ADVERTISEMENT

ಸುತ್ತಾಣ: ಕೆನಡಾ ಪ್ರವಾಸ ಡೈರಿಯ ಪುಟಗಳಿಂದ..

ಎಸ್.ಎಂ.ಜಂಬುಕೇಶ್ವರ
Published 21 ಜುಲೈ 2024, 1:31 IST
Last Updated 21 ಜುಲೈ 2024, 1:31 IST
<div class="paragraphs"><p>ಕೆನಡಾ ನ್ಯಾಷನಲ್‌ ಬ್ರಾಡ್‌ಕಾಸ್ಟಿಂಗ್‌ ಟವರ್‌</p></div>

ಕೆನಡಾ ನ್ಯಾಷನಲ್‌ ಬ್ರಾಡ್‌ಕಾಸ್ಟಿಂಗ್‌ ಟವರ್‌

   

ಕೆನಡಾ ಕಣ್ಮನಗಳನ್ನು ಆವರಿಸಿಕೊಳ್ಳುವ ದೇಶ. ಅಲ್ಲಿನ ಪ್ರಕೃತಿ ಸೌಂದರ್ಯ, ಪಾರಂಪರಿಕ ತಾಣಗಳು, ಕಟ್ಟಡಗಳು, ನದಿಗಳು, ವಿಶ್ವ ಪ್ರಸಿದ್ಧ ನಯಾಗರ ಜಲಪಾತ, ಜನಜೀವನ ಎಲ್ಲವೂ ಆಕರ್ಷಕ. ಕುತೂಹಲ ಹೊಂದಿರುವ ಪ್ರವಾಸಿಗರಿಗೆ ಈ ದೇಶ ಹೇಳಿ ಮಾಡಿಸಿದಂತಿದೆ.

––––

ADVERTISEMENT

ಕೆನಡಾ ದೇಶದ ಹತ್ತಾರು ಸ್ಥಳಗಳನ್ನು ನಮಗೆ ತೋರಿಸಬೇಕೆಂದು ಅಮೆರಿಕದಲ್ಲಿರುವ ಮಗನ ಆಸೆಯಾಗಿತ್ತು. ಅಲ್ಲಿನ ಸ್ಥಳಗಳ ಕುರಿತು ಕೇಳಿದಾಗ, ಓದಿದಾಗ ಕುತೂಹಲ ಹೆಚ್ಚಾಗುತ್ತಲೇ ಇತ್ತು. ಈ ಕಾರಣಕ್ಕಾಗಿಯೇ ಮೊದಲೇ ಪತ್ನಿಯೊಡನೆ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದ್ದೆ. ಮಗ, ಸೊಸೆಯಿದ್ದ ಹಿಲ್ಸ್‌ಬರೊದಿಂದ ಕಾರಿನಲ್ಲಿ ಸುಮಾರು 850 ಕಿ.ಮೀ. ದೂರದ ಕೆನಡಾದ ಗಡಿಯಲ್ಲಿರುವ ಆಂಟಾರಿಯೊ ತಲುಪಿದೆವು. ಅಲ್ಲಿಂದ ನಮ್ಮ ಕೆನಡಾ ಪ್ರವಾಸ ಶುರುವಾಯಿತು.

ಆಂಟಾರಿಯೊ ನಗರದ ಅಂಚಿನಲ್ಲಿ ವಿಶಾಲವಾಗಿ ಹರಿಯುತ್ತಿದ್ದ ಸೇಂಟ್ ಲಾರೆನ್ಸ್ ನದಿ ದಂಡೆಗೆ ತಿರುಗಾಡಿಕೊಂಡು ಬರಲು ಹೊರಟೆವು. ನಯಾಗರದಿಂದ ಹರಿದು ಬರುವ ಈ ನದಿಯಲ್ಲಿ ದೋಣಿಗಳು ಸಾಗುವ ದೃಶ್ಯ, ಹಾರಾಡುತ್ತಿದ್ದ ಹಕ್ಕಿಗಳು, ಸಂಜೆಯಾದ್ದರಿಂದ ಆಕಾಶದಲ್ಲಿ ವಿವಿಧ ಬಣ್ಣಗಳಲ್ಲಿ ಕಾಣುತ್ತಿದ್ದ ಮೋಡಗಳನ್ನು ಕಣ್ತುಂಬಿಕೊಂಡು ಹತ್ತಿರದಲ್ಲಿಯೇ ಇದ್ದ ಬ್ರೊಕ್‌ ವಿಲ್ಲೆ ರೈಲು ಸುರಂಗಮಾರ್ಗ ವೀಕ್ಷಿಸಲು ಹೋದೆವು. ಈ ಸುಂದರ ಸುರಂಗ ಮಾರ್ಗವನ್ನು 1854–1860ರಲ್ಲಿ ನಿರ್ಮಿಸಲಾಗಿದೆ. ಇಲ್ಲಿ 110 ವರ್ಷಗಳು ರೈಲುಗಳು ಸಂಚರಿಸಿದವು.

