ಚಂದ್ರಗುತ್ತಿಯಲ್ಲಿ ರೇಣುಕಾಂಬಾ ದೇವಾಲಯ ಮತ್ತು ಬೆಟ್ಟದಲ್ಲಿ ಪುರಾತನ ಕೋಟೆ ಇದೆ. ಜೊತೆಗೆ ಪರಶುರಾಮ, ಏಳು ಹೆಡೆ ನಾಗೇಂದ್ರನ ದೇವಾಲಯವಿದೆ. ಎತ್ತರವಾದ ಗುಡ್ಡೆಯಲ್ಲಿರುವ ಕೋಟೆ ಕದಂಬರ ಕಾಲದ್ದು ಎನ್ನಲಾಗುತ್ತದೆ. ಆ ರಾಜರು ಯುದ್ಧಕಾಲದಲ್ಲಿ ಇದನ್ನು ಬಳಸುತ್ತಿದ್ದರು. ಇಲ್ಲಿಂದ ಬನವಾಸಿಗೆ ಸುರಂಗಮಾರ್ಗವೂ ಇದೆ ಎನ್ನುತ್ತಾರೆ.
***
ಸೂಜಿ ಮಲ್ಲಿಗೆಯ ಸೂಸು ಕಾವಲು, ಸಂಜೆ ಬಾನಿನ ಬೆಚ್ಚಗಿನ ಕೆಂಪಾವಲು, ನೋಡಿದಷ್ಟು ದೂರಕ್ಕೆ ಹಸಿರನ್ನು ಹೊದ್ದು ಮಲಗಿರುವ ಬೆಟ್ಟ ಗುಡ್ಡಗಳು, ಸದಾ ತಂಪಲ್ಲಿ ಮೈಮನ ಸುಳಿಯುವ ತಂಗಾಳಿ, ಹೊಂಗಿರಣಗಳು, ಇದೇ ಮಲೆನಾಡಿನ ಚಂದ್ರಗುತ್ತಿ.
ಚಂದ್ರಗುತ್ತಿಯಲ್ಲಿ ರೇಣುಕಾಂಬಾ ದೇವಾಲಯ ಮತ್ತು ಬೆಟ್ಟದಲ್ಲಿ ಪುರಾತನ ಕೋಟೆ ಇದೆ. ಜೊತೆಗೆ ಪರಶುರಾಮ, ಏಳು ಹೆಡೆ ನಾಗೇಂದ್ರನ ದೇವಾಲಯವಿದೆ. ಎತ್ತರವಾದ ಗುಡ್ಡೆಯಲ್ಲಿರುವ ಕೋಟೆ ಕದಂಬರ ಕಾಲದ್ದು ಎನ್ನಲಾಗುತ್ತದೆ. ಆ ರಾಜರು ಯುದ್ಧಕಾಲದಲ್ಲಿ ಇದನ್ನು ಬಳಸುತ್ತಿದ್ದರು. ಇಲ್ಲಿಂದ ಬನವಾಸಿಗೆ ಸುರಂಗಮಾರ್ಗವೂ ಇದೆ ಎನ್ನುತ್ತಾರೆ.
ದೇವಾಲಯವಿರುವ ಬೆಟ್ಟ ಎತ್ತರದಲ್ಲಿದೆ. ಚಾರಣಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣ. ಬೆಟ್ಟ ಹತ್ತಲು ಕಾಲು ದಾರಿಯಿದ್ದು ತುಸು ದುರ್ಗಮವಾಗಿದೆ. ಚಾರಣದ ಅನುಭವ ಇದ್ದವರೂ ಹೋಗಬಹುದು. ಬೆಟ್ಟದ ಮೇಲೆ ಬಂಡೆಗಳಿಂದಾದ ಹೆಜ್ಜೆಯ ಆಕಾರದ ಕೊಳವೊಂದಿದೆ. ಇದನ್ನು ಭೀಮನ ಹೆಜ್ಜೆ ಎನ್ನುತ್ತಾರೆ. ಮದ್ದು ಗುಂಡುಗಳನ್ನು ಶೇಖರಿಸಿಡಲು ಬಳಸುತ್ತಿದ್ದ ಮನೆ ಇದೆ. ಬೆಟ್ಟ ಹತ್ತುವಾಗ ದಾರಿಯಲ್ಲಿ ಕೋಟೆಯ ಅವಶೇಷಗಳು, ಯುದ್ಧದಲ್ಲಿ ಬಳಸುತ್ತಿದ್ದ ಫಿರಂಗಿಗಳನ್ನೂ ನೋಡಬಹುದು.
