ADVERTISEMENT

ಬಿನ್ ಟ್ಯಾನ್ ಐಲ್ಯಾಂಡ್‌ : ಭುವಿಯ ಸ್ವರ್ಗ

ವೆಂಕಟೇಶ ಮುದಗಲ್
Published 27 ಫೆಬ್ರುವರಿ 2019, 13:41 IST
Last Updated 27 ಫೆಬ್ರುವರಿ 2019, 13:41 IST
ಬಿನ್ ಟ್ಯಾನ್ ಐಲ್ಯಾಂಡ್
ಬಿನ್ ಟ್ಯಾನ್ ಐಲ್ಯಾಂಡ್   

‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೆ ಜೀವನ’ ಗೋಪಾಲಕೃಷ್ಣ ಅಡಿಗರ ಕವಿವಾಣಿ ನಿಜವಾಯಿತು. ಕಿರಿಯ ತಮ್ಮ ರಮೇಶ ಮುದಗಲ್ ಆಗ ಸಿಂಗಪುರದಲ್ಲಿದ್ದ. ‘ಒಮ್ಮೆ ಇಲ್ಲಿಗೆ ಬನ್ನಿ’ ಎಂದು ಒತ್ತಾಯಿಸುತ್ತಿದ್ದ. ಈಗ– ಆಗ ಬರ್ತೀನಿ ಎಂದು ಕಾಲ ತಳ್ಳಿದೆ. ಅವನಿಗೆ ಸಿಂಗಪುರದಿಂದ ದುಬೈಗೆ ವರ್ಗವಾಯಿತು. ಹಾಗಾಗಿ ಮತ್ತೊಬ್ಬ ತಮ್ಮ ಪ್ರಹ್ಲಾದನೊಂದಿಗೆ ಸಿಂಗಪುರ ನೋಡಲು ಹೋದೆ.

ನಾವು ಸಿಂಗಪುರ ಸುತ್ತಾಡಿದೆವು. ಆದರೆ ಇಡೀ ಪ್ರವಾಸದಲ್ಲಿ ಹೆಚ್ಚು ಆಕರ್ಷಣೀಯ ಎನ್ನಿಸಿದ್ದು, ಸಿಂಗಪುರದ ಸಮೀಪದಲ್ಲಿರುವ ‘ಬಿಎನ್‌–ಟ್ಯಾನ್‌ ಐಲ್ಯಾಂಡ್‌’.

ಸಮುದ್ರಯಾನದ ಮಜಾ: ಸಿಂಗಪುರ ನಗರದಿಂದ ವಾಯುವ್ಯ ಭಾಗದಲ್ಲಿ ಒಂದು ಗಂಟೆಯ ಸಮುದ್ರ ಯಾನದ ನಂತರ ನಾವು ಈ ದ್ವೀಪವನ್ನು ತಲುಪಿದ್ದೆವು. 3ನೆಯ ಶತಮಾನದಲ್ಲಿ ಈ ದ್ವೀಪವನ್ನು ಗುರುತಿಸಲಾಗಿತ್ತಂತೆ. ಆಗಿನಿಂದಲೂ ಬಿನ್-ಟ್ಯಾನ್ ಐಲ್ಯಾಂಡ್‌ ಎಂದೇ ಹೆಸರಿದೆ ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಚೀನಾ ಮತ್ತು ಭಾರತ ದೇಶದ ವ್ಯಾಪಾರ ವಹಿವಾಟಿನಲ್ಲಿ ಈ ದ್ವೀಪ ಪ್ರಮುಖವಾಗಿತ್ತಂತೆ. ಬ್ರಿಟಿಷ್‌ ಆಳ್ವಿಕೆಗೆ ಒಳಪಟ್ಟ ಈ ದ್ವೀಪ ಈಗ ಇಂಡೋನೇಷ್ಯಾ ದೇಶಕ್ಕೆ ಸೇರಿದೆ. ಇಲ್ಲಿನ ಸಮಯ ಸಿಂಗಪುರಕ್ಕಿಂತ ಒಂದು ಗಂಟೆ ಹಿಂದೆ ಇದೆ.

