ಉತ್ತರ ನೆದರ್ಲೆಂಡ್‌ನ ಆಲ್ಸ್ಮೀರ್ ನಗರವು ಅನೇಕ ಸರೋವರಗಳು, ಐತಿಹಾಸಿಕ ಉದ್ಯಾನಗಳನ್ನು ಹೊಂದಿದ್ದು ವಾಸಿಸಲು ಅತ್ಯಂತ ಸುಂದರ ಹಾಗೂ ಶಾಂತಿಯುತ ಸ್ಠಳವೆಂದೇ ಹೆಸರು ಪಡೆದಿದೆ. ಆಮ್‌ಸ್ಟರ್ ಡ್ಯಾಂನ ಶಿಫೇಲ್ ವಿಮಾನ ನಿಲ್ದಾಣದ ಹತ್ತಿರವಿರುವ ಈ ಪಟ್ಟಣದಲ್ಲಿ ಡಚ್‌ನ ‘ಆಲ್ಸ್ಮೀರ್ ಹೂ ಹರಾಜು’ ಅಥವಾ ‘ಬ್ಲೂಮೆನ್ ವೀಲಿಂಗ್ ಆಲ್ಸ್ಮೀರ್’ ನಡೆಯುತ್ತದೆ. ಇದು ವಿಶ್ವದ ಅತ್ಯಂತ ದೊಡ್ಡದಾಗಿರುವ ಹೂವಿನ ಮಾರುಕಟ್ಟೆ.
ಪ್ರಪಂಚದಾದ್ಯಂತ ಬಿಡುವ 20 ಮಿಲಿಯನ್ ಹೂಗಳು ಹಾಗೂ ಅನೇಕ ಬಗೆಯ ಅಲಂಕಾರಿಕ ಗಿಡಗಳು ಪ್ರತಿದಿನ ಇಲ್ಲಿಗೆ ಬರುತ್ತವೆ. ವಿಶೇಷ ದಿನಗಳಲ್ಲಿ ಅಂದರೆ ಪ್ರೇಮಿಗಳ ದಿನ, ತಾಯಂದಿರ ದಿನದಂದು ಹೂಗಳ ಮಾರಾಟ ಹೆಚ್ಚಿರುತ್ತದೆ.
ಇಲ್ಲಿ ಬಿಕರಿಯಾಗುವ ಹೆಚ್ಚಿನ ಹೂವುಗಳು ನೆದರ್ಲೆಂಡ್‌ನಿಂದ ಬರುತ್ತವೆಯಾದರೂ ಇನ್ನೂ ಅನೇಕ ಹೂಗಳು ಈಕ್ವೆಡಾರ್, ಕೊಲಂಬಿಯಾ, ಇಥಿಯೋಪಿಯಾ ಮತ್ತು ಕೀನ್ಯಾ ಮತ್ತು ಇತರೇ ದೂರದ ದೇಶಗಳಿಂದಲೂ ಬರುತ್ತವೆ. ವ್ಯಾಪಾರ ನಡೆಯುವ ಗೋದಾಮು 243 ಎಕರೆ ಪ್ರದೇಶ ಹೊಂದಿದ್ದು, ಇದರ ನಕ್ಷೆಯ ಪ್ರಕಾರ ವಿಶ್ವದ ಅತಿದೊಡ್ಡ ಕಟ್ಟಡ ಎನಿಸಿಕೊಂಡಿದೆ.
ಹರಾಜಿನ ಹಿಂದಿನ ರಾತ್ರಿ 10 ಗಂಟೆಗೆ ಹೂಗಳು ಆಗಮಿಸುತ್ತವೆ. ಅವುಗಳನ್ನು ಸುಮಾರು 30 ಬಗೆಯ ಗುಣಮಟ್ಟದ ತಪಾಸಣೆಗೆ ಒಳಪಡಿಸಲಾಗುತ್ತದೆ ಮತ್ತು ಅವುಗಳನ್ನು ಎ1, ಎ2 ಮತ್ತು ಬಿ ಶ್ರೇಣಿಗಳನ್ನಾಗಿ ವಿಂಗಡಿಸಲಾಗುತ್ತದೆ. ರಾತ್ರಿ ಸಮಯದಲ್ಲಿ ಶೈತೀಕರಣಗೊಳಿಸಲಾಗುತ್ತದೆ ಮತ್ತು ಮುಂಜಾವಿನ ಹೊತ್ತಿನಲ್ಲಿ ಹರಾಜು ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಹರಾಜು ನಡೆಯುವ ವೇಳೆಗೆ ಇಡೀ ಕಟ್ಟಡವು ಚಟುವಟಿಕೆಯಿಂದ ತುಂಬಿರುವ ಜೇನು ಗೂಡಿನಂತಾಗಿರುತ್ತದೆ ಅಷ್ಟೇನು ಖ್ಯಾತಿ ಹೊಂದಿರದ ಡಚ್ ಹರಾಜು ವ್ಯವಸ್ಥೆಯನ್ನು ಬಳಸಿಕೊಂಡು ಆಲ್ಸ್ಮೀರ್‌ನಲ್ಲಿ ಹೂಗಳನ್ನು ಮಾರಾಟ ಮಾಡಲಾಗುತ್ತದೆ. ಬೆಲೆಯನ್ನು ಹೆಚ್ಚಿಗೆ ನಿಗದಿಪಡಿಸಲಾಗುತ್ತದೆ.
