ADVERTISEMENT

ಭಗತ್ ಧ್ಯಾನ ಸೈಕಲ್ ಯಾನ

ಭಗತ್‌ಸಿಂಗ್‌ ಊರು ಮುಟ್ಟಿ ಬಂದವರು

ಕಿಶನರಾವ್‌ ಕುಲಕರ್ಣಿ
Published 6 ಫೆಬ್ರುವರಿ 2019, 19:30 IST
Last Updated 6 ಫೆಬ್ರುವರಿ 2019, 19:30 IST
ಸೈಕಲ್ ಯಾನ, ಚಿತ್ರಗಳು: ಭರತ್ ಕಂದಕೂರ ಹಾಗೂ ಸೈಕ್ಲಿಸ್ಟ್‌ಗಳ ಸಂಗ್ರಹ
ಸೈಕಲ್ ಯಾನ, ಚಿತ್ರಗಳು: ಭರತ್ ಕಂದಕೂರ ಹಾಗೂ ಸೈಕ್ಲಿಸ್ಟ್‌ಗಳ ಸಂಗ್ರಹ   

ಕೊಪ್ಪಳ ಜಿಲ್ಲೆ ಅಳವಂಡಿ ಗ್ರಾಮದ ಮಲ್ಲಿಕಾರ್ಜುನ ಮೇಟಿ, ವೆಂಕಟೇಶ ಆವಿನ ಮತ್ತು ಗೋಣೇಶ ಗೋಣಿಸ್ವಾಮಿ, ಭಗತ್‌ಸಿಂಗ್‌ ಜನ್ಮಸ್ಥಳ ಭಂಗಾಕ್ಕೆ ಹೋಗಿ ಬಂದಿದ್ದಾರೆ. ಹತ್ತು ವರ್ಷಗಳ ಹಿಂದೆ ಮನಸ್ಸಿನಲ್ಲಿ ಮೂಡಿದ ಪ್ರವಾಸದ ಯೋಜನೆಯನ್ನು ಈಗ ಕಾರ್ಯರೂಪಕ್ಕೆ ಇಳಿಸಿದ್ದಾರೆ. 5500 ಕಿ.ಮೀ ದೂರದವರೆಗೆ ಸೈಕಲ್ ಯಾನ ಮಾಡಿ ಬಂದಿರುವ ಇವರು, ಭಗತ್‌ಸಿಂಗ್‌ ಮನೆಯ ಅಂಗಳದ ಮಣ್ಣನ್ನು ಗಂಟು ಕಟ್ಟಿ ತಂದಿದ್ದಾರೆ. ಅದೇ ಮಣ್ಣಿಗೆ ತಮ್ಮೂರ ಮಣ್ಣು ಬೆರೆಸಿ ಭಗತ್‌ಸಿಂಗ್‌ ಪ್ರತಿಮೆ ನಿರ್ಮಿಸಲು ಸಿದ್ಧರಾಗಿದ್ದಾರೆ.

ಕನಸುಗಳೊಡನೆ ಸೈಕಲ್ ಏರಿದರು
ಈ ಮೂವರು ಪೂರ್ಣಾವಧಿ ಉದ್ಯೋಗಸ್ಥರಲ್ಲ. ಇವರಿಗೆ ಭಾಷೆ ಗೊತ್ತಿಲ್ಲ. ಕೈಯಲ್ಲಿ ಹಣವಿಲ್ಲ. ಆದರೂ ಆತ್ಮವಿಶ್ವಾಸದೊಂದಿಗೆ ಸೈಕಲ್ ಏರಿ ಹದಿಮೂರು ರಾಜ್ಯಗಳನ್ನು ಸುತ್ತಿ, 37 ದಿನಗಳ ಸೈಕಲ್ ಯಾನ ಮುಗಿಸಿದ್ದಾರೆ.

