ಪ್ರವಾಸ, ಜಿಡ್ಡುಗಟ್ಟಿದ ಮನಕ್ಕೆ ನವ ಚೈತನ್ಯ ತುಂಬುತ್ತದೆ. ದಿನನಿತ್ಯದ ಯಾಂತ್ರಿಕ ಬದುಕಿನಿಂದ ಚಣಕಾಲ ದೂರಾಗಿ ಹೊಸ ತಾಣದಲ್ಲಿ ನಮ್ಮ ಮೈ ಮನಗಳನ್ನು ತೆರೆದುಕೊಂಡು ಖುಷಿಯಾಗಿರುವುದು ಯಾರಿಗೆ ಬೇಡ. ಹೀಗೆ ಖುಷಿಯಾಗಿರುವುದಕ್ಕಾಗಿ ಸಮಾನ ಮನಸ್ಕ ನಮ್ಮ ಐವರು ಗೆಳೆಯರ ತಂಡ ವಿಶಾಖಪಟ್ಟಣದತ್ತ ಪ್ರವಾಸ ಹೋಗಲು ತೀರ್ಮಾನಿಸಿದೆವು. ಮೊದಲೇ ಯೋಜನೆ ಸಿದ್ಧಪಡಿಸಿಕೊಂಡ ಕಾರಣ ರೈಲು ಪ್ರಯಾಣಕ್ಕೆ ಟಿಕೆಟ್ ಕಾದಿರಿಸುವಿಕೆ ಕಷ್ಟವಾಗಲಿಲ್ಲ. ಎಲ್ಲರೂ ಅಧಿಕಾರಿಗಳಾಗಿದ್ದರಿಂದ ನಮ್ಮ ಪ್ರಭಾರವನ್ನು ಇನ್ನೊಬ್ಬರಿಗೆ ವರ್ಗಾಯಿಸಿ ರಜೆ ಮಂಜೂರು ಮಾಡಿಸಿಕೊಂಡು ಅಂತೂ-ಇಂತೂ ಕಲಬುರ್ಗಿ ರೈಲು ನಿಲ್ದಾಣ ತಲುಪಿದೆವು.
ಕುರ್ಲಾದಿಂದ ಬರುವ ರೈಲಿನಲ್ಲಿ ಸಂಜೆ 4.30ಕ್ಕೆ ಹೊರಟು ಮಾರನೆ ದಿನ ನಸುಕಿನ 3.30ಕ್ಕೆ ವಿಜಯವಾಡ ನಗರ ತಲುಪಿದೆವು. ಕಾದಿರಿಸಿದ್ದ ಹೋಟೆಲ್‌ನಲ್ಲಿ ವಿರಮಿಸಿ ನಂತರ ಇಡೀ ದಿನ ವಿಜಯವಾಡ ನಗರವನ್ನು ಸುತ್ತಾಡಿದೆವು. ಕೃಷ್ಣಾ ನದಿಯ ತಟದಲ್ಲಿರುವ ಈ ನಗರ ಹಲವಾರು ಕೌತುಕಗಳನ್ನು ತನ್ನ ಗರ್ಭದಲ್ಲಿರಿಸಿಕೊಂಡಿದೆ. ನಾವು ಮೊದಲು ಈ ನಗರದಲ್ಲಿರುವ ಕನಕದುರ್ಗಾ ದೇವಿಯ ದೇವಾಲಯಕ್ಕೆ ಭೇಟಿ ನೀಡಿದೆವು. ದೇವಿಯ ದರ್ಶನದ ನಂತರ ಕೃಷ್ಣಾ ನದಿಗೆ ನಿರ್ಮಿಸಲಾದ ಪ್ರಕಾಶಂ ಬ್ರಿಡ್ಜ್-ಬ್ಯಾರೆಜ್, ಹಿನ್ನೀರಿನ ಸೌಂದರ್ಯ ಸವಿದೆವು. ನಂತರ ನಿಧಾನ ಬೆಟ್ಟವಿಳಿದು ಉಂಡವಳ್ಳಿ ಗುಹೆಗಳತ್ತ ಹೊರಟೆವು.
ಕನಕದುರ್ಗ ದೇವಿ ದೇವಾಲಯದ ನಂತರ ಇಲ್ಲಿ ನೋಡಲೇ ಬೇಕಾದ ಇನ್ನೊಂದು ಪ್ರೇಕ್ಷಣೀಯ ತಾಣವೆಂದರೆ ಅದು ಉಂಡವಳ್ಳಿ ಗುಹೆಗಳು. ವಿಜಯವಾಡ ನಗರದ ನೈರುತ್ಯ ದಿಕ್ಕಿನಲ್ಲಿ 6 ಕಿ.ಮೀ ಹಾಗೂ ಗುಂಟೂರುನಿಂದ 22 ಕಿ.ಮೀ ದೂರದಲ್ಲಿ ಈ ಗುಹೆಗಳಿವೆ. ಭಾರತೀಯ ಪುರಾತತ್ವ ಇಲಾಖೆಯ ನಿರ್ವಹಣೆಯಲ್ಲಿರುವ ಈ 4 ಅಂತಸ್ತಿನ ಗುಹೆಗಳು ತನ್ನ ಎತ್ತರದಿಂದಲೇ ಗಮನ ಸೆಳೆಯುತ್ತವೆ.