ಮುಂದಿನ ಪಯಣ ಸಾವಿರ ದ್ವೀಪಗಳ ವೀಕ್ಷಣೆಯಾಗಿತ್ತು. ಕ್ರೂಜ್‌ನಲ್ಲಿ ಎರಡು ಗಂಟೆ ಸುತ್ತಾಡಿ ಬಂದೆವು. ಸಾವಿರ ದ್ವೀಪಗಳೆಂದರೆ ವಿಶಾಲವಾಗಿ ಹರಿಯುತ್ತಿದ್ದ ನದಿಯ ಮಧ್ಯದಲ್ಲಿ ಒಂದೆರಡು ಮನೆಗಳಿದ್ದರೂ ಅದನ್ನು ದ್ವೀಪವೆಂದು ಪರಿಗಣಿಸಿದ್ದಾರೆ. ಇಂತಹ ಸಣ್ಣ ಸಣ್ಣ ದ್ವೀಪಗಳನ್ನು ನೂರಾರು ವರ್ಷಗಳ ಹಿಂದೆಯೇ ಕೆಲವರು ಖರೀದಿಸಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಿರುತ್ತಿದ್ದರಂತೆ, ಅಂತಹ ಸಾವಿರ ದ್ವೀಪಗಳಲ್ಲಿ ಕೆಲವನ್ನು ಮಾತ್ರ ನೋಡಿದೆವು.

ಅಲ್ಲಿಂದ 200 ಕಿ.ಮೀ ದೂರದ ಮಾಂಟ್ರಿಯಲ್‌ ನಗರಕ್ಕೆ ಹೊರಟೆವು. ಅಲ್ಲಿ ಮೂರು ದಿನ ಉಳಿದುಕೊಂಡಿದ್ದೆವು. ಮರುದಿನ ಸುಮಾರು 300 ಕಿ.ಮೀ ದೂರದ ಕ್ಯುಬೆಕ್ ಸಿಟಿಗೆ ಭೇಟಿ ನೀಡಿದೆವು. ಕ್ಯುಬೆಕ್ ಸಿಟಿಯನ್ನು ಸಾಂಪ್ರದಾಯಿಕ ನಗರ ಎಂದು ಕರೆಯುತ್ತಾರೆ. ಇದು ಕೆನಡಾ ದೇಶದ ಎರಡನೇ ಅತಿ ದೊಡ್ಡ ನಗರವಾಗಿದ್ದು, ಕೆನಡಿಯನ್ ಪ್ರಾವಿನ್ಸ್‌ಗೆ ರಾಜಧಾನಿ. ಅಧಿಕೃತ ಭಾಷೆ ಫ್ರೆಂಚ್, ಜೊತೆಯಲ್ಲಿ ಕೆಲವು ಕಡೆ ಇಂಗ್ಲಿಷ್ ಭಾಷೆಯೂ ಬಳಕೆಯಲ್ಲಿದೆ. ಅಲ್ಲಿನ ಮೌಂಟ್‌ಮೊರೆನ್ಸಿ ನದಿಯಿಂದ ವೇಗವಾಗಿ ಧುಮುಕುವ ಫಾಲ್ಸ್ ಬಹಳ ಪ್ರಸಿದ್ಧಿಯಾಗಿದೆ. ಅದನ್ನು ವೀಕ್ಷಿಸಲು ಸಾವಿರಾರು  ಪ್ರವಾಸಿಗರು ಬರುತ್ತಾರೆ. ಅವರಲ್ಲಿ ನಾವೂ ಒಂದಾಗಿ ನಿಸರ್ಗದ ಸವಿಯನ್ನು ಅನುಭವಿಸಿದೆವು.

