ADVERTISEMENT

ಎಡಿನ್‌ಬರ್ಗ್‌ ಎಂಬ ಸ್ವರ್ಗ

ಪುಷ್ಪಾ ಮೋಹನ ಮುದಕವಿ
Published 19 ಡಿಸೆಂಬರ್ 2018, 19:30 IST
Last Updated 19 ಡಿಸೆಂಬರ್ 2018, 19:30 IST
   

ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ಬೆಟ್ಟ ಪ್ರದೇಶದ ಸುಂದರ ತಾಣ ಸ್ಕಾಟ್‌ಲೆಂಡ್‌. ಅಚ್ಚರಿ ಹುಟ್ಟಿಸುವಂತ, ಅದ್ಭುತವೆಂದು ಹುಬ್ಬೇರುವಂತೆ ಮಾಡುವ ತಾಣಗಳಿರುವ ನಗರವೂ ಹೌದು. ಕಳೆದ ಆಗಸ್ಟ್‌ನಲ್ಲಿ ನಾವು ಎಡಿನ್‌ಬರ್ಗ್‌ ನಗರಕ್ಕೆ ಭೇಟಿ ನೀಡಿದ್ದೆವು. ಲಂಡನ್‌ನಿಂದ ಉತ್ತರಕ್ಕೆ 300 ಮೈಲಿ ದೂರದಲ್ಲಿರುವ ಈ ನಗರವನ್ನು ನಾವು ರೈಲಿನಲ್ಲೇ ತಲುಪಿದೆವು. ದಾರಿಯಲ್ಲಿ ಹಸಿರು ಸಿರಿ ಮನವನ್ನು ಮುದಗೊಳಿಸಿತ್ತು.

ಎಡಿನ್‌ಬರ್ಗ್‌ ನಗರದಲ್ಲಿ ಪ್ರತಿ ವರ್ಷ ಆಗಸ್ಟ್‌ನಲ್ಲಿ ಫ್ರಿಂಜ್ ಎಂಬ ಸಾಂಸ್ಕೃತಿಕ ಉತ್ಸವ ನಡೆಯುತ್ತದೆ. ಇದು ವಿಶ್ವದಲ್ಲಿಯೇ ಬೃಹತ್ ಸಾಂಸ್ಕೃತಿಕ ಕಲಾ ಉತ್ಸವ ಎಂಬ ಖ್ಯಾತಿ ಪಡೆದಿದೆ. ಹೀಗಾಗಿ ಉತ್ಸವಕ್ಕೆಂದೇ ಬೇರೆ ಬೇರೆ ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ನಾವು ಹೋಗಿದ್ದು, ಅದೇ ತಿಂಗಳಾದ್ದರಿಂದ, ಪ್ರವಾಸಿಗರ ದಟ್ಟಣೆ ತುಸು ಹೆಚ್ಚಾಗಿಯೇ ಇತ್ತು.

ನಗರವನ್ನು ತಲುಪುತ್ತಿದ್ದಂತೆ, ನಮಗಾಗಿ ಕಾಯ್ದಿರಿಸಿದ ಹೋಟೆಲಿನಲ್ಲಿ ವಸ್ತುಗಳನ್ನಿಟ್ಟು, ಹೊಟ್ಟೆ ತಣಿಸಿಕೊಂಡು, ಆರ್ಥುರ್ಸ್‌ ಎಂಬ ಬೆಟ್ಟವೇರಲು ಕಾಲ್ನಡಿಗೆಯಲ್ಲಿ ಹೊರಟೆವು. ನೋಡುವುದಕ್ಕೆ ಅದು ಬೆಟ್ಟದಂತೆ ಕಂಡರೂ, ಆಕಾರದಿಂದ ಅದನ್ನು ಪರ್ವತ ಎನ್ನುವುದೇ ಸರಿ ಎನ್ನಿಸಿತು. ಆ ಜಾಗಕ್ಕೆ ಆರ್ಥುರ್ಸ್‌ ಸೀಟ್ ಎಂದು ಕರೆಯುತ್ತಾರೆ.

