ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕರ್ನಾಟಕದ ವೀರ ಯೋಧರ ಸ್ಮರಣೆಗಾಗಿ ಧಾರವಾಡದಲ್ಲಿ ಸ್ತೂಪವೊಂದು ನಿರ್ಮಾಣ ವಾಯಿತು. ಅದೇ ಕಾರ್ಗಿಲ್ ಸ್ಮಾರಕ. ಯುವಸಮುದಾಯದಲ್ಲಿ ದೇಶಾಭಿಮಾನ ಬೆಳೆಸುವ ಉದ್ದೇಶದಿಂದ ನಿರ್ಮಾಣಗೊಂಡ ಈ ಸ್ತೂಪ ರಾಜ್ಯಕ್ಕೇ ಮೊದಲು.
ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ನಿಂತಿರುವ ಈ ಎತ್ತರದ ಸ್ತೂಪವನ್ನು ನೋಡಿದರೆ ಸಾಕು, ಆ ಯುದ್ಧದಲ್ಲಿ ಮಡಿದ ರಾಜ್ಯದ 13 ಯೋಧರು ಸೇರಿದಂತೆ 533 ವೀರಸೈನಿಕರಿಗೆ ಒಂದು ಸಲ್ಯೂಟ್ ಮಾಡಬೇಕೆನಿಸುತ್ತದೆ. ಆ ಹಿಮಕಂದರದಲ್ಲಿ ವೀರ ಯೋಧರು ಮೆರೆದ ಸಾಹಸ, ದೇಶ ರಕ್ಷಣೆಗೆ ಪಟ್ಟ ಶ್ರಮ, ಅಂತಿಮವಾಗಿ ಗೆಲುವಿನೊಂದಿಗೆ ಅವರ ಬಲಿದಾನ... ಹೀಗೆ ಎಲ್ಲವೂ ಈ ಸ್ತೂಪದ ಎದುರು ನಿಂತಾಗ ಒಮ್ಮೆಲೆ ನೆನಪಾಗುತ್ತವೆ.
ಸ್ತೂಪ ನಿರ್ಮಾಣದ ಹಿಂದೆ ಸೈನಿಕರ ಹಿತ ಕಾಯುವ ಸೈನಿಕೇತರರ ಒಂದು ತಂಡವಿದೆ. ಧಾರವಾಡದಲ್ಲಿ ಮೂರು ದಶಕಗಳಿಂದ ಸದ್ದಿಲ್ಲದೆ ಸೈನಿಕರಿಗಾಗಿಯೇ ಕೆಲಸ ಮಾಡುತ್ತಿತ್ತು. ಅದೇ ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ. ಈ ಸಮಿತಿ 1970ರಲ್ಲಿ ರಚನೆಯಾಗಿತ್ತು. ಇದು ಉತ್ತರ ಕರ್ನಾಟಕದ ಅನೇಕ ಯುವಕರಿಗೆ ಸೇನೆ ಸೇರಲು ಪ್ರೇರಣೆ ನೀಡುತ್ತಿರುವ ಸಮಿತಿ. ಇಷ್ಟು ಮಾತ್ರವಲ್ಲ, ವಿವಿಧ ಯುದ್ಧ ಹಾಗೂ ದುರ್ಘಟನೆಗಳಲ್ಲಿ ಮಡಿದ ಯೋಧರ ಕುಟುಂಬದವರಿಗೆ ಸಾಂತ್ವನದ ಜತೆಗೆ ಆ ಯೋಧರ ನೆನೆಯುವ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ.