ಕ್ಯುಬೆಕ್ ಸಿಟಿಯು ಪುರಾತನ ಹಾಗೂ ಸ್ಪಚ್ಛ ನಗರವೆಂದೇ ಹೆಸರಾಗಿದೆ. ಈ ನಗರ ನೋಡಲು ಅತಿ ಸ್ವಚ್ಛವಾಗಿದ್ದು, ಕಿರಿದಾದ ರಸ್ತೆ ಪಕ್ಕದಲ್ಲಿರುವ ಪಾರಂಪರಿಕ ಕಟ್ಟಡಗಳಿಗೆ ಹೂಗಳಿಂದ ಅಲಂಕಾರ ಮಾಡಿದ್ದನ್ನು ನೋಡಿ ಆಶ್ಚರ್ಯವಾಯಿತು. ಅಲ್ಲಿನ ಕಟ್ಟಡಗಳು ಮೂರ್ನಾಲ್ಕು ಶತಮಾನಗಳಷ್ಟು ಹಳೆಯವು. ಆ ರಸ್ತೆಯಲ್ಲಿ ಸಂಚರಿಸುವುದೇ ವಿಶಿಷ್ಟ ಅನುಭವ. ಅಲ್ಲಿನ ಒಂದು ಚಿಕ್ಕ ಜಾಗದಲ್ಲಿದ್ದ ನೋಟ್ರೆಡಾಮ್‌ ಚರ್ಚ್, ಮುಂದಕ್ಕೆ ನಡೆದು ಹೋದರೆ ಅಲಂಕಾರಿಕ ವಸ್ತುಗಳ ಮಾರಾಟದ ಮಳಿಗೆಗಳು, ಸ್ವಲ್ಪ ಮುಂದೆ ಸಾಗಿದರೆ ಮನೆಯ ಗೋಡೆಗೆ ಒಂದು ಭಾಗದಲ್ಲಿ ತೈಲವರ್ಣದಲ್ಲಿ ಬಿಡಿಸಿದ ಸುಂದರ ಚಿತ್ರಗಳ ಸಮೂಹ–ಹೀಗೆ ಸಾಗುತ್ತ ಹೋದರೆ ಮತ್ತೊಂದು ದೊಡ್ಡದಾದ ಮನೆಯ ಗೋಡೆಯ ಮೇಲೆ ಹಿಂದಿನ ಜನಜೀವನ ಬಿಂಬಿಸುವ  ಸುಂದರ ವರ್ಣಚಿತ್ರಗಳನ್ನು ನೋಡಬಹುದು. ಅಲ್ಲಿಂದ 3-4 ಕಿ.ಮೀ ದೂರ ಹೋದರೆ ಸುಂದರ ಕಲಾಕೌಶಲದಿಂದ ಕೂಡಿದ ಕರಿಕಲ್ಲಿನಲ್ಲಿ ಹಿಂದಿನ ಕುಲಕಸುಬುಗಳನ್ನು ಬಿಂಬಿಸುವಂತಹ ಶಿಲ್ಪಗಳನ್ನು ಕೆತ್ತಿಸಿ ನಿಲ್ಲಿಸಿದ್ದ ಪಾರ್ಲಿಮೆಂಟ್ ಭವನ, ಅದರ ಮುಂದಿದ್ದ ಸುಂದರ ಶಿಲ್ಪಗಳಿಂದ ಹೊರಹೊಮ್ಮುವ ಕಾರಂಜಿ ಇವುಗಳೆಲ್ಲ ಪ್ರವಾಸಿಗರನ್ನು ಬಹಳವಾಗಿ ಆಕರ್ಷಿಸುತ್ತವೆ. 