ಸೈಕಲ್ ಯಾನ ಆರಂಭಿಸಿದಾಗ, ಅಳವಂಡಿಯವರೇ ಆದ ಮಧ್ಯಪ್ರದೇಶ ಅಮರಕಂಟಕದ ಇಂದಿರಾ ಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟೀಮನಿ, ಪ್ರಯಾಣಕ್ಕೆ ಮಾರ್ಗಸೂಚಿ ನೀಡುವ ಜತೆಗೆ, ಭಗತ್‌ಸಿಂಗ್‌ ಜನ್ಮ ಸ್ಥಳದ ಬಗ್ಗೆ ಮಾಹಿತಿಕೊಟ್ಟರು. ದಾರಿ ನಡುವೆ ಸಂಕಷ್ಟ ಎದುರಾದರೆ ನೆರವಾಗುವುದಾಗಿ ಭರವಸೆ ನೀಡಿದರು.

ADVERTISEMENT

ಪ್ರಯಾಣದಲ್ಲಿ ಐದಾರು ದಿನ ಏನೂ ತೊಂದರೆಯಾಗಲಿಲ್ಲ. ಕ್ರಮೇಣ ಕಿಸೆ ಬರಿದಾಯಿತು. ಹೊಟ್ಟೆ ಖಾಲಿ. ದೀರ್ಘವಾಗಿ ಸೈಕಲ್ ತುಳಿದ ಕಾರಣ ಕಾಲುಗಳು ಬಾತುಕೊಂಡಿದ್ದವು. ಸೈಕಲ್ ಕೈಕೊಡುತ್ತಿತ್ತು. ಒಂದು ದಿನ ಉಪವಾಸವಿದ್ದೇ ಸೈಕಲ್ ತುಳಿದರು. ತೇಜಸ್ವಿ ಅವರಿಗೋ ಅಥವಾ ಊರಿನವರಿಗೋ ಕರೆ ಮಾಡೋಣವೆಂದರೆ, ಮಳೆಯಲ್ಲಿ ಮೊಬೈಲ್‌ಗಳು ತೊಯ್ದು ಸ್ತಬ್ಧವಾಗಿದ್ದವು. ನಂತರ ಆ ಮೊಬೈಲ್ ಭಾಗಗಳನ್ನು ಬಿಸಿಲಿಗೆ ಒಣಗಿಸಿ, ಮರು ಜೋಡಿಸಿದಾಗ ಒಂದು ಮೊಬೈಲ್ ಮಾತ್ರ ಚಾಲು ಆಯ್ತು. ಆ ಮೊಬೈಲ್‌ ಚಾರ್ಜ್‌ಗೆ ಹಾಕುತ್ತಿದ್ದಂತೆ ತೇಜಸ್ವಿಯವರ ಫೋನ್ ಬಂತು. ಅಲ್ಲಿಂದ ಮುಂದೆಲ್ಲವು ವ್ಯವಸ್ಥಿತವಾಗಿ ನಡೆಯುತು. ಕಾಲು ನೋವು, ಕೊಳಕಾದ ಬಟ್ಟೆಯಲ್ಲೇ ಸೈಕಲ್‌ ತುಳಿಯುತ್ತಿದ್ದಾಗ, ಎದುರಿಗೆ ‘ಭಂಗಾ’ ಇನ್ನೂ 2 ಕಿ.ಮೀ ಇದೆ ಎಂಬ ಬೋರ್ಡ್‌ ಕಾಣಿಸಿತು. ಮೂವರ ಮೈಯಲ್ಲೂ ಚೈತನ್ಯ ಹರಿದಾಡಿತು.

