ಸಂಡೂರು ಬಳಿಯ ಜಿಂದಾಲ್ ಸಂಸ್ಥೆ ಸೃಷ್ಟಿಸಿರುವ ಹಸಿರುವನದ ಬಗ್ಗೆ ಕೇಳಿದ್ದೆ. ಆದರೆ, ನೋಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಆ ಸೊಬಗನ್ನು ಕಣ್ತುಂಬಿಕೊಳ್ಳಬೇಕೆಂಬ ಸಂಕಲ್ಪದೊಂದಿಗೆ ಕುಟುಂಬ ಸಹಿತ ಆ ಕಡೆ ಪ್ರಯಾಣ ಬೆಳೆಸಿದೆ.
ಬಳ್ಳಾರಿ-ಹೊಸಪೇಟೆ ಮೂಲಕ ಸಂಡೂರು ತಲುಪುವ ಹೊತ್ತಿಗೆ ಮಧ್ಯಾಹ್ನ ಆಗಿತ್ತು. ಸಂಡೂರು ವೃತ್ತದ ಬಳಿ ಬಲಕ್ಕೆ ತಿರುಗಿ ಜಿಂದಾಲ್ ಸಂಸ್ಥೆಯತ್ತ ಸಾಗಿದೆವು. ಮೂರ್ನಾಲ್ಕು ಕಡೆ ರಸ್ತೆ ಮಧ್ಯದಲ್ಲಿ ಹಾದು ಹೋಗಿದ್ದ ರೈಲ್ವೆ ಹಳಿಗಳನ್ನು ದಾಟಿ ಹೋಗುತ್ತಿದ್ದಂತೆ ಸಂಸ್ಥೆಯ ವಿವಿಧ ವಿಭಾಗ ಘಟಕಗಳ ಒಂದೊಂದೇ ಪ್ರವೇಶದ್ವಾರಗಳು ಕಾಣಿಸಿದವು. ಒಳಗೆ ಹೊಕ್ಕಾಗ ಅಲ್ಲಿದ್ದ ನೀರಿನ ಕಾರಂಜಿಗಳು ನಮ್ಮನ್ನು ಸ್ವಾಗತಿಸಿದವು.
ಸುಮಾರು 150 ಎಕರೆ ಪ್ರದೇಶದಲ್ಲಿ ಉಕ್ಕು, ಸಿಮೆಂಟ್, ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿರುವ ಜಿಂದಾಲ್ ಸಂಸ್ಥೆ, ತನ್ನ ಆಡಳಿತ ಕಚೇರಿ ಹಾಗೂ ವಸತಿ ಸಮುಚ್ಛಯಗಳಿರುವ ವಿದ್ಯಾನಗರದಲ್ಲಿ ಅಪೂರ್ವ ಉದ್ಯಾನವನ್ನು ಸೃಷ್ಟಿಸಿದೆ. ಈ ಉದ್ಯಾನದ ಪ್ರವೇಶದ್ವಾರವೇ ಆಕರ್ಷಕ. ಅನುಮತಿ ಪಡೆದು ಒಳಹೊಕ್ಕರೆ ಹೊಸ ಲೋಕದ ಅನಾವರಣ.
ವಿಶಾಲ ಹಾಗೂ ಸ್ವಚ್ಚವಾದ ರಸ್ತೆಗಳು. ರಸ್ತೆಯ ಇಕ್ಕೆಲಗಳಲ್ಲಿ ಸಾಲು ಮರಗಳು. ಪ್ರತಿ ವಿಭಾಗದಲ್ಲಿ ಕಲ್ಲಿನಲ್ಲಿ ವಿಶಿಷ್ಟವಾಗಿ ನಿರ್ಮಿಸಿದ ಪ್ರವೇಶ ದ್ವಾರಗಳು. ಅದಕ್ಕೆ ಹೂವು ಬಳ್ಳಿಗಳ ಜೋಡಣೆ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡಿವೆ. ಅನತಿ ದೂರದಲ್ಲಿ ಎಡಕ್ಕೆ ಸಾಗಿದರೆ ಪಂಚತಾರಾ ಹೋಟೆಲ್, ಹಯಾತ್ ಪ್ಲೇಸ್ ಎಂಬ ಫಲಕ. ಅದರ ಸಮೀಪದಲ್ಲೇ ‘ಕಲಾಧಾಮ’. ಕಲ್ಲಿನಿಂದ ನಿರ್ಮಿಸಿರುವ ಸ್ವಾಗತ ಕಮಾನು, ಕಟ್ಟಡವಿದೆ. ಒಳಾಂಗಣದಲ್ಲಿ ಐತಿಹಾಸಿಕ ಹಂಪಿಯ ಇತಿಹಾಸ ಬಿಂಬಿಸುವ ‘ತ್ರಿಡಿ’ ದೃಶ್ಯಗಳನ್ನು ತೋರಿಸುವ ವ್ಯವಸ್ಥೆ ಇದೆ. ( ಮಧ್ಯಾಹ್ನ 1 ರೊಳಗೆ, ಸಂಜೆ 5 ರ ನಂತರ ಮಾತ್ರ ಲಭ್ಯ)
ಒಂದಕ್ಕೊಂದು ತಾಕಿಕೊಂಡ ಕಲ್ಲಿನ ಹಾಸುಗಳು, ಕಲಾಕೃತಿಗಳು ಆಸಕ್ತಿ ಮೂಡಿಸುತ್ತವೆ. ಮೇಲ್ಭಾಗದಲ್ಲಿ ಕಾರ್ಯಕ್ರಮ ನಡೆಸುವುದಕ್ಕಾಗಿ ಚಾವಡಿ ಕಟ್ಟಿದ್ದಾರೆ. ಇಲ್ಲಿಂದ ನಿಂತು ನೋಡಿದರೆ ವಿದ್ಯಾನಗರದ ಹಸಿರ ರಾಶಿಯ ವೈಭವ, ಸೌಂದರ್ಯ ತೆರೆದುಕೊಳ್ಳುತ್ತದೆ.