ಮರುದಿನ ಮಾಂಟ್ರಿಯಲ್ ನಗರದಲ್ಲಿರುವ ಅದ್ಭುತ ಕಲಾಕುಸುರಿಯಿಂದ ನಿರ್ಮಿಸಿರುವ ಪ್ರಸಿದ್ಧ ಬೆಸಿಲಿಕ ನೋಟ್ರೆಡಾಮ್ ಚರ್ಚ್ ವೀಕ್ಷಿಸಿದೆವು. ಅಲ್ಲಿನ ವಿಸ್ತಾರವಾದ ಬಟಾನಿಕಲ್ ಗಾರ್ಡನ್, ಚೀನಾ ಹಾಗೂ ಜಪಾನ್ ಮಾದರಿ ಉದ್ಯಾನಗಳಿಗೆ ಭೇಟಿ ನೀಡಿದೆವು. ನಂತರ 1976ರಲ್ಲಿ ಒಲಿಂಪಿಕ್ಸ್‌ ಕ್ರೀಡೆಗಳು ನಡೆದ ಸ್ಟೇಡಿಯಂ ಕಡೆಗೆ ಹೊರಟು ಅಲ್ಲಿ ಸುತ್ತಾಡಿ ಮಾರನೆಯ ದಿನ ಒಟ್ಟಾವಕ್ಕೆ ಪ್ರಯಾಣ ಬೆಳೆಸಿದೆವು. ‘ಆ್ಹಡುವ’ ಕೆನಡಾದ ರಾಜಧಾನಿ. ಅಲ್ಲಿ ಪುರಾತನ ಹಾಗೂ ಸುಂದರವಾದ ವಾಸ್ತುಶಿಲ್ಪಗಳಿಂದ
ಕೂಡಿದ ವಿಶಾಲವಾದ ಪಾರ್ಲಿಮೆಂಟ್ ಭವನವಿದ್ದು ಅದು ನವೀಕರಣಗೊಳ್ಳುತ್ತಿರುವುದರಿಂದ ವೀಕ್ಷಿಸಲು ಸಾಧ್ಯವಾಗಲಿಲ್ಲ. ಸೆನೆಟ್ ಭವನ
ವೀಕ್ಷಣೆಗೆ ಆನ್‌ಲೈನ್‌ನಲ್ಲಿ ಅನುಮತಿ ಪಡೆದು ಹೋದೆವು. ಅಲ್ಲಿನ ಅಧಿಕಾರಿಗಳು ಎಲ್ಲ ವಿಭಾಗಗಳನ್ನು ಪರಿಚಯಿಸಿದರು. ನಂತರ ಸೆನೆಟ್ ಹಾಲ್‌ಗೂ ಕರೆದೊಯ್ದು ಸಭೆ ನಡೆಯುವ ಸ್ಥಳದ ಬಗ್ಗೆ ವಿವರಿಸಿ  ಸೌಜನ್ಯದಿಂದಲೇ ಬೀಳ್ಕೊಟ್ಟರು. ಪಕ್ಕದಲ್ಲಿಯೇ ಇದ್ದ ಬೃಹತ್‌ ವೃತ್ತದಲ್ಲಿ ಕಲಾತ್ಮಕವಾಗಿ ನಿರ್ಮಿಸಿರುವ 1914-1918ರ ವಾರ್ ಮೆಮೋರಿಯಲ್‌ಗೆ ಭೇಟಿ ನೀಡಿದೆವು. ಅಲ್ಲಿಂದ ನಗರ ಪ್ರದಕ್ಷಿಣೆ. ಇವೆಲ್ಲವನ್ನೂ ನೋಡಿಕೊಂಡು ಟೊರಾಂಟೊ ಕಡೆಗೆ ಹೊರಟೆವು.

ಟೊರಾಂಟೊ ನಗರದಲ್ಲಿ ಎಲ್ಲಿ ನೋಡಿದರೂ ಬಹುಅಂತಸ್ತಿನ ಸುಂದರವಾದ ಕಟ್ಟಡಗಳು. ಕೆಲವು ಕಡೆ ಕೇವಲ ಕಪ್ಪುಬಣ್ಣದ ಗಾಜಿನಿಂದ ನಿರ್ಮಿಸಿದ ಗಗನಚುಂಬಿ ಕಟ್ಟಡಗಳು ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತವೆ. ಒಂದು ಕೇಂದ್ರ ಸ್ಥಳದ ಮಧ್ಯದಲ್ಲಿ ಸುತ್ತಲೂ ಕಲಾತ್ಮಕವಾದ ವಾಸ್ತುಶಿಲ್ಪಗಳಿಂದ ಕೂಡಿದ ಬಹುಮಹಡಿ ಕಟ್ಟಡಗಳು, ಮಧ್ಯದಲ್ಲಿ ಸುಂದರವಾದ ಕಾರಂಜಿ. ದೊಡ್ಡ ಅಕ್ಷರಗಳಲ್ಲಿ ‘TORONTO’ ಎಂದು ಬರೆದು ನಿಲ್ಲಿಸಿದ್ದರು. ಅಲ್ಲಿಗೆ ಹೋದ ನೆನಪಿಗಾಗಿ ಪ್ರವಾಸಿಗರೆಲ್ಲರೂ ಫೋಟೊ ತೆಗೆಸಿಕೊಳ್ಳುವರು. ಅಂದು ಆ ಸ್ಥಳದಲ್ಲಿ ಭಾರತೀಯ ದಿವಸ ಆಚರಿಸುತ್ತಿದ್ದುದು ವಿಶೇಷವಾಗಿತ್ತು. ಒಂದು ಕಡೆ ತಿಂಡಿ-ತಿನಿಸುಗಳ ಸಾಲು, ಮತ್ತೊಂದು ಕಡೆ ಆಟಗಳ ಸಾಲು, ಮಧ್ಯದಲ್ಲಿ ವೇದಿಕೆ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅಲ್ಲಿಗೆ ಬಂದ ಭಾರತೀಯ ಯುವಕ ಯುವತಿಯರು ಸಡಗರ, ಸಂಭ್ರಮದಿಂದ ಸುತ್ತಾಡುತ್ತಿದ್ದರು. ಅದರಲ್ಲಿ ನಾವೂ ಭಾಗಿಯಾಗಿ ಸ್ವಲ್ಪ ಹೊತ್ತು ಕಾಲ ಕಳೆದವು.

