ADVERTISEMENT

ಚೆಸ್ಕಿ ಕೃಮ್ಲೋವ್ ಸುತ್ತುತ್ತಾ ...

ಗೊರೂರು ಸಂಪತ್ ಶ್ರೀನಿವಾಸನ್
Published 21 ನವೆಂಬರ್ 2018, 20:00 IST
Last Updated 21 ನವೆಂಬರ್ 2018, 20:00 IST
ಚಿತ್ರಗಳು ಲೇಖಕರವು
ಚಿತ್ರಗಳು ಲೇಖಕರವು   

ಜರ್ಮನಿಯಲ್ಲಿರುವ ನಮ್ಮ ಮಕ್ಕಳು ಕಳೆದ ಎರಡು ವರ್ಷಗಳಿಂದ ಕರೆಯುತ್ತಿದ್ದರೂ ಬ್ಯಾಂಕ್ ನೌಕರಿಯ ಜಂಜಡದಿಂದ ಹೋಗಲು ಆಗಿರಲಿಲ್ಲ. ಈ ವರ್ಷ ನಿವೃತ್ತಿ ಆದ ಮೇಲೆ ನೆಪ ಹೇಳದೇ ಇದೇ ವರ್ಷದ ಏಪ್ರಿಲ್ ಕೊನೆ ವಾರದಲ್ಲಿ ನಾನು ನನ್ನ ಪತ್ನಿ ಏತಿಹಾದ್ ವಿಮಾನ ಹತ್ತಿ ಜರ್ಮನಿಯ ಮ್ಯೂನಿಕ್‍ಗೆ ಹೊರಟೆವು.

ಯೂರೋಪ್‍ನಲ್ಲಿ ಬೇಸಿಗೆಯಾದ್ದರಿಂದ ಹವಾಮಾನ ಹಿತಕರವಾಗಿತ್ತು. ಮೂರು ತಿಂಗಳು, ಜರ್ಮನಿ, ಇಟಲಿ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಆಸ್ಟ್ರೀಯ, ಜೆಕ್‍ರಿಪಬ್ಲಿಕ್ ಸುತ್ತಾಡಿದೆವು.

ಜೆಕ್ ರಿಪಬ್ಲಿಕ್‍ಗೆ ಹೋಗುವವರು ಸಾಮಾನ್ಯವಾಗಿ ಪ್ರಾಗ್‍ಗೆ ಮೊದಲು ಭೇಟಿ ನಿಡುತ್ತಾರೆ. ಅದು ಜೆಕ್ ರಿಪಬ್ಲಿಕ್‍ನ ರಾಜಧಾನಿ ಮತ್ತು ಪ್ರಖ್ಯಾತ ಲೇಖಕ ಪ್ರಾಂಜ್‍ಕಾಫ್ಕಾ ಹುಟ್ಟಿ ಬೆಳೆದ ಪಟ್ಟಣ. ಆದರೆ ನಾವು ಹೋಗಿದ್ದು ಚೆಸ್ಕಿ ಕೃಮ್ಲೋವ್‌ಗೆ. ಅದು ಅಷ್ಟೇ ಸುಂದರವಾದ ಊರು. ಪ್ರಾಗ್‍ನಿಂದ 100 ಕಿ.ಮಿ ದೂರದಲ್ಲಿದೆ.

ADVERTISEMENT

ಆಸ್ಟ್ರೊ ಹಂಗೇರಿಯನ್ ಸಾಮ್ರಾಜ್ಯ, ಬೊಹೇಮಿಯ, ಮೊರೇವಿಯಾ ಮತ್ತು ಸ್ಲೋವಾಕಿಯಾ ಎಂಬ ಪ್ರದೇಶಗಳ ಒಕ್ಕೂಟ. ಇದನ್ನು ಜಕೊಸ್ಲವಾಕಿಯ ಎಂಬ ಹೆಸರಿನಿಂದ ಕರೆಯು ತ್ತಿದ್ದರು. ಮೊದಲನೆ ವಿಶ್ವ ಮಹಾಯುದ್ಧದ (1914-18) ಕೊನೆಗೆ ಒಕ್ಕೂಟವು ಸಡಿಲವಾಗಿ, ಎರಡನೆ ಮಹಾಯುದ್ಧದ (1939-45) ಕೊನೆಗೆ ಒಡೆದು ಹೋಳಾಯಿತು. ಪ್ರಾಂತೀಯ ಸ್ವಾಯತ್ತಕ್ಕಾಗಿ ನಡೆದ ಹೋರಾಟ ಮತ್ತು ಜರ್ಮನಿ, ರಷ್ಯಾಗಳ ಹಸ್ತಕ್ಷೇಪದಿಂದ, ಜನವರಿ 1, 1993 ರಿಂದ ಜೆಕ್ ರಿಪಬ್ಲಿಕ್ ಮತ್ತು ಸ್ಲೋವಾಕಿಯಾ ಎಂಬ ದೇಶಗಳು ಜನ್ಮ ತಳೆದವು. ನಾವು ಭೇಟಿ ಕೊಟ್ಟ ಚೆಸ್ಕಿ ಕೃಮ್ಲೋವ್ ಜೆಕ್ ರಿಪಬ್ಲಿಕ್‍ನ ದಕ್ಷಿಣ-ಬೊಹೇಮಿಯನ್ ಪ್ರದೇಶದ ಒಂದು ಸುಂದರ ಪಟ್ಟಣ. ಇದು ಜರ್ಮನಿಯ ಗಡಿಗೆ ತಾಗಿಕೊಂಡಂತಿರುವ ಊರು.

