತು. ಅದಕ್ಕಾಗಿ ಆ ಮಹಡಿಗೆ ಕರೆದೊಯ್ಯುವ ಲಿಫ್ಟ್‌ ಬಳಿ ಬಂದು ನಿಂತೆವು.

ADVERTISEMENT

ಅಷ್ಟೆಲ್ಲ ಜನ ಜಮಾಯಿಸಿದ್ದರೂ, ಅಲ್ಲಿನ ಶಿಸ್ತು ಪಾಲನೆ ನನಗೆ ಬಹಳ ಇಷ್ಟವಾಯಿತು. ಎಲ್ಲರೂ ಶಾಂತಚಿತ್ತರಾಗಿ ಸರತಿಯಲ್ಲಿ ನಿಂತು ಲಿಫ್ಟ್‌ ಏರಲು ಕಾಯುತ್ತಿದ್ದರು. ಒಂದೊಂದು ಲಿಫ್ಟ್‌ನಲ್ಲಿ 15 ಜನರು ನಿಲ್ಲುತ್ತಿದ್ದರು. ನಾವು ನಿಂತ ಲಿಫ್ಟ್‌ 124ನೇ ಮಹಡಿಗೆ ಏರುವುದಕ್ಕೆ ತೆಗೆದುಕೊಂಡ ಸಮಯ ಕೇವಲ 60 ಸೆಕೆಂಡುಗಳು(ಒಂದು ಸೆಕೆಂಡಿಗೆ 10ಮೀಟರ್ ವೇಗದಲ್ಲಿ). ಲಿಫ್ಟ್ ಏರಲಾರಂಭಿಸಿದ ಕ್ಷಣದಿಂದ ನೇರಳೆ ಬಣ್ಣದ ಛಾಯೆಯಲ್ಲಿ ಪಟಪಟನೆ ಮೂಡುವ ಸಂಖ್ಯೆಗಳು ಮಹಡಿಯ ಕ್ರಮಿಸುವಿಕೆಯನ್ನು ಸೂಚಿಸುತ್ತಿದ್ದವು.

124ನೇ ಮಹಡಿ ತಲುಪಿ ಅಲ್ಲಿನ ವೀಕ್ಷಣಾ ಪ್ರಾಂಗಣದಿಂದ ಹೊರಗಿನ ದೃಶ್ಯ ನೋಡಿ, ದಂಗಾಗಿ ಹೋದೆ. ತರಹೇವಾರಿ ವಿದ್ಯುತ್ ದೀಪಗಳ ಪ್ರಭೆಯಲ್ಲಿ ದುಬೈ ಮಾಯಾನಗರಿಯಂತೆ ಕಂಗೊಳಿಸುತ್ತಿತ್ತು. ಸುಮಾರು ಒಂದು ಗಂಟೆ, ಭೂಮಿಯ ಮೇಲೆ ನಕ್ಷತ್ರಗಳಂತೆ ಕಾಣುತ್ತಿದ್ದ ವಿದ್ಯುದ್ದೀಪ ಹೊದ್ದುಕೊಂಡ ವಾಣಿಜ್ಯ ನಗರಿಯನ್ನು ಕಣ್ತುಂಬಿಕೊಂಡೆ. ಆ ಮಹಡಿಯಲ್ಲೇ ತಿರುಗಾಡಿ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿಕೊಂಡೆ. ಅಲ್ಲಿಂದ ಪಾವಟಿಗೆಗಳ ಮೂಲಕ ಮೇಲಿನ ಮಹಡಿಗೂ ಹೋಗಿ ‘ಗಂಧರ್ವ ಲೋಕ’ದಂತೆ ಕಾಣುತ್ತಿದ್ದ ಅಂದವನ್ನು ಸವಿದೆ.

ಸಹೋದರ ರಮೇಶ ನನ್ನ ಸಂತಸ ಹಾಗೂ ತೃಪ್ತಿಯ ನಗು ಕಂಡು ‘ನಾನು ಮೋದಲೆ ಹೇಳಿದ್ದೆ ರಾತ್ರಿಯ ಅಂದದ ಸೊಗಸೆ ಬೇರೆ’ ಎಂದು ಹೇಳಿದ. ಇಷ್ಟೆಲ್ಲ ನೋಡಿಕೊಂಡು ಒಲ್ಲದ ಮನಸ್ಸಿನಿಂದಲೇ ಹೊರಟು, ಲಿಫ್ಟ್‌ ಮೂಲಕವೇ ಕೆಳಗಿಳಿದೆವು.

