ADVERTISEMENT

ಹಿಮಾಲಯದ ಹುಲ್ಲುಗಾವಲಿನಲ್ಲಿ...

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 19:30 IST
Last Updated 5 ಡಿಸೆಂಬರ್ 2018, 19:30 IST
ಬುಗಿಯಾಲ್ 
ಬುಗಿಯಾಲ್    

ಪಶ್ಚಿಮದಲ್ಲಿ ಸೂರ್ಯ ಮನೆಗೆ ಹೊರಟಿದ್ದ. ಹೊಂಬಣ್ಣದ ಕಿರಣಗಳು ಬೆಟ್ಟದ ಮೇಲಿನ ಹುಲ್ಲು ಹಾಸಿಗೆಗೆ ಮುತ್ತಿಕ್ಕುತ್ತಿದ್ದವು. ಮತ್ತೊಂದು ಬದಿಯ ಬೆಟ್ಟದ ಮೇಲೆ ಸಾಲಾಗಿ ಕುಳಿತಿದ್ದವರು ಒಮ್ಮೆ ಕತ್ತು ತಿರುಗಿಸಿದರು. ಹೊಂಬಣ್ಣದ ಬೆಳಕಲ್ಲಿ ಕಂಗೊಳಿಸುತ್ತಿದ್ದ ಬೆಟ್ಟಗಳ ಸಾಲು ನೋಡಿ ‘ಧನ್ಯೋಸ್ಮಿ’ ಎಂದರು..!

ಹಿಮಾಲಯದ ಸಮೀಪವಿರುವ ಪನಾರ್ ಬುಗಿಯಾಲ್ ಎಂಬ ಎತ್ತರದ ಹುಲ್ಲುಗಾವಲಿನ ಪ್ರದೇಶದಲ್ಲಿ ಸೂರ್ಯಾಸ್ತದ ವೇಳೆ ಕಾಣುವ ರುದ್ರರಮಣೀಯ ದೃಶ್ಯವಿದು.

ಹಿಮಾಲಯದಿಂದ ರುದ್ರನಾಥಕ್ಕೆ ಚಾರಣ ಹೋಗುವಾಗ ನಡುವೆ ಸಿಗುವ ಪುಟ್ಟ ತಾಣವೇ ಪನಾರ್ ಬುಗಿಯಾಲ್. ಗಢವಾಲ್, ಹಿಮಾಲಯದ ರುದ್ರನಾಥಕ್ಕೆ ಚಾರಣ ಕೈಗೊಂಡವರು ಸಾಮಾನ್ಯವಾಗಿ ಈ ಸ್ಥಳದ ಹೆಸರನ್ನು ಕೇಳಿರುತ್ತಾರೆ.

ADVERTISEMENT

ಪನಾರ್ ಬುಗಿಯಾಲ್ ಚಾರಣದ ಅಂತಿಮ ತಾಣವೇನಲ್ಲ. ರುದ್ರನಾಥ ಚಾರಣದ ನಡುವೆ ಸಿಗುವ ಒಂದು ವಿಶ್ರಾಂತಿ ತಾಣ. ‘ಅಷ್ಟೇನಾ..’ ಅಂದುಕೊಂಡವರು ಒಮ್ಮೆ ಇಲ್ಲಿಗೆ ಹೋದರೆ, ನಿಮ್ಮ ಮುಂದಿನ ಗುರಿಯನ್ನೇ ಮರೆಸಿ ಬಿಡುವಷ್ಟು ಮೋಹಕ, ಸುಂದರವಾಗಿದೆ ಆ ಜಾಗ.

ಬುಗಿಯಾಲ್‍ಗಳೆಂದರೆ ಹಿಮಾಲಯದ ಎತ್ತರ ಪ್ರದೇಶದಲ್ಲಿರುವ ಹುಲ್ಲುಗಾವಲುಗಳು. ಚಳಿಗಾಲದ ತಿಂಗಳುಗಳಲ್ಲಿ ಈ ಬುಗಿಯಾಲ್‍ಗಳು ಸ್ವರ್ಗಸದೃಶ ನೋಟಗಳನ್ನೇ ತೆರೆದಿಡುತ್ತವೆ. ಇದು ಅಷ್ಟೇನೂ ಪ್ರಸಿದ್ಧವಲ್ಲದ ತಾಣ. ಆದರೆ, ಇಲ್ಲಿನ ಸೂರ್ಯಾಸ್ತದ ನೋಟ ಮಾತ್ರ ಮೋಹಕ.

ರುದ್ರನಾಥದ ಚಾರಣಕ್ಕೆ ಹಲವು ದಾರಿಗಳಿವೆ. ದೇವಗ್ರಾಮ್ ಹಾಗೂ ಸಗರ್ ಹಳ್ಳಿಗಳಿಂದ ಹೊರಡುವ ಚಾರಣದ ಹಾದಿಗಳು ಪನಾರ್ ಬುಗಿಯಾಲ್ ಮೂಲಕವೇ ಹಾದುಹೋಗುತ್ತವೆ. ದೇವ್‍ಗ್ರಾಮ್‍ನಿಂದ ಪನಾರ್‌ಗೆ ಚಾರಣದ ಅವಧಿ ಮೂರು ದಿನವಾದರೆ, ಸಗರ್‌ನಿಂದ ಒಂದೇ ದಿನಕ್ಕೆ ತಲುಪಬಹುದು. ಆದರೆ, ತುಂಬಾ ಕಡಿದಾದ ಏರುದಾರಿಯಲ್ಲಿ ಸಾಗಬೇಕು.