ನಂತರದಲ್ಲಿ ಅತಿ ಎತ್ತರದ Canada National Tower (Broadcasting) ಕಟ್ಟಡವನ್ನು ವೀಕ್ಷಿಸಲು ಹೊರಟೆವು. ಇದನ್ನು 1976ರಲ್ಲಿ ನಿರ್ಮಿಸಲಾಗಿದೆ. 553 ಮೀಟರ್ (1815 ಅಡಿ) ಎತ್ತರದ ಈ ಟವರ್‌ ಮೇಲೆ ಹೋಗಲು ಲಿಫ್ಟ್‌ನ ಕೇವಲ 50 ಸೆಕೆಂಡ್ ಸಾಕಾಗುತ್ತದೆ. ನಾವು ಮೇಲಕ್ಕೆ ಹೋದ ಸಮಯ ಸಂಜೆಯಾಗಿತ್ತು. ಆಕಾಶವೆಲ್ಲ ಕೆಂಬಣ್ಣದಿಂದ ಗೋಚರಿಸತೊಡಗಿತ್ತು. ಕ್ರಮೇಣ ಕತ್ತಲಾಗುತ್ತಾ ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ಗಗನಚುಂಬಿ ಕಟ್ಟಡಗಳು, ರಸ್ತೆಯುದ್ದಕ್ಕೂ ಜಗಮಗಿಸುವ ವಿದ್ಯುತ್ ದೀಪಗಳು, ಇಡೀ ನಗರವೆಲ್ಲ ಸುಂದರ ರಮಣೀಯವಾಗಿ ಕಾಣತೊಡಗಿತು. ಪಕ್ಕದಲ್ಲಿದ್ದ ಸಮುದ್ರದಲ್ಲಿ ಸಂಜೆಯ ಸಮಯದಲ್ಲಿ ಓಡಾಡುತ್ತಿದ್ದ ಬೋಟ್‌ಗಳು, ದೂರದಲ್ಲಿ ದೊಡ್ಡದಾದ ಹಡಗುಗಳ ಚಲನೆ, ಮಸುಕಿನಲ್ಲಿಯೂ ಸುಂದರವಾಗಿ ಕಾಣುತ್ತಿದ್ದ ದೃಶ್ಯಗಳನ್ನು ಮರೆಯಲಾಗದು.

