ಮೊದಲಿಗೇ ಹೇಳಿಬಿಡುತ್ತೇನೆ. ಬೆಳಿಗ್ಗೆ ಬಂದು ಸಂಜೆ ವಾಪಸಾಗುತ್ತೇನೆ ಎಂದು ಚಿಕ್ಕಮಗಳೂರಿಗೆ ಬರಲೇಬೇಡಿ. ಬಿರುಬೇಸಿಗೆಯಲ್ಲಿ ಒಣಗಿದ ಬಾಯಿಗೆ ಐಸ್‌ಕ್ರೀಮ್ ತೋರಿಸಿ ಕೊನೆಗೆ ಅದರ ಮೇಲಿನ ಚೆರ್ರಿ ಹಣ್ಣನ್ನಷ್ಟೇ ಕೊಟ್ಟು ಮುಂದಕ್ಕೆ ಹೋಗಿಬಿಟ್ಟರೆ ಹೇಗಿರುತ್ತದೆ? ಒಂದು ದಿನದಲ್ಲಿ ಚಿಕ್ಕಮಗಳೂರಿಗೆ ಬಂದರೆ ಅಂಥದ್ದೇ ಅನುಭವ ನಿಮ್ಮದಾಗುತ್ತದೆ. ಯಾವುದೋ ಒಂದು ಸ್ಥಳವನ್ನು ನೋಡಿ ವಾಪಸಾಗುವ ನಿಮ್ಮನ್ನು ‘ಐಸ್‌ಕ್ರೀಮ್ ಅಬೀ ಬಾಕೀ ಹೈ’ ಎಂದು ಜಿಲ್ಲೆ ಕರೆಯುತ್ತಿರುತ್ತದೆ.
ಕನಿಷ್ಠ ಎರಡು ದಿನ ಬಿಡುವುದು ಮಾಡಿಕೊಂಡು ಬನ್ನಿ. ಇಲ್ಲಿನ ಪ್ರಕೃತಿ ಸಿರಿವಂತಿಕೆಯ ಹಲವು ಜಾಗಗಳನ್ನು ಮನಸಲ್ಲಿ ತುಂಬಿಕೊಂಡು ಹೊಸ ಹುರುಪಿನೊಂದಿಗೆ ವಾಪಸಾಗಿ.
ಎಲ್ಲೆಲ್ಲಿಗೆ ಹೋಗಬಹುದು?
ಮುಖ್ಯವಾಗಿ ಚಿಕ್ಕಮಗಳೂರನ್ನು ಕೇಂದ್ರವಾಗಿಟ್ಟುಕೊಂಡು ಎರಡು ದಿನದ ತಿರುಗಾಟದ ಯೋಜನೆಯನ್ನು ರೂಪಿಸಿಕೊಂಡರೆ ಒಳಿತು. ಮೊದಲ ದಿನ ಜಿಲ್ಲಾಕೇಂದ್ರದಿಂದ ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ, ಸಗೀರ್- ಝರಿ ಜಲಧಾರೆ, ಬಾಬಾಬುಡನ್ಗಿರಿ, ಮಾಣಿಕ್ಯಧಾರಗೆ ಹೋಗಿ ಬರಬಹುದು.