ಪನಾರ್ ಬುಗಿಯಾಲ್ ಬೆಟ್ಟಗಳ ಸಾಲಿನಲ್ಲಿ ಎತ್ತರದ ಮರಗಳಿಲ್ಲದಿರುವುದರಿಂದ ಹಿಮಶಿಖರಗಳ ವಿಶಾಲ ಶ್ರೇಣಿಯನ್ನು ಕಣ್ತುಂಬಿಕೊಳ್ಳಬಹುದು. ಹುಲ್ಲು ಮೇಯುತ್ತಾ ಸ್ವಚ್ಛಂದವಾಗಿ ತಿರುಗಾಡುವ ಕುರಿಗಳು ಮತ್ತು ಅವುಗಳನ್ನು ಮೇಯಿಸುವರು ಹೊರತುಪಡಿಸಿದರೆ ಇಲ್ಲಿ ನಿಮಗೆ ಕಾಣಸಿಗುವುದು ಅರಣ್ಯ ಇಲಾಖೆಯ ಒಂದು ಷೆಡ್ ಮತ್ತು ಅದರ ಪಕ್ಕದ ಡಾಬಾ ಮಾತ್ರ. ಊಟ, ವಸತಿಗೆ ಇದೊಂದೇ ತಾಣ. ಬೇಕಾದರೆ ನೀವು ಟೆಂಟು ಕೊಂಡೊಯ್ಯಬಹುದು. ತಿಂಡಿ, ತಿನಿಸುಗಳನ್ನು ತೆಗೆದುಕೊಂಡು ಹೋಗಬಹುದು.

ಪನಾರ್ ಬುಗಿಯಾಲ್‍ನ ಸಂಜೆಯ ಸೊಬಗೇ ಚೆನ್ನ. ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾದರೂ, ಬಂದವರೆಲ್ಲ ಸಂಜೆಯಾಗುತ್ತಲೇ ಹತ್ತಿರದ ದಿಣ್ಣೆಗಳನ್ನೇರಿ ಸೂರ್ಯನಿಗೆ ಬೆನ್ನು ಹಾಕಿ ನಿಲ್ಲುತ್ತಾರೆ; ಹಾಗೆ ಮಾಡಿದರೆ ಮಾತ್ರ, ಸೂರ್ಯಾಸ್ತವನ್ನು ಸವಿಯಬಹುದು. ಅದೂ ವಾತಾವರಣ ತಿಳಿಯಾಗಿದ್ದರೆ ಮಾತ್ರ.

ಪಶ್ಚಿಮದಿಂದ, ಮುಳುಗುವ ಸೂರ್ಯನ ಹೊಂಗಿರಣಗಳು ಪನಾರ್ ಬುಗಿಯಾಲನ್ನು ದಾಟಿ ಇನ್ನೊಂದು ಪಕ್ಕದಲ್ಲಿರುವ ಹಿಮಶಿಖರಗಳನ್ನು ತಟ್ಟಿದಾಗ ಇಡೀ ಪರ್ವತಶ್ರೇಣಿಯೇ ಹೊಂಬಣ್ಣದಲ್ಲಿ ಮುಳುಗೇಳುತ್ತದೆ. ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಚೌಕುಂಭ, ನಂದಾದೇವಿ, ನಂದಗುಂಟೀ, ತ್ರಿಶೂಲ ಸೇರಿದಂತೆ ಅನೇಕ ಹಿಮಪರ್ವತಗಳು ಚಿನ್ನದ ಮಿರುಗಿನಲ್ಲಿ ಹೊಳೆಯುತ್ತವೆ.

ಈ ದೃಶ್ಯ ಕೆಲ ಹೊತ್ತು ಮಾತ್ರ ಲಭ್ಯ. ಸೂರ್ಯ ಮುಳುಗಿದಂತೆ ಮತ್ತೆ ಕತ್ತಲಾವರಿಸುತ್ತದೆ. ಆದರೂ ಹಿಮಶಿಖರಗಳು ಇನ್ನೂ ಕೆಲಹೊತ್ತು ಬೆಳ್ಳಗೆ ಹೊಳೆಯುತ್ತಾ ಇರುವಂತೆ ಭಾಸವಾಗುತ್ತದೆ.
ಪನಾರ್ ಬುಗಿಯಾಲ್‍ನ ಈ ಸುಂದರ ಅನುಭವ ಜೀವನದಲ್ಲಿ ಒಮ್ಮೆಯಾದರೂ ಪಡೆಯಬೇಕಾದುದು.

ಹೀಗೆ ಬನ್ನಿ

ಹರಿದ್ವಾರ-ಬದರಿನಾಥ ದಾರಿಯಲ್ಲಿ, ಚಮೋಲಿ ಪಟ್ಟಣದಲ್ಲಿ ಇಳಿಯಿರಿ. ಅಲ್ಲಿಂದ ಗೋಪೇಶ್ವರಕ್ಕೆ ಜೀಪು, ಬಸ್ಸುಗಳು ಸಿಗುತ್ತವೆ. ನೇರವಾಗಿ ಸಗರ್‌ಗೆ ಹೋಗುವ ವಾಹನವೂ ಸಿಗಬಹುದು. ಗೋಪೇಶ್ವರದಿಂದ ಸಗರ್‌ಗೆ ಸುಮಾರು 5 ಕಿ. ಮೀ. ಗಳ ಹಾದಿ. ಎರಡೂ ಕಡೆಗಳಲ್ಲಿ ವಸತಿ ವ್ಯವಸ್ಥೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.