ಬೆಟ್ಟದ ಸುತ್ತಲಿನ ಪರಿಸರವನ್ನು ಕಣ್ತುಂಬಿಕೊಂಡು ಎರಡೂ ಕೈಗಳನ್ನು ಚಾಚಿ, ಆಗಸದತ್ತ ಮುಖಮಾಡಿ ಕಣ್ಣು ಮುಚ್ಚಿ ದೀರ್ಘ ಉಸಿರೆಳೆದುಕೊಂಡು ಒಂದಷ್ಟು ಹೊತ್ತು ನಿಂತರೆ, ದೇಹವನ್ನು ಸೋಕುವ ಹಿಮಗಾಳಿ, ಮೈಯನ್ನು ಸ್ಪರ್ಶಿಸುವ ಎಳೆ ಬಿಸಿಲು, ಆಗಾಗ ಕೇಳಿ ಬರುವ ದೇವಾಲಯದ ಗಂಟಾನಾದ ನಮ್ಮ ಇರುವಿಕೆಯನ್ನೇ ಮರೆಸುತ್ತದೆ. ಕಾಯವೆಲ್ಲ ಹಗುರವಾಗಿ ಆಕಾಶದಲ್ಲಿ ತೇಲುತ್ತಿರುವ ಅನುಭವವಾಗುತ್ತದೆ.ಒತ್ತಡ, ಕಷ್ಟ, ಬೇಸರ, ನೋವು ಎಲ್ಲವೂ ಕಳೆದು ಮನಸ್ಸು ನಿರಾಳವಾಗುತ್ತದೆ. ಮನೋತ್ಸಾಹ, ಉಲ್ಲಾಸವೆಲ್ಲ ಮತ್ತೆ ಚೈತನ್ಯಗೊಳ್ಳುತ್ತದೆ.
ಈ ಅನುಭವವನ್ನು ಪಡೆಯಲು ನೀವು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬರಬೇಕು. ಮೈಮನಗಳಿಗೆ ಅವರ್ಣೀಯ ಮುದ ನೀಡುವ ಹಿಮದ ಬೆಟ್ಟವನ್ನು ನೀವು ಅನುಭವಿಸಿಯೇ ತೀರಬೇಕು. ಅದು ಪದಗಳ ವರ್ಣನೆಗೆ ನಿಲುಕುವಂತಹದ್ದಲ್ಲ.
ಹೇರಳ ಪ್ರಾಕೃತಿಕ ಸಂಪತನ್ನು ಹೊಂದಿರುವ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರವಾಸಿ ತಾಣಗಳಿಗೆ ಬರವಿಲ್ಲ.ಬಂಡೀಪುರ, ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ, ಮಹದೇಶ್ವರ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಭರಚುಕ್ಕಿ ಜಲಪಾತ, ಹೊಗೇನಕಲ್ ಜಲಪಾತ, ಕೆ.ಗುಡಿ ಸಫಾರಿ, ಕನಕಗಿರಿ... ತಾಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಇಲ್ಲಿನ ರಮ್ಯ ಪರಿಸರ ವರ್ಷದ 365 ದಿನಗಳಲ್ಲೂ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಲೇ ಇರುತ್ತದೆ. ಆದರೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿಗುವ ಅನುಭೂತಿ ಬೇರೆಲ್ಲೂ ಸಿಗದು.