ಮುಳ್ಳಯ್ಯನಗಿರಿಯಿಂದ ಬಾಬಾಬುಡನ್ಗಿರಿಗೆ ತೆರಳಲು ಮತ್ತೆ ಜಿಲ್ಲಾಕೇಂದ್ರಕ್ಕೆ ಬರಬೇಕಾಗಿಲ್ಲ. ಹೋದ ಮಾರ್ಗದಲ್ಲಿಯೇ 8 ಕಿ.ಮೀ. ಹಿಂದಿರುಗಿ ಅಲ್ಲಿ ಎಡಕ್ಕೆ ಸಾಗುವ ರಸ್ತೆಯಲ್ಲಿ ಪಯಣ ಮುಂದುವರೆಸಿ. ರಸ್ತೆ ಅಂಚಿನಲ್ಲೇ ಹೊನ್ನಮ್ಮನಹಳ್ಳ ಇದೆ. ಅದನ್ನು ಆಸ್ವಾದಿಸಿ ಮುಂದೆ ಸಾಗಿ. ಸಗೀರ್ ಜಲಪಾತ ನಿಮ್ಮನ್ನು ಎದುರುಗೊಳ್ಳುವ ಉತ್ಸುಕತೆಯಲ್ಲಿ ಧಾರೆಯಾಗಿ ಧುಮ್ಮಿಕ್ಕುತ್ತಿರುತ್ತದೆ. ಸಗೀರ್ ಜಲಪಾತಕ್ಕೆ ಜಿಲ್ಲಾಡಳಿತ ನಿಗದಿಪಡಿಸಿದ ದರ (ಒಂದು ಜೀಪಿಗೆ ₹ 700. ಆರೇಳು ಜನ ಪ್ರಯಾಣಿಸಬಹುದು) ಕೊಟ್ಟು ಖಾಸಗಿ ಜೀಪ್‌ಗಳಲ್ಲಿ ಸಾಗಬೇಕು. ಬಾಬಾಬುಡನ್ಗಿರಿಯಿಂದ ಮಾಣಿಕ್ಯಧಾರಕ್ಕೆ ಇರುವ ಅಂತರ 4 ಕಿ.ಮೀ. ಇದು ಹಸಿರ ವನಸಿರಿಯ ನಡುವೆ ವರ್ಷಪೂರ್ತಿ ಧುಮ್ಮಿಕ್ಕುವ ಜಲಧಾರೆ. ಚಿಕ್ಕಮಗಳೂರು ಸಮೀಪದ ಹಿರೇಮಗಳೂರು, ಬೆಳವಾಡಿಯ ವೀರನಾರಾಯಣ ದೇಗುಲವನ್ನೂ ನೋಡಿಕೊಂಡು ಬರಬಹುದು.
ಇಷ್ಟು ಸ್ಥಳಗಳನ್ನು ನೋಡಿ ಜಿಲ್ಲಾಕೇಂದ್ರಕ್ಕೆ ಬಂದು ವಾಸ್ತವ್ಯ ಹೂಡಿ ಮರುದಿನ ಹೊರನಾಡು–ಶೃಂಗೇರಿಗಳಿಗೆ ಅಥವಾ ಕೆಮ್ಮಣ್ಣುಗುಂಡಿಗೆ ಹೋಗುವುದು ಉತ್ತಮ. ಪೂರ್ವಾನುಮತಿ ಪಡೆದಿದ್ದರೆ ಹೊನ್ನಮ್ಮನಹಳ್ಳದಿಂದ ಅನತಿ ದೂರದಲ್ಲಿ ಬಲಕ್ಕೆ ತಿರುಗಿ ಕಾಫಿ ತೋಟಗಳ ಮಧ್ಯೆ ಸಾಗುವ ಅಂಕುಡೊಂಕಿನ ಹಾದಿಯಲ್ಲಿ ಭದ್ರಾ ಅಭಯಾರಣ್ಯಕ್ಕೂ ಹೋಗಿ ತಂಗಬಹುದು.