ದಣಿದವರಿಗೆ ಹೂವುಗುಚ್ಛದ ಸ್ವಾಗತ
ಭಂಗಾ ಅಧಿಕಾರಿಗಳಿಗೆ ತಮ್ಮ ಯಾನದ ವಿಷಯ ತಿಳಿಸಿದ ನಂತರ ಅವರು, ಇವರನ್ನೆಲ್ಲ ಹೂಗುಚ್ಛ ನೀಡಿ ಸ್ವಾಗತಿಸಿದರು. ‘ಆ ಕ್ಷಣ ಎರಡು ವಾರ ಸೈಕಲ್ ತುಳಿದ ದಣಿವು ಮರೆಯಾಯಿತು. ನೇರವಾಗಿ ಭಂಗಾದಲ್ಲಿನ ಭಗತ್‌ಸಿಂಗ್‌ ಮ್ಯೂಸಿಯಂಗೆ ತೆರಳಿದೆವು. ಗ್ರಾಮದ ಸ್ಥಳೀಯರು ವಸತಿ ವ್ಯವಸ್ಥೆ ಮಾಡಿದರು. ಬಿಸಿನೀರಿನ ಸ್ನಾನ, ಹೊಟ್ಟೆಗೆ ಊಟ, ಪ್ರೀತಿಯ ಆರೈಕೆ ನಮ್ಮ ದೇಹದ ನೋವಿಗೆ ಮುಲಾಮು ಸವರಿದಂತಾಗಿತ್ತು. ಎರಡು ದಿನ ವಿಶ್ರಾಂತಿ ಪಡೆದು, ನಮ್ಮ ಉದ್ದೇಶದಂತೆ ಭಗತ್‌ಸಿಂಗ್ ಮನೆಯ ಅಂಗಳದಲ್ಲಿ ಬಟ್ಟೆ ಹಾಸಿ ಬಳ್ಳಕ್ಕೆ ಚಿನ್ನ ತುಂಬಿಕೊಂಡಂತೆ ಮೂರು ಗಂಟಿನಲ್ಲಿ ಅಲ್ಲಿನ ಮಣ್ಣು ಕಟ್ಟಿಕೊಂಡೆವು’ ಎಂದು ಗೋಣೇಶ ಹೆಮ್ಮೆಯಿಂದ ಹೇಳುತ್ತಾರೆ.

ಈ ಯುವಕರ ಸಾಹಸ ಕೇಳಿ ಸ್ಥಳೀಯರು ಸಂತಸಪಟ್ಟಿದ್ದಾರೆ. ಮಾತ್ರವಲ್ಲ, ಅಲ್ಲಿನ ಶಿಕ್ಷಕರೊಬ್ಬರು ತಮ್ಮ ಶಾಲಾ ಮಕ್ಕಳಿಗೆ ಈ ಯುವಕರ ಪ್ರವಾಸದ ಉದ್ದೇಶ ವಿವರಿಸಿದ್ದಾರೆ. ‘ಎಲ್ಲದಕ್ಕೂ ಮಿಗಿಲಾಗಿ ನಾವು ವಾಪಸ್ ಬರುವಾಗ ಅಲ್ಲಿನ ಕಲಾವಿದರು ನಮ್ಮನ್ನು ಸೇರಿಸಿಕೊಂಡು ಭಾಂಗಾ ನೃತ್ಯ ಮಾಡಿದ್ದಂತೂ ನಮಗೆ ತುಂಬ ಖುಷಿ ಕೊಟ್ಟಿತು’ ಎಂದು ಗೋಣೇಶ್ ನೆನೆಯುತ್ತಾರೆ. ‘ದಾರಿಯುದ್ದಕ್ಕೂ ಜನರು ಗೌರವದಿಂದ ಕಂಡರು. ಊಟೋಪಚಾರ ನೀಡಿದರು. ಭೂಸೇನಾ ಅಧಿಕಾರಿಗಳು ನಮಗೆ ಆಶ್ರಯ ನೀಡಿ, ಪಂಜಾಬ್ ದರ್ಶನ ಮಾಡಿಸಿ ಬೀಳ್ಕೊಟ್ಟರು’ ಎಂದು ಮಲ್ಲಿಕಾರ್ಜುನ ಮೇಟಿ ಹೇಳಿದರು.