ಈ ಜಾಗಕ್ಕೆ ಚಂದ್ರಗುತ್ತಿಗೆ, ಚಂದ್ರಗುಪ್ತಿ, ಚಂದ್ರಗುಪ್ತಾಪುರ, ಗುತ್ತಿ ಎಂಬ ಬೇರೆ ಬೇರೆ ಹೆಸರುಗಳಿವೆ. ಈ ಗುಡ್ಡ ಚಂದ್ರನಿಗೆ ಹತ್ತಿರವಿರುವುದರಿಂದ ಚಂದ್ರಗುತ್ತಿ ಹೆಸರು ಬಂತೆಂದೂ ಹೇಳುತ್ತಾರೆ.
ಮೊದಲು ಚಂದ್ರಗುಪ್ತಪುರವೆಂಬ ಹೆಸರಿನಿಂದ ಪ್ರಸಿದ್ಧವಾಗಿದ್ದ ಚಂದ್ರಗುತ್ತಿಯ ಈ ಕೋಟೆಯನ್ನು ಕದಂಬರು ಮೂರನೆಯ ಶತಮಾನದಲ್ಲಿ ಕಟ್ಟಿದರು. ನಂತರ 13ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಬಚ್ಚಣ್ಣನೆಂಬ ಸ್ಥಳೀಯ ನಾಯಕ ಇಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಆತನ ಆಳ್ವಿಕೆಯಲ್ಲಿ ಅಭಿವೃದ್ಧಿಗೊಂಡ ಈ ಪ್ರದೇಶವು ಮುಂದೆ ಕೆಳದಿ ನಾಯಕರ ಆಳ್ವಿಕೆಗೆ ಒಳಪಟ್ಟಿತು ಎಂದು ಅಲ್ಲಿರುವ ಫಲಕಗಳು ಸಾರಿ ಹೇಳುತ್ತವೆ.
ಸಮುದ್ರ ಮಟ್ಟದಿಂದ ಸುಮಾರು 850 ಅಡಿ ಎತ್ತರದಲ್ಲಿರುವ ಈ ಕೋಟೆಗೆ ತಲುಪುವ ಕಲ್ಲಿನ ಮೆಟ್ಟಿಲುಗಳುಳ್ಳ ಹಾದಿ ದಟ್ಟ ಅರಣ್ಯದಿಂದ ಸಾಗಿ ಹೋಗುತ್ತದೆ. ಸಾಗುವ ದಾರಿ ಅಡವಿಯಲ್ಲಿ ಹಾದು ಹೋಗುವುದರಿಂದ ಗುಂಪಿನಲ್ಲಿ ಪಯಣಿಸುವು ದು ಉತ್ತಮ. ಚಂದ್ರಗುತ್ತಿ ಒಂದು ಪುಟ್ಟ ಊರಾಗಿದ್ದು, ಅಲ್ಲಿರುವ ಸೌಲಭ್ಯಗಳೂ ನಿಯಮಿತವಾಗಿವೆ.
ನಿಮ್ಮ ತಂಡದಲ್ಲಿ ಹೆಚ್ಚು ಜನರಿದ್ದರೆ ಆಹಾರದ ವ್ಯವಸ್ಥೆ ಮಾಡಿಕೊಂಡು ಹೋಗುವುದು ಉತ್ತಮ. ಉತ್ತರ ಕರ್ನಾಟಕದ ಭಾಗದವರು ಶಿರಸಿ ಅಥವಾ ಹಾನಗಲ್ ಮೂಲಕ ಹಾಗೂ ದಕ್ಷಿಣ ಕರ್ನಾಟಕದವರು ಶಿವಮೊಗ್ಗ ಸಿದ್ದಾಪುರದ ಮೂಲಕ ಈ ತಾಣವನ್ನು ತಲುಪಬಹುದು.
ಹೋಗುವುದು ಹೇಗೆ?
ಶಿವಮೊಗ್ಗ ಜಿಲ್ಲೆಯ ಸೊರಬ ಬಸ್ ನಿಲ್ದಾಣದಿಂದ 18 ಕಿ.ಮೀ ದೂರದಲ್ಲಿ ಚಂದ್ರಗುತ್ತಿ ಇದೆ. ಸಾಗರ, ಸಿದ್ದಾಪುರ, ಶಿರಸಿ ಮತ್ತು ಬನವಾಸಿಗೆ ತುಂಬಾ ಹತ್ತಿರದಲ್ಲಿರುವ ತಾಣ ಇದು. ಇಲ್ಲಿಗೆ ಖಾಸಗಿ ಬಸ್ಸುಗಳಿವೆ. ಖಾಸಗಿ ವಾಹನದಲ್ಲಿ ಹೋದರೆ ಬೆಟ್ಟದ ಬುಡದವರೆಗೂ ಹೋಗಬಹುದು. ಹುಣ್ಣಿಮೆ ಮತ್ತು ಜಾತ್ರೆಯ ಸಮಯದಲ್ಲಿ ಮಾತ್ರ ಸ್ವಲ್ಪ ದೂರ ನಡೆದುಕೊಂಡು ಹೋಗುವುದು ಅನಿವಾರ್ಯ.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.