ADVERTISEMENT

ಆರ್ಥುರ್ಸ್‌ ಸೀಟ್ (Arthur's seat) ಬೆಟ್ಟಗಳ ಗುಂಪಿನಲ್ಲಿಯೇ ಬೃಹತ್ ಶಿಖರ. 650 ಎಕರೆ ವಿಸ್ತಾರವಾದ ಜಾಗ. ಹಾಲಿರೂಡ್ ಪಾರಕ್‌ನ ಬಹು ಪ್ರದೇಶ. ಎಡಿನ್‌ಬರ್ಗ್‌ ನಗರದ ಪ್ರಮುಖ ರಸ್ತೆ ರಾಯಲ್ ಮೈಲ್‌ನ ಕೊನೆಯಲ್ಲಿರುವ ಈ ಬೆಟ್ಟ ಸದಾ ಹಸಿರು ಹೊದ್ದುಕೊಂಡಿರುತ್ತದೆ.

ಸುಮಾರು 350 ದಶಲಕ್ಷ ವರ್ಷಗಳಷ್ಟು ಹಿಂದೆ, ನಂದಿ ಹೋದ ಜ್ವಾಲಾಮುಖಿಯ ಪಳೆಯುಳಿಕೆ ಇದು. 251 ಮೀ ಎತ್ತರವಿದೆ. ಈ ಶೃಂಗದ ತುದಿ ಮುಟ್ಟಲು 2-3 ದಾರಿಗಳಿವೆ. ಕಡಿದಾದ ಬೆಟ್ಟದ ತುದಿ ಮುಟ್ಟುವುದು ಪ್ರಯಾಸಕರ. ಹೀಗಾಗಿ ಸಾಲಿಸ್ಬರಿ ಕ್ರಯಾಗ್ ಕಡೆಯಿಂದ ನಮ್ಮ ನಡಿಗೆ ಪ್ರಾರಂಭಿಸಿದೆವು. ತುಸು ಎತ್ತರಕ್ಕೆ ಹೋಗಿ ನಗರದ ಸುಂದರ ನೋಟವನ್ನು ಕಣ್ತುಂಬಿ ಕೊಂಡು ಹಾಗೆಯೇ ಸುತ್ತುವರೆದು ಹಾಲಿರೂಡ್ ಪ್ಯಾಲೇಸ್ ತಲುಪಿದೆವು. ಇದೊಂದು ಸೊಗಸಾದ ಅರಮನೆ.

ಹಾಲಿರೂಡ್ ಎಂದರೆ ಹೋಲಿ ಕ್ರಾಸ್‌ ಎಂಬ ಅರ್ಥವೂ ಇದೆ. ಈ ಅರಮನೆ ನಗರದ ಕೇಂದ್ರದಿಂದ ಪೂರ್ವಕ್ಕೆ ರಾಯಲ್ ಮೈಲ್ ಪದತಲದಲ್ಲಿದೆ. ಇದು ಸ್ಕಾಟ್‌ಲೆಂಡ್‌ನ ಬ್ರಿಟಿಷ್ ರಾಣಿ ಎಲಿಜಬೆತ್‌ನ ಅಧಿಕೃತ ನಿವಾಸ. ಆಧುನಿಕ ಸ್ಕಾಟಿಷ್ ಪಾರ್ಲಿಮೆಂಟ್‌ನ ಕಟ್ಟಡವೂ ಸಮೀಪದಲ್ಲೇ ಇದೆ. ರಾಣಿ ಎಲಿಜಬೆತ್ ಬೇಸಿಗೆಯ ಪ್ರಾರಂಭದ ಒಂದು ವಾರ ಇಲ್ಲಿ ತಂಗುತ್ತಾರಂತೆ. ಆ ವೇಳೆ ಇಲ್ಲಿ ಅಧಿಕೃತ ಕಾರ್ಯಕ್ರಮಗಳಿರುತ್ತವೆ. 1671-78ರ ಅವಧಿಯಲ್ಲಿ ಈ ಅರಮನೆ ನಿರ್ಮಾಣವಾಗಿದೆ. ಸೊಗಸಾದ ಅರಮನೆ ಸ್ಟೇಟ್ ಅಪಾರ್ಟ್‌ಮೆಂಟ್‌ಗಳು ರಾಜ ರಾಣಿಯರ ಅಭಿರುಚಿಯನ್ನು ಪ್ರತಿಬಿಂಬಿಸುತ್ತವೆ. ಮರುದಿನದ ನಮ್ಮ ಕಾರ್ಯಕ್ರಮ ಎಡಿನ್ಬರ್ ಕ್ಯಾಸಲ್ (Edinburgh castle) ವೀಕ್ಷಣೆ.