ಬೆಟ್ಟದಲ್ಲಿ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಹಚ್ಚ ಹಸಿರು ಬಿಟ್ಟು ಬೇರೇನೂ ಕಾಣದು. ಗಿರಿ ಶಿಖರಗಳು, ವಿಶಾಲ ಹುಲ್ಲುಗಾವಲು, ಶೋಲಾ ಅರಣ್ಯದ ದೃಶ್ಯ ವೈಭವಗಳು ಮನಸ್ಸನ್ನು ಸೋಲಿಸುತ್ತವೆ. ವೇಗವಾಗಿ ಬೀಸುವ ಕುಳಿರ್ಗಾಳಿ, ಮಂಜು ಮುಸುಕಿದ ವಾತಾವರಣ ಮನಸ್ಸನ್ನು ಪ್ರಪುಲ್ಲಗೊಳಿಸುತ್ತದೆ.ಬೆಟ್ಟದಲ್ಲಿ ಸಾನಿಧ್ಯ ಹೊಂದಿರುವ ವೇಣುಗೋಪಾಲಸ್ವಾಮಿಯ ದರ್ಶನ ಅಧ್ಯಾತ್ಮದ ಅನುಭೂತಿ ಮೂಡಿಸುತ್ತದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಸಮುದ್ರ ಮಟ್ಟದಿಂದ 1,440 ಮೀಟರ್ ಎತ್ತರದಲ್ಲಿದೆ.ಹೆಸರಲ್ಲೇ ಇರುವಂತೆ, ಇದು ಹಿಮದ ಬೆಟ್ಟ. ವರ್ಷದ ಎಲ್ಲ ತಿಂಗಳೂ ಬೆಟ್ಟವನ್ನು ಹಿಮ ಮುತ್ತಿಕ್ಕುತ್ತಿರುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಬೆಟ್ಟವು ದಿನ ಪೂರ್ತಿ ಹಿಮಚ್ಛಾದಿತವಾಗಿರುತ್ತದೆ. ಬೇಸಿಗೆಯಲ್ಲಿ ಬೆಳಿಗ್ಗೆ ಹೊತ್ತು ಮಂಜು ಇದ್ದರೆ, ಬಿಸಿಲು ಏರಿದಂತೆ ವಾತಾವರಣ ತಿಳಿಯಾಗುತ್ತದೆ. ಆದರೆ, ಎಷ್ಟು ಬಿಸಿಲು ಇದ್ದರೂ, ತಂಪು ಗಾಳಿ ಬೀಸುತ್ತಲೇ ಇರುತ್ತದೆ.
ವೇಣುಗೋಪಾಲಸ್ವಾಮಿ ದೇವಾಲಯ ಇರುವುದರಿಂದ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಬಂದಿದೆ. ಈ ದೇವಾಲಯಕ್ಕೆ 700 ವರ್ಷಗಳ ಇತಿಹಾಸವಿದೆ. ಚೋಳರ ರಾಜ ಬಳ್ಳಾಲ ರಾಜನ ಆಳ್ವಿಕೆಯಲ್ಲಿ ಕ್ರಿ.ಶ. 1315ರಲ್ಲಿ ದೇಗುಲು ನಿರ್ಮಾಣವಾಯಿತು. ಸ್ಥಳೀಯ ಪಾಳೆಗಾರನಾಗಿದ್ದ (ಎಚ್.ಡಿ.ಕೋಟೆ, ತೆರಕಣಾಂಬಿ ಪ್ರಾಂತ್ಯ) ಮಾಧವ ದಢಾನಾಯಕ ಎಂಬುವವನ ಮಗ ಪೆರುಮಾಳ್ ದೃಢಾನಾಯಕನ ಉಸ್ತುವಾರಿಯಲ್ಲಿ ದೇವಸ್ಥಾನ ರೂಪು ತಳೆದಿದೆ.
ಅಗಸ್ತ್ಯ ಮಹರ್ಷಿಗಳ ತಪಸ್ಸಿಗೆ ಮೆಚ್ಚಿ, ಶ್ರೀಕೃಷ್ಣನು ಇಲ್ಲಿ ನೆಲೆಸಿದ ಎಂದು ಹೇಳುತ್ತದೆ ಪುರಾಣ. ದೇವಾಲಯದ ಗರ್ಭಗುಡಿಯಲ್ಲಿ ಗೋಪಾಲಸ್ವಾಮಿಯ ವಿಗ್ರಹದ ಮೇಲೆ ವರ್ಷಪೂರ್ತಿ ಹಿಮ ಜಿನುಗುತ್ತದೆ.
ಪುರಾಣದ ಕಥೆಯಲ್ಲಿ ಈ ಬೆಟ್ಟಕ್ಕೆ ಗೋವರ್ಧನಗಿರಿ ಎಂಬ ಹೆಸರೂ ಇದೆ. ಈ ಪರ್ವತದ ಪೂರ್ವದಿಕ್ಕಿಗೆ ತ್ರಯಂಬಕಾದ್ರಿ, ಪಶ್ಚಿಮಕ್ಕೆ ನೀಲಾದ್ರಿ, ಉತ್ತರಕ್ಕೆ ಮಂಗಳಾದ್ರಿ, ದಕ್ಷಿಣಕ್ಕೆ ಶಂಖರಾದ್ರಿಗಿರಿ, ಆಗ್ನೇಯಕ್ಕೆಹಂಸಾದ್ರಿ, ವೈರುತ್ಯಕ್ಕೆ ಗರುಡಾದ್ರಿ, ವಾಯವ್ಯಕ್ಕೆ ಪಲ್ಲವಾದ್ರಿ, ಈಶಾನ್ಯದಲ್ಲಿ ಮಲ್ಲಿಕಾರ್ಜುನ ಗಿರಿ ಇದೆ. ಬೆಟ್ಟಕ್ಕೆ ಕಮಲಾಚಲ ಎಂಬ ಹೆಸರೂ ಇದೆ.