ಟೊರಾಂಟೊದಿಂದ ವಿಶ್ವ ಪ್ರಸಿದ್ಧ ನಯಾಗರದ ಕಡೆಗೆ ಹೊರಟೆವು. ನಯಾಗರ ನದಿಯು ಎರಡು ದೇಶಗಳನ್ನು ವಿಭಜಿಸುತ್ತದೆ. ಹೀಗಾಗಿ ಕೆನಡಾದಿಂದ ಬೋಟ್ ಹತ್ತುವವರಿಗೆ ಕೆಂಪುಬಣ್ಣದ ಜರ್ಕಿನ್, ಅಮೆರಿಕದಿಂದ ಹತ್ತುವವರಿಗೆ ನೀಲಿಬಣ್ಣದ ಜರ್ಕಿನ್ ಕೊಡುವರು. ಅಲ್ಲಿ ನಮ್ಮನ್ನು ಹತ್ತಿಸಿಕೊಂಡ ಬೋಟ್ ಫಾಲ್ಸ್ ಕಡೆಗೆ ಹೊರಟಿತು. ಫಾಲ್ಸ್ ಹತ್ತಿರ ಹೋದಂತೆಲ್ಲ ಅಲ್ಲಿಂದ ಧುಮುಕುವ ನೀರಿನ ರಭಸಕ್ಕೆ ಹಾರುವ ತುಂತುರು ಹನಿಗಳು ನಮ್ಮ ಮೇಲೆ ಬೀಳಲಾರಂಭಿಸಿದವು. ಸಂತೋಷ, ಸಡಗರದಿಂದ ಕೂಗುತ್ತ ಸಾಗಿದ ಆ ಅನುಭವ ಮರೆಯಲು ಸಾಧ್ಯವಿಲ್ಲ.

ಸಂಜೆ ಫಾಲ್ಸ್‌ನ ಸಮೀಪಕ್ಕೆ ಸುರಂಗದ ಮೂಲಕ ನಡೆದು ಹೋಗಲು ಟಿಕೆಟ್ ತೆಗೆದುಕೊಂಡಿದ್ದೆವು.  ಫಾಲ್ಸ್‌ನ ಹತ್ತಿರದಲ್ಲಿಯೇ ನಿಂತು ಎತ್ತರದಿಂದ ನೀರು ಧುಮುಕುವ ಸೌಂದರ್ಯವನ್ನು ಅನುಭವಿಸಿ, ಅಲ್ಲಿಯೂ ಒಂದೆರಡು ಗಂಟೆ ಕಾಲ ಕಳೆದು ಮರಳಿದೆವು. ರಾತ್ರಿಯಲ್ಲಿ ನಯಾಗರ ಫಾಲ್ಸ್‌ ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿದ್ದುದನ್ನು ನೋಡಿ ಬೆರಗಾದೆವು. ಹಗಲಿನಲ್ಲಿ ಕಾಣುವುದು ಒಂದು ತರಹದ ಸುಂದರ ದೃಶ್ಯವಾದರೆ, ರಾತ್ರಿಯ ಬಣ್ಣಬಣ್ಣಗಳ ಬೆಳಕಿನಿಂದ ಕೂಡಿದ ದೃಶ್ಯ ವಿಭಿನ್ನ ರೀತಿಯ ಸಂತಸ ಕೊಡುತ್ತದೆ. ಪ್ರವಾಸಿಗರ ಆಕರ್ಷಣೆಗಾಗಿ ಬಾಣಬಿರುಸುಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು.

ಈ ಹಿಂದೆ ಅಮೆರಿಕದ ಕಡೆಯಿಂದ ವೀಕ್ಷಿಸಿದ್ದಕ್ಕಿಂತ ಈ ಸಾರಿ ಕೆನಡಾ ಕಡೆಯಿಂದ ನೋಡಿದ ಮನಮೋಹಕ ದೃಶ್ಯ ಅದ್ಭುತವಾಗಿತ್ತು. ಕೆನಡಾ ಕಡೆಯಿಂದ ಕಾಣುವ ಫಾಲ್ಸ್ ದೃಶ್ಯ ಕೆಳಹಂತದಲ್ಲಿದ್ದು ಬಹಳ ಚೆನ್ನಾಗಿ ಕಾಣುತ್ತದೆ. ಇವೆಲ್ಲ ದೃಶ್ಯಗಳನ್ನು ಮನದಾಳ ಹಾಗೂ ಕ್ಯಾಮೆರಾದಲ್ಲಿ ತುಂಬಿಕೊಂಡು ಮರುದಿನ ನ್ಯುಜರ್ಸಿಯಲ್ಲಿರುವ ಮನೆ ಕಡೆಗೆ ಹೊರಟೆವು.

ಮಾಂಟ್ರಿಯಲ್ ನಗರದಲ್ಲಿರುವ ಬೆಸಿಲಿಕ ನೋಟ್ರೆಡಾಮ್‌ ಚರ್ಚ್  ಚಿತ್ರಗಳು: ಎಸ್.ಎಂ. ಜಂಬುಕೇಶ್ವರ
ವಿಶ್ವ ಪ್ರಸಿದ್ಧ ನಯಾಗರ ಜಲಪಾತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.