ಕೆಮ್ಮಣ್ಣುಗುಂಡಿಗೆ ಹೋಗಲು ಇಚ್ಛಿಸುವವರು ಕೈಮರ ಬಳಿ ಎಡಕ್ಕೆ ತಿರುಗಿ ಸಂತವೇರಿ ಮಾರ್ಗವಾಗಿ ಹೋಗಿ ವಾಸ್ತವ್ಯ ಹೂಡಬಹುದು. ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡುವವರು ಬಯಸಿದಲ್ಲಿ ಮರುದಿನ ಭದ್ರಾ ಅಭಯಾರಣ್ಯಕ್ಕೆ (ಅರಣ್ಯ ಇಲಾಖೆ ಅನುಮತಿ ಅಗತ್ಯ) ಹೋಗಬಹುದು. ಅಲ್ಲಿಂದ ಬಂದು ಅಯ್ಯನಕೆರೆಗೆ ಹೋಗಲೂ ಅವಕಾಶವಿದೆ.ಧಾರ್ಮಿಕ ಕ್ಷೇತ್ರಗಳತ್ತ ಒಲವು ಇರುವವರು ಚಿಕ್ಕಮಗಳೂರು – ಬಾಳೆಹೊನ್ನೂರು – ಹೊರನಾಡು – ಶೃಂಗೇರಿಗೆ ಒಂದು ದಿನದಲ್ಲಿ ಹೋಗಿ ಬರಲು ಸಾಧ್ಯವಿದೆ. ಕಳಸ–ಹೊರನಾಡು ಮಾರ್ಗ ಮಧ್ಯೆ ಭದ್ರಾನದಿ ತಟದ ಅಂಬಾತೀರ್ಥ ರಮ್ಯತಾಣ. ಹೊರನಾಡು–ಶೃಂಗೇರಿಗಳಲ್ಲಿ ದೇವಾಲಯಗಳ ಜೊತೆ ಸಾಕಷ್ಟು ಖಾಸಗಿ ವಸತಿಗೃಹಗಳೂ ಇವೆ. ಶೃಂಗೇರಿಗೆ ಚಿಕ್ಕಮಗಳೂರು, ಬೆಂಗಳೂರು, ಮೈಸೂರಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾಕಷ್ಟು ಬಸ್ಸುಗಳು ಇವೆ. ಶೃಂಗೇರಿ ಹೋದವರು ಸಿರಿಮನೆ ಜಲಪಾತ, ಅಥವಾ ಮಾರ್ಗವಾಗಿ ಸಾಗಿ ಕುಂದಾದ್ರಿ ವೀಕ್ಷಿಸಬಹುದು.
ಶಿವಮೊಗ್ಗ ಕಡೆಯಿಂದ ಚಿಕ್ಕಮಗಳೂರಿನತ್ತ ಬರುವವರು ಲಕ್ಕವಳ್ಳಿ ಜಲಾಶಯ, ಲಕ್ಕವಳ್ಳಿ ಅಭಯಾರಣ್ಯ, ಅಮೃತಾಪುರದ ಹೊಯ್ಸಳ ದೇಗುಲ, ಕಲ್ಲತ್ತಗಿರಿ, ಕೆಮ್ಮಣ್ಣುಗುಂಡಿ (ಇಲ್ಲಿ ಉಳಿಯಲೂ ಅವಕಾಶವಿದೆ ) ನೋಡಿಕೊಂಡು ಬರುವುದು ಸೂಕ್ತ. ಕೆಮ್ಮಣ್ಣುಗುಂಡಿಯಿಂದ 6 ಕಿ.ಮೀ. ದೂರದಲ್ಲಿ ಹೆಬ್ಬೆ ಜಲಪಾತವಿದ್ದು ಖಾಸಗಿ ಜೀಪ್‌ಗಳಲ್ಲಿ ಹೋಗಬೇಕು. ಪ್ರಯಾಣ ಸ್ವಲ್ಪ ದುಬಾರಿ.
ನಿಸರ್ಗ ಪ್ರವಾಸೋದ್ಯಮದಲ್ಲಿ ಅಸಕ್ತಿ ಇರುವವರು ಮೂಡಿಗೆರೆ ಸನಿಹದ ಶಿಶಿಲ ಕುಡಿ, ಸುಂಕಸಾಲೆ (ಕೊಟ್ಟಿಗೆಹಾರ–ಕಳಸ ಮಾರ್ಗ) ಬಳಿಯ ಬಲ್ಲಾಳರಾಯನ ದುರ್ಗ, ಜಯಪುರ (ಬಸರಿಕಟ್ಟೆ) ಹತ್ತಿರದ ಮೇರ್ತಿಖಾನ್ ಗುಡ್ಡಗಳಿಗೆ ಚಾರಣ ಮಾಡಬಹುದು.