ದೇವಾಲಯದ ಸುತ್ತಮುತ್ತ ಅನೇಕ ತೀರ್ಥಕೊಳಗಳಿವೆ ಎಂದು ಹೇಳುತ್ತದೆ ಜಿಲ್ಲಾಡಳಿತದ ಮಾಹಿತಿ. ಹಂಸ ತೀರ್ಥ, ಪದ್ಮತೀರ್ಥ, ಶಂಖತೀರ್ತ, ಗಧಾತೀರ್ಥ, ಶಜ್ಞಾ ತೀರ್ಥ, ಮನಮೂಲಕ ತೀರ್ಥ ಎಂಬ ಅಷ್ಟ ತೀರ್ಥಗಳಿವೆ. ದೇವಾಲಯದ ಆವರಣದಿಂದ ಹೊರಗಡೆ ಹೋಗಲು ಅನುಮತಿ ಇಲ್ಲದಿರುವುದರಿಂದ ಬೇರೆ ಕೊಳಗಳು ಕಾಣಿಸುವುದಿಲ್ಲ.
ಪ್ರವಾಸಿಗರಿಗೆ ಒಂದಿಷ್ಟು ಸೂಚನೆಗಳು
ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವುದರಿಂದ, ವನ್ಯಜೀವಿಗಳ ಸಂಚಾರವೂ ಅಧಿಕವಾಗಿರುವುದರಿಂದ ಅರಣ್ಯ ಇಲಾಖೆ ಪ್ರವಾಸಿಗರಿಗೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ದೇವಾಲಯದ ಆವರಣದಲ್ಲಿ ಮಾತ್ರ ಸುತ್ತಾಡುವುದಕ್ಕೆ ಅವಕಾಶ ಇದೆ. ಹುಲ್ಲುಗಾವಲು, ಅರಣ್ಯ ಪ್ರವೇಶ ನಿಷಿದ್ಧ. ಇಲಾಖೆಯ ಸಿಬ್ಬಂದಿ ಸದಾ ಸ್ಥಳದಲ್ಲೇ ಇದ್ದು, ಪ್ರವಾಸಿಗರ ಮೇಲೆ ನಿಗಾ ಇಟ್ಟಿರುತ್ತಾರೆ. ಅದೃಷ್ಟ ಚೆನ್ನಾಗಿದ್ದರೆ ಆನೆ, ಹುಲಿ ಸಾರಂಗ ಸೇರಿದಂತೆ ವಿವಿಧ ಪ್ರಾಣಿಗಳು ಕೂಡ ಕಣ್ಣಿಗೆ ಬೀಳುತ್ತವೆ.
ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಬೆಟ್ಟದ ತಪ್ಪಲಿನಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರು, ತಪ್ಪಲಿನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ಕೆಎಸ್‌ಆರ್‌ಟಿಸಿ ಬಸ್ ಹತ್ತಬೇಕು. ಸದ್ಯ ಟಿಕೆಟ್‌ಗೆ (ಹೋಗಿ ಬರುವುದಕ್ಕೆ) ₹60 ಇದೆ.
ಬೆಳಿಗ್ಗೆ 8.30ರಿಂದ ಸಂಜೆ 5.30ರವರೆಗೆ ಮಾತ್ರ ಬೆಟ್ಟಕ್ಕೆ ಭೇಟಿ ನೀಡಲು ಅನುಮತಿ ಇದೆ. ಬೆಳಿಗ್ಗೆ ಹಾಗೂ ಸಂಜೆಯ ಹೊತ್ತು ಪ್ರಾಣಿಗಳ ಓಡಾಟ ಹೆಚ್ಚಿರುತ್ತವೆ. ಸುರಕ್ಷತೆ ದೃಷ್ಟಿಯಿಂದ ಬೆಳಿಗ್ಗೆ ಸರಿಯಾಗಿ ಬೆಳಕು ಹರಿದ ನಂತರ, ಸಂಜೆ ಕತ್ತಲಾಗುವ ಮುನ್ನ ಪ್ರವಾಸಿಗರ ಭೇಟಿಗೆ ಅವಕಾಶ ಮಾಡಲಾಗಿದೆ.