ADVERTISEMENT

ಈ ದ್ವೀಪದ ಒಂದೆಡೆ ಹಸಿರಿನ ವೃಕ್ಷರಾಶಿ. ಇನ್ನೊಂದು ಕಡೆ ಪ್ರಶಾಂತ ನೀಲಸಾಗರ. ಸದಾ ಮುಗುಳ್ನಗೆಯನ್ನು ಮುಖಾರವಿಂದದಲ್ಲಿ ಸೂಸುತ್ತಿರುವ ಸಿಬ್ಬಂದಿ. ಹೇಳಲು ಹೊರಟರೆ ಶಬ್ದಗಳು ಸಾಲವು. ಈ ದ್ವೀಪದಲ್ಲಿ ಸೀಫುಡ್‌ ಜನಪ್ರಿಯ ಆಹಾರ. ಆದರೆ, ಸಸ್ಯಾಹಾರಿಗಳು ಬೇಸರ ಪಡುವ ಅಗತ್ಯವಿಲ್ಲ. ಏಕೆಂದರೆ, ಪ್ರವಾಸಿಗರ ರುಚಿಯನ್ನು ಅರ್ಥ ಮಾಡಿಕೊಂಡು ರುಚಿ ರುಚಿಯಾದ ಸಸ್ಯಹಾರ ಉಣಬಡಿಸುವ ವೆಜ್‌ ಹೋಟೆಲ್‌ಗಳೂ ಇವೆ. ಆದರೆ ಸ್ವಲ್ಪ ಜೇಬಿಗೆ ಕತ್ತರಿ ಅಷ್ಟೆ.

ಈಜಾಟ – ಸುತ್ತಾಟ: ಇದು ದ್ವೀಪವಾದರೂ, ನಗರದ ಹಾಗೆ ಅಂತರ್ಜಾಲ, ವೈ-ಫೈ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳಿವೆ. ಸಮುದ್ರದಲ್ಲಿ ಈಜಾಡುತ್ತಾ ಖುಷಿಪಡುವ ಜತೆಗೆ, ಬಾಡಿಗೆ ವಾಹನಗಳಲ್ಲಿ ಸಾಗರದ ಗುಂಟ ಒಂದೆರಡು ಸುತ್ತು ಹಾಕಿರಬರಬಹುದು. ಸಮುದ್ರದ ಈಜಿನ ಮೋಜಿನ ನಂತರ, ಸ್ವಚ್ಛವಾಗಿರುವ ಸ್ವಿಮ್ಮಿಂಗ್‌ ಪೂಲ್‌ಗಳಲ್ಲಿ ಈಜಾಡುವ ಅವಕಾಶವಿದೆ. ಚೆನ್ನಾಗಿ ಈಜಾಡಿದರೆ ಸಿಕ್ಕಾಪಟ್ಟೆ ಹಸಿವಾಗುತ್ತದೆ. ಹಸಿದ ಹೊಟ್ಟೆಗೆ, ಸುಗ್ರಾಸ ಭೋಜನ ಸೇರಿಸಿ, ಹಾಗೆ ಹಾಸಿಗೆಗೆ ಒರಗಿದರೆ ಸುಖವಾದ ನಿದ್ರೆ ಆವರಿಸಿಕೊಳ್ಳುತ್ತದೆ.

ಸಂಜೆ ಆಗುತ್ತಿದ್ದಂತೆ, ಹತ್ತಿರದ ಎತ್ತರದ ಸ್ಥಳದಲ್ಲಿ ನಿಂತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಬಹುದು. ಸಾಗರದ ತುದಿಯಲ್ಲಿ ಕೆಂಪನೆಯ ಉಂಡೆಯಂತಹ ಸೂರ್ಯ ಅದೃಶ್ಯನಾಗುವ ದೃಶ್ಯ ಅವರ್ಣನೀಯ.

ದ್ವೀಪದ ತುಂಬಾ ಹಲವು ಹೋಟೆಲ್‌ಗಳಿವೆ. ಕೆಲವು ಸಮುದ್ರದ ನಡುವೆ ಇವೆ. ಇಲ್ಲಿನ ಕರೆನ್ಸಿಗೆ ರುಫೈ ಎನ್ನುತ್ತಾರೆ. ಭಾರತದ ₹1=208.12 ಇಂಡೊನೇಷ್ಯಾ ರುಫೈ. ಸಿಂಗಪುರದಲ್ಲಿ ಡಾಲರ್‌ ಅನ್ನೂ ಬಳಸಬಹುದು. ಸಿಂಗಪುರ ಪ್ರವಾಸಕ್ಕೆ ಹೋಗುವವರು ಭೂಲೋಕದ ಸ್ವರ್ಗದಂತಿರುವ ಈ ‘ಬಿನ್-ಟ್ಯಾನ್ ಐಲ್ಯಾಂಡ್‌’ ಅನ್ನು ನೋಡಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.