ಕ್ಯಾಸಲ್ ಅತಿ ಎತ್ತರದ ಜ್ವಾಲಾಮುಖಿ ಶಿಲೆಯ ಮೇಲಿರುವ ಮಹೋನ್ನತ ಕಟ್ಟಡ. ಇದೊಂದು ಐತಿಹಾಸಿಕ ಕೋಟೆ. 2ನೇ ಶತಮಾನದಲ್ಲೇ ಇಲ್ಲಿ ಜನವಸತಿ ಇರಬಹುದು ಎಂದು ಊಹಿಸಲಾಗಿದೆ. ಇದು 12ನೇ ಶತಮಾನದಿಂದ ರಾಜರ ನಿವಾಸವಾಗಿದೆ. ಇದು ಸ್ಕಾಟ್‌ಲೆಂಡ್‌ನ ಪ್ರಮುಖ ಕೋಟೆ ಕೂಡ. ಹಲವಾರು ಯುದ್ಧಗಳ ಕೇಂದ್ರವಾಗಿ, ಅನೇಕ ದಾಳಿಗಳನ್ನು ಎದುರಿಸಿದೆ. 12-16ನೇ ಶತಮಾನಗಳ ಕಾಲ ರಾಜ ನಿವಾಸವಾಗಿತ್ತು. ಆದರೂ 17,18, 19ನೇ ಶತಮಾನಗಳವರೆಗೆ ಸೇನೆಯ ರಕ್ಷಣಾ ನೆಲೆ ಹಾಗೂ ಕಾರಾಗೃಹದಂತೆ ಉಪಯೋಗಿಸಲಾಗುತ್ತಿತ್ತು. ಇದನ್ನು ಇತ್ತೀಚೆಗೆ ರಾಷ್ಟ್ರೀಯ ಆಸ್ತಿಯಾಗಿ ಪರಿಗಣಿಸಿ, ಮೊದಲ ಸ್ಥಿತಿಗೆ ತರುವ ಪ್ರಯತ್ನ ನಡೆದಿದೆ.

ಕೋಟೆಯ ಪೂರ್ವಭಾಗದಲ್ಲಿ ಯುದ್ಧ ಕೈದಿಗಳನ್ನು ಬಂಧಿಸಿಡುತ್ತಿದ್ದ ಸ್ಕಾಟಿಷ್ ರಾಷ್ಟ್ರೀಯ ಮ್ಯೂಸಿಯಂ, ಜತೆಗೆ ಬೃಹತ್ ಫಿರಂಗಿ ಇದೆ. ಪ್ಯಾಲೇಸ್ ಯಾರ್ಡ್ 15ನೇ ಶತಮಾನದ ರಾಜ ಜೇಮ್ಸ್ – 3 ಅವಧಿಯಲ್ಲಿ ಪ್ರಮುಖ ಸಭಾ ಸ್ಥಾನವಾಗಿತ್ತು. ಈ ಚೌಕದ ಉತ್ತರಕ್ಕೆ ರಾಯಲ್ ಪ್ಯಾಲೇಸ್‌ ಇದೆ. ಇದು 15-16ರ ಶತಮಾನದ ಅವಧಿಯ ರಾಜ–ರಾಣಿಯರ ನಿವಾಸ ಅತ್ಯಂತ ಅಲಂಕೃತ, ಸುಸಜ್ಜಿತ, ವೈಭವೋಪೇತವಾಗಿದೆ.

1927ರಲ್ಲಿ ಪ್ರಿನ್ಸ್ ಆಫ್ ವೇಲ್ಸ್‌ನಿಂದ ಉದ್ಘಾಟನೆಗೊಂಡ ಸ್ಕಾಟಿಷ್ ನ್ಯಾಷನಲ್ ವಾರ್‌ ಸ್ಮಾರಕ ಭವನ ಜಾಗತಿಕ ಯುದ್ಧದಲ್ಲಿ ಹುತಾತ್ಮರಾದ ಸ್ಕಾಟಿಷ್ ಸೈನಿಕರ ಸ್ಮರಣಾರ್ಥವಾದ ಸ್ಮಾರಕವಿದೆ. ನೆಲಮನೆಯಲ್ಲಿ ಪ್ರಿಸನ್ಸ್‌ ಆಫ್ ವಾರ್ ಎಕ್ಸಿಬಿಷನ್ ಇದೆ.

