ಪ್ರವಾಸವೆಂದರೆ ಆನಂದ ಮತ್ತು ಅನ್ವೇಷಣೆಯ ಅನುಭವಗಳ ಗಣಿ. ಚಿಕ್ಕಮಕ್ಕಳಾದರೂ, ಇಳಿವಯಸ್ಸಿನವರಾದರೂ ಇವೆರಡಕ್ಕೇ ಆದ್ಯತೆ. ಸ್ಥಳ ಹೊಸದಾಗಿರಲಿ, ಹಳೆಯದಾಗಿರಲಿ, ಸ್ನೇಹಿತರೊಂದಿಗೆ ಚಾರಣವಿರಲಿ, ಸಹಪಾಠಿಗಳ ಜೊತೆ ಸೈಕಲ್ ಪ್ರವಾಸವಿರಲಿ, ಕೌಟುಂಬಿಕ ಪ್ರವಾಸವಿರಲಿ, ದೂರದ–ಹತ್ತಿರದ ಊರುಗಳಿಗೆ ಶೈಕ್ಷಣಿಕ ಪ್ರವಾಸವಿರಲಿ, ಆನಂದ–ಅನ್ವೇಷಣೆಗಳಿಲ್ಲದೆ ಅಪೂರ್ಣ.
ಸರಿ, ಸುರಕ್ಷತೆ ಬೇಡವೆ ಎಂದು ಕೇಳಿಕೊಳ್ಳಲೇಬೇಕು. ಸುರಕ್ಷಿತವಲ್ಲದ ಪ್ರವಾಸದಲ್ಲಿ ಆತಂಕ, ನೋವುಗಳೇ ಹೆಚ್ಚಿರುತ್ತವೆ. ಹೀಗಾಗಿಯೇ, ಪ್ರವಾಸ ಆಯೋಜನೆ ಮಾಡುವ ಪ್ರತಿಯೊಬ್ಬರೂ ಸುರಕ್ಷತೆಗೆ ಒತ್ತು ಕೊಡಲೇಬೇಕು.
ಶೈಕ್ಷಣಿಕ ಪ್ರವಾಸಕ್ಕೆ ಬರುವ ಬಹುತೇಕ ವಿದ್ಯಾರ್ಥಿಗಳಲ್ಲಿ ಆನಂದ ಮತ್ತು ಅನ್ವೇಷಣೆಯ ಅನುಭವಗಳಿಗೆ ತೆರೆದುಕೊಳ್ಳುವ ಅತ್ಯುತ್ಸಾಹವಿರುತ್ತದೆ. ಪ್ರವಾಸಿತಾಣ ಎಂಥ ಅಪಾಯಕಾರಿಯೇ ಆಗಿದ್ದರೂ, ಮನೆಯಲ್ಲಿ ಅಪ್ಪ–ಅಮ್ಮ, ಶಾಲೆ–ಕಾಲೇಜಿನಲ್ಲಿ ಶಿಕ್ಷಕರು ಎಷ್ಟೇ ಮುನ್ನೆಚ್ಚರಿಕೆ ಕೊಟ್ಟಿದ್ದರೂ, ಅವರಿಗೆ ಸುರಕ್ಷತೆ ಎಂಬುದು ಎರಡನೇ ಆದ್ಯತೆಯೇ.
ಹಾಗೆಂದು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು–ಶಿಕ್ಷಕರು ಸುಮ್ಮನಿರುವಂತಿಲ್ಲ. ಪ್ರವಾಸಕ್ಕೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಯ ಸುರಕ್ಷತೆಯೂ ಅವರ ಜವಾಬ್ದಾರಿಯೇ ಆಗಿರುತ್ತದೆ. ಹೀಗಾಗಿ ಪ್ರವಾಸ ಹೊರಡುವ ಕೆಲವು ತಿಂಗಳ ಮುಂಚಿನಿಂದಲೇ ಯೋಜನೆ ಹಾಕಿಕೊಳ್ಳಬೇಕಾಗುತ್ತದೆ. ಅದು ಸುರಕ್ಷತೆಗೆ ಸಂಬಂಧಿಸಿದಂಥ ರೂಪುರೇಷೆ. ಅದು ಇಲ್ಲದಿದ್ದರೆ ಪ್ರವಾಸ ಬಹುಮಟ್ಟಿಗೆ ಪ್ರಯಾಸವೇ.