ಕ್ಯಾಸಲ್ ಕೋಟೆ ಏರುತ್ತಾ
ಬೊಹೇಮಿಯನ್‌ನಲ್ಲಿ ಕ್ಯಾಸಲ್ ಎಂಬ ಕೋಟೆಯಿದೆ. ಇದು ಆ ದೇಶದ ಎರಡನೆ ಅತಿ ದೊಡ್ಡ ಕೋಟೆ(ಮೊದಲನೆಯದು - ಪ್ರಾಗ್‍ನ ಹಡ್ರ್ಕಾನಿ ಕೋಟೆ). ನಾವು ಮೆಟ್ಟಿಲುಗಳ ಮೂಲಕ ಮೇಲೆ ಹತ್ತಿ ಹೋದೆವು. ಅಲ್ಲೊಂದು ಸುಂದರ ಉದ್ಯಾನವನ ಕಾಣಿಸಿತು. 14 ರಿಂದ 17ನೇ ಶತಮಾನದ ವಾಸ್ತು ಶೈಲಿಯ ಕೋಟೆ ಇದು. ಜತೆಗೆ ಹಳೆಯ ಪಟ್ಟಣ ಕೂಡ ಅದೇ ಕಾಲದ್ದು.

ಪಟ್ಟಣದ ರಚನೆಗಳು ಗೋಥಿಕ್, ನವೋದಯ ಮತ್ತು ಬರೋಕ್ ಶೈಲಿಯಲ್ಲಿವೆ. ಕೋಟೆಯ ಬದಿಯಲ್ಲಿ ಹರಿಯುವ ನದಿಯ ಹೆಸರು ವ್ಲೆಟಾವ. ಇದರ ನೀರು ಹಸಿರು ಬಣ್ಣದಿಂದ ಕಂಗೊಳಿಸುತ್ತದೆ. ಕೋಟೆಯ ಕೊನೆಯ ಮಾಲೀಕರು ಅಡಾಲ್ಫ್ ಶ್ವಾರ್ಜನ್ ಬರ್ಗ್. ಈ ಕೋಟೆ, ಎರಡನೆ ವಿಶ್ವ ಯುದ್ಧದ ಸಮಯದಲ್ಲಿ ಜರ್ಮನಿಯ ವಶಕ್ಕೆ ಬಂದು, 1940ರಲ್ಲಿ ಗೆಸ್ಟಪೊದಿಂದ (ಜರ್ಮನಿಯ ರಹಸ್ಯ ಪೊಲೀಸ್ ಪಡೆ) ಪುನರ್ ವಶಪಡಿಸಿಕೊಳ್ಳಲಾಯ್ತು. ನಂತರ 1947ರಲ್ಲಿ ಜಕೋಸ್ಲವಾಕ್ ಸರ್ಕಾರದ ವಶಕ್ಕೆ ಬಂತು. ಕೋಟೆ ಮತ್ತು ಸುತ್ತಲಿನ ಪರಿಸರವನ್ನು 1992ರಿಂದ ಯುನೆಸ್ಕೊ ವಿಶ್ವಪರಂಪರೆಯ ತಾಣವಾಗಿ ಪರಿಗಣಿಸಲಾಗಿದೆ. 1996ರಲ್ಲಿ ವರ್ಲ್ಡ್ ಮ್ಯಾನೆಜ್‍ಮೆಂಟ್ ಫಂಡ್‍ನಿಂದ ಉದ್ಯಾನದ ಕೇಂದ್ರ ಕಾರಂಜಿಯನ್ನು ಪುನರ್ ನಿರ್ಮಿಸಲಾಗಿದೆ.