ಕೋಟೆ ಪ್ರವೇಶ ದ್ವಾರದ ಸನಿಹ ಕ್ರೌನ್‌ ಜ್ಯೂವೆಲ್ಸ್‌ ಆಫ್‌ ಸ್ಕಾಟ್‌ಲ್ಯಾಂಡ್ ವೀಕ್ಷಿಸಲು ದೊಡ್ಡ ಸರತಿಯೇ ಇತ್ತು. ಸ್ಕಾಟ್‌ಲೆಂಡ್‌ನ ಗೌರವ ಲಾಂಛನಗಳು, ಮುಕುಟ ಮಣಿಗಳ ಭಂಡಾರವನ್ನೇ ಅಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಸ್ಟೋನ್ ಆಫ್ ಡೆಸ್ಟಿನಿ ಸ್ಕಾಟಿಷ್ ಹಾಗೂ ಇಂಗ್ಲಿಷ್‌ ರಾಜ, ರಾಣಿಯರ ಪಟ್ಟಾಭಿಷೇಕದ ಕಲ್ಲುಬಂಡೆ.

ಒನ್ ಕ್ಲಾಗ್‌ ಗನ್ ಎಂಬ ತಾಣ ಎಲ್ಲಾ ವಯಸ್ಸಿನ ಪ್ರವಾಸಿಗರಿಗೆ ಆಕರ್ಷಣೆ. 1861ರಲ್ಲಿ ಕಾಲಸೂಚಕವಾಗಿ ಸ್ಥಾಪಿತವಾಗಿದೆ. 3 ಕಿ.ಮೀ. ದೂರದ ಲೆಂತ್ ಮತ್ತು ಫಿರ್ತ್ ಆಫ್ ಫೋರ್ತ್ ಬಂದರುಗಳಿಗೆ ಬರುವ ಹಡಗುಗಳಿಗೆ ಕಾಲಸೂಚಕವಾಗಿ ಹಾರಿಸಲಾಗುತ್ತಿತ್ತಂತೆ. ಭಾನುವಾರ, ಗುಡ್ ಫ್ರೈಡೆ, ಕ್ರಿಸ್ಮಸ್ ದಿನಗಳನ್ನು ಹೊರತುಪಡಿಸಿ ಇಂದಿಗೂ ಹಾರಿಸಲಾಗುತ್ತಿದೆಯಂತೆ. ನಾವು ಭೇಟಿ ನೀಡಿದ ದಿನ ಭಾನುವಾರವಾದ್ದರಿಂದ ಆ ಸೋಜಿಗದಿಂದ ವಂಚಿತರಾದೆವು.

ಕೋಟೆಯ ಮೈದಾನದಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಎಡಿನ್‌ಬರ್ಗ್ ಮಿಲಟರಿ ಟ್ಯಾಟೊ ಎಂಬ ವೈಭವೋಪೇತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ದೇಶ ವಿದೇಶಗಳ ಜನ ಭಾಗಿಯಾಗಿ ಈ ವೈಭವಕ್ಕೆ ಸಾಕ್ಷಿಯಾಗುತ್ತಾರೆ. ವಿಶ್ವವಿಖ್ಯಾತಿ ಪಡೆದ ಕಾರ್ಯಕ್ರಮ. ಎಡಿನ್ಬರ್‌ ಕಾಸಲ್ ಪ್ರವಾಸಿಗರು ವೀಕ್ಷಿಸಲೇಬೇಕಾದಂತಹ ವಿಸ್ಮಯ.

ಇವೆಲ್ಲದರ ಜತೆಯಲ್ಲಿ ಫ್ರಿಂಜ್ ಉತ್ಸವದಲ್ಲಿ ಭಾರತೀಯ ಭರತನಾಟ್ಯ ಸಂಯೋಜನೆಯ ಒಂದೂವರೆ ಗಂಟೆಯ ನೃತ್ಯ ರೂಪಕವೊಂದನ್ನು ವೀಕ್ಷಿಸಿದ್ದು, ಸದಾ ನೆನಪಲ್ಲಿ ಉಳಿಯುವಂಥದ್ದು. ಇದಾದ ನಂತರ ನಾಲ್ಕು ದಿನಗಳು ಹೈಲ್ಯಾಂಡ್ ಸ್ಕಾಟ್‌ಲೆಂಡ್‌ನ ಪರ್ವತಮಯ ಪ್ರದೇಶದಲ್ಲಿ ‌ಸುತ್ತಾಡಲು ಮೀಸಲಾಗಿದ್ದವು. ಈ ಮೊದಲ ಹಂತದ ಪ್ರವಾಸದನುಭವ ಅವಿಸ್ಮರಣೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.