ಐತಿಹಾಸಿಕ, ಪಾರಂಪರಿಕ ಪ್ರವಾಸಿ ಸ್ಥಳಗಳು, ಸಮುದ್ರತೀರಗಳು, ನದಿ ತೀರಗಳು, ಕಾಡು–ಬೆಟ್ಟ, ಜಲಪಾತಗಳಿರುವ ಪ್ರದೇಶಗಳು– ಪ್ರವಾಸಿಗರು ಹೆಚ್ಚು ಇಷ್ಟಪಡುವ ತಾಣಗಳು. ಪಾರಂಪರಿಕ ತಾಣಗಳನ್ನು ಹೊರತುಪಡಿಸಿದರೆ, ಉಳಿದವು ಹೆಚ್ಚು ಮನಮೋಹಕವಾಗಿರುವಂತೆಯೇ ಅತಿ ಅಪಾಯಕಾರಿಯೂ ಆಗಿರುತ್ತವೆ. ಇಂಥ ಸ್ಥಳಗಳಲ್ಲೇ ಹೆಚ್ಚು ಮಂದಿ ಮೋಜಿಗಾಗಿ ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಇವೆ. ಇಂಥ ಕಡೆಗೆ ಶೈಕ್ಷಣಿಕ ಪ್ರವಾಸ ಏರ್ಪಡಿಸುವುದು ನಿಜಕ್ಕೂ ಸವಾಲು. ಅಂಥ ಸ್ಥಳಗಳಿಗೆ ತೆರಳುವ ಮಾರ್ಗಗಳೂ ದುರ್ಗಮವೇ ಆಗಿರುತ್ತವೆ.
ಹೀಗಾಗಿ, ಪ್ರವಾಸಿ ತಾಣದಲ್ಲಿ ಸುರಕ್ಷತೆ ಮತ್ತು ಅಲ್ಲಿಗೆ ತೆರಳುವ ಮಾರ್ಗದಲ್ಲಿ ಸುರಕ್ಷತೆ –ಈ ಎರಡನ್ನೂ ಶೈಕ್ಷಣಿಕ ಪ್ರವಾಸದಲ್ಲಿ ಗಮನಿಸಲೇಬೇಕು. ಖಾಸಗಿ ಬಸ್ ಬುಕ್ ಮಾಡಿಕೊಂಡು ಹೋಗುವುದಾದರೆ ರಾತ್ರಿ ವೇಳೆ ಪ್ರಯಾಣವನ್ನು ಖಂಡಿತ ಮಾಡಬಾರದು. ರಾತ್ರಿ ಬಸ್ ಚಾಲನೆ ಮಾಡಿದ ಚಾಲಕರೇ ಮತ್ತೆ ಮಾರನೇ ದಿನವೂ ಬಸ್ ಚಾಲನೆ ಮಾಡಬೇಕಲ್ಲವೇ?
‘ರಾತ್ರಿ ವೇಳೆ ಪ್ರಯಾಣ ಬಯಸುವ ಪ್ರವಾಸಗಳಾಗಿದ್ದರೆ, ಸ್ಲೀಪರ್ ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸುವುದು ಹೆಚ್ಚು ಸುರಕ್ಷಿತ’ ಎನ್ನುತ್ತಾರೆ ಮೈಸೂರಿನ ‘ಅರಿವು ಶಾಲೆ’ಯ ಕಾರ್ಯದರ್ಶಿ ಸಿ.ಎಸ್.ಜನಾರ್ದನ್.
ಯಾವುದೇ ಸ್ಥಳಕ್ಕೆ ಮಕ್ಕಳನ್ನು ಕರೆದೊಯ್ಯುವ ಮುನ್ನ, ಅವರು ಅಲ್ಲಿಗೆ ಮೊದಲು ಭೇಟಿ ಕೊಡುತ್ತಾರೆ. ಪ್ರವಾಸ ನಡೆಯುವ ಮತ್ತು ವಾಸ್ತವ್ಯ ಹೂಡುವ ಸ್ಥಳಗಳನ್ನು ಪರಿಶೀಲಿಸುತ್ತಾರೆ. ಅಲ್ಲಿ ಎಂಥ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂಬ ಯೋಜನೆ ಅಲ್ಲಿಯೇ ರೂಪಿಸಿ ವಾಪಸಾಗುತ್ತಾರೆ. ನಂತರ ಪ್ರವಾಸದ ಚಟುವಟಿಕೆಗಳು ಶುರುವಾಗುತ್ತವೆ. ಶಿಕ್ಷಕರಿಗೆ ಕಿರು ತರಬೇತಿಯೂ ನಡೆಯುತ್ತದೆ–ಇದು ಅವರು ಪ್ರತಿ ಪ್ರವಾಸಕ್ಕೂ ಮುನ್ನ ನಡೆಸುವ ಪ್ರಾಥಮಿಕ ಸಿದ್ಧತೆ.
‘ಇಂಥ ಸಿದ್ಧತೆಗಳಿಂದಲೇ ಶೈಕ್ಷಣಿಕ ಪ್ರವಾಸ ಯಶಸ್ವಿಯಾಗುತ್ತದೆ’ ಎಂಬುದು ಅವರು ಇದುವರೆಗೂ ನೆಚ್ಚಿಕೊಂಡಿರುವ ಸೂತ್ರ. ಈ ಸೂತ್ರವೇ ಅವರನ್ನು ವಿದ್ಯಾರ್ಥಿಸ್ನೇಹಿ ಪ್ರವಾಸದ ಯಶಸ್ವಿ ಆಯೋಜಕರನ್ನಾಗಿಸಿದೆ.