ವರ್ಷದಲ್ಲೇ ಉದ್ಘಾಟನೆ
ಕಾರ್ಗಿಲ್ ಸ್ತೂಪ ನಿರ್ಮಾಣಕ್ಕೆ ಜಿಲ್ಲಾಡಳಿತದ ಜತೆಗೆ, ಸಾರ್ವಜನಿಕರೂ ಕೈ ಜೋಡಿಸಿದ್ದಾರೆ. ಆ ಸ್ಮಾರಕ ನಿರ್ಮಾಣವಾದ ಬಗೆಯನ್ನು ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಅಮೀನಗಡ ಹೀಗೆ ವಿವರಿಸುತ್ತಾರೆ;
‘1999ರಲ್ಲಿ ಕಾರ್ಗಿಲ್ ಯುದ್ಧ ಆರಂಭವಾಗಿತ್ತು. ಇಡೀ ದೇಶವೇ ಯುದ್ಧದ ಭೀತಿಯನ್ನು ಎದುರಿಸುತ್ತಿತ್ತು. ದೇಶದ ಹಲವು ಸೈನಿಕರು ತಮ್ಮ ಅಮೂಲ್ಯ ಪ್ರಾಣ ತೆತ್ತಿದ್ದರು. ಯುದ್ಧ ನಡೆಯುತ್ತಿದ್ದ ವೇಳೆ ಹುಬ್ಬಳ್ಳಿಯ ಗಾಜಿನ ಮನೆಯಲ್ಲಿ ಶ್ರದ್ಧಾಂಜಲಿ ಮತ್ತು ನಿಧಿ ಸಮರ್ಪಣೆ ಕಾರ್ಯಕ್ರಮ ಆಯೋಜಿಸಿದ್ದೆವು. ಆಗ ವಂದನಾ ಗುರ್ಲಾನಿ ಅವರು ಜಿಲ್ಲಾಧಿಕಾರಿ ಆಗಿದ್ದರು. ಅವರ ಬಳಿ ಇಂಥದ್ದೊಂದು ಸ್ತೂಪ ನಿರ್ಮಿಸುವ ಬೇಡಿಕೆ ಇಟ್ಟೆವು. ತಡಮಾಡದೆ ಜಿಲ್ಲಾಧಿಕಾರಿ ಕಚೇರಿ ಬಳಿಯೇ ಜಾಗ ನೀಡಿದರು. ನಿರ್ಮಿತಿ ಕೇಂದ್ರಕ್ಕೆ ಸ್ತೂಪದ ವಿನ್ಯಾಸ, ನಿರ್ಮಾಣದ ಜವಾಬ್ದಾರಿವಹಿಸಿದರು.
ಜುಲೈ 26, 2000ನೇ ವರ್ಷದಲ್ಲಿ ಸ್ತೂಪ ನಿರ್ಮಾಣ ಪೂರ್ಣಗೊಂಡು ಸೈನಿಕರ ಕುಟುಂಬಗಳ ಸಮಕ್ಷಮದಲ್ಲಿ ಉದ್ಘಾಟನೆಯಾಯಿತು. ಸ್ತೂಪದ ಮೇಲೆ ಕಾರ್ಗಿಲ್ ಯುದ್ಧದಲ್ಲಿ ಮಡಿದ ಕರ್ನಾಟಕದ 13 ಯೋಧರ ಹೆಸರನ್ನು ಹಾಕಿಸಿದ್ದಾರೆ. ಜತೆಗೆ ಜನರಲ್ ಕಾರಿಯಪ್ಪ, ಜನರಲ್ ತಿಮ್ಮಯ್ಯ ಹಾಗೂ ಜನರಲ್ ಬೇವೂರ ಅವರ ಭಾವಚಿತ್ರ ಇಡಲಾಗಿದೆ. ಸ್ತೂಪದ ಬಳಿಯೇ ಒಂದು ದೀಪವನ್ನೂ ಇಡಲಾಗಿದೆ. ಪ್ರತಿ ವರ್ಷ ಇಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ:ಸೈನಿಕರ ‘ಗೃಹ’ಬಲ
ಈ ಸೈನಿಕ ಸಮಿತಿ ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ಸೈನಿಕರ ಕುಟುಂಬಗಳಿಗೆ ನೆರವಾಗಿದೆ. ಇವತ್ತಿಗೂ ಸಮಿತಿಯವರು ಸೈನಿಕರ ಹಾಗೂ ಅವರ ಕುಟುಂಬದವರಿಗಾಗಿ ಅದೇ ಅಭಿಮಾನ, ಕಳಕಳಿಯಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಸೈನಿಕರ ಮಕ್ಕಳಿಗೆ ಶಿಕ್ಷಣ ಮಾರ್ಗದರ್ಶನ, ಕುಟುಂಬದವರಿಗೆ ಉಡುಗೊರೆ ಕಳುಹಿಸಲಾಗುತ್ತದೆ. ‘ಸೈನಿಕರ ಕುಟುಂಬದ ಸಮಸ್ಯೆ ಆಲಿಸಿ, ಅದನ್ನು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಪರಿಹರಿಸಲು ಪ್ರಯತ್ನಿಸುತ್ತೇವೆ’ ಎಂದು ಸಮಿತಿ ಕಾರ್ಯದರ್ಶಿ ಕೃಷ್ಣಜೋಶಿ ವಿವರಿಸುತ್ತಾರೆ.