ಸಮಯ ಕಡಿಮೆಯಾದಂತೆ ಹೂ ಬಂಡಿಯ ದರವೂ ಇಳಿಯುತ್ತಾ ಹೋಗುತ್ತದೆ. ಮೊದಲು ಬಿಡ್ ಮಾಡಿದ ವ್ಯಕ್ತಿ ಬಂಡಿಯನ್ನು ಪಡೆಯುತ್ತಾನೆ. ಅತಿ ಕ್ಷಿಪ್ರವಾಗಿ ಖರೀದಿಸುವ ಯಾರೇ ವ್ಯಕ್ತಿಯು ಜಾಸ್ತಿ ದರವನ್ನು ಪಾವತಿಸಿರುತ್ತಾನೆ. ಆದರೆ ಬೆಲೆ ಇಳಿಯಲಿ ಎಂದು ಕಾಯುತ್ತಾ ಕುಳಿತಿರುವವನು ಖಾಲಿ ಕೈಯಲ್ಲಿ ಮನೆಗೆ ಹೋಗಬೇಕಾಗಬಹುದು!
ಈ ವಿಶಿಷ್ಟ ವ್ಯವಸ್ಥೆಯನ್ನು ಡಚ್ ಟ್ಯೂಲಿಪ್ ಬಲ್ಬ್‌ಗಳನ್ನು ಮಾರಾಟ ಮಾಡಲು ಕಂಡು ಹಿಡಿಯಲಾಯಿತು. ಇದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ವಿಲಿಯಂ ವಿಕ್ರೆ ಅವರು ರೂಪಿಸಿದ ಬೆಲೆ ವ್ಯವಸ್ಥೆಯನ್ನು ಆಧರಿಸಿದೆ. ಡಚ್ ಹರಾಜಿನ ಚಾತುರ್ಯವು ಹೂಗಳನ್ನು ತ್ವರಿತವಾಗಿ ಮಾರಾಟ ಮಾಡುವುದನ್ನು ಖಾತ್ರಿಗೊಳಿಸುತ್ತದೆ. ಅಷ್ಟೇ ಅಲ್ಲ ಹೆಚ್ಚಿಗೆ ಪಾಲನ್ನು ಬಯಸುವ ವ್ಯಾಪಾರಿಗಳಿಂದ ಹೆಚ್ಚಿನ ದರವನ್ನು ಹೊರ ತೆಗೆಯುತ್ತದೆ.
ಆಲ್ಸ್ಮೀರ್ ಹೂವಿನ ಮಾರುಕಟ್ಟೆಯ ಅತ್ಯಂತ ಅಸಕ್ತಿದಾಯಕ ಅಂಶವೇನೆಂದರೆ ಹೂಗಳನ್ನು ಹತ್ತಿರದಿಂದ ನೋಡಿ ಮೆಚ್ಚುವ ಬದಲು ಲಾಜಿಸ್ಟಿಕ್ಸ್ ಅನ್ನು ಕ್ರಿಯೆಯಲ್ಲಿ ನೋಡುವುದು. ಖರೀದಿದಾರರು ಸಭಾಂಗಣದ ಒಂದು ಬದಿಯಲ್ಲಿ ಬಹುತೇಕ ಕಾಲೇಜು ತರಗತಿಯ ಶೈಲಿಯಲ್ಲಿ ಕುಳಿತುಕೊಳ್ಳುತ್ತಾರೆ. ಕಂಪೂಟರ್‌ಗಳನ್ನು ಪ್ಲಗ್ ಇನ್ ಮಾಡಲಾಗಿರುತ್ತದೆ. (ವಿದ್ಯುನ್ಮಾನವಾಗಿ ಬಿಡ್ ಮಾಡಲು ಇನ್ನು ಮುಂದೆ ಭೌತಿಕ ಉಪಸ್ಠಿತಿ ಅಗತ್ಯವಿಲ್ಲ) ಮುಂಭಾಗದಲ್ಲಿ ಹೂಗಳು ಮತ್ತು ಅಲಂಕಾರಿಕ ಸಸ್ಯಗಳಿರುವ ಕಂಟೈನರ್‌ಗಳನ್ನು ತುಂಬಿರುವ ಸ್ವಯಂಚಾಲಿತ ರೈಲುಗಳನ್ನು ಹಾಲ್‍ನ ಮುಂಭಾಗದಲ್ಲಿ ಎಳೆಯಲಾಗುತ್ತದೆ.
ಈ ಹರಾಜು ಕಂಪನಿಯು 2008ರ ಜ. 1ರಂದು ತನ್ನ ಅತಿದೊಡ್ಡ ಪ್ರತಿಸ್ಪರ್ಧಿಯಾಗಿದ್ದ ರಾಯಲ್ ಫೆರಾ ನೆದರ್ಲೆಂಡ್‌ನೊಂದಿಗೆ ವಿಲೀನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.