ಮಕ್ಕಳ ಸುರಕ್ಷತೆಯಲ್ಲಿ ತಮ್ಮ ಪಾತ್ರವೇನು ಎಂಬ ಬಗ್ಗೆ ಶಿಕ್ಷಕರಿಗೆ ಅರಿವು ಮೂಡಿಸಬೇಕು. ಎಲ್ಲ ಶಿಕ್ಷಕರಲ್ಲೂ ಈ ಬಗ್ಗೆ ಸಮನ್ವಯ ಭಾವವಿರಬೇಕು.
ಪ್ರವಾಸದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಲಭ್ಯವಿರುವ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ವಿಭಜಿಸಿ, ತಂಡಗಳನ್ನಾಗಿ ಮಾಡಿ, ಪ್ರತಿ ತಂಡದ ಹೊಣೆಯನ್ನೂ ಪ್ರತಿ ಶಿಕ್ಷಕರಿಗೆ ವಹಿಸುವುದು ಹೆಚ್ಚು ಸುರಕ್ಷಿತ.
ವಿದ್ಯಾರ್ಥಿಗಳ ಒಟ್ಟು ತಂಡವನ್ನು ಮುನ್ನಡೆಸುವವರು ಯಾರು?, ತಂಡದ ಮಧ್ಯಭಾಗದಲ್ಲಿ ಕಣ್ಗಾವಲಿಟ್ಟು ನಡೆಯುವವರು ಯಾರು?, ತಂಡದ ಕೊನೆಯಲ್ಲಿರುವ ವಿದ್ಯಾರ್ಥಿಯ ಹಿಂದೆ ಬರುವವರು ಯಾರು? ಎಂಬುದು ಮೊದಲೇ ಸ್ಪಷ್ಟವಾಗಬೇಕು. ಸಾಧ್ಯವಾದರೆ ಪ್ರತಿ ಶಿಕ್ಷಕರ ಬಳಿಯೂ ಚಿಕ್ಕ ಪ್ರಥಮ ಚಿಕಿತ್ಸೆಯ ಟೂಲ್ ಕಿಟ್ ಇರಬೇಕು.
ಬಾಲಕ–ಬಾಲಕಿಯರು ಸಂಖ್ಯೆಗೆ ಅನುಗುಣವಾಗಿ ಎಷ್ಟು ಪುರುಷ ಮತ್ತು ಮಹಿಳಾ ಶಿಕ್ಷಕರಿರಬೇಕು ಎಂಬುದನ್ನೂ ಮೊದಲೇ ನಿರ್ಧರಿಸಬೇಕು. ಶಿಕ್ಷಕರ ಕೊರತೆ ಇದ್ದರೆ, ಕಾಳಜಿಯುಳ್ಳ ಇತರೆ ಸಿಬ್ಬಂದಿ ಅಥವಾ ಪೋಷಕರನ್ನೂ ಒಳಗೊಳ್ಳುವ ಬಗ್ಗೆ ಚಿಂತಿಸಬೇಕು.
ಪ್ರವಾಸಕ್ಕೆ ಹೊರಡುವ ಸ್ಥಳಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮೊದಲೇ ಮಾಹಿತಿ ಕೊಡಬೇಕು. ತರಬೇಕಾದ ಸುರಕ್ಷತಾ ಸಾಮಗ್ರಿಗಳ ಬಗ್ಗೆಯೂ ತಿಳಿಸಿರಬೇಕು. ನಿರ್ದಿಷ್ಟ ಅನಾರೋಗ್ಯಕ್ಕೆ ನಿಯಮಿತವಾಗಿ ಔಷಧಿ ಬಳಸುತ್ತಿದ್ದರೆ, ಆ ಬಗ್ಗೆ ಪೋಷಕರಿಂದ ಮಾಹಿತಿ ಪಡೆದು, ಆ ಔಷಧಿ ಕೊಟ್ಟುಕೊಳಿಸುವಂತೆ ಸೂಚಿಸಬೇಕು.
ಪ್ರವಾಸಿ ಸ್ಥಳದಲ್ಲಿ ಊಟ, ವಸತಿಯನ್ನು ಮೊದಲೇ ಖಚಿತಪಡಿಸಿಕೊಳ್ಳಬೇಕು. ಸ್ಥಳಕ್ಕೆ ಹೋದ ನಂತರ, ಸ್ಥಳೀಯರ ಪರಿಚಿತರನ್ನು ಗೋಗರೆಯುವಂತಿರಬಾರದು. ಹಣ ಉಳಿಸುವ ಉದ್ದೇಶದಿಂದ, ಪೂರ್ವ ಮಾಹಿತಿ ನೀಡದೆ, ಸಾಮೂಹಿಕ ಅನ್ನದಾಸೋಹ ನಡೆಯುವ ಸ್ಥಳಗಳನ್ನು ನೆಚ್ಚಿಕೊಂಡರೆ ಅನನುಕೂಲವೇ ಹೆಚ್ಚು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.