ಪ್ಲಾಸ್ಟಿಕ್ ಮುಕ್ತ ವಲಯ: ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ಅರಣ್ಯ ಇಲಾಖೆ, ಪ್ಲಾಸ್ಟಿಕ್ ಮುಕ್ತವಲಯ ಎಂದು ಘೋಷಿಸಿದೆ. ಸ್ವಚ್ಛವಾಗಿ ಇಟ್ಟುಕೊಂಡಿದೆ. ಪ್ರವಾಸಿಗರು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವಂತಿಲ್ಲ.ಪ್ಲಾಸ್ಟಿಕ್ ಬಾಟಲಿ, ಆಹಾರ ಪೊಟ್ಟಣಗಳನ್ನು ಎಸೆಯುವುದಕ್ಕೆ ನಿರ್ಬಂಧವಿದೆ. ನಿಯಮ ಉಲ್ಲಂಘಿಸಿದರೆ ದಂಡವೂ ಬೀಳುತ್ತದೆ.
ಬೆಟ್ಟದಲ್ಲಿ ಅಂಗಡಿ, ಹೋಟೆಲ್ ಯಾವುದೂ ಇಲ್ಲ. ಹಾಗಾಗಿ, ಊಟ, ತಿಂಡಿ ಸೇರಿದಂತೆ ಯಾವ ಆಹಾರವೂ ಸಿಗುವುದಿಲ್ಲ.
ಬೆಟ್ಟಕ್ಕೆ ಹೀಗೆ ಬನ್ನಿ...
ಗುಂಡ್ಲುಪೇಟೆ ಹಾಗೂ ಬಂಡೀಪುರದ ನಡುವೆ ಬೆಟ್ಟವಿದೆ. ಮೈಸೂರಿನಿಂದ 80 ಕಿ.ಮೀ., ಬೆಂಗಳೂರಿನಿಂದ 220 ಕಿ.ಮೀ ದೂರವಿದೆ. ಗುಂಡ್ಲುಪೇಟೆ ಪಟ್ಟಣದಿಂದ 21 ಕಿ.ಮೀ ಆಗುತ್ತದೆ. ಊಟಿ ರಸ್ತೆಯಲ್ಲಿ 11 ಕಿ.ಮೀ ಬಂದರೆ ಹಂಗಳ ಎಂಬ ಊರು ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಬೇಕು. ಅಲ್ಲಿಂದ ನಾಲ್ಕು ಕಿ.ಮೀ ದೂರದಲ್ಲಿ ಬೆಟ್ಟದ ತಪ್ಪಲು ಇದೆ. ಅಲ್ಲಿಂದ ಬೆಟ್ಟಕ್ಕೆ ಆರು ಕಿ.ಮೀ ದೂರ. ಇದನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಕ್ರಮಿಸಬೇಕು.ತಿರುವು ಮುರುವು ರಸ್ತೆಯಲ್ಲಿ ಬಸ್ ಸಂಚಾರ ಕೂಡ ವಿಶಿಷ್ಟ ಅನುಭವ ನೀಡುತ್ತದೆ. ಹಸಿರು, ಗುಡ್ಡಗಳು, ವಿಶಾಲವಾದ ಊರಿನ ನೋಟ ಹೃನ್ಮನಗಳನ್ನು ತಣಿಸುತ್ತವೆ.
ಹಂಗಳ ಕಳೆದು ಒಂದು ಕಿ.ಮೀ ಆಗುವಾಗಲೇ ಬೆಟ್ಟ ಗೋಚರಿಸುತ್ತದೆ. ಎಡ ಭಾಗದಲ್ಲಿ ಬಂಡೀಪುರ ಅರಣ್ಯ ಹಾಗೂ ಬಲ ಭಾಗದಲ್ಲಿರುವ ಕೃಷಿ ಜಮೀನುಗಳನ್ನು ಸೀಳಿಕೊಂಡು ಹೋಗುವ ರಸ್ತೆಯಲ್ಲಿ ಸಂಚರಿಸುತ್ತಿರುವಾಗಲೇ ಬೆಟ್ಟದ ಬಗ್ಗೆ ಪ್ರವಾಸಿಗನ ಕುತೂಹಲ, ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ. ಮೋಡಕವಿದ, ಮಳೆ ಅಥವಾ ಚಳಿ ವಾತಾವರಣ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು.
ಇನ್ಯಾಕೆ ತಡ? ಹಿಮದ ಬೆಟ್ಟ ಸೌಂದರ್ಯ ಸವಿಯಲು ಈಗಲೇ ಹೊರಟೇ ಬಿಡಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.