ಗುಹೆಯ ಒಳಗಡೆ ಪ್ರವೇಶಕ್ಕೆ ಶುಲ್ಕವಿದೆ. ಆದರೆ, ಕ್ಯಾಮೆರಾ ಒಯ್ಯಲು ಶುಲ್ಕವಿರಲಿಲ್ಲ. ಪ್ರವೇಶ ಶುಲ್ಕ ₹25 ಪಾವತಿಸಿ ಒಳಗೆ ಅಡಿ ಇಟ್ಟಾಗ ಗುಹೆಯ ಪರಿಸರದಲ್ಲಿ ಬೆಳೆಸಲಾಗಿರುವ ತೋಟದ ಅಂದಕ್ಕೆ ಮನಸೋತೆ. ಒಂದು ಸರ್ಕಾರಿ ಸಂಸ್ಥೆ ಇಷ್ಟು ಅದ್ಭುತವಾಗಿ ತೋಟವನ್ನು ಬೆಳೆಸಿ ನಿರ್ವಸುತ್ತಿರುವುದು ಅಭಿನಂದನೀಯ.
ಉಂಡವಳ್ಳಿ ಗುಹೆಗಳು 7ನೇ ಶತಮಾನದಲ್ಲಿ ಬೆಳಕಿಗೆ ಬಂದಿವೆ. ಮರಳುಗಲ್ಲನ್ನು ಕತ್ತರಿಸಿ ಗುಹೆಗಳನ್ನಾಗಿಸಿದ ಆಗಿನ ನೈಪುಣ್ಯತೆಯನ್ನು ಎಷ್ಟು ಹೊಗಳಿದರು ಸಾಲದು. ಗುಹೆಯ ಎರಡನೆ ಮಹಡಿಯಲ್ಲಿ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾದ ವಿರಮಿಸುವ ಭಂಗಿಯಲ್ಲಿನ ವಿಷ್ಣುವಿನ ವಿಗ್ರಹ ಆಕರ್ಷಿಸುತ್ತದೆ. ಮೂಲತಃ ಇದೊಂದು ಜೈನ ಗುಹೆಯಾಗಿದ್ದು ಉದಯಗಿರಿ ಮತ್ತು ಖಂಡಗಿರಿ ವಾಸ್ತುಶೈಲಿ ಹೊಂದಿತ್ತು. ನಂತರದ ಕಾಲಘಟ್ಟದಲ್ಲಿ ಹಿಂದೂ ಗುಹೆಯಾಗಿ ರೂಪಾಂತರಿಸಲಾಯಿತು ಎಂದು ತಿಳಿದು ಬಂತು.
ಈ ಗುಹೆಯಲ್ಲಿ 4 ಮಹಡಿಗಳಿವೆ. ಮಹಡಿಗಳ ಎತ್ತರದಲ್ಲಿ ಸಾಮ್ಯತೆ ಇಲ್ಲ. ನೆಲ ಮಹಡಿಯಲ್ಲಿ 8 ಕಂಬಗಳಿವೆ. 7 ದ್ವಾರಗಳಿವೆ. ಮೊದಲ ಮಹಡಿ ಬ್ರಹ್ಮ, ವಿಷ್ಣು ಮಹೇಶ್ವರಿಗೆ ಅರ್ಪಿಸಲಾಗಿದೆ. ನಾನು ಈ ಮೊದಲು ಹೇಳಿದಂತೆ ಹಾವಿನ ಮೇಲೆ ಮಲಗಿರುವ ಭಂಗಿಯ ವಿಷ್ಣವಿನ ವಿಗ್ರಹದ ದಿವ್ಯತೆ ನೋಡುತ್ತಾ ಮೈ ಮರೆಯುತ್ತೇವೆ. ಮೇಲಿನ ಮಹಡಿ ಅಪೂರ್ಣವಾಗಿದೆ. ಒಂದು ಕಾಲದಲ್ಲಿ ಬೌದ್ಧ ಸನ್ಯಾಸಿಗಳು ವಿರಮಿಸಲು ಈ ಗುಹೆಗಳನ್ನು ಬಳಸುತ್ತಿದ್ದರು ಎಂಬ ಅಚ್ಚರಿಯ ಸಂಗತಿಯೂ ಗೊತ್ತಾಯಿತು. ಇದಕ್ಕೆ ಪೂರಕವಾಗಿ ಮೂವರು ಸನ್ಯಾಸಿಗಳ ಧ್ಯಾನಸ್ಥ ಸ್ಥಿತಿಯಲ್ಲಿನ ವಿಗ್ರಹಗಳಿವೆ.
ಆ ಕಾಲಘಟ್ಟದಲ್ಲಿ ಮರಳುಗಲ್ಲನ್ನು ಕತ್ತರಿಸಿ ಗುಹೆಗಳನ್ನು ನಿರ್ಮಿಸಿದ ಹಾಗೂ ವಿಗ್ರಹಗಳನ್ನು ಕಟೆದ ಶಿಲ್ಪಿಗಳ ಚಾಕಚಕ್ಯತೆ ಇಂದಿನ ಆಧುನಿಕ ಯುಗದ ಯಂತ್ರಗಳಿಂದಲೂ ಸಾಧ್ಯವಿಲ್ಲ. ಈ ಗುಹೆಗಳನ್ನು ಸಂರಕ್ಷಿತ ತಾಣವಾಗಿ ಭಾರತ ಸರ್ಕಾರ ಘೋಷಿಸಿದೆ. ಗುಹೆಯ ಮೇಲಿನಿಂದ ದೃಷ್ಟಿ ಹಾಯಿಸಿದಾಗ ಕಾಣುವ ದೃಶ್ಯ ವರ್ಣಿಸಲಸಾಧ್ಯ. ವಿಜಯವಾಡಕ್ಕೆ ಹೋದಾಗ ಮರೆಯದೆ ಈ ತಾಣಕ್ಕೆ ಭೇಟಿ ನೀಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.