ಹೋಗುವುದು ಹೇಗೆ ?
ಬೆಂಗಳೂರು ಮತ್ತು ಮಂಗಳೂರಿನಿಂದ ದುಬೈಗೆ ನೇರ ವಿಮಾನ ಸಂಪರ್ಕವಿದೆ. ದುಬೈ ಪ್ರವಾಸಕ್ಕೆ ಡಿಸೆಂಬರ್‌ನಿಂದ ಮಾರ್ಚ್‌ ತಿಂಗಳವರೆಗೆ ಸೂಕ್ತ ಸಮಯ. ‘ಬುರ್ಜ್‌-ಖಲೀಫಾ’ದ ಪ್ರವೇಶ ದರ ಸುಮಾರು 400 ದಿರಹಮ್ಸ್(₹8 ಸಾವಿರ). ಬೇಡಿಕೆಗನುಗುಣವಾಗಿ ದರದಲ್ಲಿ ಏರಿಳಿತವಿರುತ್ತದೆ.

ನನ್ನ ಪ್ರಕಾರ ‘ಖಲೀಫಾ’ವನ್ನು ಒಮ್ಮೆ ಹಗಲಿನಲ್ಲಿ ಹಾಗೂ ಒಮ್ಮೆ ಇರುಳಿನಲ್ಲಿ ನೋಡುವುದು ಸೂಕ್ತ. ಹೈಮೆನೊಕ್ಯಾಲಿಸ್‌ ಎಂಬ ಹೂವಿನಿಂದ ಪ್ರೇರಿತವಾಗಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಇದು ಪ್ರಸ್ತುತ ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಇದರ ವಾಸ್ತುಶಿಲ್ಪಿ ಅಡ್ರಿಯನ್‌ ಸ್ಮಿತ್‌.

ಭಾರತೀಯ ತಿನಿಸು ಲಭ್ಯ
ಬುರ್ಜ್‌ ಬಳಿ ಭಾರತೀಯ ಊಟ ನೀಡುವ ಹಲವಾರು ಹೋಟೆಲ್‌ಗಳಿವೆ. ಅತ್ಯಂತ ರುಚಿಯಾದ ಊಟ ಲಭ್ಯ. ಅಲ್ಲಿನ ಮೊಸರನ್ನಕ್ಕೆ ನಾನು ಸಂಪೂರ್ಣವಾಗಿ ಶರಣಾಗಿದ್ದೆ.

ಇನ್ನು ಏನೇನು ನೋಡಬಹುದು

*ದುಬೈನ ಡೌನ್‌ಟೌನ್ ಪ್ರದೇಶದಲ್ಲಿದೆ. ರಾತ್ರಿ ವೇಳೆ ಭೇಟಿ ನೀಡುವವರಿಗೆ ವಿಖ್ಯಾತ ದುಬೈ ಮಾಲ್ ಬಳಿಯ ರಂಗು ರಂಗಿನ ನೃತ್ಯ ಕಾರಂಜಿಯ ದೃಶ್ಯ ನೋಡಬಹುದು.

*‘ದುಬೈ ಶಾಪಿಂಗ್’ ಉತ್ಸವದ ಸಮಯವಾಗಿರುವುದರಿಂದ ಲೇಸರ್‌ ಶೋ ಇರುತ್ತದೆ. ‘ಖಲೀಫಾ’ ಕಟ್ಟಡದಿಂದ ಶೋ ನೋಡಲು ಎರಡು ಕಣ್ಣು ಸಾಲದು.

*ಹಗಲು ಹೊತ್ತಿನಲ್ಲಿ ಬುರ್ಜ್‌ ನೋಡಲು ಹೋಗುವವರು ಸಮೀಪದಲ್ಲಿರುವ ದುಬೈ ಅಕ್ವೇರಿಯಂ ಮತ್ತು ನೀರಿನ ಆಳದಲ್ಲಿರುವ ಪ್ರಾಣಿ ಸಂಗ್ರಹಾಲಯ (Underwater Zoo) ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.