ಚಾವಣಿಗೆ ಹಸಿರನ್ನು ಹೊದಿಸಿರುವ ಸಣ್ಣ ಹೊರಾಂಗಣ ರಂಗ ವೇದಿಕೆ ಇದೆ. ಕಲ್ಲಿನಿಂದ ಕಟ್ಟಿರುವ ಮಡಿಗೆ ಹುಲ್ಲನ್ನು ಹೊದಿಸಿರುವ ಮ್ಯೂಸಿಯಂ, ಬೊಂಬಿ (ಬಿದಿರು)ನಿಂದಲೇ ನಿರ್ಮಿಸಿರುವ ಪ್ರಾಂಗಣ ಇವೆಲ್ಲ ಹಳ್ಳಿಯ ವಾತಾವರಣ ನೆನಪಿಸುತ್ತವೆ. ಹಳದಿ ಹಾಗೂ ಬಿಳಿ, ನೇರಳೆ ಬಣ್ಣದ ಕಣಗಲೆ ಹೂಗಳು, ಸಣ್ಣದೊಂದು ಕೊಳ, ಕಲ್ಲಿನಿಂದ ಕೆತ್ತಿರುವ ಶಿಲ್ಪಗಳು ಮನಸ್ಸಿಗೆ ಮುದ ನೀಡುತ್ತವೆ.
ಹೋದ ಹಾದಿಯಲ್ಲೇ ಹಿಂದೆ ಬಂದು ಬಲಕ್ಕೆ ತಿರುಗಿದರೆ ದೇವಾಲಯ ಹಾಗೂ ಪಂಚವಟಿ ಫಲಕ ಸ್ವಾಗತಿಸುತ್ತದೆ. ದೇಗುಲ ಆಕರ್ಷಕವಾಗಿದೆ. ಸ್ವಲ್ಪ ಹಿಂದೆ ಬಂದು ಮುಂದೆ ಸಾಗಿದರೆ ಮೈದಾನದಲ್ಲಿ ತಲೆ ಎತ್ತಿ ನಿಂತ ಉಕ್ಕಿನಿಂದ ನಿರ್ಮಿತ ಹಸುವಿನ ಮನಮೋಹಕ ಆಕೃತಿ ನಮ್ಮನ್ನು ತಡೆದು ನಿಲ್ಲಿಸುತ್ತದೆ. ಸಸ್ಯಸಂಪತ್ತಿನಿಂದ ತುಂಬಿದ ವಿಶಾಲ ಉದ್ಯಾನವನ. ಅದರಲ್ಲಿನ ಕಣಗಿಲೆ, ಬಿಳಿ, ನೇರಳೆ ಬಣ್ಣದ ಲಂಟಾನ ಹೂ, ಹಳದಿ ಮತ್ತು ಕೆಂಪುಬಣ್ಣದ ಅಲಂಕಾರಿಕ ಸಸ್ಯಗಳು ಗಮನ ಸೆಳೆಯುತ್ತವೆ.
ಇನ್ನೊಂದೆಡೆ ಸಾಲಾಗಿ ಜೋಡಿಸಿಟ್ಟಿರುವಂತೆ ಕಾಣುವ ಅಲಂಕಾರಿಕ ಮರಗಳು. ಸನಿಹದಲ್ಲೇ ಮಕ್ಕಳ ಆಟಿಕೆ. ಇನ್ನೊಂದೆಡೆ ಜಿಂದಾಲ್ ಸಂಸ್ಥೆಯ ಇತಿಹಾಸ ಸಾರುವ ಚಿತ್ರಗಳ ಗ್ಯಾಲರಿ. ಅದರ ಹೊರಭಾಗ ಪಿರಮಿಡ್ ಆಕೃತಿಯಲ್ಲಿದ್ದು ಅದಕ್ಕೆ ಹಸಿರು ಹಾಸನ್ನು ಹೊದಿಸಿದ್ದು ನೋಡಲು ಸೊಗಸಾಗಿದೆ.
ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿರುವ ಪಾರ್ಕಿಂಗ್ ಸ್ಥಳಕ್ಕೆ ಹೊಂದಿಕೊಂಡಂತೆ ಪ್ರವಾಸಿ ಮಾರ್ಗದರ್ಶಿ ಕಚೇರಿ ಇದೆ. ಇಲ್ಲೊಂದು ಕೃತಕವಾಗಿ ನಿರ್ಮಿಸಿರುವ ಜಲಾಕೃತಿ ಇದೆ.ಸಂಜೆ ಆಗುತ್ತಿದ್ದಂತೆ ದಿನವಿಡಿ ದಣಿದವರು ಇಲ್ಲಿ ಧ್ಯಾನ ಯೋಗ ಮಾಡುವುದು ಸಾಮಾನ್ಯ.
ಅರ್ಧ ದಿನ ಬಿಡುವ ಮಾಡಿಕೊಂಡು ಇಲ್ಲಿಗೆ ಬಂದಲ್ಲಿ ಬೆಂಕಿಯ ನಾಡಿನಲ್ಲಿನ ಹಸಿರ ರಾಶಿಯ ಸವಿಯನ್ನು ಸವಿಯಬಹುದು. ನೆನಪಿರಲಿ; ಈ ಉದ್ಯಾನದ ಒಳ ಪ್ರವೇಶಕ್ಕೆ ಅನುಮತಿ ಕಡ್ಡಾಯ.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.