ಮುಂದುವರಿದ ಕಾಳಜಿ, ಪ್ರೀತಿ
ಕಾರ್ಗಿಲ್ ಯುದ್ಧದ ನಂತರದಲ್ಲೂ ಸೈನಿಕರ ಕುಟುಂಬಗಳ ಬಗ್ಗೆ ಕಾಳಜಿ ವಹಿಸುತ್ತಿರುವ ಸಮಿತಿಯವರು, ಸಿಯಾಚಿನ್‌ನ ಹಿಮಪಾತದಲ್ಲಿ ವೀರಮರಣ ಹೊಂದಿದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ, ಹಾಸನದ ನಾಗೇಶ್ ಮತ್ತು ಎಚ್.ಡಿ. ಕೋಟೆಯ ಸಿ.ಎನ್.ಮಹೇಶ್ ಅವರ ಕುಟುಂಬದವರನ್ನು ಇಲ್ಲಿಗೆ ಅಭಿನಂದಿಸಿದ್ದಾರೆ. ಇತ್ತೀಚೆಗೆ ವೀರಮರಣ ಹೊಂದಿದ ಮಂಡ್ಯದ ಯೋಧ ಗುರು ಅವರ ಕುಟುಂಬದವರನ್ನೂ ಆಹ್ವಾನಿಸಿದ್ದಾರೆ. ‘ಪುಲ್ವಾಮಾ ಘಟನೆಯನ್ನು ಖಂಡಿಸಿ ನಡೆದ ಅನೇಕ ರ‍್ಯಾಲಿಗಳ ಆರಂಭ ಇದೇ ಕಾರ್ಗಿಲ್ ಸ್ತೂಪದಿಂದಲೇ ಆರಂಭವಾಗಿವೆ. ‘ಹೀಗಾಗಿ ದೇಶಪ್ರೇಮ ಮತ್ತು ಸೇನೆಯ ಮೇಲಿನ ಗೌರವದ ಸಂಕೇತವಾಗಿ ಕಾರ್ಗಿಲ್ ಸ್ತೂಪ ಜನರ ಗಮನ ಸೆಳೆಯುತ್ತಿದೆ’ ಎಂದರು ಕೃಷ್ಣ ಜೋಶಿ.
ಇದನ್ನೂ ಓದಿ:ಕಾರ್ಗಿಲ್ ಯುದ್ಧದಿಂದ ಪಾಠ ಕಲಿಯದ ಪಾಕಿಸ್ತಾನ
ಈ ಇಬ್ಬರೂ ಇಳಿಯವಸ್ಸಿನವರಾದರೂ ಯುವಕರನ್ನು ನಾಚಿಸು ವಂತೆ ಅತ್ಯಂತ ಚಟುವಟಿಕೆಯಿಂದ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದಾರೆ. ಸ್ತೂಪದ ಅಂದ ಹೆಚ್ಚಿಸುವತ್ತಲೂ ಕ್ರಿಯಾಶೀಲರಾಗಿ ಯೋಜನೆ ರೂಪಿಸುತ್ತಲೇ ಬಂದಿದ್ದಾರೆ.
ಈ ವರ್ಷದ ಕಾರ್ಯಕ್ರಮ
ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಗಿಲ್ ಸ್ತೂಪದ ಬಳಿ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ಯುದ್ಧದಲ್ಲಿ ಬದುಕುಳಿದು ಪರಮವೀರಚಕ್ರ ಪ್ರಶಸ್ತಿಗೆ ಭಾಜನರಾದ ಯೋಗೇಂದ್ರ ಯಾದವ್ ಅವರನ್ನು ಈ ಬಾರಿ ಆಹ್ವಾನಿಸಿದ್ದೇವೆ. ಸದ್ಯ ಸೇನೆಯಲ್ಲಿರುವ ಇವರು ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಕಾರ್ಯಕ್ರಮಕ್ಕೆ ಬರುವ ಭರವಸೆ ನೀಡಿದ್ದಾರೆ. ಮರಾಠ ಲೈಫ್ ಇನ್ಫೆಂಟ್ರಿ ರೆಜಿಮೆಂಟ್‌ನ ಕಾಲವಾಡ ಅವರಿಗೂ ಆಹ್ವಾನ ಕಳುಹಿಸಲಾಗಿದೆ. ಅಂದು ಬೆಳಿಗ್ಗೆ 11.30ಕ್ಕೆ ಸ್ತೂಪದ ಬಳಿ ಕಾರ್ಯಕ್ರಮ ನಡೆಯಲಿದೆ ಎಂದು ಕೃಷ್ಣ ಜೋಶಿ ತಿಳಿಸಿದರು.
ಇಡೀ ದೇಶ ಕಾರ್ಗಿಲ್ ವಿಜಯದ 20ರ ಸಂಭ್ರಮದಲ್ಲಿರುವ ಈ ಹೊತ್ತಿನಲ್ಲಿ ಅದಕ್ಕೆಸಂಬಂಧಿಸಿದ ಮಾಹಿತಿ, ಲೇಖನ, ವಿಶೇಷ ವರದಿಗಳುಪ್ರಜಾವಾಣಿ ಜಾಲತಾಣದಲ್ಲಿಸರಣಿಯಾಗಿ ಪ್ರಕಟವಾಗಲಿವೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.