‘ನಾವು ವಾಪಸ್ ಬರುವಾಗ ಮಾರ್ಗ ಮಧ್ಯೆ ಮಥುರಾ ನಗರಕ್ಕೆ ಹೋಗಿದ್ದೆವು. ಅಲ್ಲಿನಿಂದಲೂ ಮಣ್ಣು ತಂದಿದ್ದೇವೆ. ಆ ಮಣ್ಣಿನಿಂದ ಕೃಷ್ಣಗುಡಿ, ಹರಿದ್ವಾರದ ಮಣ್ಣಿನಿಂದ ನಾರಾಯಣ ದೇಗುಲ ನಿರ್ಮಿಸುವ ಉದ್ದೇಶವಿದೆ. ನಮ್ಮದು ವಿವಿಧ ಜಾತಿ, ಧರ್ಮಗಳನ್ನೊಳಗೊಂಡ ಶಾಂತ ಗ್ರಾಮ. ಈಗ ಗ್ರಾಮಸ್ಥರ ಸಹಾಯದಿಂದ ನಮ್ಮೂರಲ್ಲಿ ಮೂರು ದೇಗುಲಗಳನ್ನು ನಿರ್ಮಿಸುವ ಉದ್ದೇಶವಿದೆ’ ಎಂದು ವೆಂಕಟೇಶ ಹೇಳಿದರು.

ಊರಿಗೆ ಮರಳುವಾಗ ತುಂಬಿ ಹರಿಯುತ್ತಿರುವ ನದಿಗಳು, ತೊರೆಗಳನ್ನು ಕಂಡರು. ಪರ್ವತಗಳು, ಗಿರಿಧಾಮಗಳು, ಹಿಮದ ಹಾದಿ ಇವರನ್ನು ಅಲ್ಲಲ್ಲೇ ತಡೆದು ನಿಲ್ಲಿಸುತ್ತಿದ್ದವಂತೆ. ದಾರಿಯಲ್ಲಿ ಬರುವಾಗ ಅಲಕನಂದಾ ನದಿಯಲ್ಲಿ ಸ್ನಾನ ಮಾಡಿ ಹೊರ ಬರುತ್ತಿದ್ದಂತೆ ನೀಲಕಂಠಪರ್ವತ 50 ಕಿ.ಮೀ ಎಂದು ನಾಮಫಲಕದಲ್ಲಿ ಕಂಡಿದೆ. ಆ ಹಿಮ ಬೆಟ್ಟದ ತುದಿ ತಲುಪಿ, ಅಲ್ಲಿ ಕನ್ನಡದ ಬಾವುಟ ನೆಟ್ಟು, ನಾಡಗೀತೆ ಹಾಡಿ ಬಂದಿದ್ದಾರೆ ಈ ಮೂವರು.

ಸೈಕಲ್ ಯಾನ ಮುಗಿಸಿದ ಈ ಯುವಕರ ತಂಡ ಕೊಪ್ಪಳ ನಗರಕ್ಕೆ ಬರು ತ್ತಿದ್ದಂತೆ ಜಿಲ್ಲಾಡಳಿತ ಪುಷ್ಪಗುಚ್ಛ ನೀಡಿ, ಸ್ವಾಗತ ನೀಡಿತು. ಬಳಿಕ ಗ್ರಾಮದಲ್ಲಿ ಹಿರಿಯರು ಸನ್ಮಾನಿಸಿ ಆ ಮೂರು ಪುಣ್ಯ ಸ್ಥಳಗಳಿಂದ ತಂದಿದ್ದ ಮಣ್ಣನ್ನು ದೇವಸ್ಥಾನದಲ್ಲೊಂದರಲ್ಲಿ ಇರಿಸಿದರು. ಹೊಸ ಮೂರು ದೇಗುಲಗಳನ್ನು ನಿರ್ಮಿಸಲು ಗ್ರಾಮಸ್ಥರು ಸಾಮೂಹಿಕ ಸಂಕಲ್ಪ ಮಾಡಿದ್ದಾರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.