ಯೂರೋಪಿನ ಯಾವುದೇ ಪಟ್ಟಣಕ್ಕೆ ಹೋದರೂ, ಊರಿನ ಮಧ್ಯಭಾಗದಲ್ಲಿ ಸಿಟಿ ಸೆಂಟರ್ ಎಂಬ ಕೇಂದ್ರವಿರುತ್ತದೆ. ಈ ಸ್ಥಳವು ಕಾಬಲ್ಡ್ ಸ್ಟೋನ್‍ಗಳ ನೆಲಹಾಸಿನಿಂದ ಕೂಡಿದ್ದು ಇಲ್ಲಿ ಯಾವುದೇ ರೀತಿಯ ವಾಹನಗಳಿಗೆ ಪ್ರವೇಶವಿರುವುದಿಲ್ಲ. ಸುತ್ತಲೂ ಆಕರ್ಷಕ ಪುರಾತನ ಕಟ್ಟಡಗಳು, ಅಲ್ಲಲ್ಲಿ ಕುಳಿತುಕೊಳ್ಳಲು ಕಲ್ಲು ಬೆಂಚಿನ ಆಸನಗಳು ಮತ್ತು ಕುಡಿಯುವ ನೀರಿನ ಚಿಲುಮೆಗಳು ಇರುತ್ತವೆ.

ಅಲ್ಲೊಂದು ಮೂಲೆಯಲ್ಲಿ ಒಬ್ಬರು ವಯಲಿನ್, ಗಿಟಾರ್ ಅಥವಾ ಮತ್ಯಾವುದೊ ವಾದ್ಯ ನುಡಿಸುತ್ತಾ ಹಾಡುತ್ತಿರುತ್ತಾರೆ. ಜನ ಸುತ್ತಾ ನಿಂತು ಆನಂದಿಸುತ್ತಾ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಾರೆ. ಮುಂದೆ ಇಟ್ಟಿರುವ ತಟ್ಟೆಗೆ/ಡಬ್ಬಿಗೆ ಹಲವು ಸೆಂಟ್‍ಗಳ ಚಿಲ್ಲರೆ ಹಾಕುತ್ತಾರೆ.

ಚೆಸ್ಕಿ ಹಳೆ ಪಟ್ಟಣದ ಮುಖ್ಯ ಭಾಗ ನದಿಯ ಕುದುರೆ ಲಾಳದ ತಿರುವಿನಲ್ಲಿದೆ. ಈ ಊರು ಪಿಮೋವರ್ ಎಗ್ಗೆನ್‍ಬರ್ಗ್ ಬ್ರೂವರಿಗೆ ನೆಲೆಯಾಗಿದೆ. ಇಲ್ಲಿನ ಸುಂದರ ತಾಣಗಳನ್ನು ಕೆಲವು ಚಲನಚಿತ್ರಗಳಲ್ಲಿ ಬಳಸಲಾಗಿದೆ: ಹಾಸ್ಟೆಲ್ (2005), ದಿ ಇಲ್ಯೂಷನಿಸ್ಟ್ (2006), ಟ್ರಾಮ್ಸ್ಟಾಡ್ಟ್ (ಡ್ರೀಮ್‍ಸಿಟಿ) ಮತ್ತು ತಾರಕ (ಕನ್ನಡ ಸಿನಿಮಾ). ಒಟ್ಟಿನಲ್ಲಿ ಒಂದು ದಿನದ ಸುತ್ತಾಟಕ್ಕೆ ಚೆಸ್ಕಿ ಕೃಮ್ಲೋವ್ ಸೂಕ್ತ ತಾಣವಾಗಿದೆ.

‘ಬಾಟಾ’ ಹುಟ್ಟಿದ ಊರು
ಚಸ್ಕಿ ಪಟ್ಟಣದ ಬೀದಿಗಳಲ್ಲಿ ತಿರುಗುತ್ತಿದ್ದಾಗ, ‘ಬಾಟಾ ಶೋ ರೂಮ್’ ಎಂಬ ಫಲಕ ನೋಡಿ ಅಚ್ಚರಿಯಾಯಿತು. ಅರೆ, ನಮ್ಮ ದೇಶದಲ್ಲಿರುವ ಬಾಟಾ ಕಂಪನಿ ಇಲ್ಲೂ ಇದೆಯಾ ಎನ್ನಿಸಿತು. ಕುತೂಹಲ ತಡೆಯದೇ, ಸ್ಥಳೀಯರನ್ನು ವಿಚಾರಿಸಿದೆ. ಆಗ ತಿಳಿದಿದ್ದು, ಜೆಕೋಸ್ಲವಾಕಿಯದ ಜ್ಲೆನ್‌ ಪಟ್ಟಣ ಬಾಟಾ ಶೂ ಕಂಪನಿಯ ಉಗಮ ಸ್ಥಾನ 1894ರಲ್ಲಿ ಸಣ್ಣ ಮಟ್ಟದಲ್ಲಿ ಶುರುವಾದ ಕಂಪನಿ, ಈಗ ಜಗದ್ವಿಖ್ಯಾತಿ ಪಡೆದಿದೆ. ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೂ ವಿಸ್ತರಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.