ಪ್ರಯಾಣ ಹೇಗೆ?
ಚಿಕ್ಕಮಗಳೂರಿಗೆ ಬೆಂಗಳೂರು, ಮೈಸೂರು, ಶಿವಮೊಗ್ಗದಿಂದ ಸಾಕಷ್ಟು ಬಸ್ಸುಗಳಿವೆ. ಹುಬ್ಬಳ್ಳಿ–ಬೆಂಗಳೂರಿನಿಂದ ಕಡೂರು–ಬೀರೂರಿಗೆ ರೈಲ್ವೆ ಸಂಪರ್ಕವೂ ಇದೆ.
ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿ–ಬಾಬಾಬುಡನ್ಗಿರಿ ಇನ್ನಿತರೆ ಸ್ಥಳಗಳಿಗೆ ಕೆಲ ವಸತಿ ಗೃಹದವರು ವಾಹನಗಳ ಮೂಲಕ ಕರೆದೊಯ್ಯುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. (ಸಂಪರ್ಕ ಸಂಖ್ಯೆ: ಮಿಥುನ್ – 8277446111 / 08262-238111) ಸ್ವಂತ ವಾಹನದಲ್ಲಿಯೇ ಬರುವಿರಾದರೆ ಇನ್ನೂ ಒಳ್ಳೆಯದು.
ಈ ಎರಡೂ ಸ್ಥಳಗಳಿಗೆ ಶನಿವಾರ, ಭಾನುವಾರಗಳಂದು ಹೋಗಿ ಬರುವುದು ಸ್ವಲ್ಪ ತ್ರಾಸ. ಪ್ರವಾಸಿಗರ ದಟ್ಟಣೆ ಅಧಿಕ. ಟ್ರಾಫಿಕ್ ಜಾಮ್ ಕಿರಿಕಿರಿಯೂ ಎದುರಾಗಬಹುದು. ಮುಳ್ಳಯ್ಯನಗಿರಿಗೆ ಈ ದಿನಗಳಲ್ಲಿ ಬೆಳಿಗ್ಗೆ 9ರ ಬಳಿಕ ಸೀತಾಳಯ್ಯನಗಿರಿ ಬಳಿ ವಾಹನ ನಿಲ್ಲಿಸಿ ಹೋಗಬೇಕು. (ಅಲ್ಲಿಂದ ಜೀಪ್ ವ್ಯವಸ್ಥೆ ಇದೆ) ಬೆಳಿಗ್ಗೆ 9ರ ಒಳಗೇ ಹೋಗಿಬರುವುದು ಉತ್ತಮ.
ಯಾವ್ಯಾವ ಜಾಗ ಎಷ್ಟೆಷ್ಟು ದೂರ..
ಚಿಕ್ಕಮಗಳೂರಿನಿಂದ
ಮುಳ್ಳಯ್ಯನಗಿರಿ 18 ಕಿ.ಮೀ.
ಬಾಬಾಬುಡನ್ಗಿರಿ 35 ಕಿ.ಮೀ,
ಕೆಮ್ಮಣ್ಣಗುಂಡಿ 45 ಕಿ.ಮೀ.
ಭದ್ರಾ ಅಭಯಾರಣ್ಯ 40 ಕಿ.ಮಿ.
ಸಂಪರ್ಕಕ್ಕಾಗಿ:
ಚಿಕ್ಕಮಗಳೂರು ಪ್ರವಾಸೋದ್ಯಮ ಕಚೇರಿ ಸಂಖ್ಯೆ:08262-228493
ಕೆಮ್ಮಣ್ಣಗುಂಡಿ ಸಂಪರ್ಕ ಸಂಖ್ಯೆ: 08261-237126,237134.
ಚಿತ್ರಗಳು: ಅಶ್ವಿನಿ ಕುಮಾರ್ ಭಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.